ಗುರುವಾರ, 9 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಾಮರಾಜನಗರ: ಕೊಲೆ ಸುಳಿವು ನೀಡಿತ್ತು ರಸ್ತೆ ಮೇಲಿನ ರಕ್ತದ ಕಲೆ!

ನಾಲ್‌ರೋಡ್‌ ರಸ್ತೆಯಲ್ಲಿ 50 ಅಡಿ ಆಳದಲ್ಲಿ ಶವ ಇಟ್ಟು ಹೋದ ಹಂತಕರು
Published 5 ಡಿಸೆಂಬರ್ 2023, 5:49 IST
Last Updated 5 ಡಿಸೆಂಬರ್ 2023, 5:49 IST
ಅಕ್ಷರ ಗಾತ್ರ

ಹನೂರು/ಚಾಮರಾಜನಗರ: ವಿಧಾನಪರಿಷತ್‌ ಸದಸ್ಯ ಸಿ.ಪಿ.ಯೋಗೇಶ್ವರ್‌ ಬಾವ ಮಹದೇವಯ್ಯ ಅವರನ್ನು ಅಪಹರಣ ಮಾಡಿದ್ದ ದುಷ್ಕರ್ಮಿಗಳು ಅವರನ್ನು ಕೊಲೆ ಮಾಡಿ, ರಾಮಾಪುರದಿಂದ ನಾಲ್‌ರೋಡ್‌ ಕಡೆಗೆ ಹೋಗುವ ರಸ್ತೆಯಲ್ಲಿ ಐದಾರು ಕಿ.ಮೀ ದೂರದಲ್ಲಿ ರಸ್ತೆಯಿಂದ 50 ಅಡಿ ಆಳದವರೆಗೆ ಮೃತದೇಹವನ್ನು ತೆಗೆದುಕೊಂಡು ಹೋಗಿ ಹಾಕಿದ್ದರು. 

ರಾಮಾಪುರದಲ್ಲಿ ಪತ್ತೆಯಾದ ಅವರ ಕಾರಿನಲ್ಲಿದ್ದ ರಕ್ತದ ಕಲೆ, ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾದ ದೃಶ್ಯಾವಳಿಗಳ ಆಧಾರದಲ್ಲಿ ಅರಣ್ಯ ಇಲಾಖೆಯ ಸಿಬ್ಬಂದಿ ಸಹಕಾರ ಪಡೆದು ‌ಪೊಲೀಸರು ಶೋಧ ನಡೆಸಿದಾಗ ಮೃತದೇಹ ಪತ್ತೆಯಾಗಿದೆ. 

ಡಿ.1ರ ರಾತ್ರಿ ಚನ್ನಪಟ್ಟಣ ತಾಲ್ಲೂಕಿನ ಮಹದೇವಯ್ಯ ಅವರ ತೋಟದ ಮನೆಯಿಂದ ಅವರನ್ನು, ಅವರ ಕಾರಿನಲ್ಲೇ ಹನೂರು ತಾಲ್ಲೂಕಿಗೆ ಕರೆದುಕೊಂಡು ಬಂದಿದ್ದ ಹಂತಕರು ದಾರಿ ಮಧ್ಯೆ ಅವರನ್ನು ಹತ್ಯೆ ಮಾಡಿರುವ ಸಾಧ್ಯತೆ ಇದೆ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ. 

ಮೃತದೇಹವನ್ನು ಕಾರಿನಲ್ಲಿ ಸಾಗಿಸಿದ್ದಾರೆ. ಡಿ.2ರ ಬೆಳಿಗ್ಗೆ 5ರ ಸುಮಾರಿಗೆ ರಾಮಾಪುರ– ನಾಲ್‌ರೋಡ್‌ ರಸ್ತೆಯಲ್ಲಿ ಕಾರು ಸಾಗಿದ ದೃಶ್ಯ ಸಿಸಿಟಿವಿ ಕ್ಯಾಮೆರಾಗಳಲ್ಲಿ ಸೆರೆಯಾಗಿತ್ತು. ಹೀಗಾಗಿ ರಾಮಾಪುರ, ನಾಲ್‌ರೋಡ್‌ ದಾರಿಯಲ್ಲಿ ಮೃತದೇಹವನ್ನು ಎಸೆದಿರಬಹುದು ಎಂಬ ಅನುಮಾನ ಪೊಲೀಸರಲ್ಲಿ ಮೂಡಿತ್ತು. 

‘ಮಹದೇವಯ್ಯ ಕಾರಿನಲ್ಲಿ ರಕ್ತದ ಕಲೆಗಳಿದ್ದವು. ಹಾಗಾಗಿ, ದಾರಿ ಮಧ್ಯದಲ್ಲಿ ಎಲ್ಲಿಯಾದರೂ ರಕ್ತ ಚೆಲ್ಲಿರುವ ಗುರುತು ಇರುವ ಸಾಧ್ಯತೆಯ ಬಗ್ಗೆ ತನಿಖಾಧಿಕಾರಿಗಳು ಯೋಚಿಸಿದ್ದರು. ಇದೇ ಜಾಡಿನಲ್ಲಿ ಹುಡುಕುತ್ತಿದ್ದಾಗ, ರಾಮಾಪುರದಿಂದ ಐದಾರು ಕಿ.ಮೀ ದೂರದಲ್ಲಿ ರಸ್ತೆಗೆ ನಿರ್ಮಿಸಿರುವ ತಡೆಗೋಡೆಯಲ್ಲಿ ರಕ್ತದ ಕಲೆ ಪತ್ತೆಯಾಯಿತು. ಅನುಮಾನ ಬಂದು ಇಳಿದು ನೋಡಿದಾಗ ಮೃತದೇಹ ಪತ್ತೆಯಾಯಿತು’ ಎಂದು ಮೂಲಗಳು ತಿಳಿಸಿವೆ. 

ಹಂತಕರು, ಕಾರಿನಿಂದ ಮೃತದೇಹವನ್ನು ತೆಗೆದು 50 ಅಡಿ ಆಳಕ್ಕೆ ತೆಗೆದುಕೊಂಡು ಹೋಗಿ ಹಾಕಿದ್ದಾರೆ. ಅಲ್ಲದೇ, ದೇಹದ ಮೇಲೆ ಮ್ಯಾಟ್‌ ಹಾಕಿ, ಮುಖದ ಮೇಲೆ ಕಲ್ಲು ಎತ್ತಿ ಹಾಕಿದ್ದಾರೆ ಎಂದು ಗೊತ್ತಾಗಿದೆ. 

ಮೃತದೇಹ ಪತ್ತೆಯಾದ ಸ್ಥಳದ ನೋಟ
ಮೃತದೇಹ ಪತ್ತೆಯಾದ ಸ್ಥಳದ ನೋಟ

ಕಾರು ಪತ್ತೆಯಾಗಿದ್ದು ಹೇಗೆ?

ಡಿ.1ರ ರಾತ್ರಿ ತೋಟದ ಮನೆಯಿಂದ ನಾಪತ್ತೆಯಾಗಿದ್ದ ಮಹದೇವಯ್ಯ ಅವರ ಮೊಬೈಲ್‌ ನಂಬರ್‌ ಮೂಲಕ ಅವರ ಮೊಬೈಲ್‌ ಕೊನೆಯ ಬಾರಿ ಸಕ್ರಿಯವಾಗಿದ್ದ ಸ್ಥಳವನ್ನು ಪೊಲೀಸರು ಪರಿಶೀಲಿಸಿದಾಗ ಅದು ಮಹದೇಶ್ವರ ಬೆಟ್ಟದ ವ್ಯಾಪ್ತಿಯನ್ನು ತೋರಿಸುತ್ತಿತ್ತು ಎನ್ನಲಾಗಿದೆ.  ಚನ್ನಪಟ್ಟಣ ಪೊಲೀಸರು ಹನೂರು ತಾಲ್ಲೂಕು ವ್ಯಾಪ್ತಿಯ ಠಾಣೆಗಳಿಗೆ ಮಹದೇವಯ್ಯ ಅವರ ಕಾರಿನ ವಿವರಗಳನ್ನು ನೀಡಿದ್ದರು. ಭಾನುವಾರ ಸಂಜೆ ರಾಮಾಪುರದ ಪ್ರಾಥಮಿಕ ಆರೋಗ್ಯ ಕೇಂದ್ರದ ಬಳಿ ನಿಂತಿದ್ದ ಕಾರು ಪತ್ತೆಯಾಗಿತ್ತು. ಬಳಿಕ ಪೊಲೀಸರು ಬೆರಳಚ್ಚು ತಜ್ಞರು ಸ್ಥಳ ಪರಿಶೀಲನೆ ನಡೆಸಿ ಮಹದೇವಯ್ಯ ಅವರ ಪತ್ತೆಗೆ ಹುಡುಕಾಟ ಆರಂಭಿಸಿದರು. 

ಸಿಸಿಟಿವಿ ಕ್ಯಾಮೆರಾದಲ್ಲಿ ಮೂವರು ಆರೋಪಿಗಳಿರುವುದು ಸೆರೆಯಾಗಿದೆ. ಚನ್ನಪಟ್ಟಣದ ಪೊಲೀಸರು ತನಿಖೆ ನಡೆಸುತ್ತಿದ್ದು ನಾವು ಸಹಕಾರ ನೀಡುತ್ತಿದ್ದೇವೆ.
-ಪದ್ಮಿನಿ ಸಾಹು, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT