ಗುರುವಾರ, 22 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂತೇಮರಹಳ್ಳಿ | ಸರ್ವರ್‌ ಸಮಸ್ಯೆ; ಫಲಾನುಭವಿಗಳ ಅಲೆದಾಟ

ವಸತಿ ಯೋಜನೆ; ದಾಖಲೆ ಸಲ್ಲಿಸಲು, ಅನುಮೋದನೆ ಪಡೆಯಲು ಗುರುವಾರ ಕೊನೆಯ ದಿನ
Published 29 ನವೆಂಬರ್ 2023, 5:13 IST
Last Updated 29 ನವೆಂಬರ್ 2023, 5:13 IST
ಅಕ್ಷರ ಗಾತ್ರ

ಸಂತೇಮರಹಳ್ಳಿ: ವಿವಿಧ ವಸತಿ ಯೋಜನೆಗಳ ಅಡಿಯಲ್ಲಿ ಆಯ್ಕೆಯಾಗಿರುವ ಫಲಾನುಭವಿಗಳಿಗೆ ದಾಖಲೆಗಳನ್ನು ಸಲ್ಲಿಸಲು ಗುರುವಾರ (ನ.30) ಕೊನೆಯ ದಿನ. ಆದರೆ ನಾಡ ಕಚೇರಿಗಳಲ್ಲಿ ಸರ್ವರ್‌ ಸಮಸ್ಯೆಯಿಂದಾಗಿ ಆನ್‌ಲೈನ್‌ ಸೇವೆಗಳು ವ್ಯತ್ಯಯವಾಗಿದ್ದು ಮಂಜೂರಾಗಿರುವ ಮನೆಗಳು ರದ್ದಾಗುವ ಆತಂಕ ಎದುರಾಗಿದೆ. 

ರಾಜ್ಯದಾದ್ಯಂತ ವಿವಿಧ ವಸತಿ ಯೋಜನೆಯಡಿ 2021–22 ಮತ್ತು 2022–23ನೇ ಸಾಲಿಗೆ ಹೆಚ್ಚುವರಿಯಾಗಿ ಮಂಜೂರು ಮಾಡಿರುವ ಮನೆಗಳ ಪೈಕಿ, ಫಲಾನುಭವಿಗಳು ಆಯ್ಕೆಯಾಗಿ ವಿವಿಧ ಲಾಗಿನ್‌ ಹಂತದಲ್ಲಿ ಅನುಮೋದನೆಗೆ ಬಾಕಿ ಇರುವ ಮತ್ತು ಫಲಾನುಭವಿಗಳು ಇನ್ನೂ ಆಯ್ಕೆಯಾಗದಿರುವ 1,35,976 ಮನೆಗಳಿಗೆ ಫಲಾನುಭವಿಗಳನ್ನು ಆಯ್ಕೆ ಮಾಡಿ ಡಾಟಾ ಎಂಟ್ರಿ ಮಾಡಲು ಮತ್ತು ಅನುಮೋದನೆ ಪಡೆದುಕೊಳ್ಳಲು ರಾಜೀವ್‌ ಗಾಂಧಿ ವಸತಿ ನಿಗಮ ನ.30ರವರೆಗೆ ಅವಕಾಶ ನೀಡಿದೆ. ಆ ಬಳಿಕ ಬಾಕಿ ಉಳಿಯುವ ಎಲ್ಲ ಮನೆಗಳ ಗುರಿಯನ್ನು ಹಿಂಪಡೆಯಲಾಗುವುದು ಎಂದು ನಿಗಮ ಹೇಳಿದೆ.

ಈ ಸಂಬಂಧ ನಿಗಮವು ಈ ತಿಂಗಳ 6ರಂದು ಜಿಲ್ಲಾಧಿಕಾರಿ ಮತ್ತು ಜಿಲ್ಲಾ ಪಂಚಾಯಿತಿ ಸಿಇಒಗಳಿಗೆ ಪತ್ರ ಬರೆದಿತ್ತು. 

ಜಿಲ್ಲೆಯಲ್ಲಿ ಚಾಮರಾಜನಗರ ಮತ್ತು ಹನೂರು ತಾಲ್ಲೂಕುಗಳಿಗೆ ಬಸವ ವಸತಿ ಯೋಜನೆಯಡಿಯಲ್ಲಿ 5,315  ಮತ್ತು ಡಾ.ಬಿ.ಆರ್‌. ಅಂಬೇಡ್ಕರ್‌ ಯೋಜನೆ ಅಡಿಯಲ್ಲಿ 3,349 ಸೇರಿದಂತೆ 8,664 ಮನೆಗಳ ಹಂಚಿಕೆಗೆ ಗುರಿ ನೀಡಲಾಗಿದೆ. 

ಜಿಲ್ಲಾ ಪಂಚಾಯಿತಿಯ ಯೋಜನಾ ನಿರ್ದೇಶಕರು ಎರಡೂ ತಾಲ್ಲೂಕುಗಳ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಇದೇ 15ರಂದು ಪತ್ರಬರೆದು, 25ರ ಒಳಗೆ ಗ್ರಾಮ ಸಭೆಗಳ ಮೂಲಕ ಫಲಾನುಭವಿಗಳನ್ನು ಆಯ್ಕೆ ಮಾಡಿ ಆನ್‌ಲೈನ್‌ನಲ್ಲಿ ಅನುಮೋದನೆ ಪಡೆಯಲು ಸೂಚಿಸಿದ್ದಾರೆ. 

ಅದರಂತೆ, ವಾರದಿಂದ ಗ್ರಾಮಗಳಲ್ಲಿ ವಾರ್ಡ್ ಸಭೆ ಹಾಗೂ ಗ್ರಾಮಪಂಚಾಯಿತಿ ಕೇಂದ್ರಗಳಲ್ಲಿ ಗ್ರಾಮ ಸಭೆಗಳನ್ನು ನಡೆಸಿ ಆಯಾ ಗ್ರಾಮಪಂಚಾಯಿತಿ ಸದಸ್ಯರ ಸಮ್ಮುಖದಲ್ಲಿ ಫಲಾನುಭವಿಗಳನ್ನು ಆಯ್ಕೆ ಮಾಡಲಾಗಿದೆ. ಆದೇಶ ಪತ್ರಗಳನ್ನು ವಿತರಿಸಲಾಗುತ್ತಿದೆ. 

ಆಯ್ಕೆಯಾಗಿರುವ ಫಲಾನುಭವಿಗಳು ಜಾತಿ, ಆದಾಯ ಪ್ರಮಾಣಪತ್ರ ಸೇರಿದಂತೆ ಇನ್ನಿತರ ದಾಖಲೆಗಳನ್ನು ಗುರುವಾರದ ಒಳಗಾಗಿ ಗ್ರಾಮ ಪಂಚಾಯಿತಿಗೆ ಸಲ್ಲಿಸಬೇಕು.  ಗ್ರಾಮ ಪಂಚಾಯಿತಿ ಅಧಿಕಾರಿಗಳು ಫಲಾನುಭವಿಗಳ ವಿವರಗಳು, ದಾಖಲೆಗಳನ್ನು ಆನ್‌ಲೈನ್‌ನಲ್ಲಿ ಅಪ್‌ಲೋಡ್‌ ಮಾಡಿ ಅನುಮೋದನೆ
ಪಡೆದುಕೊಳ್ಳಬೇಕು.

ಆನಂದ್‌ ಪ್ರಕಾಶ್‌ ಮೀನಾ
ಆನಂದ್‌ ಪ್ರಕಾಶ್‌ ಮೀನಾ

ಈ ಬಗ್ಗೆ ರಾಜೀವ್‌ ಗಾಂಧಿ ವಸತಿ ನಿಗಮ ನಿರ್ಧಾರ ಕೈಗೊಳ್ಳಬೇಕು. ಜನರು ಎದುರಿಸುತ್ತಿರುವ ಸಮಸ್ಯೆ ನಿಗಮದ ಗಮನಕ್ಕೆ ತರುತ್ತೇವೆ

– ಆನಂದ್ ಪ್ರಕಾಶ್‌ ಮೀನಾ, ಚಾಮರಾಜನಗರ ಜಿ.ಪಂ. ಸಿಇಒ

ದಾಖಲೆಗಳಿಗಾಗಿ ಅಲೆದಾಟ

ಸರ್ವರ್‌ ಸಮಸ್ಯೆಯ ಕಾರಣಕ್ಕೆ ಫಲಾನುಭವಿಗಳಿಗೆ ಪ್ರಮಾಣಪತ್ರಗಳನ್ನು ಪಡೆಯಲು ಸಾಧ್ಯವಾಗುತ್ತಿಲ್ಲ. ಅದಕ್ಕಾಗಿ ನಾಲ್ಕೈದು ದಿನಗಳಿಂದ ಗ್ರಾಮ ಒನ್ ಕೇಂದ್ರಗಳು ಹಾಗೂ ನಾಡಕಚೇರಿಗೆ ಅಲೆದಾಡುತ್ತಿದ್ದಾರೆ.  ‘ನಾಲ್ಕೈದು ದಿನಗಳ ಹಿಂದೆ ಆದೇಶ ಪತ್ರ ವಿತರಿಸಲಾಗಿದೆ. ಗ್ರಾಮ ಒನ್ ಕೇಂದ್ರ ಹಾಗೂ ನಾಡಕಚೇರಿಯ ಕಂಪ್ಯೂಟರ್ ಕೇಂದ್ರಗಳಲ್ಲಿ ಸರ್ವರ್ ಸಮಸ್ಯೆಯಾಗಿದ್ದು ಸಕಾಲದಲ್ಲಿ ದಾಖಲೆಗಳು ಸಿಗುತ್ತಿಲ್ಲ. ಇದರಿಂದ ಕೈಗೆ ಬಂದ ತುತ್ತು ಬಾಯಿಗೆ ಬಾರದಂತಾಗಿದೆ’ ಎಂದು ಫಲಾನುವಿಗಳು ಅಳಲು ತೋಡಿಕೊಂಡರು. 

ಎರಡು ದಿನಗಳಲ್ಲಿ ಆಗದು

‘ಸರ್ವರ್ ಸಮಸ್ಯೆ ಉಂಟಾಗಿ ಸಾರ್ವಜನಿಕರಿಗೆ ಜಾತಿ ಮತ್ತು ಆದಾಯ ಪ್ರಮಾಣವನ್ನು ನೀಡಲು ವಿಳಂಬವಾಗುತ್ತಿದೆ. ಒಂದು ವೇಳೆ ಸರ್ವರ್ ಸಮಸ್ಯೆ ಇಲ್ಲದಿದ್ದರೂ ಎರಡು ದಿನಗಳಲ್ಲಿ ಪ್ರಮಾಣಪತ್ರ ನೀಡುವುದು ಸಾಧ್ಯವಿಲ್ಲ’ ಎನ್ನುತ್ತಾರೆ ನಾಡಕಚೇರಿ ಅಧಿಕಾರಿಗಳು.  ‘ಈಚೆಗಷ್ಟೇ ಮನೆ ನಿರ್ಮಿಸಿಕೊಳ್ಳಲು ಗ್ರಾಮಪಂಚಾಯಿತಿಯವರು ಆದೇಶ ಪತ್ರ ನೀಡಿದ್ದಾರೆ. ನಾಡಕಚೇರಿಯಲ್ಲಿ ದಾಖಲೆಗಳನ್ನು 2 ದಿನಗಳಲ್ಲಿ ಪಡೆದುಕೊಳ್ಳಲು ಆಗುವುದಿಲ್ಲ. ನಿಗದಿಪಡಿಸಿರುವ ಕಾಲಾವಕಾಶವನ್ನು ಮುಂದೂಡಬೇಕು’ ಎಂದು ಕಮರವಾಡಿ ಗ್ರಾಮದ ಫಲಾನುಭವಿ ರಾಜು ಒತ್ತಾಯಿಸಿದರು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT