ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿವರಾಮ್ ಸಿಗದ ಸರ್ಕಾರಿ ಗೌರವ; ದಲಿತರಿಗೆ ಅಪಮಾನ: ಮೂಡ್ನಾಕೂಡು ಪ್ರಕಾಶ್ ವಾಗ್ದಾಳಿ

Published 4 ಮಾರ್ಚ್ 2024, 13:54 IST
Last Updated 4 ಮಾರ್ಚ್ 2024, 13:54 IST
ಅಕ್ಷರ ಗಾತ್ರ

ಚಾಮರಾಜನಗರ: ‘ನಿವೃತ್ತ ಐಎಎಸ್ ಅಧಿಕಾರಿ, ನಟ ಕೆ.ಶಿವರಾಮ್ ಅವರ ಅಂತ್ಯಕ್ರಿಯೆಯನ್ನು ಸಕಲ ಸರ್ಕಾರಿ ಗೌರವದೊಂದಿಗೆ ನೆರವೇರಿಸದೆ ರಾಜ್ಯ ಸರ್ಕಾರ ದಲಿತರಿಗೆ ಅಪಮಾನ ಮಾಡಿದೆ’ ಎಂದು ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪ್ರಕಾಶ್ ಮೂಡ್ನಾಕೂಡು ಭಾನುವಾರ ಆರೋಪಿಸಿದರು.

ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ರಾಜ್ಯ ಸರ್ಕಾರವು ಸರ್ಕಾರಿ ನೌಕರರಲ್ಲದ ಗೌರಿ ಲಂಕೇಶ್ ಹಾಗೂ ನಾಲ್ವರು ಚಿತ್ರನಟರ ಅಂತ್ಯಕ್ರಿಯೆಯನ್ನು ಸರ್ಕಾರದ ಗೌರವದೊಂದಿಗೆ ನೆರವೇರಿಸಲಾಗಿದೆ. ಅದೇ ರೀತಿಯಲ್ಲಿ ಕೆ.ಶಿವರಾಮ್‌ ಅಂತ್ಯಕ್ರಿಯೆಯನ್ನು ಸರ್ಕಾರ ಗೌರವದೊಂದಿಗೆ ನಡೆಸಬೇಕಿತ್ತು. ಆದರೆ, ಸರ್ಕಾರ ಅದನ್ನು ಮಾಡದೇ ಇಡೀ ಸಮುದಾಯವಕ್ಕೆ ಅಪಮಾನ ಮಾಡಿದೆ’ ಎಂದು ದೂರಿದರು. 

‘ದಲಿತ ಸಮುದಾಯಕ್ಕೆ ಸೇರಿದ ನಿವೃತ್ತ ಅಧಿಕಾರಿ ಅಂತ್ಯಕ್ರಿಯೆಯನ್ನು ಸರ್ಕಾರಿ ಗೌರವದೊಂದಿಗೆ ಮಾಡಿಸುವಲ್ಲಿ ವಿಫಲರಾಗಿರುವ ಸಮುದಾಯದ ಸಚಿವರಾದ ಎಚ್.ಸಿ.ಮಹದೇವಪ್ಪ, ಜಿ.ಪರಮೇಶ್ವರ, ಪ್ರಿಯಾಂಕ್‌ ಖರ್ಗೆ ಸಮುದಾಯದವರಲ್ಲಿ ಕ್ಷಮೆ ಕೇಳಬೇಕು, ತಮ್ಮ ಸ್ಥಾನಗಳಿಗೆ ರಾಜೀನಾಮೆ ನೀಡಬೇಕು’ ಎಂದು ಆಗ್ರಹಿಸಿದರು.

‘ಕೆ.ಶಿವರಾಮ್‌ ಅವರು ದಲಿತ ಮುಖ್ಯಮಂತ್ರಿ ಕೂಗು ಹುಟ್ಟುಹಾಕದಿದ್ದರೆ ಈ ಮೂವರು ಸಚಿವರು ಮೂಲೆ ಗುಂಪಾಗುತ್ತಿದ್ದರು. ಕೆ.ಶಿವರಾಮ್‌ ಅವರ ಹೋರಾಟದ ಪ್ರತಿಫಲದಿಂದ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಛವವಾದಿ ಮಹಾಸಭಾಕ್ಕೆ ಜಾಗ ಕೊಟ್ಟಿದ್ದರು. ಛಲವಾದಿ ಭವನಕ್ಕೆ ಅನುದಾನ ನೀಡಿದ್ದರು. ಸಮುದಾಯದ ದಕ್ಷ, ಪ್ರಾಮಾಣಿಕ ಅಧಿಕಾರಿಯ ಋಣ ತೀರಿಸಕ್ಕಾದರೂ ಅವರ ಅಂತ್ಯಸಂಸ್ಕಾರ ಸರ್ಕಾರ ಗೌರವದೊಂದಿಗೆ ಮಾಡಿದ್ದರೆ ಸಚಿವರ ಘನತೆ, ಗೌರವ ಹೆಚ್ಚಾಗುತ್ತಿತ್ತು’ ಎಂದರು. 

‘ಸಿದ್ದರಾಮಯ್ಯನವರು ಸಂವಿಧಾನ, ದಲಿತ ವಿಚಾರವನ್ನು ಮುಂದಿಟ್ಟುಕೊಂಡು ಎಲ್ಲರಿಗೆ ಮಂಕುಬೂದಿ ಎರಚುತ್ತಿದ್ದಾರೆ. ಕೆ.ಶಿವರಾಮ್‌ ಹಾಗೂ ದಲಿತ ಸಮುದಾದವರ ಮೇಲೆ ಗೌರವ ಇದ್ದರೆ ರಾಜ್ಯದಲ್ಲಿ ಕನ್ನಡ ನಾಡು, ನುಡಿಗೆ ಹೋರಾಟದ ಮಾಡಿದವರಿಗೆ ಕೆ.ಶಿವರಾಮ್‌ ಅವರ ಹೆಸರಿನಲ್ಲಿ ಪ್ರಶಸ್ತಿ ಘೋಷಣೆ ಮಾಡುವ ಮೂಲಕ ಗೌರವ ಉಳಿಸಿಕೊಳ್ಳಬೇಕು’ ಎಂದರು.

ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಟಗರಪುರ ರೇವಣ್ಣ, ಎಸ್‌ಸಿ ಮೋರ್ಚಾದ ಜಿಲ್ಲಾಧ್ಯಕ್ಷ ಮೂಡಹಳ್ಳಿಮೂರ್ತಿ, ಮಾಧ್ಯಮ ಸಹಪ್ರಮುಖ್ ಅಶ್ವಿನ್, ಮುಖಂಡ ಭಾನುಪ್ರಕಾಶ್ ಭಾಗವಹಿಸಿದ್ದರು.

‘ಸಿ.ಎಂ ದಲಿತರ ಪಾಲಿಗೆ ಗೋಮುಖ ವ್ಯಾಘ್ರ’

‘ಮುಖ್ಯಮಂತ್ರಿ ಸಿದ್ದರಾಮಯ್ಯನವರು ಹೇಳುವುದು ಒಂದು ಮಾಡುವುದು ಇನ್ನೊಂದು. ದಲಿತರ ಪಾಲಿಗೆ ಗೋಮುಖ ವ್ಯಾಘ್ರರಾಗಿದ್ದಾರೆ. ಎಸ್‌ಸಿಎಸ್‌ಪಿ ಟಿಎಸ್‌ಪಿ ಅನುದಾನವನ್ನು ಗ್ಯಾರಂಟಿ ಯೋಜನೆಗಳಿಗೆ ಬಳಕೆ ಮಾಡಿದ್ದಾರೆ. ಭೂ ಒಡೆತನ ಯೋಜನೆಗೆ ಒಂದು ರೂಪಾಯಿ ಇಲ್ಲ. ಗಂಗಾ ಕಲ್ಯಾಣ ಯೋಜನೆಯಲ್ಲಿ ಬೋರ್‌ವೆಲ್ ಕೊರೆಸಲು ಹಣ ಇಲ್ಲ. ಐರಾವತ ಯೋಜನೆಗಳಿಗೆ ಹಣ ಇಲ್ಲ. ಒಂದು ಎರಡು ಫಲಾನುಭವಿಗೆ ಸಾಲಸೌಲಭ್ಯ ಸಿಗುತ್ತಿದೆ. ಸಿದ್ದರಾಮಯ್ಯನವರು ತಮ್ಮ ಸಮುದಾಯದ ಅಭಿವೃದ್ದಿಗೆ ಅನುದಾನ ಬಳಕೆ ಮಾಡಿಕೊಳ್ಳುವ ಸಲುವಾಗಿ ದಲಿತರನ್ನು ಬೀದಿಗೆ ತಂದು ನಿಲ್ಲಿಸಿದ್ದಾರೆ’ ಎಂದು ದೂರಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT