ಬುಧವಾರ, 28 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕನ್ನಡಿಗರು ಸ್ವಾಭಿಮಾನಿಗಳಾಗಬೇಕು: ನಾಗಣ್ಣ

ಜೆಎಸ್‌ಬಿ ಪ್ರತಿಷ್ಠಾನದ ಕನ್ನಡ ಮಾಸಾಚರಣೆ ಕಾರ್ಯಕ್ರಮ ಸಮಾರೋಪ
Published 30 ನವೆಂಬರ್ 2023, 14:19 IST
Last Updated 30 ನವೆಂಬರ್ 2023, 14:19 IST
ಅಕ್ಷರ ಗಾತ್ರ

ಪ್ರಜಾವಾಣಿ ವಾರ್ತೆ

ಚಾಮರಾಜನಗರ: ‘ಬೇರೆ ರಾಜ್ಯಗಳ ಜನರಿಗೆ ಹೋಲಿಸಿದರೆ ಕನ್ನಡಿಗರು ನಿರಭಿಮಾನಿಗಳು. ಬೇರೆ ರಾಜ್ಯಗಳ ಭಾಷಾಭಿಮಾನಿಗಳಂತೆ ಕನ್ನಡಿಗರೂ ಸ್ವಾಭಿಮಾನಿಗಳಾಗಬೇಕು’ ಎಂದು ಸಾಹಿತಿ ಸಿ.ನಾಗಣ್ಣ ಗುರುವಾರ ಅಭಿಪ್ರಾಯಪಟ್ಟರು.  

ತಾಲ್ಲೂಕಿನ ಹರವೆಯ ಮೊರಾರ್ಜಿ ಶಾಲೆಯಲ್ಲಿ ಜೆಎಸ್‌ಬಿ ಪ್ರತಿಷ್ಠಾನ ಆಯೋಜಿಸಿದ್ದ 'ಕನ್ನಡ ಮಾಸಾಚರಣೆ –2023' ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು. 

‘ಪ್ರಪಂಚದಲ್ಲಿ 7000ಕ್ಕೂ ಹೆಚ್ಚಿನ ಭಾಷೆಗಳಿದ್ದರೂ, ಕನ್ನಡ ಭಾಷೆ ಅತ್ಯಂತ ಸಂಪದ್ಭರಿತ ಭಾಷೆ. ಭಾವನಾತ್ಮಕ ಬೆರೆತ ದೇಶಾಭಿಮಾನವೇ ನಾಡನ್ನುಳಿಸಲು ಸ್ಪೂರ್ತಿ. ನಾಡನ್ನು, ಭಾಷೆಯನ್ನು ಉಳಿಸಲು ನಾವು ನೆತ್ತರು ಕೊಡಲು ತಯಾರಿರಬೇಕು. 68 ವರ್ಷಗಳ ಹಿಂದೆ ಕರ್ನಾಟಕ ರಾಜ್ಯ ಏನಾಗಿತ್ತು ಎಂಬುದರ ಕುರಿತು ನಾವು ಮತ್ತೊಮ್ಮೆ ಅವಲೋಕನ ಮಾಡಬೇಕು’ ಎಂದರು. 

‘ಕನ್ನಡವನ್ನು ಮಾತನಾಡುವ ಜನರು ಬೇರೆ ಬೇರೆ ಪ್ರಾಂತ್ಯಗಳಲ್ಲಿ ಹಂಚಿ ಹೋಗಿದ್ದರು. ಎಲ್ಲರನ್ನು ಒಳಗೊಂಡು ಮೈಸೂರು ಪ್ರಾಂತ್ಯವಾಯಿತು. ನಂತರ 1973ರಲ್ಲಿ ಕರ್ನಾಟಕ ರಾಜ್ಯವಾಯಿತು. ಆದರೆ ಕರ್ನಾಟಕ ಏಕೀಕರಣ ಹೋರಾಟದ ಉದ್ದೇಶ ಜನರ ಮನಗಳಿಗೆ ತಲುಪಿಲ್ಲ. ಆರ್ಥಿಕ, ಸಾಮಾಜಿಕ ಕ್ಷೇತ್ರಗಳಲ್ಲಿ ರಾಜ್ಯ ಪ್ರಗತಿ ಸಾಧಿಸಿ ರಾಷ್ಟ್ರದ ಮುಂಚೂಣಿಯ ರಾಜ್ಯ ಎಂಬ ಸ್ಥಾನ ಪಡೆದಾಗ ಏಕೀಕರಣದ ಉದ್ದೇಶ ಈಡೇರುತ್ತದೆ’ ಎಂದರು. 

‘ಕವಿಗಳು ಹಾಡಿ ಹೊಗಳಿದ ನಾಡನ್ನು ಉಳಿಸಿಕೊಳ್ಳಬೇಕಾದ ಜವಾಬ್ದಾರಿ ನಾಡನ್ನಾಳುವ ರಾಜಕಾರಣಿಗಳಿಗೆ ಬರಬೇಕಿದೆ. ನಮ್ಮ ನಾಡಿನ ಪ್ರಬುದ್ಧ ಜನರನ್ನು ಮುನ್ನಡೆಸಲು ಬಹಳ ಉತ್ತಮವಾದ ಜನನಾಯಕರು ಬರಬೇಕಿದೆ. ಇದು ಇನ್ನೂ ಮುಂದಾದರು ಆಗಲಿ’ ಎಂದು ಆಶಿಸಿದರು.

ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ದೇವರಾಜು ಕಪ್ಪಸೋಗೆ ಮಾತನಾಡಿ, ‘ಈ ಭಾಗದ ಜನರು ಸ್ವಾಭಿಮಾನಿಗಳು. ಒಳ್ಳೆಯ ಪರಿಸರ, ಶುದ್ದ ಗಾಳಿ ಸೇವಿಸುತ್ತಾ ಆರೋಗ್ಯದಿಂದ ಇದ್ದಾರೆ. ಆದರೆ, ಈಗ ಆತಂಕ ಪಡುವ ಪರಿಸ್ಥಿತಿ ಎದುರಾಗಿದ್ದು, ನಮ್ಮ ಜಿಲ್ಲೆಯು ಅತಿಯಾದ ಗಣಿಗಾರಿಕೆಯಿಂದ ತನ್ನ ಸಹಜ ಸೌಂದರ್ಯ ಕಳೆದುಕೊಳ್ಳುತ್ತಿದೆ. ಪ್ರಕೃತಿ ಸಂಪತ್ತು ನಶಿಸುತ್ತಿದೆ’ ಎಂದರು.

ವಸತಿ ಶಾಲೆ ಪ್ರಾಂಶುಪಾಲರಾದ ಸವಿತಾ ಎಂ.ಆರ್ ಪ್ರಾಸ್ತಾವಿಕವಾಗಿ ಮಾತನಾಡಿದರು.  ಜೆಎಸ್‌ಬಿ ಪ್ರತಿಷ್ಠಾನದ ಎಸ್.ಶಶಿಕುಮಾರ್ ಮಾತನಾಡಿದರು.

ಊಟಿಯ ಗುರುಬಸವ ಶಾಂತಿನಿಕೇತನದ ಬಸವಯೋಗಿ ಪ್ರಭುಸ್ವಾಮೀಜಿ ಸಾನಿಧ್ಯವಹಿಸಿದ್ದರು. 

ಶಾಲೆಯ ಮಕ್ಕಳ ಸಾಂಸ್ಕೃತಿಕ ಕಾರ್ಯಕ್ರಮ ಗಮನ ಸೆಳೆಯಿತು. ಕಾರ್ಯಕ್ರಮದ ಅಂಗವಾಗಿ ಶಾಲೆಯಲ್ಲಿ ವಿವಿಧ ಸ್ಪರ್ಧೆಯಲ್ಲಿ ವಿಜೇತರಾದ ಮಕ್ಕಳಿಗೆ ಕನ್ನಡ ಪುಸ್ತಕಗಳ ಬಹುಮಾನ, ಜೊತೆಗೆ ಶಾಲೆಯ ಎಲ್ಲಾ ಮಕ್ಕಳಿಗೆ ಕನ್ನಡ ಕಿರುಪುಸ್ತಕ ವಿತರಿಸಲಾಯಿತು. 

ಕನ್ನಡ ಪಂಡಿತ ಜಯಶೇಖರಪ್ಪ, ಶಾಲೆ ಶಿಕ್ಷಕರಾದ ದೀಪಾ, ರಾಜೇಶ, ಹರೀಶಕುಮಾರ, ನಾನದೇವ ಗುರುವ, ಮಹದೇವಸ್ವಾಮಿ, ಶಶಿಕುಮಾರ, ಜ್ಯೋತಿ, ಅಂಬಿಕಾ, ಚೈತ್ರ, ಸಿಬ್ಬಂದಿಗಳು, ಪೋಷಕರು ಮತ್ತು ವಿದ್ಯಾರ್ಥಿಗಳಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT