ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

‌ಚಾಮರಾಜನಗರ ಜಿಲ್ಲೆಯ ಅಭಿವೃದ್ಧಿಗೆ ವಿಶೇಷ ಪ್ಯಾಕೇಜ್‌ಗೆ ಆಗ್ರಹ

Published 13 ಫೆಬ್ರುವರಿ 2024, 16:26 IST
Last Updated 13 ಫೆಬ್ರುವರಿ 2024, 16:26 IST
ಅಕ್ಷರ ಗಾತ್ರ

‌ಚಾಮರಾಜನಗರ: ಮುಖ್ಯಮಂತ್ರಿ ಸಿದ್ದರಾಮಯ್ಯನವರು ಮಂಡಿಸಲಿರುವ ರಾಜ್ಯ ಬಜೆಟ್‌ನಲ್ಲಿ ಜಿಲ್ಲೆಗೆ ₹5,000 ಕೋಟಿಯ ವಿಶೇಷ ಪ್ಯಾಕೇಜ್‌ ಘೋಷಣೆ ಮಾಡಬೇಕು ಎಂದು ಆಗ್ರಹಿಸಿ ಕರ್ನಾಟಕ ಸೇನಾ ಪಡೆ ಕಾರ್ಯಕರ್ತರು ಮಂಗಳವಾರ ನಗರದಲ್ಲಿ ಪ್ರತಿಭಟನೆ ನಡೆಸಿದರು. 

ಭುವನೇಶ್ವರಿ ವೃತ್ತದಲ್ಲಿ ವಾಹನ ತಡೆದು, ತಮಟೆ ಬಡಿಯುವ ಮೂಲಕ ಚಳವಳಿ ನಡೆಸಿದ ಪ್ರತಿಭಟನಕಾರರು, ರಾಜ್ಯ ಸರ್ಕಾರಕ್ಕೆ ಒತ್ತಾಯಿಸಿದರು. 

ಸೇನಾಪಡೆ ಅಧ್ಯಕ್ಷ ಚಾ.ರಂ.ಶ್ರೀನಿವಾಸಗೌಡ ಮಾತನಾಡಿ, ‘ರಾಜ್ಯದ ಗಡಿ ಜಿಲ್ಲೆ ಚಾಮರಾಜನಗರ ಜಿಲ್ಲೆಗೆ ಅತಿ ಹೆಚ್ಚು ಬಾರಿ ಭೇಟಿ ನೀಡಿರುವ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಅವರಿಗೆ ಜಿಲ್ಲೆಯ ನಾಡಿಮಿಡಿತ ಗೊತ್ತಿದೆ. ಈ ಬಾರಿಯ ತಮ್ಮ ಬಜೆಟ್‌ನಲ್ಲಿ ಜಿಲ್ಲೆ ಅಭಿವೃದ್ಧಿಗೆ ವಿಶೇಷ ಪ್ಯಾಕೇಜ್ ಘೋಷಣೆ ಮಾಡಿ ₹5000 ಕೋಟಿ ಅನುದಾನ ನೀಡಬೇಕು‌’ ಎಂದು ಒತ್ತಾಯಿಸಿದರು. 

‘ಹೊಸದಾಗಿ ಅಸ್ತಿತ್ವಕ್ಕೆ ಬಂದಿರುವ ಚಾಮರಾಜನಗರ ವಿಶ್ವವಿದ್ಯಾಲಯ ನೆಪಕ್ಕೆ ಮಾತ್ರ ಇದೆ. ಇಲ್ಲಿಗೆ ಅನೇಕ ಕೋರ್ಸ್‌ಗಳು, ಮೂಲಸೌಕರ್ಯಗಳ ಅವಶ್ಯಕತೆ ಇದೆ. ರಾಜ್ಯ ಸರ್ಕಾರದಿಂದ ಅನುದಾನ ಸಿಗದೆ ಅಭಿವೃದ್ಧಿಯಾಗಿಲ್ಲ. ವಿವಿಯ ಸಮಗ್ರ ಅಭಿವೃದ್ಧಿಗಾಗಿ ಕನಿಷ್ಠ ₹100 ಕೋಟಿ ಮೀಸಲಿಡಬೇಕು. ಪ್ರವಾಸೋದ್ಯಮ ಜಿಲ್ಲೆಯಲ್ಲಿ ಬಹಳ ಹಿಂದುಳಿದಿದೆ. ಬಿಳಿಗಿರಿ ರಂಗನ ಬೆಟ್ಟ, ಮಹದೇಶ್ವರ ಬೆಟ್ಟ, ಹೊಗೆನಕಲ್, ಹಿಮವದ್ ಗೋಪಾಲಸ್ವಾಮಿ ಬೆಟ್ಟ, ಸುವರ್ಣಾವತಿ, ಚಿಕ್ಕಹೊಳೆ, ಭರಚುಕ್ಕಿ ಹೀಗೆ ಹಲವಾರು ಪ್ರವಾಸಿ ತಾಣಗಳಿವೆ. ಇದನ್ನು ಅಭಿವೃದ್ಧಿ ಮಾಡಬೇಕು’ ಎಂದು ಆಗ್ರಹಿಸಿದರು. 

‘ಜಿಲ್ಲೆಯ ಪ್ರತಿಯೊಂದು ಕೆರೆಗಳನ್ನು ತುಂಬಿಸುವ ಯೋಜನೆ ರೂಪಿಸಬೇಕು. ಚಾಮರಾಜನಗರದಲ್ಲಿ 2ನೇ ಹಂತದ ಕುಡಿಯುವ ನೀರಿನ ಯೋಜನೆ ಅನುಷ್ಠಾನ ಮಾಡಬೇಕು’ ಎಂದು ಶ್ರೀನಿವಾಸಗೌಡ ಒತ್ತಾಯಿಸಿದರು.  

ಚಾ.ವೆಂ.ರಾಜ್‌ಗೋಪಾಲ್, ಚಾ.ರ.ಕುಮಾರ್, ಪಣ್ಯದಹುಂಡಿ ರಾಜು, ವೀರಭದ್ರ, ತಾಂಡವಮೂರ್ತಿ, ಆಟೊ ನಾಗೇಶ್, ರಾಜಪ್ಪ, ಮಹೇಶ್ ಗೌಡ, ಸೋಮವಾರಪೇಟೆ ಮಂಜು, ಲಿಂಗರಾಜು, ಚಾ.ಸಿ.ಸಿದ್ದರಾಜು, ನಿಜಧ್ವನಿ ಗೋವಿಂದರಾಜು, ಗು.ಪುರುಷೋತ್ತಮ್, ನಂಜುಂಡಸ್ವಾಮಿ, ರವಿಚಂದ್ರ ಪ್ರಸಾದ್ ಇತರರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT