ಶನಿವಾರ, 13 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊಳ್ಳೇಗಾಲ ನಗರಸಭೆ; ₹ 89 ಲಕ್ಷ ಉಳಿತಾಯ ಬಜೆಟ್ ಮಂಡನೆ

ಕೊಳ್ಳೇಗಾಲ ನಗರಸಭೆ; ಮೂಲಸೌಕರ್ಯಗಳಿಗೆ ಆದ್ಯತೆ, ಬಜೆಟ್‌ ಮೊತ್ತ ₹51.74 ಕೋಟಿ
Published 18 ಫೆಬ್ರುವರಿ 2024, 5:40 IST
Last Updated 18 ಫೆಬ್ರುವರಿ 2024, 5:40 IST
ಅಕ್ಷರ ಗಾತ್ರ

ಕೊಳ್ಳೇಗಾಲ: ನಗರದ ವ್ಯಾಪ್ತಿಯಲ್ಲಿ ಮೂಲಸೌಕರ್ಯಗಳನ್ನು ಕಲ್ಪಿಸಲು ಒತ್ತು ನೀಡುವ ₹51.27 ಕೋಟಿ ಮೊತ್ತದ ₹ 89.75 ಲಕ್ಷ ಉಳಿತಾಯದ 2024–25ನೇ ಸಾಲಿನ ಬಜೆಟ್ ಅನ್ನು ನಗರ ಸಭೆ ಆಡಳಿತಾಧಿಕಾರಿ ಹಾಗೂ ಜಿಲ್ಲಾಧಿಕಾರಿ ಸಿ.ಟಿ. ಶಿಲ್ಪಾ ನಾಗ್ ಶನಿವಾರ ಮಂಡಿಸಿದರು.

ಬಜೆಟ್‌ ಮೊತ್ತ ₹51.74 ಕೋಟಿಯಲ್ಲಿ ₹50.52 ಕೋಟಿ ವೆಚ್ಚವಾಗಲಿದ್ದು, ₹ 89.75 ಲಕ್ಷ ಉಳಿತಾಯವಾಗಲಿದೆ.

ತೆರಿಗೆ ಸಂಗ್ರಹ ಸೇರಿದಂತೆ ಇನ್ನಿತರ ಆದಾಯ ಮೂಲಗಳಿಂದ ₹10.26 ಕೋಟಿ ಸಂಗ್ರಹವಾಗುವ ನಿರೀಕ್ಷೆಯನ್ನು ನಗರಸಭೆ ಹೊಂದಿದೆ. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಿಂದ ₹24.08 ಕೋಟಿ ಅನುದಾನ
ನಿರೀಕ್ಷಿಸಲಾಗಿದೆ. 

ಆದಾಯದ ಮೂಲ: ಆಸ್ತಿ ತೆರಿಗೆಯಿಂದ ₹2.75 ಕೋಟಿ, ಇತರ ತೆರಿಗೆಗಳಿಂದ ₹1 ಕೋಟಿ , ಅಭಿವೃದ್ಧಿ ಶುಲ್ಕ ₹35 ಲಕ್ಷ, ಕಟ್ಟಡ ಪರವಾನಿಗೆ ₹8 ಲಕ್ಷ, ಉದ್ದಿಮೆ ಪರವಾನಗಿ ₹ 20 ಲಕ್ಷ, ನೆಲ ಬಾಡಿಗೆ ₹ 15 ಲಕ್ಷ, ಶುದ್ಧ ಕುಡಿಯುವ ನೀರಿನ ಘಟಕಗಳಿಂದ ₹30 ಲಕ್ಷ, ನೀರು ಸರಬರಾಜು ಶುಲ್ಕದಿಂದ ₹80 ಲಕ್ಷ, ಬ್ಯಾಂಕ್ ಬಡ್ಡಿಯಿಂದ ₹45 ಲಕ್ಷ , ವಾಣಿಜ್ಯ ಮಳಿಗೆ ಬಾಡಿಗೆ ₹10 ಲಕ್ಷ, ಸುಧಾರಣಾ ಶುಲ್ಕ ₹25 ಲಕ್ಷ, ಸ್ಟ್ಯಾಂಪ್ ಶುಲ್ಕ 5 ಲಕ್ಷ ಘನತ್ಯಾಜ್ಯ ನಿರ್ವಹಣಾ ಶುಲ್ಕ ₹30 ಲಕ್ಷ, ಆಸ್ತಿ ತೆರಿಗೆ ಮೇಲಿನ ದಂಡಗಳಿಂದ ₹1ಕೋಟಿ, ಕಡತಗಳು ಮತ್ತು ಇತರೆ ಆದಾಯ ₹2.48 ಕೋಟಿ ಸಂಗ್ರಹಿಸಲು ನಗರಸಭೆ
ಉದ್ದೇಶಿಸಿದೆ. 

ಅನುದಾನ ನಿರೀಕ್ಷೆ: ರಾಜ್ಯ ಹಾಗೂ ಕೇಂದ್ರ ಸರ್ಕಾರದ ವಿವಿಧ ಯೋಜನೆಯಡಿ ಎಸ್.ಎಫ್ .ಸಿ ವೇತನ ₹6.81 ಕೋಟಿ, ಎಸ್.ಎಫ್. ಸಿ ಮುಕ್ತ ನಿಧಿ ₹1.85 ಕೋಟಿ, ಎಸ್.ಎಫ್.ಸಿ ವಿದ್ಯುತ್ ₹5.62 ಕೋಟಿ, ಎಸ್.ಎಫ್.ಸಿ ಕುಡಿಯುವ ನೀರಿನ ₹10 ಲಕ್ಷ, ಸ್ವಚ್ಛ ಭಾರತ್ ಮಿಷನ್ ₹90 ಲಕ್ಷ, 15ನೇ ಹಣಕಾಸು ₹3.85 ಕೋಟಿ, ಡೇ ನಲ್ಮ್‌ ₹20 ಲಕ್ಷ, ಗೃಹ ಭಾಗ್ಯ ಯೋಜನೆ ₹15 ಲಕ್ಷ ಎನ್.ಪಿ .ಎಸ್ ₹40 ಲಕ್ಷ, 24x7 ವೇತನ ಅನುದಾನ ₹20 ಲಕ್ಷ ಸೇರಿದಂತೆ ಒಟ್ಟು ₹24.8 ಕೋಟಿ ಅನುದಾನ ನಿರೀಕ್ಷಿಸಲಾಗಿದೆ.

ಮೂಲಸೌಕರ್ಯಕ್ಕೆ ಒತ್ತು: ನಗರ ವ್ಯಾಪ‍್ತಿಯಲ್ಲಿ ಮೂಲಸೌಕರ್ಯಕ್ಕೆ ಹೆಚ್ಚಿನ ಒತ್ತು ನೀಡಲಾಗುವುದು ಎಂದು ಜಿಲ್ಲಾಧಿಕಾರಿ
ಶಿಲ್ಪಾನಾಗ್‌ ಹೇಳಿದರು. 

₹50 ಲಕ್ಷ ವೆಚ್ಚದಲ್ಲಿ ವಿದ್ಯುತ್‌ ಚಿತಾಗಾರ ನಿರ್ಮಿಸುವ ಪ್ರಸ್ತಾವವನ್ನೂ ಅವರು ಮುಂದಿಟ್ಟಿದ್ದಾರೆ. 

ರಸ್ತೆ ಮತ್ತು ಪಾದಚಾರಿ ಮಾರ್ಗಗಳ ಅಭಿವೃದ್ಧಿಗೆ ₹ 2.10 ಕೋಟಿ, ಚರಂಡಿ ನಿರ್ಮಾಣಕ್ಕೆ ₹1.60 ಕೋಟಿ, ಮಳೆ ನೀರಿನ ಚರಂಡಿಗಳು ₹ 30 ಲಕ್ಷ, ಘನ ತ್ಯಾಜ್ಯ ವಸ್ತು ನಿರ್ವಹಣೆ, ಕಸ ವಿಲೇವಾರಿ ಘಟಕ ಯಂತ್ರೋಪಕರಣ ಮತ್ತು ವಾಹನ ಖರೀದಿಗಾಗಿ ₹3.40 ಕೋಟಿ, ಕ್ರೀಡಾಂಗಣ ನಿರ್ಮಾಣಕ್ಕೆ ₹ 10 ಲಕ್ಷ, ನೀರು ಸರಬರಾಜು ಕಾಮಗಾರಿ ಮತ್ತು ಯಂತ್ರೋಪಕರಣ ಖರೀದಿಗೆ ₹ 3.66 ಕೋಟಿ, ಉದ್ಯಾನಗಳಿಗೆ ಅಲಂಕಾರ ದೀಪ ಹಾಗೂ ನಿರ್ವಹಣೆಗೆ ₹40 ಲಕ್ಷ ಮೀಸಲಿಡಲಾಗಿದೆ. 

ನೌಕರ ವೇತನ ₹ 6.81 ಕೋಟಿ, ಬೀದಿ ದೀಪಗಳು ಮತ್ತು ಸರಬರಾಜು ಬಿಲ್ಲು₹ 5.62 ಕೋಟಿ, ಬೀದಿ ದೀಪಗಳು ದುರಸ್ತಿ ಮತ್ತು ನಿರ್ವಹಣೆಗೆ ₹91ಲಕ್ಷ, ಘನ ತ್ಯಾಜ್ಯ ಸಂಬಂಧಿಸಿದ ನಿರ್ಮಾಣ ದುರಸ್ತಿ ₹88.50 ಲಕ್ಷ, ವಿದ್ಯುತ್ ಠೇವಣಿ ಕಡಿತ ಪಾವತಿಗೆ ₹3.4 ಕೋಟಿ , ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರಿಗೆ ₹ 1.1 ಕೋಟಿ, ಬಡ ಜನರ ಕಲ್ಯಾಣಕ್ಕೆ ₹ 37 ಲಕ್ಷ , ಅಂಗವಿಕಲರ ಕಲ್ಯಾಣ ಕಾರ್ಯಕ್ರಮಗಳಿಗೆ ₹ 41 ಲಕ್ಷ ನಿಗದಿ ಪಡಿಸಲಾಗಿದೆ. 

ಆಯುಕ್ತ ಎ.ರಮೇಶ್, ನಗರಸಭೆ ಸದಸ್ಯರು ಹಾಗೂ ಅಧಿಕಾರಿಗಳು ಇದ್ದರು.

‘ನಗರದ ಅಭಿವೃದ್ಧಿಗೆ ಆದ್ಯತೆ’

ಬಜೆಟ್‌ ಮಂಡನೆಯ ಬಳಿಕ ಮಾತನಾಡಿದ ಶಾಸಕ ಎ.ಆರ್‌.ಕೃಷ್ಣಮೂರ್ತಿ, ‘ನಗರದ ಸೌಂದರ್ಯವನ್ನು ಹೆಚ್ಚಿಸುವ ಸಲುವಾಗಿ ಹಾಗೂ ಕೆರೆಗಳನ್ನು ಅಭಿವೃದ್ಧಿ ಪಡಿಸುವ ಉದ್ದೇಶದಿಂದ ಹಾಗೂ ನಗರದ ಸರ್ವತೋಮುಖ ಅಭಿವೃದ್ಧಿಗೆ ಹೆಚ್ಚು ಒತ್ತು ನೀಡಲಾಗುವುದು’ ಎಂದರು. 

‘ನಗರದ ಡಾ.ಬಿ.ಆರ್ ಅಂಬೇಡ್ಕರ್ ರಸ್ತೆ ಹಾಗೂ ಡಾ.ರಾಜ್‌ಕುಮಾರ್ ರಸ್ತೆ ಅಭಿವೃದ್ಧಿಯನ್ನು ಶೀಘ್ರ ಮಾಡಲಾಗುವುದು. ಮುಖ್ಯಮಂತ್ರಿಯವರ ಗಮನಕ್ಕೆ ತಂದು ವಿಶೇಷ ಅನುದಾನಗಳ ಮೂಲಕ ನಗರವನ್ನು ಹೈಟೆಕ್ ನಗರವನ್ನಾಗಿ ಮಾಡಲು ಪ್ರಯತ್ನಿಸಲಾಗುವುದು’ ಎಂದರು. 

‘ವಿಶೇಷ ಅನುದಾನಗಳನ್ನು ನೀಡಬೇಕು ಎಂದು ನಗರಸಭೆ ಸದಸ್ಯರು ಮನವಿ ಮಾಡಿದ್ದಾರೆ. ಶೀಘ್ರದಲ್ಲಿ ನಿಮ್ಮ ಬೇಡಿಕೆಗಳನ್ನು ಈಡೇರಿಸಲಾಗುವುದು’ ಎಂದು ಭರವಸೆ ನೀಡಿದರು.

ಬಿಜೆಪಿ ಪ್ರತಿಭಟನೆ

ಬಜೆಟ್ ಆರಂಭಕ್ಕೂ ಮುನ್ನ ಬಿಜೆಪಿಯ ಏಳು ಸದಸ್ಯರು ಸಭಾಂಗಣಕ್ಕೆ ಬಾರದೆ ಹೊರಗಡೆ ಕುಳಿತು ಪ್ರತಿಭಟನೆ ಮಾಡಿದರು.

ನಗರಸಭೆ ಆಡಳಿತಾಧಿಕಾರಿ ಹಾಗೂ ಜಿಲ್ಲಾಧಿಕಾರಿಯವರು ಹೋಗಿ ಸದಸ್ಯರನ್ನು ಮನವೊಲಿಸಲು ಯತ್ನಿಸಿದರು.  ಸದಸ್ಯೆ ಕವಿತಾ ಮಾತನಾಡಿ, ‘ಸಾಮಾನ್ಯ ಸಭೆಯಲ್ಲಿ ನಾವು ಕೆಲವು ಬೇಡಿಕೆಗಳನ್ನು ಪ್ರಸ್ತಾಪಿಸಿದ್ದೆವು. ದೂರುಗಳನ್ನು ನೀಡಿದ್ದೆವು. ಆದರೆ ಯಾವುದನ್ನೂ ನಿರ್ಣಯ ಪುಸ್ತಕಕ್ಕೆ ಸೇರಿಸಿಲ್ಲ. ಸಾಮಾನ್ಯ ಸಭೆ ನಡೆದು ತಿಂಗಳು ಕಳೆದಿದೆ. ಇದುವರೆಗೂ ಯಾವ ಕೆಲಸವೂ ಆಗಿಲ್ಲ. ಆಡಳಿತ ಪಕ್ಷದವರು ನಮ್ಮನ್ನು ವಿರೋಧಿಗಳಂತೆ ನೋಡುತ್ತಿದ್ದಾರೆ’ ಎಂದು ದೂರಿದರು. 

ಜಿಲ್ಲಾಧಿಕಾರಿ ಪ್ರತಿಕ್ರಿಯಿಸಿ, ‘ಪ್ರಭಾರ ಆಯುಕ್ತರು ಇದ್ದುದರಿಂದ ನಿಮ್ಮ ಸಮಸ್ಯೆಗಳು ಹಾಗೂ ಬೇಡಿಕೆಗಳನ್ನು ಸೇರ್ಪಡೆ ಮಾಡಲು ಸಾಧ್ಯವಾಗಿಲ್ಲ. ಈಗ ಹೊಸದಾಗಿ ಆಯುಕ್ತರು ಬಂದಿದ್ದಾರೆ. ಇನ್ನು ವಾರದೊಳಗೆ ನಿಮ್ಮ ಬೇಡಿಕೆಗಳನ್ನು ಈಡೇರಿಸಲಾಗುವುದು’ ಎಂದರು.

ನಂತರ ಸದಸ್ಯರು ಪ್ರತಿಭಟನೆ ಕೈಬಿಟ್ಟು, ಬಜೆಟ್ ಸಭೆಯಲ್ಲಿ ಪಾಲ್ಗೊಂಡರು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT