ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಚಂದಕವಾಡಿ: ವಿಜೃಂಭಣೆಯ ಲಕ್ಷ್ಮೀದೇವಿ ರಥೋತ್ಸವ

Published 8 ಮಾರ್ಚ್ 2024, 16:35 IST
Last Updated 8 ಮಾರ್ಚ್ 2024, 16:35 IST
ಅಕ್ಷರ ಗಾತ್ರ

ಚಾಮರಾಜನಗರ: ತಾಲ್ಲೂಕಿನ ಚಂದಕವಾಡಿಯಲ್ಲಿ ಲಕ್ಷ್ಮೀದೇವಿ ಅಮ್ಮನವರ ರಥೋತ್ಸವ ಶುಕ್ರವಾರ ವಿಜೃಂಭಣೆಯಿಂದ ನಡೆಯಿತು.

ಸುತ್ತಮುತ್ತಲ ಗ್ರಾಮಗಳಿಂದ ಬಂದಿದ್ದ ಸಾವಿರಾರು ಭಕ್ತರು ತೇರನ್ನು ಕಣ್ತುಂಬಿಕೊಂಡರು. 

ಸಂಜೆ 5.15ಕ್ಕೆ ಲಕ್ಷ್ಮೀದೇವಿ ಅಮ್ಮನವರ ಉತ್ಸವ ಮೂರ್ತಿಯನ್ನು ರಥದ ಮೇಲೆ ಪ್ರತಿಷ್ಠಾಪಿಸಿ ಪೂಜೆ ಸಲ್ಲಿಸಲಾಯಿತು. ಶಾಸಕ ಸಿ.ಪುಟ್ಟರಂಗಶೆಟ್ಟಿ ಸೇರಿದಂತೆ ಗ್ರಾಮದ ಮುಖಂಡರು, ಗಣ್ಯರು ತೇರಿಗೆ ಪೂಜೆ ಸಲ್ಲಿಸಿದರು. ಆ ಬಳಿಕ ರಥೋತ್ಸವಕ್ಕೆ ಚಾಲನೆ ನೀಡಲಾಯಿತು. ನೂರಾರು ಭಕ್ತರ ಅಮ್ಮನವರ ಪರ ಘೋಷಣೆಗಳನ್ನು ಕೂಗುತ್ತಾ 200 ಮೀಟರ್‌ಗಳಷ್ಟು ದೂರಕ್ಕೆ ತೇರನ್ನು ಎಳೆದರು. 5.45ರ ಹೊತ್ತಿಗೆ ರಥವನ್ನು ಸ್ವಸ್ಥಾನಕ್ಕೆ ತರಲಾಯಿತು. 

ರಥದ ಮುಂಭಾಗ ಹುಲಿವಾಹನ, ಛತ್ರಿ, ಚಾಮರ ಮತ್ತು ನಂದಿಧ್ವಜಗಳು ಸಾಗಿದವು. ಶಾಸಕ ಸಿ.ಪುಟ್ಟರಂಗಶೆಟ್ಟಿ ಅವರು ಸ್ವತಃ ರಥವನ್ನು ಎಳೆದರು.

ಉತ್ತಮ ರಾಸುಗಳಿಗೆ ಬಹುಮಾನ: ಜಾತ್ರೆಯ ಅಂಗವಾಗಿ ದೇವಾಲಯದ ಆವರಣದಲ್ಲಿ ಜಾನುವಾರುಗಳ ಪರಿಷೆ ನಡೆಯಿತು. 

ಜಾತ್ರೆಯಲ್ಲಿ ಭಾಗವಹಿಸಿದ್ದ ಜಾನುವಾರುಗಳಲ್ಲಿ ಉತ್ತಮ ಎನಿಸಿಕೊಂಡ ರಾಸುಗಳಿಗೆ ಬಹುಮಾನ ನೀಡಲಾಯಿತು. ಗ್ರಾಮ ಪಂಚಾಯಿತಿ ವತಿಯಿಂದ 15 ಮತ್ತು ಎಪಿಎಂಸಿಯಿಂದ ಮೂರು ಚಾಂಪಿಯನ್ ಬಹುಮಾನಗಳನ್ನು ಉತ್ತಮ ಜಾನುವಾರುಗಳ ಮಾಲೀಕರಿಗೆ ನೀಡಲಾಯಿತು.

ಚಾಂಪಿಯನ್ ಎನಿಸಿದ ರಾಸುಗಳ ಮಾಲೀಕ ಗಂಗಾವಾಡಿ ಗ್ರಾಮದ ರೈತ ಅರಕೇಶ್‌ ಅವರಿಗೆ ಶಾಸಕ ಪುಟ್ಟರಂಗಶೆಟ್ಟಿ ಅವರು ಲಕ್ಷ್ಮೀ ದೇವಿ ಅಮ್ಮನವರ ಬೆಳ್ಳಿ ವಿಗ್ರಹವನ್ನು ವೈಯಕ್ತಿಕವಾಗಿ ನೀಡಿದರು.

ನಂತರ ಮಾತನಾಡಿದ ಸಿ.ಪುಟ್ಟರಂಗಶೆಟ್ಟಿ, ‘ಗ್ರಾಮೀಣ ಭಾಗದಲ್ಲಿ ಸುಗ್ಗಿಯ ನಂತರ ನಡೆಯುವ ಹಬ್ಬಗಳು, ಜನರನ್ನು ಧಾರ್ಮಿಕ ಮತ್ತು ಭಾವನಾತ್ಮಕವಾಗಿ ಒಗ್ಗೂಡಿಸುತ್ತಿದೆ. ಈ ಪರಂಪರೆ ಮುಂದುವರಿಯಬೇಕು’ ಎಂದು ಆಶಿಸಿದರು. 

ಎಪಿಎಂಸಿ ಅಧ್ಯಕ್ಷ ಸೋಮೇಶ್, ಸದಸ್ಯ ಆಲೂರು ಪ್ರದೀಪ್, ಗ್ರಾಮ ಪಂಚಾಯಿತಿ ಅಧ್ಯಕ್ಷ ನಟರಾಜು, ಉಪಾಧ್ಯಕ್ಷೆ ರಾಜೇಶ್ವರಿ, ಸದಸ್ಯರಾದ ಪುಟ್ಟಸ್ವಾಮಿ, ಚಿಕ್ಕ ಮಹದೇವಪ್ಪ, ಮಹೇಶ್, ಚಿನ್ನಸ್ವಾಮಿ, ಸುಮಿತ್ರ, ಬೇಬಿಜಾನ್, ಗಂಗಮ್ಮ, ಗ್ರಾಮ ಪಂಚಾಯಿತಿ ಅಭಿವೃದ್ದಿಅಧಿಕಾರಿ ಸಿದ್ದರಾಜು, ಕಾರ್ಯದರ್ಶಿ ಮಾದಪ್ಪ, ಶೇಷಣ್ಣ ಇತರರು ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT