ಮಂಗಳವಾರ, 18 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಾಮರಾಜನಗರ: ಕಾಂಗ್ರೆಸ್‌ ಕೋಟೆ ಇನ್ನಷ್ಟು ಭದ್ರ; ಬಿಜೆಪಿ ಛಿದ್ರ

‘ಕಮಲ’ದ ಗೆಲುವಿನ ಓಟಕ್ಕೆ ತಡೆ, ಕಾಂಗ್ರೆಸ್‌ಗೆ ನೆರವಾದ ಗ್ಯಾರಂಟಿ, ಸಿ.ಎಂ, ಎಚ್‌ಸಿಎಂ ವರ್ಚಸ್ಸು
Published 5 ಜೂನ್ 2024, 7:16 IST
Last Updated 5 ಜೂನ್ 2024, 7:16 IST
ಅಕ್ಷರ ಗಾತ್ರ

ಚಾಮರಾಜನಗರ: ಕಳೆದ ವಿಧಾನಸಭೆಯಲ್ಲಿ ಜಿಲ್ಲೆಯ ಮೂರು, ಮೈಸೂರು ಜಿಲ್ಲೆಯ ಗ್ರಾಮಾಂತರ ಭಾಗದ ಎಲ್ಲ ನಾಲ್ಕು ಕ್ಷೇತ್ರಗಳನ್ನು ಗೆಲ್ಲುವ ಮೂಲಕ ಚಾಮರಾಜನಗರ ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ತನ್ನ ಪ್ರಾಬಲ್ಯವನ್ನು ತೋರಿಸಿದ್ದ ಕಾಂಗ್ರೆಸ್‌, ಈಗ ಕ್ಷೇತ್ರವನ್ನು ಭಾರಿ ಅಂತರದಲ್ಲಿ ಗೆಲ್ಲುವುದರ ಮೂಲಕ ಇದು ತನ್ನ ಭದ್ರಕೋಟೆ ಎಂಬುದನ್ನು ಮತ್ತೊಮ್ಮೆ ಸಾಬೀತು ಪಡಿಸಿದೆ. 

‘1 ಲಕ್ಷ ಮತಗಳಿಂದ ಗೆಲ್ಲುತ್ತೇವೆ’ ಎಂದು ಕಾಂಗ್ರೆಸ್‌ ಮುಖಂಡರು ಹೇಳುತ್ತಿದ್ದರು. ಆದರೆ, 1.88 ಲಕ್ಷದಷ್ಟು ಅಂತರದಿಂದ ಗೆಲ್ಲುವ ನಿರೀಕ್ಷೆ ಅವರಲ್ಲಿ ಇರಲಿಲ್ಲ. 2009ರಲ್ಲಿ ಆರ್‌.ಧ್ರುವನಾರಾಯಣ ಅವರು 1.41 ಲಕ್ಷ ಮತಗಳಿಂದ ಗೆದ್ದಿದ್ದೇ ಈವರೆಗಿನ ದಾಖಲೆಯಾಗಿತ್ತು. ಸುನಿಲ್‌ ಬೋಸ್‌ ಅವರು ಆ ದಾಖಲೆ ಮುರಿದಿದ್ದಾರೆ. 

ಕಳೆದ ಲೋಕಸಭಾ ಚುನಾವಣೆಯಲ್ಲಿ ಮೋದಿ ಮತ್ತು ಅಭ್ಯರ್ಥಿಯಾಗಿದ್ದ ವಿ.ಶ್ರೀನಿವಾಸ ಪ್ರಸಾದ್‌ ಅವರ ‘ನಾಮ’ಬಲದಿಂದ ರೋಚಕವಾಗಿ ಗೆಲುವು ಸಾಧಿಸಿದ್ದ ಬಿಜೆಪಿ, ತಾನು ನಿರೀಕ್ಷಿಸದ ರೀತಿಯಲ್ಲಿ ಹೀನಾಯವಾಗಿ ಮಂಡಿಯೂರಿದೆ. ಜೆಡಿಎಸ್‌ ಬೆಂಬಲ ಪಡೆದರೂ ಅದಕ್ಕೆ ಗೆಲುವಿನ ದಡ ಸೇರುವುದು ಸಾಧ್ಯವಾಗಿಲ್ಲ. 

ವಿಧಾನಸಭಾ ಚುನಾವಣೆಯಲ್ಲಿ ಹನೂರು ಕ್ಷೇತ್ರ ಬಿಟ್ಟು ಉಳಿದ ಏಳು ಕ್ಷೇತ್ರಗಳಲ್ಲಿ ಹೆಚ್ಚಿನ ಅಂತರಗಳಿಂದ ಗೆದ್ದಿದ್ದ ಕಾಂಗ್ರೆಸ್‌, ಲೋಕಸಭಾ ಚುನಾವಣೆಯಲ್ಲೂ ಎಲ್ಲ ಎಂಟೂ ಕ್ಷೇತ್ರಗಳಲ್ಲಿ ಭಾರಿ ಮುನ್ನಡೆ ಸಾಧಿಸಿದೆ (ತಿ.ನರಸೀಪುರ ಕ್ಷೇತ್ರದಲ್ಲಿ ಮಾತ್ರ 2,921 ಮತಗಳ ಮುನ್ನಡೆ ಸಿಕ್ಕಿದೆ).

ಮೊದಲ ಬಾರಿಗೆ ಚುನಾವಣೆ ಎದುರಿಸುತ್ತಿರುವ ಡಾ.ಎಚ್‌.ಸಿ.ಮಹದೇವಪ್ಪ ಅವರ ಮಗ ಸುನಿಲ್‌ ಬೋಸ್‌, ಕ್ಷೇತ್ರ ವ್ಯಾಪ್ತಿಯಲ್ಲಿ ಹೆಚ್ಚು ಪರಿಚಿತರಲ್ಲ. ಹಾಗಾಗಿ, ತನಗೆ ಅನುಕೂಲವಾಗಬಹುದು ಎಂಬ ಬಿಜೆಪಿಯ ನಿರೀಕ್ಷೆ ಸುಳ್ಳಾಗಿದೆ. 

ಗೆಲುವಿಗೆ ಕಾರಣಗಳೇನು: ಮುಖ್ಯಮಂತ್ರಿ ಸಿದ್ದರಾಮಯ್ಯ, ಸಮಾಜ ಕಲ್ಯಾಣ ಸಚಿವ ಡಾ.ಎಚ್‌.ಸಿ.ಮಹದೇವಪ್ಪ ಅವರ ವರ್ಚಸ್ಸು, ಕಾರ್ಯತಂತ್ರಗಳು, ಗ್ಯಾರಂಟಿ ಯೋಜನೆಗಳು, ಶಾಸಕರ ಬಲ, ಜಾತಿ ಸಮೀಕರಣ... ಈ ಎಲ್ಲ ಅಂಶಗಳು ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ವರವಾಗಿವೆ ಎಂದು ವಿಶ್ಲೇಷಿಸಲಾಗುತ್ತಿದೆ. 

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪ್ರತಿನಿಧಿಸುವ ವರುಣ, ಸಚಿವ ಮಹದೇವಪ್ಪ ಪ್ರತಿನಿಧಿಸುವ ತಿ.ನರಸೀಪುರ ವಿಧಾನಸಭಾ ಕ್ಷೇತ್ರ ಚಾಮರಾಜನಗರ ಮೀಸಲು ಲೋಕಸಭಾ ಕ್ಷೇತ್ರ ವ್ಯಾಪ್ತಿಗೆ ಬರುತ್ತದೆ. ಇಬ್ಬರೂ ಈ ಚುನಾವಣೆಯನ್ನು ಪ್ರತಿಷ್ಠೆಯನ್ನಾಗಿ ಪರಿಗಣಿಸಿದ್ದರು. ತಮ್ಮ ಪುತ್ರನನ್ನು ಗೆಲ್ಲಿಸುವ ವಾಗ್ದನವನ್ನು ವರಿಷ್ಠರಿಗೆ ನೀಡಿ ಟಿಕೆಟ್‌ ಕೊಡಿಸಿದ್ದ ಮಹದೇವಪ್ಪ ಅವರು ತಾವೇ ಅಭ್ಯರ್ಥಿ ಎನ್ನುವಂತೆ ಕೆಲಸ ಮಾಡಿದ್ದರು. ಮಗನ ಗೆಲುವಿಗೆ ಅವರು ರೂಪಿಸಿದ್ದ ಕಾರ್ಯತಂತ್ರಗಳು ಫಲನೀಡಿವೆ. 

ಬೋಸ್‌ ಅಭ್ಯರ್ಥಿಯಾಗುತ್ತಿದ್ದಂತೆಯೇ, ದಲಿತ, ಪ್ರಗತಿಪರ ಸಂಘಟನೆಗಳು, ವಿವಿಧ ಸಂಘ ಸಂಸ್ಥೆಗಳ  ಪ್ರತಿನಿಧಿಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಅವರ ಬೆಂಬಲ ಕೋರಿದ್ದರು. ಸಂಘಟನೆಗಳು ಕೂಡ ಬಹಿರಂಗವಾಗಿಯೇ ಬೋಸ್‌ ಅವರನ್ನು ಬೆಂಬಲಿಸಿದ್ದವು. ವಿರೋಧ ಪಕ್ಷಗಳ ಕೆಲವು ಮುಖಂಡರನ್ನು ಪಕ್ಷಕ್ಕೆ ಸೆಳೆಯಲು ಅವರು ಯಶಸ್ವಿಯಾಗಿದ್ದರು. 

ಚುನಾವಣಾ ರಾಜಕೀಯದಿಂದ ನಿವೃತ್ತರಾಗಿದ್ದ ವಿ.ಶ್ರೀನಿವಾಸ ಪ್ರಸಾದ್‌ ಅವರನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ, ಮಹದೇವಪ್ಪ ಹಾಗೂ ಇತರ ಸಚಿವರು, ಅಭ್ಯರ್ಥಿ ಸುನಿಲ್‌ ಬೋಸ್‌ ಅವರು ಭೇಟಿ ನೀಡಿದ್ದು ಕೂಡ ಕಾರ್ಯತಂತ್ರದ ಭಾಗವೇ ಆಗಿತ್ತು. ಭೇಟಿ ಬಳಿಕ ಶ್ರೀನಿವಾಸ ಪ್ರಸಾದ್‌ ಅವರ ಕೆಲವು ಬೆಂಬಲಿಗರು ಬಿಜೆಪಿ ತೊರೆದು ಕಾಂಗ್ರೆಸ್‌ಗೆ ಸೇರ್ಪಡೆಯಾಗಿದ್ದರು. ಶ್ರೀನಿವಾಸ ಪ್ರಸಾದ್‌ ಅವರು ಕಾಂಗ್ರೆಸ್‌ ಅಭ್ಯರ್ಥಿಯನ್ನು ಬೆಂಬಲಿಸಿದ್ದಾರೆ ಎಂಬ ಸುದ್ದಿಗಳೂ ಹರಿದಾಡಿದವು. ಇದು ಕೂಡ ಪಕ್ಷಕ್ಕೆ ಅನುಕೂಲವಾಗಿದೆ ಎಂದು ಹೇಳಲಾಗುತ್ತಿದೆ.

‘ಆರ್ಥಿಕವಾಗಿ ಮತ್ತು ಸಾಮಾಜಿಕವಾಗಿ ಹಿಂದುಳಿದಿರುವ ಜಿಲ್ಲೆಯಲ್ಲಿ ಕಾಂಗ್ರೆಸ್‌ನ ಐದು ಗ್ಯಾರಂಟಿ ಯೋಜನೆಗಳ ಫಲಾನುಭವಿಗಳು ದೊಡ್ಡ ಸಂಖ್ಯೆಯಲ್ಲಿದ್ದಾರೆ. ಇವರೆಲ್ಲರೂ ಕಾಂಗ್ರೆಸ್‌ ಬೆಂಬಲಿಸಿದ್ದಾರೆ. ಸಿದ್ದರಾಮಯ್ಯ ಹಾಗೂ ಮಹದೇವಪ್ಪ ವರ್ಚಸ್ಸು ಕೂಡ ಕ್ಷೇತ್ರವ್ಯಾಪ್ತಿಯಲ್ಲಿ ಕೆಲಸ ಮಾಡಿದೆ’ ಎಂದು ಹೇಳುತ್ತಾರೆ ಕಾಂಗ್ರೆಸ್‌ ಮುಖಂಡರು. 

ಶಾಸಕರ ಬಲ: ಕ್ಷೇತ್ರ ವ್ಯಾಪ್ತಿಯಲ್ಲಿ ಏಳು ಶಾಸಕರಿರುವುದು ಕೂಡ ಕಾಂಗ್ರೆಸ್‌ಗೆ ಶಕ್ತಿ ತುಂಬಿದೆ. ಬೋಸ್‌ ಅಭ್ಯರ್ಥಿಯಾಗುತ್ತಿದ್ದಂತೆಯೇ, ಮಹದೇವಪ್ಪ ಅವರು ಎಲ್ಲ ಶಾಸಕರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಬೆಂಬಲ ಕೋರಿದ್ದರು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೂಡ ಪಕ್ಷವನ್ನು ಗೆಲ್ಲಿಸಲೇ ಬೇಕು ಎಂದು ಶಾಸಕರಿಗೆ ಗುರಿ ನೀಡಿದ್ದರು. ಶಾಸಕರು ಕೂಡ ತಮ್ಮದೇ ಚುನಾವಣೆ ಎಂಬಂತೆ ಕ್ಷೇತ್ರದಾದ್ಯಂತ ಓಡಾಡಿ, ಬೋಸ್‌ ಪರವಾಗಿ ಮತಯಾಚಿಸಿದ್ದರು. 

ಜಾತಿ ಸಮೀಕರಣವೂ ಕೆಲಸ ಮಾಡಿದೆ ಎನ್ನುವುದು ಕಾಂಗ್ರೆಸ್‌ ಮುಖಂಡರ ಹೇಳಿಕೆ. ದಲಿತರು, ಹಿಂದುಳಿದ ವರ್ಗದವರು, ಅಲ್ಪಸಂಖ್ಯಾತರು ದೊಡ್ಡ ಮಟ್ಟದಲ್ಲಿ ಬೆಂಬಲ ನೀಡಿದ್ದಾರೆ. ಮಹಿಳೆಯರು ಕೂಡ ಪಕ್ಷದ ಮೇಲೆ ಒಲವು ತೋರಿದ್ದಾರೆ ಎಂದು ಹೇಳುತ್ತಾರೆ ಅವರು. 

ಒಗ್ಗಟ್ಟಿನ ಕೊರತೆ ಮುಳುವಾಯಿತೇ?

ಬಿಜೆಪಿ ನಿರೀಕ್ಷಿಸದ ರೀತಿಯಲ್ಲಿ ಸೋಲೊಪ್ಪಿಕೊಂಡಿದೆ. ಪಕ್ಷದ ಮುಖಂಡರು ಸೋಲಿಗೆ ಕಾರಣಗಳನ್ನು ಹುಡುಕುತ್ತಿದ್ದಾರೆ.  ಬಿಜೆಪಿ ಟಿಕೆಟ್‌ಗಾಗಿ ಹಲವು ಆಕಾಂಕ್ಷಿಗಳಿದ್ದರು. ಈ ಪೈಕಿ ಎಸ್‌.ಬಾಲರಾಜ್‌ ಮತ್ತು ಸಂಸದರಾಗಿದ್ದ ವಿ.ಶ್ರೀನಿವಾಸ ಪ್ರಸಾದ್‌ ಅವರ ಕಿರಿಯ ಅಳಿಯ ಡಾ.ಎನ್‌.ಎಸ್‌.ಮೋಹನ್‌ ನಡುವೆ ಹೆಚ್ಚಿನ ಪೈಪೋಟಿ ಕಂಡು ಬಂದಿತ್ತು. ಪಕ್ಷದ ಹೈಕಮಾಂಡ್‌ ಬಾಲರಾಜ್‌ ಅವರಿಗೆ ಮಣೆ ಹಾಕಿತ್ತು. ಇದು ಮೋಹನ್‌ ಅವರಲ್ಲಿ ಅಸಮಾಧಾನ ತಂದಿತ್ತು.

ಅವರು ಕಾಂಗ್ರೆಸ್‌ನ ಕದವನ್ನೂ ತಟ್ಟಿದ್ದರು. ಅಂತಿಮವಾಗಿ ಬಿಜೆಪಿಯಲ್ಲೇ ಉಳಿದಿದ್ದರು.  ಅದೇ ಸಮಯದಲ್ಲಿ ವಿ.ಶ್ರೀನಿವಾಸ ಪ್ರಸಾದ್‌ ಅವರ ಬೆಂಬಲದ ವಿಚಾರದಲ್ಲಿ ಗೊಂದಲ ಉಂಟಾಯಿತು. ಅಳಿಯನಿಗೆ ಟಿಕೆಟ್‌ ಸಿಗದಿದ್ದರಿಂದ ಅವರು ಮುನಿಸಿಕೊಂಡಿದ್ದಾರೆ ಎಂಬ ಸಂದೇಶವೂ ರವಾನೆಯಾಯಿತು. ಚುನಾವಣಾ ವೇಳಾಪಟ್ಟಿ ಪ್ರಕಟವಾಗುವುದಕ್ಕಿಂತಲೂ ಮೊದಲೇ ಅಭ್ಯರ್ಥಿಯನ್ನು ಘೋಷಿಸಿ ಬೀಗಿದ್ದ ಬಿಜೆಪಿ ಅದಕ್ಕೆ ತಕ್ಕನಾಗಿ ಪ್ರಚಾರ ನಡೆಸುವಲ್ಲಿ ವಿಫಲವಾಯಿತು. ಎಲ್ಲ ಕಡೆಗಳಲ್ಲಿ ಮುಖಂಡರು ಒಟ್ಟಾಗಿ ಕಾಣಿಸಿಕೊಳ್ಳಲಿಲ್ಲ.

ಕೊನೆ ಕ್ಷಣದಲ್ಲಿ ‘ಸಂಪನ್ಮೂಲ’ದ ಕೊರತೆಯೂ ಕಾಣಿಸಿತು ಎಂದು ಹೇಳುತ್ತಾರೆ ಕಾರ್ಯಕರ್ತರು. ಬಿಜೆಪಿ ಗೆದ್ದರೆ ಸಂವಿಧಾನ ಬದಲಾಗುತ್ತದೆ ಎಂಬ ಪ್ರಚಾರವೂ ಕ್ಷೇತ್ರದಾದ್ಯಂತ ಜೋರಾಗಿಯೇ ನಡೆಯಿತು. ಗ್ಯಾರಂಟಿ ಯೋಜನೆಗಳು ಹೊಡೆತ ನೀಡಬಹುದು ಎಂಬ ಅನುಮಾನ ಮುಖಂಡರ ಮನಸ್ಸಿನ ಮೂಲೆಯಲ್ಲಿತ್ತು. ಅದೀಗ ನಿಜವಾಗಿದೆ. 

ಫಲ ನೀಡದ ಮೈತ್ರಿ

ಜೆಡಿಎಸ್‌ನೊಂದಿಗಿನ ಬಿಜೆಪಿ ಮೈತ್ರಿ ಹೆಚ್ಚು ಫಲನೀಡಿದಂತೆ ಕಾಣುತ್ತಿಲ್ಲ. ತಿ.ನರಸೀಪುರದಲ್ಲಿ ಕೊಂಚ ಅನುಕೂಲವಾಗಿದ್ದರೂ ಜೆಡಿಎಸ್‌ ಶಾಸಕರಿರುವ ಹನೂರಿನಲ್ಲಿ ಏನೂ ಪರಿಣಾಮ ಬೀರಿಲ್ಲ. ಒಂದು ವೇಳೆ ಹನೂರಿನಲ್ಲಿ ಹೆಚ್ಚು ಮತಗಳು ಬಾಲರಾಜ್‌ ಅವರಿಗೆ ಬಿದ್ದಿದ್ದರೂ ಸೋಲಿನ ಅಂತರ ಕಡಿಮೆಯಾಗುತ್ತಿತ್ತು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT