ಸೋಮವಾರ, 20 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂವಿಧಾನ ಬದಲಾವಣೆ; ರಾಜಕೀಯ ಲಾಭಕ್ಕೆ ಕಾಂಗ್ರೆಸ್‌ ಯತ್ನ: ಸಿ.ಎಂ.ಕೃಷ್ಣಮೂರ್ತಿ

ಬಾಲರಾಜುಗೆ ಬೆಂಬಲ ಘೋಷಿಸಿದ ಜಿಲ್ಲಾ ದಲಿತ ಮತ್ತು ಪ್ರಗತಿಪರ ಸಂಘಟನೆಗಳ ಒಕ್ಕೂಟ
Published 22 ಏಪ್ರಿಲ್ 2024, 7:39 IST
Last Updated 22 ಏಪ್ರಿಲ್ 2024, 7:39 IST
ಅಕ್ಷರ ಗಾತ್ರ

ಚಾಮರಾಜನಗರ: ಚಾಮರಾಜನಗರ ಮೀಸಲು ಲೋಕಸಭಾ ಕ್ಷೇತ್ರದ ಬಿಜೆಪಿ ಜೆಡಿಎಸ್‌ ಮೈತ್ರಿ ಅಭ್ಯರ್ಥಿ ಎಸ್‌.ಬಾಲರಾಜು ಅವರಿಗೆ ಜಿಲ್ಲಾ ಪ್ರಗತಿಪರ ಮತ್ತು ದಲಿತ ಸಂಘಟನೆಗಳ ಒಕ್ಕೂಟ ಬೆಂಬಲ ಘೋಷಿಸಿದೆ. 

ನಗರದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಒಕ್ಕೂಟದ ಸಂಚಾಲಕ ಸಿ.ಎಂ.ಕೃಷ್ಣಮೂರ್ತಿ,  ‘ಬಾಲರಾಜು ನಗರ ಜಿಲ್ಲೆಯವರು. ಸಂಭಾವಿತ ವ್ಯಕ್ತಿ. ಒಳ್ಳೆಯ ನಡತೆ ಗುಣ ಹೊಂದಿದ್ದಾರೆ. ನಾಲ್ಕು ವರ್ಷ ಶಾಸಕರಾಗಿ ಅನುಭವ ಹೊಂದಿದ್ದಾರೆ. ಈ ದೇಶದಲ್ಲಿ ಮೋದಿ ಮತ್ತೊಮ್ಮೆ ಪ್ರಧಾನಿಯಾಗುತ್ತಾರೆ. ಕ್ಷೇತ್ರದ ಅಭಿವೃದ್ಧಿ ದೃಷ್ಟಿಯಿಂದ ಬಾಲರಾಜು ಗೆಲ್ಲಬೇಕು ಎನ್ನುವುದು ಸಂಘಟನೆಯ ಒತ್ತಾಸೆ. ಜಿಲ್ಲೆ ಹಾಗೂ ಕ್ಷೇತ್ರದಲ್ಲಿ ಅಭಿವೃದ್ಧಿ ಕುಂಠಿತ ಆಗಿದೆ. ಬಾಲರಾಜು ಗೆದ್ದರೆ ನನೆಗುದಿಗೆ ಬಿದ್ದಿರುವ ಯೋಜನೆಗಳಿಗೆ ಅನುದಾನ ತರಲು ಅನುಕೂಲ ಆಗುತ್ತದೆ’ ಎಂದರು.

ಕಾಂಗ್ರೆಸ್‌ನಿಂದ ರಾಜಕೀಯ ಲಾಭಕ್ಕೆ ಯತ್ನ: ‘ಬಿಜೆಪಿ ಅಧಿಕಾರಕ್ಕೆ ಬಂದರೆ ಸಂವಿಧಾನ ಬದಲಾವಣೆ ಮಾಡುತ್ತದೆ ಎಂದು ಕಾಂಗ್ರೆಸ್‌ ಮುಖಂಡರು ದಲಿತ ಸಮುದಾಯದಲ್ಲಿ ಸುಳ್ಳು ಸುದ್ದಿ ಹಬ್ಬಿಸಿದ್ದಾರೆ. ಅಂಬೇಡ್ಕರ್ ಅವರು ಮಹಾನ್‌ ದಲಿತ ನಾಯಕ ಆಗಿರುವುದರಿಂದ ದಲಿತರಿಗೆ ಅವರೊಂದಿಗೆ ಭಾವನಾತ್ಮಕ ಸಂಬಂಧ ಇದೆ. ಅದನ್ನು ಬಳಸಕೊಂಡು ರಾಜಕೀಯ ಲಾಭ ಪಡೆಯಲು ಕಾಂಗ್ರೆಸ್‌ ಹೊರಟಿದೆ. ಮುಖ್ಯಮಂತ್ರಿಯಾಗಿ ಎಲ್ಲ ಸಚಿವರು, ಶಾಸಕರು, ಶೇ 90ಕ್ಕೂ ಹೆಚ್ಚು ದಲಿತಪರ ಸಂಘಟನೆಗಳು ಕೂಡ ಇದೇ ಸುಳ್ಳನ್ನು ಹೇಳುತ್ತಿವೆ’ ಎಂದು ಕಿಡಿ ಕಾರಿದರು. 

‘ಸಂವಿಧಾನ ಬದಲಾವಣೆ ಮಾಡಬೇಕು ಎಂದರೆ ಒಂದೇ ಪಕ್ಷ ಮೂರನೇ ಎರಡರಷ್ಟು ಬಹುಮತ ಪಡೆಯಬೇಕು. ರಾಜ್ಯದ 17 ರಾಜ್ಯಗಳಲ್ಲಿ ಒಂದೇ ಪಕ್ಷ ಮೂರನೇ ಎರಡರಷ್ಟು ಬಹುಮತ ಹೊಂದಿರಬೇಕು. ಈ ದೇಶದಲ್ಲಿ ಅಥವಾ ರಾಜ್ಯಗಳಲ್ಲಿ ಇಂತಹ ಸನ್ನಿವೇಶ ನಿರ್ಮಾಣವಾಗಲು ಸಾಧ್ಯವೇ ಇಲ್ಲ. ಸರ್ಕಾರದಲ್ಲಿರುವ ಒಬ್ಬರೋ ಇಬ್ಬರೋ ಹೇಳಿದರೆ ಸಂವಿಧಾನ ಬದಲಾಗುವುದಿಲ್ಲ. 1000 ವರ್ಷಗಳಾದರೂ ಸಂವಿದಾನ ಬದಲಾಯಿಸಲು ಸಾಧ್ಯವಿಲ್ಲ’ ಎಂದರು. 

'ದೇಶದಲ್ಲಿ 120 ಮೀಸಲು ಕ್ಷೇತ್ರಗಳಿವೆ. ಸಂವಿಧಾನ ಬದಲಾವಣೆ ಮಾಡಲು ಹೊರಟರೆ ಇವರು ಸುಮ್ಮನೆ ಕೂರುತ್ತಾರೆಯೇ? ಬಿಜೆಪಿಯರು ಮನು ಸಂವಿಧಾನ ಜಾರಿಗೆ ತರಲಿದ್ದಾರೆ ಎಂದೂ ಹೇಳಲಾಗುತ್ತಿದೆ. ಮನು ಸಂವಿಧಾನದಲ್ಲಿ ಚಾತುರ್ವರ್ಣ ಪದ್ಧತಿ ಇದೆ. ಹಿಂದುಳಿದ ವರ್ಗಗಳಲ್ಲಿ ಬರುವ ಸಮುದಾಯಗಳೆಲ್ಲ. ಶೂದ್ರರು ವಿಭಾಗದಲ್ಲಿ ಬರುತ್ತವೆ. ಪರಿಸ್ಥಿತಿ ಹೀಗಿರುವಾಗ ಮನು ಸಂವಿಧಾನ ಜಾರಿ ಸಾಧ್ಯವೇ? ಜನರು ಹಾಗೂ ದಲಿತರು ಇದನ್ನು ಅರ್ಥಮಾಡಿಕೊಳ್ಳಬೇಕು’ ಎಂದರು. 

ಜಿಲ್ಲಾ ಸಂಘಟನಾ ಸಂಚಾಲಕ ಕುದೇರು ಶಿವಕುಮಾರ್‌, ತಾಲ್ಲೂಕು ಸಂಘಟನಾ ಸಂಚಾಲಕ ಮುಕ್ಕಡಹಳ್ಳಿ ಪುರುಷೋತ್ತಮ್, ಮುಖಂಡ ಡೊಳ್ಳಿಪುರಮಲ್ಲು ಹಾಜರಿದ್ದರು.

‘ದಲಿತರ ಮತ ಕ್ರೋಡೀಕರಣಕ್ಕೆ ಹುನ್ನಾರ’

‘ಸಂವಿಧಾನ ಬದಲಾವಣೆ ಮಾಡುತ್ತಾರೆ ಎನ್ನುವುದು ಬೋಗಸ್ ಹೇಳಿಕೆ. ಬದಲಿಸುತ್ತೇವೆ ಎಂದು ಪ್ರಧಾನಿ ಮೋದಿ ಅಮಿತ್‌ ಶಾ ಅಥವಾ ಜೆ.ಪಿ.ನಡ್ಡಾ ಹೇಳಬೇಕು. ಹಾಗಾದರೆ ಒಪ್ಪಬಹುದು. ಆದರೆ ಇತ್ತೀಚೆಗೆ ಮೋದಿ ಅವರು ‘ಸ್ವತಃ ಅಂಬೇಡ್ಕರ್‌ ಈಗ ಬಂದರೂ ಸಂವಿಧಾನ ಬದಲಾವಣೆ ಸಾಧ್ಯವಿಲ್ಲ’ ಎಂದು ಹೇಳಿದ್ದಾರೆ’ ಎಂದು ಕೃಷ್ಣಮೂರ್ತಿ ಹೇಳಿದರು.  ‘ಬಿಜೆಪಿ ಮೋಧಿ ಅಧಿಕಾರಕ್ಕೆ ಬಂದರೆ ದೇಶ ಸರ್ವಾಧಿಕಾರತ್ತ ಹೋಗಲಿದೆ ಎಂದೂ ಆರೋಪಿಸಲಾಗುತ್ತಿದೆ. ಇದು ಕೂಡ ಸಾಧ್ಯವಾಗದ ಮಾತು. ದಲಿತರ ಮತ ಕ್ರೋಡೀಕರಿಸಲು ಕಾಂಗ್ರೆಸ್‌ನವರು ಮಾಡಿರುವ ಹುನ್ನಾರ’ ಎಂದು ದೂರಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT