ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಾಮರಾಜನಗರ | ಬಿಎಸ್‌ಪಿ ರಾಜ್ಯ ಸಮಿತಿಯಿಂದಾಗಿ ಪಕ್ಷ ಅಧೋಗತಿಗೆ: ಎಲ್‌.ನಾಗರಾಜು

ರಾಜ್ಯಾಧ್ಯಕ್ಷರು, ಜಿಲ್ಲಾ ಸಮಿತಿಯಿಂದ ಕಡಗಣನೆ ಆರೋಪ, ಬಿಎಸ್‌ಪಿ ತೊರೆದ ನಾಗರಾಜು
Published 11 ಏಪ್ರಿಲ್ 2024, 5:51 IST
Last Updated 11 ಏಪ್ರಿಲ್ 2024, 5:51 IST
ಅಕ್ಷರ ಗಾತ್ರ

ಚಾಮರಾಜನಗರ: ‘ಬಹುಜನ ಸಮಾಜ ಪಕ್ಷದ ರಾಜ್ಯ ಸಮಿತಿಯು ಕರ್ನಾಟಕದಲ್ಲಿ ಪಕ್ಷವನ್ನು ಅಧೋಗತಿಗೆ ಇಳಿಸುತ್ತಿದೆ.  ಡಾ.ಬಿ.ಆರ್‌.ಅಂಬೇಡ್ಕರ್‌ ಅವರ ತತ್ವಗಳನ್ನು ಪಾಲಿಸುತ್ತಿಲ್ಲ. ಪಕ್ಷದ ಸಂಸ್ಥಾಪಕ ಕಾನ್ಶೀರಾಂ ಅವರ ತ್ಯಾಗಗಳನ್ನೂ ಗೌರವಿಸುತ್ತಿಲ್ಲ. ಬುದ್ಧ, ಬಸವಣ್ಣ ಅವರ ಆದರ್ಶಗಳನ್ನು ನಿರ್ಲಕ್ಷಿಸಲಾಗುತ್ತಿದೆ’ ಎಂದು ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ, ಬಿಎಸ್‌ಪಿ ರಾಜ್ಯ ಕಾರ್ಯದರ್ಶಿಯಾಗಿದ್ದ ಎಲ್‌.ನಾಗರಾಜು (ಕಮಲ್‌) ಬುಧವಾರ ದೂರಿದರು. 

ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಪಕ್ಷದ ರಾಜ್ಯ ಸಮಿತಿಯು ಚುನಾವಣೆ ಬಂದಾಗ ಒಂದು ಗುಂಪು ಕಟ್ಟಿಕೊಂಡು ವೈಯುಕ್ತಿಕ ಲಾಭ ಪಡೆಯುವ ಹುನ್ನಾರ ಮಾಡುತ್ತಿದೆ. ಪಕ್ಷದ ರಾಜ್ಯಾಧ್ಯಕ್ಷ ಮಾರಸಂದ್ರ ಮುನಿಯಪ್ಪ, ಸಂಯೋಜಕ, ಚಾಮರಾಜನಗರ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಕೃಷ್ಣಮೂರ್ತಿ, ಮುಖಂಡ ಗೋಪಿನಾಥ್‌ ಹಾಗೂ ಇತರರ ವರ್ತನೆಗೆ ಬೇಸತ್ತು ಬಿಎಸ್‌ಪಿಗೆ ರಾಜೀನಾಮೆ ನೀಡಿದ್ದೇನೆ’ ಎಂದರು. 

‘ಕಳೆದ ವಿಧಾನಸಭಾ ಚುನಾವಣೆಯಲ್ಲಿ ಬಿಎಸ್‌ಪಿಯಿಂದ ಕೊಳ್ಳೇಗಾಲ ಮೀಸಲು ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧೆ ಮಾಡಿದ್ದೆ. ನನ್ನ ಪತ್ನಿ ಕೂಡ ನಾಮಪತ್ರ ಸಲ್ಲಿಸಿದ್ದರು. ಬಿಜೆಪಿಯಿಂದ ಸ್ಪರ್ಧಿಸಿರುವ ಎನ್‌.ಮಹೇಶ್‌ ಅವರನ್ನು ಸೋಲಿಸುವುದಕ್ಕಾಗಿ ನಾಮಪತ್ರ ವಾಪಸ್‌ ಪಡೆಯಬೇಕು ಎಂದು ಪಕ್ಷದ ರಾಷ್ಟ್ರೀಯ ಅಧ್ಯಕ್ಷೆ ಮಾಯಾವತಿ ಅವರ ಆದೇಶವಾಗಿದೆ ಎಂದು ತಿಳಿಸಿದ್ದ ರಾಜ್ಯ ಸಮಿತಿಯವರು, ಪತ್ನಿ ನಾಮಪತ್ರ ವಾಪಸ್‌ ಪಡೆಯುವಂತೆ ಮಾಡಿದ್ದರು. ನಂತರದ ದಿನಗಳಲ್ಲಿ ಮಾಯಾವತಿ ಅವರು ಈ ಸೂಚನೆ ನೀಡಿರಲೇ ಇಲ್ಲ ಎಂದು ತಿಳಿಯಿತು. ಅಂದಿನ ಪಕ್ಷದ ರಾಜ್ಯಾದ್ಯಕ್ಷ ಎಂ.ಕೃಷ್ಣಮೂರ್ತಿ, ಇಂದಿನ ರಾಜ್ಯಾಧ್ಯಕ್ಷ ಅಧ್ಯಕ್ಷ ಮಾರಸಂದ್ರ ಮುನಿಯಪ್ಪ, ರಾಜ್ಯ ಉಸ್ತುವಾರಿ ಅಶೋಕ್ ಸಿದ್ದಾರ್ಥ, ಗೋಫಿನಾಥ್ ಅವರು ಉದ್ದೇಶ ಪೂರ್ವವಾಗಿ ನಾಮಪತ್ರ ವಾಪಸ್ ತೆಗೆಸಿದ್ದಾರೆ ಎನ್ನುವುದು ಗೊತ್ತಾಯಿತು’ ಎಂದರು. 

‘ನಾಮಪತ್ರ ವಾಪಸ್ ಪಡೆಯಲು ಕಾರಣವೇನು ಎಂದು ರಾಜ್ಯ ಸಮಿತಿಯನ್ನು ಕೇಳಿದಾಗ ‘ಮೇಡಂ ಆದೇಶ ಇತ್ತು’ ಎಂದರು. ನಾಮಪತ್ರ ವಾಪಸ್ ಪಡೆದಿರುವುದಕ್ಕೆ ನನ್ನ ವಿರುದ್ಧ ಆರೋಪಗಳು ಬರುತ್ತಿವೆ. ಹೀಗಾಗಿ, ನೀವು, ಮಾಯಾವತಿಯವರ ಸೂಚನೆಯ ಮೇರೆಗೆ ನಾಮಪತ್ರ ವಾಪಸ್‌ ಪಡೆಯಲಾಗಿದೆ ಎಂದು ಮಾಧ್ಯಮಗಳ ಮುಂದೆ  ಮುಂದೆ ಹೇಳಬೇಕು ಎಂದು 10 ಬಾರಿ ಹೇಳಿದ್ದೇನೆ. ಇಲ್ಲಿಯವರೆಗೂ ಸುದ್ದಿಗೋಷ್ಠಿ ಮಾಡಿಲ್ಲ. ವೈಯುಕ್ತಿಕ ಲಾಭಕ್ಕಾಗಿ ನನ್ನನ್ನು ಬಲಿಪಶು ಮಾಡಿದರು. ನನ್ನನ್ನು ಯಾವುದೇ ಕಾರ್ಯಕ್ರಮ, ಸಭೆ, ಸಮಾರಂಭಗಳಿಗೆ ಆಹ್ವಾನಿಸಿಲ್ಲ’ ಎಂದು ದೂರಿದರು. 

‘ಲೋಕಸಭಾ ಚುನಾವಣೆಗೆ ಮಂಡ್ಯದವರಾದ ಎಂ.ಕೃಷ್ಣಮೂರ್ತಿ ಅವರನ್ನು ನಿಲ್ಲಿಸಿದ್ದಾರೆ. ನನಗೆ ಟಿಕೆಟ್‌ ನೀಡಬಹುದಿತ್ತು. ಚಾಮರಾಜನಗರದಲ್ಲಿ ಚುನಾವಣೆ ಸ್ಪರ್ಧಿಸುವ ಸಾಮರ್ಥ್ಯ ಇರುವವರು ಯಾರೂ ಇಲ್ಲವೇ’ ಎಂದು ನಾಗರಾಜು ಪ್ರಶ್ನಿಸಿದರು. 

‘ಕಾಂಗ್ರೆಸ್, ಬಿಜೆಪಿಯವರು ನನ್ನನ್ನು ಸಂಪರ್ಕಿಸಿದ್ದಾರೆ. ಹೋರಾಟದ ಹಿನ್ನಲೆಯುಳ್ಳ ನಾನು ಈ ಚುನಾವಣೆಯಲ್ಲಿ ತಟಸ್ಥವಾಗಿರಲು ಚಿಂತಿಸುತ್ತಿದ್ದೇನೆ’ ಎಂದು ಪ್ರಶ್ನೆಯೊಂದಕ್ಕೆ ಅವರು ಉತ್ತರಿಸಿದರು. 

ಎಸ್‌ಸಿ, ಎಸ್‌ಟಿ ಉದ್ದಿಮೆದಾರ ಸಂಘದ ಜಿಲ್ಲಾಧ್ಯಕ್ಷ ಶಿವಮೂರ್ತಿನಾಯಕ, ದಲಿತ ಅಭಿವೃದ್ದಿ ಸಂಘದ ಅಧ್ಯಕ್ಷ ಎಸ್. ಲಿಂಗಣ್ಣ, ಮುಖಂಡರಾದ ಚೇತನ್‌ಕುಮಾರ್, ದುಂಡಮಾದನಾಯಕ, ಸಿದ್ದರಾಜು, ಪುಟ್ಟಸ್ವಾಮಿನಾಯಕ ಭಾಗವಹಿಸಿದ್ದರು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT