ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯಳಂದೂರು | ಕುಸಿದ ಬೇಡಿಕೆ; ಮರದಲ್ಲೇ ಉಳಿದ ಹುಣಸೆ

Published 6 ಮಾರ್ಚ್ 2024, 5:23 IST
Last Updated 6 ಮಾರ್ಚ್ 2024, 5:23 IST
ಅಕ್ಷರ ಗಾತ್ರ

ಯಳಂದೂರು: ಈ ಬಾರಿ ಹುಣಸೆ ಮರಗಳಲ್ಲಿ ಉತ್ತಮ ಇಳುವರಿ ಬಂದಿದೆ. ಆದರೆ, ಹುಣಸೆ ಹಣ್ಣಿಗೆ ಬೆಲೆ ಮತ್ತು ಬೇಡಿಕೆ ಕುಸಿದಿದೆ. ಇದರಿಂದಾಗಿ ಹುಣಸೆ ಕಟಾವು ಮಾಡಲಾಗದೆ ವೃಕ್ಷಗಳಲ್ಲಿ ತೂಗುತ್ತಿದೆ. ಬಹುತೇಕ ಬೆಳೆಗಾರರು ಉತ್ತಮ ಧಾರಣೆ ನಿರೀಕ್ಷೆಯಲ್ಲಿ ಕಾಯುವಂತೆ ಆಗಿದೆ.

ತಾಲ್ಲೂಕಿನಲ್ಲಿ ಎರಡು ವರ್ಷಗಳಿಂದ ಹುಣಸೆ ಫಸಲು ನಿರೀಕ್ಷಿತವಾಗಿ ಬಂದಿರಲಿಲ್ಲ. ಅತಿಯಾದ ಮಳೆ ಮತ್ತು ನೆರೆಯಿಂದ ಭೂಮಿ ತಂಪಾಗಿ ಮರದಲ್ಲಿ ಚಿಗುರು ಕಂಡುಬಂದಿರಲಿಲ್ಲ. ಈ ಸಲ ಎಲ್ಲ ಗಿಡಗಳಲ್ಲೂ ಭರ್ಜರಿ ಹಣ್ಣು ಬಂದಿದೆ. ಆದರೂ, ವ್ಯಾಪಾರಸ್ಥರು ಇದುವರೆಗೂ ಕೊಳ್ಳಲು ತೋಟಗಳತ್ತ ಬಂದಿಲ್ಲ. ಬೇಸಿಗೆಯಲ್ಲಿ ಕೊಯ್ಲಿಗೆ ಮುಂದಾಗುತ್ತಿದ್ದ ರೈತರು ಬೆಳೆಯನ್ನು ಮರದಲ್ಲಿ ಬಿಟ್ಟು, ಖರೀದಿಸುವವರಿಗಾಗಿ ಕಾಯುತ್ತಿದ್ದಾರೆ.

‘ಹುಣಸೆ ಹಣ್ಣಿಗೆ ಬೇಡಿಕೆ ಹೆಚ್ಚು ಇದ್ದಾಗ ಮಧ್ಯವರ್ತಿಗಳು ಪೈಪೋಟಿ ದರದಲ್ಲಿ ವ್ಯಾಪಾರ ಮಾಡಿ ಮುಂಗಡ ನೀಡುತ್ತಿದ್ದರು. ಒಂದೇ ವಾರದಲ್ಲಿ ಹಣ್ಣು ಉದುರಿಸಿ ಸಾಗಣೆ ಮಾಡುತ್ತಿದ್ದರು. ಇದರಿಂದ ತೋಟದ ಮಾಲೀಕರಿಗೆ ಒಂದಷ್ಟು ಹಣ ಕೈಸೇರುತ್ತಿತ್ತು. ಹಬ್ಬ ಮತ್ತು ಜಾತ್ರೆ ಖರ್ಚಿಗೆ ಹಣವೂ ಸಿಗುತ್ತಿತ್ತು. ಈ ವರ್ಷ ಮಾರ್ಚ್ ಆರಂಭವಾದರೂ ಹುಣಸೆ ಮರದಲ್ಲಿ ತೂಗುತ್ತಿದ್ದು, ಹಣ್ಣು ಕೊಳ್ಳಲು ವ್ಯಾಪಾರಿಗಳು ಮುಂದೆ ಬಂದಿಲ್ಲ’ ಎಂದು ಬೆಳೆಗಾರ ಬನ್ನಿಸಾರಿಗೆ ನಿತಿನ್ ‘ಪ್ರಜಾವಾಣಿ’ಗೆ ತಿಳಿಸಿದರು. 

‘ಪ್ರತಿ ವರ್ಷ ಖರೀದಿಸುತ್ತಿದ್ದವರಿಗೆ ಕರೆ ಮಾಡಿದರೆ ಸಮರ್ಪಕ ಉತ್ತರ ಸಿಗುತ್ತಿಲ್ಲ. ‘ಮಾರುಕಟ್ಟೆಯಲ್ಲಿ ಧಾರಣೆ ಕಡಿಮೆ ಇದೆ. ಈ ಸಮಯದಲ್ಲಿ ಮರ ಖರೀದಿಸಿ ಏನು ಮಾಡುವುದು? ಹಾಗಾಗಿ, ಸ್ವಲ್ಪ ದಿನ ಕಾಯ್ದರೆ ಬೆಲೆ ಏರಬಹುದು. ಸ್ಥಳೀಯರಿಗೆ ಮಾರಾಟ ಮಾಡಿ, ನಷ್ಟವನ್ನು ಸರಿದೂಗಿಸಿಕೊಳ್ಳಿ’ ಎಂದು ಕೈಚೆಲ್ಲಿದ್ದಾರೆ’ ಎಂದು ಹೊನ್ನೂರಿನ ರೈತ ಮರಪ್ಪ ಹೇಳಿದರು.    

‘ಎರಡು ವರ್ಷಗಳಿಂದ ಹುಣಸೆ ಹಣ್ಣಿನ ಬೆಲೆ ಏರಿಕೆ ಆಗುತ್ತಿಲ್ಲ. ನಾವು ಹುಣಸೆ ಬೆಳೆದವರ ತೋಟಕ್ಕೆ ಹೋಗಿ, ಮರದಲ್ಲಿ ಇರುವ ಇಳುವರಿ ನೋಡಿ ವ್ಯಾಪಾರ ಮಾಡುತ್ತೇವೆ. ಫಸಲಿನ ಆಧಾರದ ಮೇಲೆ ₹2000ದಿಂದ ₹5,000 ವರೆಗೆ ಖರೀದಿ ಮಾಡುತ್ತೇವೆ. ಕೆಲವೊಮ್ಮೆ ರೈತರು ಕ್ವಿಂಟಲ್‌ಗೆ ಇಂತಿಷ್ಟು ಎಂದು ದರ ನಿರ್ಧರಿಸಿದರೆ, ಚೌಕಾಸಿ ಮಾಡಿಕೊಳ್ಳುತ್ತೇವೆ’ ಎಂದು ಬಳೆಪೇಟೆ ವ್ಯಾಪಾರಿ ನಸ್ರುಲ್ಲಾ ‘ಪ್ರಜಾವಾಣಿ’ಗೆ ತಿಳಿಸಿದರು. 

ಎಷ್ಟಿದೆ ಬೆಲೆ?

‘ಕಡ್ಡಿಕಾಯಿ ಕ್ವಿಂಟಲ್‌ಗೆ ಸಾಮಾನ್ಯಾವಾಗಿ ₹3700ರಿಂದ  ₹6500ವರೆಗೂ ಇರುತ್ತಿತ್ತು. ಈಗ ಬೆಲೆ ₹3000 ಆಸುಪಾಸಿನಲ್ಲಿ ಇದೆ. ಹೂ ಹಣ್ಣಿಗೆ ₹7500 ರಿಂದ ₹10 ಸಾವಿರದವರೆಗೆ ಇದೆ. ಈ ತಳಿಗಳು ನಮ್ಮ ಭಾಗದಲ್ಲಿ ಇನ್ನೂ ಬೆಳೆದಿಲ್ಲ. ನಮ್ಮ ನಿರೀಕ್ಷೆಗೆ ಅನುಗುಣವಾಗಿ ಹುಣಸೆಗೆ ಬೇಡಿಕೆ ಬಂದಿಲ್ಲ’ ಎನ್ನುತ್ತಾರೆ ವ್ಯಾಪಾರಿಗಳು.

‘ಹವಾಮಾನದ ವ್ಯತ್ಯಯದಿಂದ ಬಯಲು ಪ್ರದೇಶದ ಹುಣಸೆ ತೋಟಗಳಲ್ಲಿ ಬೇಗ ಫಲ ಬಂದಿದೆ. ಕೆಲವು ಭಾಗಗಳಲ್ಲಿ ನಿಧಾನವಾಗಿದೆ. ಈ ವರ್ಷ ಬಂದಿರುವ ಫಸಲಿನಲ್ಲೂ ಏರುಪೇರು ಆಗಲಿದೆ. 250 ಟನ್ ಗಳಷ್ಟು ಇಳುವರಿ ನಿರೀಕ್ಷೆ ಇದೆ. ಈ ಬಾರಿ ಬೆಲೆ ಮತ್ತು ಬೇಡಿಕೆ ನಡುವೆ ಹೊಂದಾಣಿಕೆ ಇಲ್ಲ.  ಬೆಲೆ ಕುಸಿಯಲೂ ಇದೂ ಕಾರಣ’ ಎಂದು ತೋಟಗಾರಿಕಾ ಇಲಾಖೆಯ ಸಹಾಯಕ ನಿರ್ದೇಶಕ ಜಿ.ಎಸ್.ರಾಜು  ‘ಪ್ರಜಾವಾಣಿ’ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT