ಶನಿವಾರ, 24 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಈರುಳ್ಳಿ ರಫ್ತು ನಿಷೇಧ ತೆರವಿಗೆ ಆಗ್ರಹ

ಗುಂಡ್ಲುಪೇಟೆಯಿಂದ ಚಾಮರಾಜನಗರದವರೆಗೆ ಬೈಕ್‌ ರ‍್ಯಾಲಿ, ಜಿಲ್ಲಾಡಳಿತ ಭವನದ ಮುಂದೆ ಪ್ರತಿಭಟನೆ
Published 2 ಫೆಬ್ರುವರಿ 2024, 15:40 IST
Last Updated 2 ಫೆಬ್ರುವರಿ 2024, 15:40 IST
ಅಕ್ಷರ ಗಾತ್ರ

ಚಾಮರಾಜನಗರ: ಕೇಂದ್ರ ಸರ್ಕಾರವು ಈರುಳ್ಳಿ ರಫ್ತಿನ ಮೇಲೆ ಹೇರಿರುವ ನಿಷೇಧವನ್ನು ವಾಪಸ್‌ ಪಡೆಬೇಕು ಎಂದು ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ಹಾಗೂ ಶ್ರಮ ಸಂಜಾತ ರೈತ ಉತ್ಪಾದಕರ ಕಂಪನಿಯ ಆಶ್ರಯದಲ್ಲಿ ಈರುಳ್ಳಿ ಬೆಳೆಗಾರರು ಶುಕ್ರವಾರ ಬೈಕ್‌ ರ‍್ಯಾಲಿ, ಮೆರವಣಿಗೆ ನಡೆಸಿದರು.

ಗುಂಡ್ಲುಪೇಟೆ ತಾಲ್ಲೂಕು ಕಚೇರಿ ಬಳಿಯಿಂದ ಬೈಕ್‌ ರ‍್ಯಾಲಿ ಮೂಲಕ ಜಿಲ್ಲಾ ಕೇಂದ್ರಕ್ಕೆ ಬಂದ ಪ್ರತಿಭಟನಕಾರರು ಚಾಮರಾಜೇಶ್ವರ ದೇವಾಲಯದ ಮುಂಭಾಗ ರ‍್ಯಾಲಿ ಕೊನೆಗೊಳಿಸಿದರು. ಅಲ್ಲಿಂದ ಜಿಲ್ಲಾಡಳಿತ ಭವನದವರೆಗೂ ಪ್ರತಿಭಟನಾ ಮೆರವಣಿಗೆ ನಡೆಸಿದ ಪ್ರತಿಭಟನಕಾರರು, ಭವನದ ಮುಂಭಾಗ ಧರಣಿ ಕುಳಿತರು. ಕೇಂದ್ರ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು. 

‘ಕೇಂದ್ರ ಸರ್ಕಾರದ ವಾಣಿಜ್ಯ ಮತ್ತು ಕೈಗಾರಿಕೆ ಸಚಿವಾಲಯದ ಅಧೀನದಲ್ಲಿ ಬರುವ ವಿದೇಶಿ ವ್ಯವಹಾರಗಳ ಮಹಾನಿರ್ದೇಶನಲಯ ಮಾ 31ರವರೆಗೆ ವಿದೇಶಕ್ಕೆ ಈರುಳ್ಳಿ ರಫ್ತು ಮಾಡುವುದಕ್ಕೆ ನಿಷೇಧ ಹೇರಿದೆ. ಇದರಿಂದಾಗಿ ಮಾರುಕಟ್ಟೆಯಲ್ಲಿ ತಲ್ಲಣ ಉಂಟಾಗಿದ್ದು, ಈರುಳ್ಳಿ ಬೆಲೆ ಪಾತಾಳಕ್ಕೆ ಕುಸಿದಿದೆ’ ಎಂದು ದೂರಿದರು. 

‘ಸದ್ಯ ಸ್ಥಳೀಯ ಸಗಟು ಮಾರುಕಟ್ಟೆಯಲ್ಲಿ ಈರುಳ್ಳಿ ಬೆಲೆ ₹6 ರಿಂದ ₹10ರ ಒಳಗೆ ಇದೆ. ಇದರಿಂದ ಈರುಳ್ಳಿ ಬೆಳೆಗಾರರು ತೀವ್ರ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ’ ಎಂದರು. 

‘ದೇಶದಲ್ಲಿಯೇ ಅತಿ ಹೆಚ್ಚು ಈರುಳ್ಳಿ ಬೆಳೆಯುವ ರಾಜ್ಯಗಳ ಪೈಕಿ ಕರ್ನಾಟಕ ಮೂರನೇ ಸ್ಥಾನದಲ್ಲಿದೆ. ಜಿಲ್ಲೆಯಲ್ಲಿ ಪ್ರತಿ ವರ್ಷ ಹತ್ತಾರು ಸಾವಿರ ಎಕರೆ ಪ್ರದೇಶದಲ್ಲಿ ಈರುಳ್ಳಿ ಬಿತ್ತನೆಯಾಗುತ್ತದೆ. ಈ ವರ್ಷವೂ ಸಾಕಷ್ಟು ಪ್ರಮಾಣದಲ್ಲಿ ಬಿತ್ತನೆಯಾಗಿದೆ. ಆದರೆ, ಕೇಂದ್ರ ಸರ್ಕಾರದ ನಿರ್ಬಂಧದಿಂದ ತಲೆದೋರಿರುವ ಬೆಲೆಕುಸಿತದಿಂದಾಗಿ ಬೆಳೆಗಾರರು ಸಂಕಷ್ಟಕ್ಕೆ ಸಿಲುಕಿದ್ದಾರೆ’ ಎಂದು ಅಲವತ್ತುಕೊಂಡರು. 

‘ಈರುಳ್ಳಿ ಮೇಲಿನ ರಫ್ತು, ನಿರ್ಬಂಧ ಸಡಿಲಿಸದಿದ್ದರೆ ಮುಂದಿನ ದಿನಗಳಲ್ಲಿ ರೈತರು ಇನ್ನಷ್ಟು ನಷ್ಟ ಅನುಭವಿಸಬೇಕಾಗುತ್ತದೆ. ಇದಕ್ಕೆ ಕೇಂದ್ರ ಸರ್ಕಾರವೇ ನೇರ ಹೊಣೆಯಾಗುತ್ತದೆ. ಆದೇಶ  ಹಿಂಪಡೆಯದಿದ್ದರೆ ಮುಂದಿನ ದಿನಗಳಲ್ಲಿ ಹೋರಾಟವನ್ನು ಇನ್ನಷ್ಟು ತೀವ್ರಗೊಳಿಸಲಾಗುವುದು’ ಎಂದು ಎಚ್ಚರಿಸಿದರು. 

ಪ್ರತಿಭಟನಾ ಸ್ಥಳಕ್ಕೆ ಜಿಲ್ಲಾಧಿಕಾರಿ ಶಿಲ್ಪಾನಾಗ್‌ ಅವರಿಗೆ ರೈತರು ಮನವಿ ಮತ್ರ ನೀಡಿದರು. 

ಶ್ರಮ ಸಂಜಾತ ರೈತ ಉತ್ಪಾದಕರ ಕಂಪನಿಯ ಅಧ್ಯಕ್ಷ ನಾಗಾರ್ಜುನ್‌ ಕುಮಾರ್‌, ರೈತ ಮುಖಂಡರಾದ ಕುಂದುಕೆರೆ ಸಂಪತ್ತು, ಕೆ.ಎನ್.ಶಿವಪ್ರಸಾದ್, ಮಾದಪ್ಪ, ಚಂದ್ರಶೇಖರಕುಮಾರಮೂರ್ತಿ, ಗಂಗಾಧರಪ್ಪ, ನಂಜುಂಡಸ್ವಾಮಿ, ಸತೀಶ್, ವೃಷಬೇಂದ್ರ, ಬಸಪ್ಪ, ಶಶಿಕುಮಾರ್ ಇತರರು ಇದ್ದರು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT