ಶುಕ್ರವಾರ, 21 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT

ಕಾಡಿನ ಆರೋಗ್ಯ ಕಾಪಾಡಿದರೆ ಮನುಕುಲ ಸ್ವಸ್ಥ

ಇಂದು ಅರಣ್ಯ ದಿನ; ಕಾನನಕ್ಕೆ ಕಂಟಕವಾದ ತಾಪಮಾನ ಏರಿಕೆ, ಕಳೆಗಿಡಗಳು
Last Updated 21 ಮಾರ್ಚ್ 2023, 4:14 IST
ಅಕ್ಷರ ಗಾತ್ರ

ಯಳಂದೂರು: ಜೀವಜಾಲದ ಜೀವವಾಯು ತುಂಬುವ ತಾಣ ಕಾಡು. ಸಾವಿರಾರು ವೃಕ್ಷ ಪ್ರಭೇದಗಳಿಗೆ ಜೀವದಾಯಿ. ಬಹು ಸೂಕ್ಷ್ಮಾಣುಗಳೊಂದಿಗೆ ರೂಪು ತಳೆದಿರುವ ಸುಂದರ ಪರಿಸರ. ವನ್ಯಜೀವಿ ಹಾಗೂ ಮಾನವ ವಿಕಾಸದ ನೆಲವೀಡು. ಆದರೆ, ಈಗ ಕಾಡು ವರ್ಷದಿಂದ ವರ್ಷಕ್ಕೆ ಕಡಿಮೆಯಾಗುತ್ತಿದ್ದು ಮಾನವನ ಹಸ್ತಕ್ಷೇಪ ಹೆಚ್ಚಾಗುತ್ತಿದೆ.

ಸಸ್ಯ ವೈವಿಧ್ಯತೆಗೆ ಕಂಟಕವಾದ ಲಂಟಾನ, ಯುಪಟೋರಿಯಂ ಮಾರಕ ಸಸ್ಯಗಳು ದೇಶಿಯ ವನ್ಯ ಸಂಪತ್ತಿಗೆ ಮಾರಕವಾಗಿ ವೃದ್ಧಿಸುತ್ತಿದೆ.

ಚಾಮರಾಜನಗರ ಜಿಲ್ಲೆ ಕಾಡಿನ ಕಣಜ. ಒಟ್ಟು ಭೂಭಾಗದ ಶೇ 48ರಷ್ಟು ಕಾಡು ಇಲ್ಲಿದೆ.

ಮುಗಿಲು ಮುಟ್ಟುವ ಗಿರಿ ಶಿಖರಗಳಲ್ಲಿ ಮಳೆ ಕಾಡು, ಹುಲ್ಲುಬೆಟ್ಟ, ಸೂಚಿಪರ್ಣ ಅಡವಿಗಳಿವೆ. ಏಷ್ಯನ್ ಹುಲಿ, ಆನೆ, ಚಿರತೆಗಳೂ ಆಶ್ರಯಿಸಿವೆ. ಬುಡಕಟ್ಟು ಜನಾಂಗದ ಆವಾಸವೂ ಇಲ್ಲಿದೆ. ಆದರೆ. ಈಚಿನ ದಿನಗಳಲ್ಲಿ ಅಗ್ನಿ ಅವಘಡ, ಕೆಲವು ಕಡೆಗಳಲ್ಲಿ ಬೇಟೆಗಾರಿಕೆ ಪ್ರವೃತ್ತಿ ಹೆಚ್ಚುತ್ತಿದೆ. ಮೂಲಿಕೆ ಸಸ್ಯ ನಮೂನೆಗಳು ಒಂದೊಂದೇ ಅಳಿಯುತ್ತಿದ್ದು, ಆಯುರ್ವೇದ ಬಳಕೆಯ ಸಸ್ಯ ಸಂಕುಲ ಕಾಡಿನಿಂದ ಕಣ್ಮರೆ ಆಗುತ್ತಿರುವುದು ಪರಿಸರ ಪ್ರಿಯರ ನಿದ್ದೆಗೆಡಿಸಿದೆ.

ಜಿಲ್ಲೆಯ ಅರಣ್ಯದ ಶೇ 60ಕ್ಕೂ ಹೆಚ್ಚು ಪ್ರದೇಶದಲ್ಲಿ ಲಂಟಾನ ಆವರಿಸಿದೆ. ಅವುಗಳನ್ನು ತೆರವುಗೊಳಿಸುವ ಯತ್ನ ಯಶಸ್ಸು ಕಂಡಿಲ್ಲ. ಲಂಟಾನಗಳ ಹಾವಳಿ ವನ್ಯಪ್ರಾಣಿಗಳು ಮತ್ತು ಸಸ್ಯ ಸಂಕಲಗಳಿಗೆ ಮುಳುವಾಗಿ ಪರಿಣಮಿಸಿದೆ. ಬಲಿ ಪ್ರಾಣಿಗಳು, ಆನೆ ಮೊದಲಾದ ಪ್ರಾಣಿಗಳಿಗೆ ಹಸಿರು ಮೇವು ಸಿಗದಂತಾಗಿದೆ.

‘ಇತ್ತೀಚಿನ ವರ್ಷಗಳಲ್ಲಿ ತಾಪಮಾನ ಹೆಚ್ಚಾಗುತ್ತಲೇ ಇದೆ. ಕಾಡು ಉಳಿಸುವ ಬಗ್ಗೆ ಆಸಕ್ತಿ ಕಡಿಮೆ ಆಗುತ್ತಿದೆ. ಇದರ ಪರಿಣಾಮ ಅಂತರ್ಜಲ ಪಾತಾಳಕ್ಕೆ ಇಳಿಯುತ್ತಿದೆ. ಜೇನು, ಚಿಟ್ಟೆಗಳ ಅಳಿವಿನಿಂದ ಪರಾಗಸ್ಪರ್ಶ ಕ್ರಿಯೆಗೆ ಪೆಟ್ಟು ಬೀಳುತ್ತಿದೆ. ಕಾಡಿನ ಸುತ್ತಲ ಸಾವಿರಾರು ಕಿ.ಮೀ ಪ್ರದೇಶವನ್ನು ಪ್ರಭಾವಿಸುವ ಅರಣ್ಯಗಳನ್ನು ಉಳಿಸುವುದೊಂದೆ ನಮಗೆ ಇರುವ ಏಕೈಕ ದಾರಿ’ ಎನ್ನುತ್ತಾರೆ ಏಟ್ರೀ ಕ್ಷೇತ್ರಪಾಲಕ ನಾಗೇಂದ್ರ.

ಅರಣ್ಯ ಕೃಷಿಗೆ ಪ್ರೋತ್ಸಾಹ ಇಲ್ಲ: ಕೃಷಿಯೊಂದಿಗೆ ಅರಣ್ಯವನ್ನೂ ಬೆಳೆಸಲು ರೈತರಿಗೆ ಪ್ರೋತ್ಸಾಹ ನೀಡುವುದಕ್ಕಾಗಿ ಅರಣ್ಯ ಇಲಾಖೆ ಅರಣ್ಯ ಕೃಷಿ ಯೋಜನೆ ಜಾರಿಗೆ ತಂದಿದೆ. ಆದರೆ, ಅದು ಹೆಚ್ಚು ಯಶಸ್ಸು ಗಳಿಸಿಲ್ಲ. ಇಲಾಖೆ ಸರಿಯಾದ ಪ್ರೋತ್ಸಾಹ ನೀಡುತ್ತಿಲ್ಲ ಎಂಬುದು ರೈತರ ಮಾತು.

‘ಅರಣ್ಯ ಕೃಷಿ ಯೋಜನೆಯಡಿ 650 ಮಹಾಗನಿ ಬೆಳೆದಿದ್ದೇನೆ. ಕೃಷಿಕರಿಗೆ ಪ್ರತಿ ವರ್ಷ ಪ್ರೋತ್ಸಾಹ ಧನ ನೀಡುವ ಬಗ್ಗೆ ತಿಳಿಸಲಾಗಿತ್ತು. ಎರಡು ವರ್ಷಗಳಿಂದ ಸ್ಥಗಿತಗೊಂಡಿದೆ. ಇದರಿಂದ ಮಿಶ್ರ ಬೇಸಾಯ ನಂಬಿದವರು ಈಗ ಅತಂತ್ರರಾಗಿದ್ದಾರೆ’ ಎಂದು ಕೃಷಿಕ ಅಗರ ರವಿ ಬೇಸರ ವ್ಯಕ್ತಪಡಿಸಿದರು.

ಅರಣ್ಯ ಕೃಷಿ ಮಾಡುವ ರೈತರ ಸಂಖ್ಯೆ ಕಡಿಮೆ. ಯಾರು ಮಾಡಲು ಮುಂದೆ ಬರುತ್ತಾರೋ ಅವರಿಗೆ ಬೆಂಬಲ ನೀಡಲಾಗುತ್ತಿದೆ. ಎಲ್ಲರಿಗೂ ಪ್ರೋತ್ಸಾಹ ಧನ ನೀಡಲಾಗುತ್ತಿದೆ ಎಂದು ಹೇಳುತ್ತಾರೆ ಅಧಿಕಾರಿಗಳು.

ಅರಣ್ಯ ದಿನದ ವಿಶೇಷ

'ಅರಣ್ಯ ಮತ್ತು ಆರೋಗ್ಯ' ಎಂಬುದು 2023ರ ಅಂತರರಾಷ್ಟ್ರೀಯ ಅರಣ್ಯ ದಿನದ ಧ್ಯೇಯ. ಕಾನನ ಮನುಕುಲದ ತೊಟ್ಟಿಲು. ಜೀವವಾಯು ಮತ್ತು ಆಹಾರ ಒದಗಿಸುವ ಕಾರ್ಖಾನೆ. ಧರೆಯ ಆಂತರ್ಯಕ್ಕೆ ಜೀವಜಲ ಇಳಿಸುವ, ಶುದ್ಧ ಗಾಳಿ ಪೂರೈಸುವ, ನೀರನ್ನು ಉತ್ಪಾದಿಸುವ 'ಹಾಟ್ ಸ್ಪಾಟ್' ಕಾಡು. ಪರಿಸರದ ಹೆಜ್ಜೆ ಗುರುತು ಕಾಡಿನ ಅಳಿವನ್ನು ತಿಳಿಯುವ ದಿಕ್ಸೂಚಿ. ಕಾಡು ಜಾಗತಿಕ ತಾಪ ತಗ್ಗಿಸಿ, ಕಾಡಿನ ಜೀವಗಳಿಗೆ ಮೇವು ಒದಗಿಸಿ, ಮೂಲಿಕೆಗಳನ್ನು ಒಡಲಲ್ಲಿ ಇಟ್ಟುಕೊಂಡ ತವರು. 1971ರಲ್ಲಿ 'ಯುರೋಪಿಯನ್ ಕಾನ್ಫರೆನ್ಸ್‌ ಆಫ್ ಫುಡ್‌ ಅಂಡ್‌ ಅಗ್ರಿಕಲ್ಚರ್'ನ 23ನೇ ಸಾಮಾನ್ಯ ಸಭೆಯಲ್ಲಿ ಮಾರ್ಚ್‌ 21ರಂದು ಅರಣ್ಯ ದಿನ ಆಚರಿಸುವ ನಿಲುವು ತಾಳಲಾಯಿತು.

2012ರಲ್ಲಿ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಪ್ರತಿ ವರ್ಷ ಮಾರ್ಚ್‌ 21ರಂದು ಅಂತರರಾಷ್ಟ್ರೀಯ ಅರಣ್ಯ ದಿನ ಆಚರಿಸುವ ಸಂಬಂಧ ನಿರ್ಣಯ ಅಂಗೀಕರಿಸಲಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT