ಶುಕ್ರವಾರ, 21 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT

ಚಾಮರಾಜನಗರ | ಎಡೆಬಿಡದೆ ಸುರಿದ ವರ್ಷಧಾರೆ: ಬೇಗೂರಿನಲ್ಲಿ ಅಬ್ಬರಿಸಿದ ವರುಣ

Published 17 ಮೇ 2024, 14:44 IST
Last Updated 17 ಮೇ 2024, 14:44 IST
ಅಕ್ಷರ ಗಾತ್ರ

ಗುಂಡ್ಲುಪೇಟೆ: ತಾಲ್ಲೂಕಿನ ಬೇಗೂರು ಸುತ್ತಮುತ್ತ ಶು‌ಕ್ರವಾರ ಸಂಜೆ ಎರಡು ಗಂಟೆಗಳಿಗೂ ಹೆಚ್ಚು ಕಾಲ ಭರ್ಜರಿ ಮಳೆಯಾಗಿದೆ. 

ಬೇಗೂರು ಹೋಬಳಿಯ ಬಹುತೇಕ ಎಲ್ಲ ಪ್ರದೇಶಗಳಲ್ಲಿ ಭಾರಿ ವರ್ಷಧಾರೆಯಾಗಿದೆ. ಚರಂಡಿಗಳು ಉಕ್ಕಿ ರಸ್ತೆಯಲ್ಲಿ ಮಳೆ ನೀರು ಹರಿದು ಹೋಯಿತು. ಸಂಜೆ 4.45ರ ಹೊತ್ತಿಗೆ ಶುರುವಾದ ಮಳೆಯ ಅಬ್ಬರ ರಾತ್ರಿ ಏಳು ಗಂಟೆಯವರೆಗೂ ಮುಂದುವರಿಯಿತು. 

ಇತ್ತೀಚಿನ ವರ್ಷಗಳಲ್ಲಿ ಈ ಭಾಗದಲ್ಲಿ ಒಂದೇ ಬಾರಿಗೆ ಇಷ್ಟೊಂದು ಮಳೆಯಾಗಿರುವುದು ಇದೇ ಮೊದಲು ಎಂದು ಸ್ಥಳೀಯರು ಹೇಳುತ್ತಿದ್ದಾರೆ. 

10 ದಿನಗಳಿಂದ ತಾಲ್ಲೂಕಿನ ವಿವಿಧ ಕಡೆಗಳಲ್ಲಿ ಮಳೆಯಾಗಿದ್ದರೂ, ಬೇಗೂರು ಭಾಗದಲ್ಲಿ ಹೆಚ್ಚು ಆಗಿರಲಿಲ್ಲ. ಒಂದೇ ಮಳೆಗೆ ಸಣ್ಣಪುಟ್ಟ ಹಳ್ಳಕೊಳ್ಳಗಳು ತುಂಬಿ ಕೋಟಿ ಬಿದ್ದಿವೆ. ಭಾರಿ ಪ್ರಮಾಣದಲ್ಲಿ ವರ್ಷಧಾರೆಯಾಗಿರುವುದನ್ನು ಕಂಡು ಜನರು ಖುಷಿ ಪಟ್ಟರು.  ಸಾಮಾಜಿಕ ಜಾಲತಾಣಗಳಲ್ಲೂ ತಮ್ಮ ಖುಷಿಯನ್ನು ಹಂಚಿಕೊಂಡಿದ್ದಾರೆ.  

‘ಮಳೆ ಇಲ್ಲದೆ ಅಂತರ್ಜಲ ಬತ್ತಿಹೋಗಿ ಕೊಳವೆಬಾವಿಗಳಲ್ಲಿ ನೀರಿಲ್ಲದೆ ವ್ಯವಸಾಯ ಮಾಡಲು ಆಗದೆ ಗಿಡಮರಗಳನ್ನು ಉಳಿಸಿಕೊಳ್ಳಲೂ ಆಗದೆ ರೈತ ಪರಿತಪಿಸುತ್ತಿದ್ದ. ಇಂದಿನ ಮಳೆ ಸದ್ಯಕ್ಕೆ ಇಳೆಯ ದಾಹ ತಣಿಸಿದೆ’ ವಾಟ್ಸ್‌ಆ್ಯಪ್‌, ಫೇಸ್‌ಬುಕ್‌ನಲ್ಲಿ ಬರೆದುಕೊಂಡಿದ್ದಾರೆ. 

ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲ್ಲೂಕಿನ ಬೇಗೂರು ಬಳಿ ಶುಕ್ರವಾರ ಧಾರಾಕಾರ ಮಳೆ ಸುರಿಯಿತು

ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲ್ಲೂಕಿನ ಬೇಗೂರು ಬಳಿ ಶುಕ್ರವಾರ ಧಾರಾಕಾರ ಮಳೆ ಸುರಿಯಿತು

ಪ್ರಜಾವಾಣಿ ಚಿತ್ರ

‘ಬೇಗೂರು ಹೋಬಳಿಯಾದ್ಯಂತ ಗುಡುಗು ಮಿಂಚು ಸಹಿತ ಮಳೆಯಾಗಿದೆ. ಗಾಳಿ ಇಲ್ಲದೇ ಇದ್ದುದರಿಂದ ಹೆಚ್ಚು ಸಮಯ ಮಳೆ ಸುರಿದಿದೆ. ಇದು ಈ ವರ್ಷ ಭಾರಿ ಪ್ರಮಾಣದಲ್ಲಿ ಸುರಿದ ಮೊದಲ ಮಳೆ’ ಎಂದು ಬೇಗೂರು ನಿವಾಸಿ ಪುಟ್ಟಸ್ವಾಮಿ ‘ಪ್ರಜಾವಾಣಿ’ಗೆ ತಿಳಿಸಿದರು. 

ಕೋಡಗಾಪುರ, ಸೋಮಹಳ್ಳಿ, ಹೊರೆಯಾಲ, ಕೋಟೆಕೆರೆ, ಅರೆಪುರ, ಕಮರಹಳ್ಳಿ ಸೇರಿದಂತೆ ಹಲವು ಕಡೆಗಳಲ್ಲಿ ಮಳೆ ಬಿದ್ದಿದೆ ಎಂದು ಅವರು ಮಾಹಿತಿ ನೀಡಿದರು. 

ತಾಲ್ಲೂಕಿನ ಹಂಗಳ, ಕಸಬಾ, ತೆರಕಣಾಂಬಿ ಹೋಬಳಿ ವ್ಯಾಪ್ತಿಯಲ್ಲಿ ಕೆಲವು ದಿನಗಳಿಂದ ಉತ್ತಮ ಮಳೆಯಾಗುತ್ತಿದೆ. ಶುಕ್ರವಾರವೂ ತುಂತುರು ಮಳೆ ಬಿದ್ದಿದೆ. 

ಬಿಳಿಗಿರಿರಂಗನಬೆಟ್ಟದಲ್ಲಿ ಮಳೆ: ಯಳಂದೂರು ತಾಲ್ಲೂಕಿನ ಬಿಳಿಗಿರಿರಂಗನ ಬೆಟ್ಟದ ಸುತ್ತಮುತ್ತ ಶುಕ್ರವಾರ ಮಧ್ಯಾಹ್ನದಿಂದ ಸಂಜೆಯವರೆಗೆ ಸಾಧಾರಣ ಮಳೆಯಾಗಿದೆ. 

ಮೂರು ದಿನಗಳಿಂದ ತಾಪಮಾನ ಹೆಚ್ಚಳ ಕಂಡುಬಂದಿತ್ತು. ಬಿಸಿಲು ಸಹ ಇತ್ತು. ಮಧ್ಯಾಹ್ನ ಗುಡುಗು ಸಹಿತ ತುಂತುರು ಮಳೆಯಿಂದ ಆರಂಭವಾದ ಮಳೆ ಮತ್ತೆ ಬಿರುಸು ಪಡೆಯಿತು. ಇದರಿಂದ ಬಿಆರ್‌ಟಿ ಅರಣ್ಯ ವ್ಯಾಪ್ತಿಯಲ್ಲಿ ತಂಪು ತುಂಬಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT