ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಚಾಮರಾಜನಗರ: ಮುಂದುವರಿದ ವರುಣನ ಅಬ್ಬರ, ಉಕ್ಕಿದ ಹಳ್ಳ ಕೊಳ್ಳ

ಚಾಮರಾಜನಗರ, ಗುಂಡ್ಲುಪೇಟೆ ತಾಲ್ಲೂಕುಗಳಲ್ಲಿ ಧಾರಾಕಾರ ಮಳೆ, ಕೆರೆ ಕಟ್ಟೆಗಳಿಗೆ ನೀರು,
Published 21 ಮೇ 2024, 15:31 IST
Last Updated 21 ಮೇ 2024, 15:31 IST
ಅಕ್ಷರ ಗಾತ್ರ

ಚಾಮರಾಜನಗರ/ಗುಂಡ್ಲುಪೇಟೆ: ಜಿಲ್ಲೆಯಲ್ಲಿ ಮಂಗಳವಾರವೂ ಮಳೆ ಮುಂದುವರಿದಿದೆ. ಚಾಮರಾಜನಗರ ಮತ್ತು ಗುಂಡ್ಲುಪೇಟೆ ತಾಲ್ಲೂಕಿನ ಹಲವು ಕಡೆಗಳಲ್ಲಿ ಮಧ್ಯಾಹ್ನದ ಬಳಿಕ ಧಾರಾಕಾರ ವರ್ಷಧಾರೆಯಾಗಿದೆ. 

ಹನೂರು, ಕೊಳ್ಳೇಗಾಲ, ಯಳಂದೂರು ತಾಲ್ಲೂಕುಗಳಲ್ಲಿ ತುಂತುರಿನಿಂದ ಸಾಧಾರಣ ಮಳೆಯಾಗಿದೆ. ಕಾಡಂಚಿನಲ್ಲಿ ಉತ್ತಮವಾಗಿ ಮಳೆ ಬಿದ್ದಿದೆ. 

ಬೆಳಿಗ್ಗೆಯಿಂದ ಮಧ್ಯಾಹ್ನದವರೆಗೂ ಬಿಸಿಲಿನ ವಾತಾವರಣ ಇತ್ತು. ಮಧ್ಯಾಹ್ನ 3 ಗಂಟೆಯ ನಂತರ ಏಕಾ ಏಕಿ ಮೋಡ ಕಾಣಿಸಿಕೊಂಡಿತು. 

ಚಾಮರಾಜನಗರ ಹಾಗೂ ತಾಲ್ಲೂಕು ವ್ಯಾಪ್ತಿಯಲ್ಲಿ ಮಧ್ಯಾಹ್ನ 3.30ಯ ನಂತರ ಮಳೆಯಾಗಲು ಆರಂಭವಾಯಿತು. ನಗರದಲ್ಲಿ ಗಂಟೆಯ ಕಾಲ ಧಾರಾಕಾರ ಮಳೆ ಸುರಿಯುತು. ನಂತರ ಎರಡು ಗಂಟೆ ಬಿಟ್ಟು, ಮತ್ತೆ ಮಳೆಯಾಯಿತು. 

ನಗರ‌ದ ಪ್ರಮುಖ ರಸ್ತೆಗಳಲ್ಲಿ ಭಾರಿ ಪ್ರಮಾಣದಲ್ಲಿ ನೀರು ಹರಿಯಿತು. ತಗ್ಗು ಪ‍್ರದೇಶಗಳಿಗೆ ನೀರು ನುಗ್ಗಿತು. 

ತಾಲ್ಲೂಕಿನ ಹರದನಹಳ್ಳಿ ಹೋಬಳಿ ವ್ಯಾಪ್ತಿಯಲ್ಲಿ ಒಂದೂವರೆ ಗಂಟೆ ಎಡೆಬಿಡದೆ ಸುರಿದ ಧಾರಾಕಾರ ಮಳೆಗೆ ಹಳ್ಳ ಕೊಳ್ಳಗಳು ತುಂಬಿ ಹರಿದವು. ಸಣ್ಣ ಪುಟ್ಟ ಕೆರೆ ಕಟ್ಟೆಗಳು ತುಂಬಿ ಕೋಡಿ ಬಿದ್ದಿವೆ. ವಿ.ಸಿ.ಹೊಸೂರು, ವೆಂಕಟಯ್ಯನಛತ್ರ, ಅಮಚವಾಡಿ, ಚನ್ನಪ್ಪನಪುರ ವ್ಯಾಪ್ತಿಯಲ್ಲಿ ಭರ್ಜರಿ ಮಳೆಯಾಗಿದ್ದು, ಗ್ರಾಮೀಣ ರಸ್ತೆಗಳು ಜಲಾವೃತಗೊಂಡವು. ಜಮೀನುಗಳಿಗೆ ನೀರು ನುಗ್ಗಿತು. 

ಚನ್ನಪ್ಪನಪುರ ವ್ಯಾಪ್ತಿಯ ಹೆಬ್ಬಳ್ಳ ವೆಂಕಟಯ್ಯನಛತ್ರ ವ್ಯಾಪ್ತಿಯ ಚಿಕ್ಕಹೊಳೆ ಕಾಲುವೆಗಳು ತುಂಬಿ ಹರಿದವು. ಹಳ್ಳಗಳು ತುಂಬಿದ ಕಾರಣಕ್ಕೆ ಚನ್ನಪ್ಪನಪುರ ಅಮಚವಾಡಿ ರಸ್ತೆಯಲ್ಲಿ ಶನೇಶ್ವರ ದೇವಾಲಯದ ಬಳಿ ಹೆಬ್ಬಳ್ಳಕ್ಕೆ ನಿರ್ಮಿಸಿರುವ ಸೇತುವೆ ಜಲಾವೃತಗೊಂಡು ವಾಹನಗಳ, ಜನರ ಸಂಚಾರಕ್ಕೆ ಅಡಚಣೆಯಾಯಿತು. 

ಹಳ್ಳಕೊಳ್ಳ, ಕಾಲುವೆಗಳು ತುಂಬಿ ಹರಿದ ಪರಿಣಾಮ ಚಿಕ್ಕಹೊಳೆ ಜಲಾಶಯಕ್ಕೆ ನೀರು ಹರಿಯಿತು. ತಾಲ್ಲೂಕಿನ ಪುಣಜನೂರು, ನೆರೆಯ ತಮಿಳುನಾಡಿನ ತಾಳವಾಡಿ ವ್ಯಾಪ್ತಿಯಲ್ಲೂ ಉತ್ತಮವಾಗಿ ವರ್ಷಧಾರೆಯಾಗಿರುವುದರಿಂದ ಈ ಭಾಗದ ಎರಡು ಜಲಾಶಯಗಳು ಹಾಗೂ ಕೆರೆ ಕಟ್ಟೆಗಳಿಗೆ ನೀರು ಹರಿದು ಬರಲಿದೆ. 

ಗುಂಡ್ಲುಪೇಟೆ ತಾಲ್ಲೂಕಿನಾದ್ಯಂತ ಮಳೆ ಮುಂದುವರಿಯುತ್ತಿದ್ದು, ಬಂಡೀಪುರ ಕಾಡಂಚಿನ ಜಕ್ಕಹಳ್ಳಿ, ಮಂಗಲ ಗ್ರಾಮದಲ್ಲಿ ಎರಡು ಗಂಟೆಗೂ ಅಧಿಕ ಕಾಲ ಭಾರಿ ಮಳೆಯಾಗಿದೆ.

ಮಂಗಳವಾರ ಮಧ್ಯಾಹ್ನ ಸುರಿದ ಮಳೆಯಿಂದ ಟೊಮೆಟೊ, ಬೀನ್ಸ್, ಸೂರ್ಯಕಾಂತಿ, ಅಲಸಂದೆ, ನೆಲಗಡಲೆ ಸೇರಿದಂತೆ ವಿವಿಧ ಫಸಲಿನ ಜಮೀನಿಗೆ ನೀರು ನುಗ್ಗಿದ್ದು ಬೆಳೆಗಳು ಕೊಚ್ಚಿ ಹೋಗಿದೆ. ಇದರಿಂದ ರೈತರು ಅಪಾರ ನಷ್ಟ ಅನುಭವಿಸುವಂತಾಗಿದೆ. ಕಾಲುವೆಗಳಲ್ಲಿ ನೀರು ಹರಿಯುತ್ತಿದ್ದು ಬಂಡೀಪುರ ಅರಣ್ಯದ ಕೆರೆಗಳಿಗೆ ಸೇರುತ್ತಿದೆ.

‘ಬಂಡೀಪುರ ಕಾಡಂಚಿನ ಬೇರಂಬಾಡಿ ಕೆಂಪು ಸಾಗರ ಕೆರೆ, ಹಂಗಳ ಹಿರೀಕೆರೆ, ಬರಗಿ ಕೆರೆ, ಮುಂಟೀಪುರ ಕೆರೆ ಸೇರಿದಂತೆ ವಿವಿಧ ಕೆರೆ-ಕಟ್ಟೆಗಳಿಗೆ ನೀರು ಹರಿದು ಬರುತ್ತಿದೆ. ಮಳೆಯಿಂದಾಗಿ ಬಿತ್ತನೆ ಮಾಡಿದ್ದ ಅನೇಕ ಬೆಳೆಗಳು ನೀರು ಪಾಲಾಗಿದೆ’ ಎಂದು ರೈತರು ಬೇಸರಿಸಿದರು.

ಸೋಮವಾರ ಸುರಿದ ಧಾರಾಕಾರ ಮಳೆಗೆ ಚಾಮರಾಜನಗರದ ಚೆನ್ನಿಪುರಮೋಳೆ ವ್ಯಾಪ್ತಿಯ ಕೃಷಿ ಜಮೀನುಗಳಿಗೆ ನೀರು ನುಗ್ಗಿರುವುದು
ಸೋಮವಾರ ಸುರಿದ ಧಾರಾಕಾರ ಮಳೆಗೆ ಚಾಮರಾಜನಗರದ ಚೆನ್ನಿಪುರಮೋಳೆ ವ್ಯಾಪ್ತಿಯ ಕೃಷಿ ಜಮೀನುಗಳಿಗೆ ನೀರು ನುಗ್ಗಿರುವುದು
ಗುಂಡ್ಲುಪೇಟೆ ತಾಲ್ಲೂಕಿನಲ್ಲಿ ಸತತವಾಗಿ ಸುರಿಯುತ್ತಿರುವ ಮಳೆಯಿಂದ ಎಲಚೆಟ್ಟಿ ಕೆರೆಗೆ ನೀರು ಹರಿದು ಬರುತ್ತಿದೆ
ಗುಂಡ್ಲುಪೇಟೆ ತಾಲ್ಲೂಕಿನಲ್ಲಿ ಸತತವಾಗಿ ಸುರಿಯುತ್ತಿರುವ ಮಳೆಯಿಂದ ಎಲಚೆಟ್ಟಿ ಕೆರೆಗೆ ನೀರು ಹರಿದು ಬರುತ್ತಿದೆ

3.21 ಸೆಂ.ಮೀ ಮಳೆ

ಮಂಗಳವಾರ ಬೆಳಿಗ್ಗೆ 8.30ಕ್ಕೆ ಕೊನೆಗೊಂಡಂತೆ 24 ಗಂಟೆಗಳ ಅವಧಿಯಲ್ಲಿ ಜಿಲ್ಲಾ ವ್ಯಾಪ್ತಿಯಲ್ಲಿ 3.21 ಸೆಂ.ಮೀ ಮಳೆ ಬಿದ್ದಿದೆ. ಈ ವರ್ಷದಲ್ಲಿ ಒಂದು ದಿನದಲ್ಲಿ ಬಿದ್ದ ಗರಿಷ್ಠ ಮಳೆ ಇದು.  ಚಾಮರಾಜನಗರ ತಾಲ್ಲೂಕಿನಲ್ಲಿ ಗರಿಷ್ಠ 5.78 ಸೆಂ.ಮೀ ಮಳೆಯಾಗಿದೆ. ಯಳಂದೂರು ತಾಲ್ಲೂಕಿನಲ್ಲಿ 3.30 ಸೆಂ.ಮೀ ಹನೂರಿನಲ್ಲಿ 2.7 ಸೆಂ.ಮೀ ಕೊಳ್ಳೇಗಾಲದಲ್ಲಿ 2.60 ಸೆಂ.ಮೀ. ಗುಂಡ್ಲುಪೇಟೆಯಲ್ಲಿ 2.01 ಸೆಂ.ಮೀ ಮಳೆ ಬಿದ್ದಿದೆ. ವಾರದ ಅವಧಿಯಲ್ಲಿ ಜಿಲ್ಲೆಯಲ್ಲಿ 6.9 ಸೆಂ.ಮೀ ಮಳೆಯಾಗಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.  ಮಂಗಳವಾರ ಸುರಿದ ಮಳೆಗೆ ಗುಂಡ್ಲುಪೇಟೆ ತಾಲ್ಲೂಕಿನ ಐದು ಹನೂರು ತಾಲ್ಲೂಕಿನಲ್ಲಿ ಒಂದು ಮನೆಗೆ ಹಾನಿಯಾಗಿದೆ ಎಂದು ಜಿಲ್ಲಾಡಳಿತ ಮಾಹಿತಿ ನೀಡಿದೆ. 

ತಗ್ಗು ಪ್ರದೇಶಗಳಿಗೆ ನೀರು

ಬೆಳೆ ಹಾಳು ನಿರಂತರವಾಗಿ ಮಳೆಯಾಗುತ್ತಿರುವುದರಿಂದ ಚಾಮರಾಜನಗರದ ಚೆನ್ನಿಪುರಮೋಳೆಯ ಬಡಾವಣೆಗಳಿಗೆ ಕೃಷಿ ಜಮೀನುಗಳಿಗೆ ನೀರು ನುಗ್ಗಿದೆ. ಮೋಳೆ ಮೂಲಕ ಹಾದು ಹೋಗುವ ರಾಜಕಾಲುವೆ ಅರ್ಧದಲ್ಲೇ ಮುಚ್ಚಿರುವುದರಿಂದ ಕೊಳಚೆ ನೀರು ಉಕ್ಕಿ ಕೃಷಿ ಜಮೀನುಗಳು ಕಾಲಿ ನಿವೇಶನಗಳಿಗೆ ನುಗ್ಗಿವೆ. ಇದರಿಂದ ಓಡಾಡಲು ಸಾಧ್ಯವಾಗದ ಪರಿಸ್ಥಿತಿ ನಿರ್ಮಾಣವಾಗಿದೆ. ‘ನೀರು ನಿಂತು ಮುಸುಕಿನ ಜೋಳ ಸೇರಿದಂತೆ ಇತರ ಬೆಳೆಗಳು ಹಾನಿಗೀಡಾಗಿವೆ. ಮಕ್ಕಳು ಮಹಿಳೆಯರ ಓಡಾಟಕ್ಕೂ ಸಮಸ್ಯೆಯಾಗಿದೆ. ಪ್ರತಿ ಮಳೆಗಾಲದಲ್ಲೂ ನಾವು ಈ ಸಮಸ್ಯೆಯನ್ನು ಎದುರಿಸಬೇಕಾಗಿದೆ’ ಎಂದು ಸ್ಥಳೀಯರಾದ ಸಿದ್ದರಾಜು ನಿಜಗುಣ ಅಳಲು ತೋಡಿಕೊಂಡರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT