ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಂಡೀಪುರ ಅರಣ್ಯದಲ್ಲಿ ಮಳೆ: ತಗ್ಗಿದ ಕಾಳ್ಗಿಚ್ಚಿನ ಆತಂಕ

ಬಂಡೀಪುರ, ಬಿಆರ್‌ಟಿ, ಕಾವೇರಿ, ಮಲೆ ಮಹದೇಶ್ವರ ವನ್ಯಧಾಮಗಳಲ್ಲಿ ಮಳೆ
ಮಲ್ಲೇಶ ಎಂ./ಬಿ.ಬಸವರಾಜು
Published 4 ಮೇ 2024, 9:08 IST
Last Updated 4 ಮೇ 2024, 9:08 IST
ಅಕ್ಷರ ಗಾತ್ರ

ಚಾಮರಾಜನಗರ/ಗುಂಡ್ಲುಪೇಟೆ/ಹನೂರು: ಜಿಲ್ಲೆಯ ಬಂಡೀಪುರ, ಬಿಆರ್‌ಟಿ ಹುಲಿ ಸಂರಕ್ಷಿತ ಪ್ರದೇಶಗಳು, ಕಾವೇರಿ ಮತ್ತು ಮಲೆ ಮಹದೇಶ್ವರ ವನ್ಯಧಾಮಗಳ ವ್ಯಾಪ್ತಿಯ ಅಲ್ಲಲ್ಲಿ ಎರಡು ಮೂರು ದಿನಗಳಿಂದ ಮಳೆಯಾಗುತ್ತಿದ್ದು, ಬಿಸಿಲಿಗೆ ಬೆಂಡಾಗಿದ್ದ ಗಿಡಮರಗಳಿಗೆ ತಂಪೆರೆದಿದೆ. ಕಾಳ್ಗಿಚ್ಚಿನ ಆತಂಕವೂ ಕೊಂಚ ಕಳೆದಿದೆ. 

ಬಂಡೀಪುರ ವ್ಯಾಪ್ತಿಯಲ್ಲಿ ಮೂರು ಮಳೆಯಾಗಿದೆ. ಗೋಪಾಲಸ್ವಾಮಿ ಬೆಟ್ಟ, ಬಂಡೀಪುರ, ಮದ್ದೂರು ಹಾಗೂ ಕುಂದುಕೆರೆ ವಲಯಗಳ ಕೆಲ ಭಾಗಗಳಲ್ಲಿ ಗುರುವಾರ ಹಾಗೂ ಶುಕ್ರವಾರ ಜೋರು ಮಳೆಯಾಗಿದೆ.

ಸತತವಾಗಿ ಮಳೆಯಾಗಿರುವುದರಿಂದ ಕಾಡಿನಲ್ಲಿರುವ ಗುಂಡಿಗಳಲ್ಲಿ ನೀರು ನಿಂತಿದೆ. ಕೆರೆ ಕಟ್ಟೆಗಳಿಗೆ ಸಣ್ಣ ಪ್ರಮಾಣದಲ್ಲಿ ನೀರು ತುಂಬಿದೆ. 

ಆರು ತಿಂಗಳಿಂದ ಮಳೆ ಇಲ್ಲದೆ ಬಿಸಿಲಿನ ತಾಪಮಾನ ದಿನದಿಂದ ಕಾಡಿನಲ್ಲಿ ಹುಲ್ಲು, ಗಿಡ ಮರಗಳು ಒಣಗಿ ನಿಂತಿದ್ದವು. ಇದರಿಂದಾಗಿ ಕಾಡಿಗೆ ಬೆಂಕಿ ಬೀಳುವುದೋ ಎಂಬ ಭಯದಿಂದ ಅರಣ್ಯ ಸಿಬ್ಬಂದಿ ಕೆಲಸ ಮಾಡುತ್ತಿದ್ದರು. ಕೆಲವರು ರಜೆ ಇಲ್ಲದೆ ಕೆಲಸ ಮಾಡಿದ್ದಾರೆ.

ಆದರೂ, ಮಳೆ ಬೀಳುವುದಕ್ಕೂ ಎರಡು ದಿನಗಳ ಮೊದಲು ಗೋಪಾಲಸ್ವಾಮಿ ಬೆಟ್ಟ ಮತ್ತು ಮದ್ದೂರು ವಲಯದಲ್ಲಿ ಕಾಡಿಗೆ ಬೆಂಕಿ ಬಿದ್ದಿತ್ತು. ಅರಣ್ಯ ಅಧಿಕಾರಿಗಳು ಮತ್ತು ಸಿಬ್ಬಂದಿ ಸಕಾಲದಲ್ಲಿ ಬೆಂಕಿ ನಂದಿಸಿದ್ದರು. ಮಾರನೆಯ ದಿನವೇ ಈ ಭಾಗದಲ್ಲಿ ಉತ್ತಮ ಮಳೆಯಾಯಿತು.

‘ಕಾಡಿನಲ್ಲಿ ಮಳೆ ಇಲ್ಲದೆ ಜಿಂಕೆಗಳು ರೈತರ ಜಮೀನಿನ ಕಡೆಗೆ ಮುಖ ಮಾಡಿದ್ದವು. ಕಳೆದ ನಾಲ್ಕೈದು ತಿಂಗಳಿನಿಂದ ಜಿಂಕೆಗಳನ್ನು ಓಡಿಸಲು ಪ್ರಯತ್ನಿಸಿದರೂ ಮತ್ತೆ ಜಮೀನಿನ ಕಡೆಗೆ ಬರುತ್ತಿದ್ದವು. ಇದೀಗ ಉತ್ತಮ ಮಳೆಯಾಗಿರುವುದರಿಂದ ಜಿಂಕೆಗಳ ಕಾಟ ಕಡಿಮೆಯಾಗಲಿದೆ’ ಎಂದು ರೈತ ಚಿಕ್ಕಣ್ಣ ‘ಪ್ರಜಾವಾಣಿ’ಗೆ ತಿಳಿಸಿದರು. 

‘ಕಾಡಿನಲ್ಲಿ ಉತ್ತಮವಾಗಿ ಮಳೆ ಬಿದ್ದಿರುವುದರಿಂದ ಹಸಿರು ಚಿಗುರಲಾರಂಬಿಸಿ ಪ್ರಾಣಿಗಳಿಗೆ ಮೇವು ಸಿಗುತ್ತದೆ. ಬಿದಿರು ಶೀಘ್ರವಾಗಿ ಬೆಳೆಯುತ್ತದೆ. ಕೆಲ ಭಾಗದ ಕೆರೆಗಳು ಬೇಸಿಗೆ ಕಾಲದಲ್ಲಿ ಬರಿದಾಗಿ ನೀರಿನ ಸಮಸ್ಯೆಯಿಂದ ಜಿಂಕೆಗಳು ರೈತರ ಜಮೀನಿನತ್ತ ಬರುತ್ತಿದ್ದವು. ಕಾಡಿನ ಭಾಗದಲ್ಲಿ ಉತ್ತಮ ಮಳೆಯಾಗಿದೆ. ಮುಂದಿನ ದಿನಗಳಲ್ಲಿ ಆಗುವ ಮಳೆಗೆ ಕೆರೆಗಳು ತುಂಬಿ ನೀರಿನ ಸಮಸ್ಯೆ ದೂರವಾಗುತ್ತದೆ’ ಎಂದು ಸಿಬ್ಬಂದಿ ತಿಳಿಸಿದರು.

ಹನೂರು ವರದಿ: ಹನೂರು ತಾಲ್ಲೂಕು ವ್ಯಾಪ್ತಿಯ ಅರಣ್ಯ ಪ್ರದೇಶಗಳಲ್ಲೂ ಎರಡು ದಿನಗಳಿಂದ ಮಳೆಯಾಗುತ್ತಿದ್ದು ಅಧಿಕಾರಿಗಳು ಮತ್ತು ಸಿಬ್ಬಂದಿ ನಿಟ್ಟುಸಿರು ಬಿಡುವಂತಾಗಿದೆ.

ಗುರುವಾರ ಹಾಗೂ ಶುಕ್ರವಾರ ತಾಲ್ಲೂಕಿನ ಬಹುತೇಕ ಕಡೆಗಳಲ್ಲಿ ಗುಡುಗು ಸಹಿತ ಮಳೆಯಾಗಿದೆ. ಕಾವೇರಿ ವನ್ಯಧಾಮದ ಹನೂರು, ಕೌದಳ್ಳಿ, ಕೊತ್ತನೂರು ಹಾಗೂ ಹಲಗೂರು ವನ್ಯಜೀವಿ ವಲಯಗಳಲ್ಲಿ ಮಳೆಯಾಗಿದೆ. ಮಲೆಮಹದೇಶ್ವರ ವನ್ಯಧಾಮದ ಹನೂರು, ಪಿ.ಜಿ ಪಾಳ್ಯ, ರಾಮಾಪುರ ಹಾಗೂ ಹೂಗ್ಯಂ ವನ್ಯಜೀವಿ ವಲಯದ ಮೀಣ್ಯಂ ಅರಣ್ಯ ಪ್ರದೇಶದಲ್ಲಿ ಉತ್ತಮ ಮಳೆಯಾಗಿದೆ.

ಎರಡು ವನ್ಯಧಾಮಗಳಲ್ಲೂ ಪ್ರಾಣಿಗಳಿಗೆ ಮೇವು, ನೀರಿನ ಕೊರತೆ ಉಂಟಾಗಿತ್ತು. ಅರಣ್ಯ ಇಲಾಖೆ ಅರಣ್ಯದೊಳಗೆ ನೀರಿನ ತೊಟ್ಟಿ ಹಾಗೂ ಕೆರೆಗಳನ್ನು ನಿರ್ಮಿಸಿ ಅದಕ್ಕೆ ನೀರು ತುಂಬಿಸಿ ಕುಡಿಯುವ ನೀರಿನ ವ್ಯವಸ್ಥೆ ಮಾಡಿತ್ತು. 

‘ಎರಡು ದಿನಗಳಿಂದ ಮಳೆಯಾಗುತ್ತಿರುವುದು ಸಮಾಧಾನಕರ ಸಂಗತಿ. ಮಳೆಯಿಲ್ಲದಿದ್ದರೂ ಅರಣ್ಯದೊಳಗೆ ಕುಡಿಯುವ ನೀರಿನ ವ್ಯವಸ್ಥೆ ಮಾಡಬಹುದು. ಆದರೆ ಹಸಿರು ಬೆಳೆಯಲು ಮಳೆ ಬೇಕೆ ಬೇಕು. ಈಗ ಬಿದ್ದ ಮಳೆಯಿಂದ  ಹಸಿರು ಚಿಗುರೊಡೆಯಲಿದೆ. ಇದರಿಂದ ಪ್ರಾಣಿಗಳಿಗೆ ಮೇವು ಸಿಗಲಿದೆ. ಇನ್ನು ಮೂರು ದಿನ ಮಳೆಯಾದರೆ ಮತ್ತೆ ಯಾವುದೇ ಸಮಸ್ಯೆಯಾಗದು’ ಎಂದು ಮಲೆಮಹದೇಶ್ವರ ವನ್ಯಧಾಮದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಚಂದ್ರಶೇಖರ್ ಪಾಟೀಲ ‘ಪ್ರಜಾವಾಣಿ’ಗೆ ತಿಳಿಸಿದರು. 

‘ಬೇಸಿಗೆ ಆರಂಭವಾಗುತ್ತಿದ್ದಂತೆ ಅರಣ್ಯದೊಳಗೆ ನೀರಿನ ಸಮಸ್ಯೆ ಉದ್ಭವಿಸಿತ್ತು. ಸೋಲಾರ್ ಪಂಪ್ ಹಾಗೂ ಡಿಸೇಲ್ ಪಂಪ್ ಮೂಲಕ ಕೆರೆಗಳಿಗೆ ನೀರು ತುಂಬಿಸಲಾಗಿತ್ತು. ಎರಡು ದಿನಗಳಿಂದ ಮಳೆಯಾಗುತ್ತಿದೆ. ಮೇವಿಗಾಗಿ ಮಳೆ ಅತ್ಯಂತ ಮುಖ್ಯ’ ಎಂದು ಕಾವೇರಿ ವನ್ಯಧಾಮದ ಉಪ ಅರಣ್ಯ ಸಂರಕ್ಷಣಾಧಿಕಾರಿ ಸುರೇಂದ್ರ ಹೇಳಿದರು. 

ಬಿಆರ್‌ಟಿ ಹುಲಿ ಸಂರಕ್ಷಿತ ಪ್ರದೇಶದ ಕೆ.ಗುಡಿ ವ್ಯಾಪ್ತಿಯಲ್ಲಿ ಶುಕ್ರವಾರ ಒಂದು ಗಂಟೆಗೂ ಹೆಚ್ಚು ಕಾಲ ಮಳೆಯಾಯಿತು
ಬಿಆರ್‌ಟಿ ಹುಲಿ ಸಂರಕ್ಷಿತ ಪ್ರದೇಶದ ಕೆ.ಗುಡಿ ವ್ಯಾಪ್ತಿಯಲ್ಲಿ ಶುಕ್ರವಾರ ಒಂದು ಗಂಟೆಗೂ ಹೆಚ್ಚು ಕಾಲ ಮಳೆಯಾಯಿತು

ಬಿಆರ್‌ಟಿ ವ್ಯಾಪ್ತಿಯಲ್ಲೂ ವರ್ಷಧಾರೆ

ಚಾಮರಾಜನಗರ ಮತ್ತು ಯಳಂದೂರು ತಾಲ್ಲೂಕುಗಳ ಬಿಳಿಗಿರಿರಂಗನಾಥಸ್ವಾಮಿ ದೇವಾಲಯ (ಬಿಆರ್‌ಟಿ) ಹುಲಿ ಸಂರಕ್ಷಿತ ಪ್ರದೇಶದ ವ್ಯಾಪ್ತಿಯಲ್ಲೂ ಎರಡು ದಿನಗಳಿಂದ ಮಳೆಯಾಗುತ್ತಿದೆ. ಗುರುವಾರ ಬಿಳಿಗಿರಿರಂಗನಬೆಟ್ಟದ ಸುತ್ತಮುತ್ತ ಮಳೆಯಾಗಿದ್ದಾರೆ. ಶುಕ್ರವಾರ ಕೆ.ಗುಡಿ ಬೈಲೂರು ಕೊಳ್ಳೇಗಾಲ ಬೇಡಗುಳಿ ವ್ಯಾಪ್ತಿಯಲ್ಲಿ ಮಳೆ ಸುರಿದಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.  ಬಿಆರ್‌ಟಿಯ ವಿವಿಧ ಕಡೆಗಳಲ್ಲಿ ಈ ಬಾರಿ ಕಾಳ್ಗಿಚ್ಚು ಕಾಣಿಸಿಕೊಂಡಿತ್ತು. ಎಲ್ಲ ಪ್ರಕರಣಗಳಲ್ಲೂ ಅರಣ್ಯಕ್ಕೆ ಹೆಚ್ಚಿನ ಹಾನಿಯಾಗುವುದನ್ನು ತಡೆಯಲು ಅಧಿಕಾರಿಗಳು ಸಿಬ್ಬಂದಿ ಯಶಸ್ವಿಯಾಗಿದ್ದರು. ಈಗ ಮಳೆಯಾಗುತ್ತಿರುವುದರಿಂದ ಇನ್ನು ಕಾಳ್ಗಿಚ್ಚಿನ ಸಾಧ್ಯತೆ ಕಡಿಮೆ ಎಂದು ಹೇಳುತ್ತಾರೆ ಅಧಿಕಾರಿಗಳು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT