ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ಮಶಾನವಿಲ್ಲದೆ ಅಂತ್ಯಸಂಸ್ಕಾರಕ್ಕೆ ಪಡಿಪಾಟಲು

ಸಂತೇಮರಹಳ್ಳಿ: ನಾಲೆ, ಹಳ್ಳ–ಕೊಳ್ಳಗಳಲ್ಲೇ ಅಂತ್ಯಕ್ರಿಯೆ ನಡೆಸಬೇಕಾದ ಅನಿವಾರ್ಯತೆ
Last Updated 21 ಸೆಪ್ಟೆಂಬರ್ 2021, 16:37 IST
ಅಕ್ಷರ ಗಾತ್ರ

ಸಂತೇಮರಹಳ್ಳಿ: ಹೋಬಳಿ ಕೇಂದ್ರದ (ಸಂತೇಮರಹಳ್ಳಿ) ಗ್ರಾಮಸ್ಥರಿಗೆ ರುದ್ರಭೂಮಿಯ ವ್ಯವಸ್ಥೆ ಕಲ್ಪಿಸದ ಕಾರಣ, ಸ್ಥಳೀಯರು ಶವ ಸಂಸ್ಕಾರಕ್ಕಾಗಿ ಹಳ್ಳ–ಕೊಳ್ಳಗಳು ಹಾಗೂ ಕಬಿನಿ ನಾಲೆಯ ದಂಡೆಯನ್ನುಆಶ್ರಯಿಸಬೇಕಾದ ಪರಿಸ್ಥಿತಿಯಿದೆ.

ಗ್ರಾಮವು 4000ಕ್ಕೂ ಹೆಚ್ಚು ಜನಸಂಖ್ಯೆಯನ್ನು ಹೊಂದಿದೆ. ಜನಸಂಖ್ಯೆಗೆ ಅನುಗುಣವಾಗಿ ಜಿಲ್ಲಾಡಳಿತ ರುದ್ರಭೂಮಿ ಮಂಜೂರು ಮಾಡಿಕೊಟ್ಟಿಲ್ಲ. ಇದರಿಂದ ನಿವಾಸಿಗಳು ಶವ ಸಂಸ್ಕಾರಕ್ಕಾಗಿ ಅಲೆದಾಡಬೇಕಿದೆ.

ವೀರಶೈವರು, ಆದಿಜಾಂಬವರು ಸೇರಿದಂತೆ ಮಡಿವಾಳರು, ವಿಶ್ವಕರ್ಮ, ಆರಾಧ್ಯರು, ಇತರೆ ಹಿಂದುಳಿದ ವರ್ಗದವರು ಗ್ರಾಮದಲ್ಲಿದ್ದಾರೆ.

ಗ್ರಾಮಕ್ಕೆ ರುದ್ರಭೂಮಿ ಮಂಜೂರಾತಿಗಾಗಿ ನಿವಾಸಿಗಳುಹಲವಾರು ವರ್ಷಗಳಿಂದ ಹೋರಾಟ ಮಾಡುತ್ತಿದ್ದಾರೆ. ಆದರೆ, ಅಧಿಕಾರಿಗಳಾಗಲಿ, ಜನಪ್ರತಿನಿಧಿಗಳಾಗಲಿ ಈ ಸಮಸ್ಯೆ ಬಗ್ಗೆ ಗಮನ ಹರಿಸಿಲ್ಲ ಎಂಬುದು ಸ್ಥಳೀಯರ ಆರೋಪ.

ಗ್ರಾಮದಲ್ಲಿ ಜಮೀನು ಹೊಂದಿರುವವರು ತಮ್ಮ ಜಮೀನುಗಳಲ್ಲಿ ಶವ ಸಂಸ್ಕಾರ ಮಾಡುತ್ತಾರೆ. ಜಮೀನು ಹೊಂದಿಲ್ಲದ ನಿವಾಸಿಗಳು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಕುಟುಂಬದಲ್ಲಿ ಯಾರಾದರೂ ಮೃತಪಟ್ಟಾಗ ಅವರ ಅಂತ್ಯಕ್ರಿಯೆ ನಡೆಸಲು ತೊಂದರೆ ಅನುಭವಿಸುತ್ತಿದ್ದಾರೆ.

ಹಳ್ಳ–ಕೊಳ್ಳಗಳಲ್ಲೇ ಅಂತ್ಯಸಂಸ್ಕಾರ: ನಿರ್ದಿಷ್ಟ ರುದ್ರಭೂಮಿ ಇಲ್ಲದ ಕಾರಣ ಜನರು ಸರ್ಕಾರಿ ರಸ್ತೆಗಳಲ್ಲಿರುವ ಹಳ್ಳ–ಕೊಳ್ಳಗಳಲ್ಲಿ ಶವ ಸಂಸ್ಕಾರಕ್ಕೆ ಮುಂದಾಗುತ್ತಿದ್ದಾರೆ.

ಗ್ರಾಮದ ಮಧ್ಯೆ ಹಾದು ಹೋಗಿರುವ ಕಬಿನಿ ನಾಲೆಯ ಮಗ್ಗುಲಲ್ಲಿರುವ ಮಣ್ಣಿನ ಗುಡ್ಡೆಗಳಲ್ಲಿ ಶವ ಸಂಸ್ಕಾರ ಮಾಡಲಾಗುತ್ತಿದೆ. ಈ ಸ್ಥಳಗಳಲ್ಲಿ ಶವ ಸಂಸ್ಕಾರಕ್ಕೆ ಮುಂದಾದಾಗ ಅಕ್ಕಪಕ್ಕದ ಜಮೀನಿನವರು ಹಾಗೂ ನಿವಾಸಿಗಳು ತಡೆಯೊಡ್ಡಿರುವ ನಿದರ್ಶನಗಳೂ ಇವೆ. ಕಬಿನಿ ನಾಲೆಯ ಪಕ್ಕದಲ್ಲಿರುವ ಜೆಎಸ್‍ಎಸ್ ಶಿಕ್ಷಣ ಸಂಸ್ಥೆಗೆ ಹೊಂದಿಕೊಂಡಂತೆ ಹಲವು ಸಮಾಧಿ ನಿರ್ಮಿಸಲಾಗಿದೆ.

‘ಗ್ರಾಮಕ್ಕೆ ರುದ್ರಭೂಮಿಯ ಅವಶ್ಯಕತೆಗಾಗಿ ನಿವಾಸಿಗಳು ಈಗಾಗಲೇ ಪ್ರತಿಭಟನೆ ನಡೆಸಿದ್ದಾರೆ. ತಾಲ್ಲೂಕು ಆಡಳಿತಕ್ಕೆ ಅಹವಾಲನ್ನೂ ಸಲ್ಲಿಸಿದ್ದಾರೆ. ಜತೆಗೆ ಜನಪ್ರತಿನಿಧಿಗಳಿಗೆ ಮನವಿಯನ್ನು ಮಾಡಿದ್ದಾರೆ. ಹೀಗಿದ್ದರೂ ಯಾರೂ ಗಮನ ಹರಿಸಿಲ್ಲ’ ಎಂಬುದು ಗ್ರಾಮಸ್ಥರ ದೂರು.

‘ಸಂತೇಮರಹಳ್ಳಿ ಗ್ರಾಮದ ವ್ಯಾಪ್ತಿಯಲ್ಲಿ ಸರ್ಕಾರಿ ಜಮೀನುಗಳಿವೆ. ತಾಲ್ಲೂಕು ಆಡಳಿತವು ಸ್ಮಶಾನಕ್ಕಾಗಿ ಒಂದು ಜಮೀನು ಮಂಜೂರು ಮಾಡಿಕೊಟ್ಟು ನಿವಾಸಿಗಳಿಗೆ ಅನುಕೂಲ ಮಾಡಿಕೊಡಬೇಕು’ ಎಂದು ಗ್ರಾಮದ ಮುಖಂಡ ಸುಭಾಷ್ ಒತ್ತಾಯಿಸಿದರು.

‘ಅಧಿಕಾರಿಗಳು ಸತಾಯಿಸುತ್ತಿದ್ದಾರೆ’

‘ಈಗಾಗಲೇ ಸಂತೇಮರಹಳ್ಳಿಯ ಉಪ ತಹಶೀಲ್ದಾರ್ ಮೂಲಕ ತಾಲ್ಲೂಕು ಆಡಳಿತಕ್ಕೆ ಮನವಿ ಕೊಡಲಾಗಿದೆ. ಸ್ಮಶಾನಕ್ಕಾಗಿ ಜಮೀನು ಮಂಜೂರು ಮಾಡಿದ್ದೇವೆ ಎಂದು ಅಧಿಕಾರಿಗಳು ಹೇಳುತ್ತಾರೆ. ಆದರೆ ಆದೇಶ ನೀಡದೆ ಸತಾಯಿಸುತ್ತಿದ್ದಾರೆ’ ಎಂದು ಗ್ರಾಮ ಪಂಚಾಯಿತಿ ಅಧ್ಯಕ್ಷ ಎಂ.ಪಿ.ಶಂಕರ್ ‘ಪ್ರಜಾವಾಣಿ’ಗೆ ತಿಳಿಸಿದರು.

ಸ್ಥಳೀಯ ಕಂದಾಯ ಅಧಿಕಾರಿ ಪರಮೇಶ್‌ ಮಾತನಾಡಿ, ‘ಹಳೆ ಸಂತೆ ಮೈದಾನದಲ್ಲಿ ಸ್ಥಳ ಗುರುತಿಸಿ ಸರ್ವೆ ನಡೆಸಲು ತಾಲ್ಲೂಕು ಕಚೇರಿಗೆ ಕಳುಹಿಸಲಾಗಿದೆ. ನಂತರ ಮುಂದಿನ ಕ್ರಮ ತೆಗೆದುಕೊಳ್ಳಲಾಗುವುದು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT