ಭಾನುವಾರ, 16 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಾಮರಾಜನಗರ | 'ಗುತ್ತಿಗೆದಾರರನ್ನು ಕಪ್ಪು ಪಟ್ಟಿಗೆ ಸೇರಿಸಲು ಆಗ್ರಹ'

ನಗರೋತ್ಥಾನ ಯೋಜನೆ: ಅರ್ಧಬಂರ್ಧ ಕಾಮಗಾರಿ ಮಾಡಿರುವ ಕಂಪನಿ: ಎಸ್‌ಡಿಪಿಐ ಆರೋಪ:
Published 20 ನವೆಂಬರ್ 2023, 14:39 IST
Last Updated 20 ನವೆಂಬರ್ 2023, 14:39 IST
ಅಕ್ಷರ ಗಾತ್ರ

ಚಾಮರಾಜನಗರ: ನಗರೋತ್ಥಾನ ಯೋಜನೆಯ ಅಡಿಯಲ್ಲಿ ಇಲ್ಲಿನ ನಗರಸಭಾ ವ್ಯಾಪ್ತಿಯಲ್ಲಿ ಅಭಿವೃದ್ಧಿ ಕೆಲಸಗಳನ್ನು ಮಾಡಲು ಟೆಂಡರ್‌ ಪಡೆದಿದ್ದ ಗುತ್ತಿಗೆದಾರ ಅರ್ಧಬಂರ್ಧ ಕೆಲಸ ಕಾಮಗಾರಿಗಳನ್ನು ನಡೆಸಿದ್ದು, ಗುತ್ತಿಗೆದಾರರನ್ನು ಕಪ್ಪು ಪಟ್ಟಿಗೆ ಸೇರಿಸಬೇಕು ಎಂದು ಎಸ್‌ಡಿಪಿಐ ಜಿಲ್ಲಾ ಘಟಕ ಆಗ್ರಹಿಸಿದೆ.

ನಗರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಎಸ್‌ಡಿಪಿಐ ಜಿಲ್ಲಾಧ್ಯಕ್ಷ ಹಾಗೂ ನಗರಸಭೆ ಸದಸ್ಯ ಅಬ್ರಾರ್ ಅಹಮದ್, ‘ನಗರಸಭಾ ವ್ಯಾಪ್ತಿಯ 31 ವಾರ್ಡ್‌ಗಳಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ಮಾಡಿಸಲು ನಗರೋತ್ಥಾನ 4 ನೇ ಹಂತದ ಅನುದಾನದಡಿಯಲ್ಲಿ ₹16.80 ಕೋಟಿ ಮೊತ್ತಕ್ಕೆ ಟೆಂಡರ್ ಕರೆಯಲಾಗಿತ್ತು. ತಮಿಳುನಾಡಿನ ಈರೋಡ್‌ನ ಸೆಲ್ಲಿಅಮ್ಮನ್ ಕನ್‌ಸ್ಟ್ರಕ್ಷನ್‌ ಪ್ರೈ.ಲಿ. ನ ಎಸ್.ಸೆಲ್ವಕುಮಾರ್ ಅವರಿಗೆ ಈ ವರ್ಷ ಫೆಬ್ರುವರಿ 21ರಂದು ಆದೇಶ ಪತ್ರ ನೀಡಲಾಗಿದೆ. ಆದರೆ, ಆದೇಶ ಪತ್ರ ನೀಡಿ ಎಂಟು ತಿಂಗಳಾದರೂ ಕೆಲವು ವಾರ್ಡ್‌ಗಳಲ್ಲಿ ಅರೆಬರೆ ಕಾಮಗಾರಿ ಮಾಡಿ ನಿಲ್ಲಿಸಿದ್ದಾರೆ’ ಎಂದು ಆರೋಪಿಸಿದರು. 

‘ಕಾರ್ಯಾದೇಶ ನೀಡಿದ 18 ತಿಂಗಳ ಒಳಗಾಗಿ ಎಲ್ಲ ಕಾಮಗಾರಿಗಳನ್ನು ಮುಗಿಸಬೇಕು. ಇಲ್ಲಿ ಮಾಡಿದ ಕೆಲಸವನ್ನೂ ಪೂರ್ಣಗೊಳಿಸಿಲ್ಲ. ಕೆಲವು ವಾರ್ಡ್‌ಗಳಲ್ಲಿ ರಸ್ತೆಗಳಿಗೆ ಜಲ್ಲಿ ಕಲ್ಲನ್ನು ಹಾಕಿ ಹಾಗೇ ಬಿಡಲಾಗಿದೆ’ ಎಂದು ದೂರಿದರು. 

‘ಟೆಂಡರ್‌ ಪಡೆದವರು ಕಾಮಗಾರಿ ಆರಂಭಿಸಿದ ನಂತರ ಪೂರ್ಣಗೊಳಿಸಬೇಕು. ಈ ಸಂಸ್ಥೆ ನಗರದ ಯಾವ ವಾರ್ಡ್‌ನಲ್ಲೂ ಸರಿಯಾಗಿ ಕಾಮಗಾರಿ ನಿರ್ವಹಿಸಿಲ್ಲ. ರಸ್ತೆ ಕೆಲಸ ಅರ್ಧದಲ್ಲೇ ನಿಂತಿರುವುದರಿಂದ ಅನೇಕ ಕಡೆಗಳಲ್ಲಿ ವಾಹನ ಸವಾರರು ಬಿದ್ದು ಗಾಯಗೊಂಡಿದ್ದಾರೆ. ವಾಹನ ಸವಾರರು, ವಾರ್ಡ್‌ ನಿವಾಸಿಗಳಿಗೆ ತೊಂದರೆಯಾಗುತ್ತಿದೆ’ ಎಂದು ಅಬ್ರಾರ್‌ ಹೇಳಿದರು. 

‘ಈ ಬಗ್ಗೆ ಸಚಿವರು, ಶಾಸಕರು, ಜಿಲ್ಲಾಧಿಕಾರಿ, ಯೋಜನಾ ನಿರ್ದೇಶಕರು, ಆಯುಕ್ತರಿಗೆ ಮನವಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ’ ಎಂದು ಅವರು ದೂರಿದರು. 

‘ಈಗಲಾದರೂ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರು ಈ ಬಗ್ಗೆ ಗಮನ ಹರಿಸಿ, ಗುತ್ತಿಗೆದಾರರನ್ನು ಕಪ್ಪು ಪಟ್ಟಿಗೆ ಸೇರಿಸಬೇಕು’ ಎಂದು ಅಬ್ರಾರ್‌ ಅಹಮದ್‌ ಆಗ್ರಹಿಸಿದರು. 

ಎಸ್‌ಡಿಪಿಐನ ನಗರಸಭಾ ಸದಸ್ಯರಾದ ಎಂ.ಮಹೇಶ್, ತೌಸಿಯಾ ಬಾನು, ಖಲೀಲ್ ಉಲ್ಲಾ, ಮೊಹಮದ್ ಅಮೀಕ್, ಅಪ್ಸರ್ ಪಾಷಾ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT