ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಚಾಮರಾಜನಗರ | ದ್ವಿತೀಯ ಪಿಯು: ಫಲಿತಾಂಶ ಏರಿಕೆ, ಸ್ಥಾನ ಇಳಿಕೆ

ಜಿಲ್ಲೆಗೆ ಶೇ 84.99ರಷ್ಟು ಫಲಿತಾಂಶ, ರಾಜ್ಯ ಮಟ್ಟದಲ್ಲಿ 14ನೇ ಸ್ಥಾನ
Published 11 ಏಪ್ರಿಲ್ 2024, 5:47 IST
Last Updated 11 ಏಪ್ರಿಲ್ 2024, 5:47 IST
ಅಕ್ಷರ ಗಾತ್ರ

ಚಾಮರಾಜನಗರ: 2023–24ನೇ ಸಾಲಿನ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯಲ್ಲಿ ಜಿಲ್ಲೆಯು ಶೇ 84.99ರಷ್ಟು ಫಲಿತಾಂಶ ದಾಖಲಿಸಿದೆ. ರಾಜ್ಯ ಮಟ್ಟದಲ್ಲಿ 14ನೇ ಸ್ಥಾನ ಗಳಿಸಿದೆ.

ಕಳೆದ ವರ್ಷದ ಫಲಿತಾಂಶಕ್ಕೆ ಹೋಲಿಸಿದರೆ, ಈ ಬಾರಿ ಫಲಿತಾಂಶದ ಪ್ರಮಾಣ ಹೆಚ್ಚಾಗಿದೆ. ಹೋದ ವರ್ಷ ಶೇ 81.92ರಷ್ಟು ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದರು. ಆದರೆ, ಸ್ಥಾನದಲ್ಲಿ ಇಳಿಕೆಯಾಗಿದೆ. ಕಳೆದ ಬಾರಿ ರಾಜ್ಯದಲ್ಲಿ 12 ಸ್ಥಾನ ಗಳಿಸಿತ್ತು.   

ಜಿಲ್ಲೆಯಲ್ಲಿ 24 ಸರ್ಕಾರಿ, ಏಳು ಅನುದಾನಿತ ಹಾಗೂ 29 ಖಾಸಗಿ ಕಾಲೇಜುಗಳು ಸೇರಿದಂತೆ 60 ಪಿಯು ಕಾಲೇಜುಗಳಿವೆ‌.  6342 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು. ಈ ಪೈಕಿ 5,390 ಮಂದಿ ತೇರ್ಗಡೆಯಾಗಿದ್ದಾರೆ. 

ಪರೀಕ್ಷೆ ಬರೆದಿದ್ದ 3,136 ಬಾಲಕರ ಪೈಕಿ 2,366 ಉತ್ತೀರ್ಣರಾಗಿ ಶೇ 75.45 ಫಲಿತಾಂಶ ದಾಖಲಿಸಿದ್ದಾರೆ. 3,970 ಬಾಲಕಿಯರು ಪರೀಕ್ಷೆಗೆ ಹಾಜರಾಗಿದ್ದು, 3,335 ಮಂದಿ ತೇರ್ಗಡೆ‌ಯಾಗಿ ಶೇ 84.51ರಷ್ಟು ಫಲಿತಾಂಶ ಬಂದಿದೆ. 

ಜಿಲ್ಲೆಗೆ ಮೊದಲಿಗರಿವರು: ಕಲಾ ವಿಭಾಗದಲ್ಲಿ ಗುಂಡ್ಲುಪೇಟೆ ತಾಲ್ಲೂಕಿನ  ಬೇಗೂರಿನ ಸರ್ಕಾರಿ ಪಿಯು ಕಾಲೇಜಿನ ವಿದ್ಯಾರ್ಥಿನಿ ಮಹಾದೇವಿ 600ಕ್ಕೆ 591 ಅಂಕಗಳನ್ನುಗಳಿಸಿ (ಶೇ‌ 98.50) ಜಿಲ್ಲೆಗೆ ಮೊದಲಿಗರಾಗಿದ್ದಾರೆ. 

ಕೊಳ್ಳೇಗಾಲದ ನಿಸರ್ಗ ಪದವಿ ಪೂರ್ವ ಕಾಲೇಜಿನ ಐಶ್ವರ್ಯ ಎಲ್. 588 ಅಂಕಗಳನ್ನು (ಶೇ 98) ಪಡೆದು ಎರಡನೇ ಸ್ಥಾನ ಗಳಿಸಿದ್ದಾರೆ. 580 ಅಂಕಗಳನ್ನು ಗಳಿಸಿರುವ (ಶೇ 96.66) ಕೊಳ್ಳೇಗಾಲದ ಎಸ್‌ವಿಕೆ ಸರ್ಕಾರಿ ಪಿಯು ಕಾಲೇಜಿನ ಸುಜಾತ ಬಿ.ಎನ್‌ ಮೂರನೇ ಸ್ಥಾನ ಪಡೆದಿದ್ದಾರೆ. 

ವಾಣಿಜ್ಯ ವಿಭಾಗ: ಈ ವಿಭಾಗದಲ್ಲಿ ಚಾಮರಾಜನಗರದ ಬ್ರೈಟ್‌ ಪದವಿ ಪೂರ್ವ ಕಾಲೇಜಿನ ಮೂವರು ವಿದ್ಯಾರ್ಥಿಗಳಾದ ರೋಹಿತ್ ಪ್ರಸಾದ್‌, ದೀಕ್ಷಿತಾ ದರ್ಶಿನಿ ಎನ್‌, ದೀಪಿಕಾ ಎನ್‌ ಅವರು ತಲಾ 589 ಅಂಕಗಳನ್ನು ಪಡೆದು (ಶೇ 98.16) ಜಿಲ್ಲೆಗೆ ಮೊದಲ ಸ್ಥಾನ ಪಡೆದಿದ್ದಾರೆ. ತಲಾ 586 ಅಂಕಗಳನ್ನು (ಶೇ 97.66) ಗಳಿಸಿರುವ  ಕೊಳ್ಳೇಗಾಲದ ನಿಸರ್ಗ ಪಿಯು ಕಾಲೇಜಿನ ಭಾವನಾ ಬಿ  ಮತ್ತು ಭವಾನಿ ಎಸ್‌ ಅವರು ಎರಡನೇ ಸ್ಥಾನ ಗಳಿಸಿದ್ದಾರೆ. ಗುಂಡ್ಲುಪೇಟೆಯ ಜೆಎಸ್‌ಎಸ್‌ ಕಾಲೇಜಿನ ರಂಜಿತ. ಡಿ.ಎಸ್‌ 585 ಅಂಕ ಗಳಿಸಿ (ಶೇ 97.50) ಮೂರನೇ ಸ್ಥಾನ ಪಡೆದಿದ್ದಾರೆ. 

ವಿಜ್ಞಾನ ವಿಭಾಗ: ಚಾಮರಾಜನಗರದ ಜೆಎಸ್‌ಎಸ್‌ ಮಹಿಳಾ ಕಾಲೇಜಿನ ನಿಶ್ಚಿತಾ ಎಸ್‌ ವಿಜ್ಞಾನ ವಿಭಾಗದಲ್ಲಿ 588 ಅಂಕಗಳನ್ನು ಪಡೆದು (ಶೇ 98) ಜಿಲ್ಲೆಗೆ ಮೊದಲ ಸ್ಥಾನಿಯಾಗಿದ್ದಾರೆ.  ಕೊಳ್ಳೇಗಾಲದ ನಿಸರ್ಗ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿನಿ ಅನು ಸಿ 587 ಅಂಕಗಳನ್ನು ಗಳಿಸಿ (ಶೇ 97.83) ಎರಡನೇ ಸ್ಥಾನ ಗಳಿಸಿದ್ದಾರೆ. ಕೊಳ್ಳೇಗಾಲದ ವಾಸವಿ ಪದವಿ ಪೂರ್ವ ಕಾಲೇಜಿನ ಭಾವನ ಎಸ್‌. 585 ಅಂಕಗಳೊಂದಿಗೆ (ಶೇ 97.50) ಜಿಲ್ಲೆಗೆ ಮೂರನೇ ಸ್ಥಾನ ಗಳಿಸಿದ್ದಾರೆ. 

ನಗರ ಪ್ರದೇಶದ ವಿದ್ಯಾರ್ಥಿಗಳು ಮುಂದು: ಈ ಬಾರಿ ಜಿಲ್ಲೆಯ ನಗರ ಮತ್ತು ಪಟ್ಟಣ ಪ್ರದೇಶದ ವಿದ್ಯಾರ್ಥಿಗಳು ಸಾಧನೆಯಲ್ಲಿ ಮುಂದಿದ್ದಾರೆ. 

ನಗರ ‍ಪ್ರದೇಶಗಳ 4,650 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು. ಈ ಪೈಕಿ 3,977 ಮಂದಿ ಉತ್ತೀರ್ಣರಾಗಿ ಶೇ 85.53 ಫಲಿತಾಂಶ ದಾಖಲಿಸಿದ್ದಾರೆ. ಗ್ರಾಮೀಣ ಭಾಗದ 1,692 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು, 1,413 ಮಂದಿ ತೇರ್ಗಡೆಯಾಗಿದ್ದಾರೆ. ಅಂದರೆ ಶೇಕಡವಾರು ಲೆಕ್ಕಾಚಾರದಲ್ಲಿ 83.51 ಫಲಿತಾಂಶ ಬಂದಿದೆ. 

ಕಲಾ ವಿಭಾಗದಲ್ಲಿ ಶೇ 78.92, ವಾಣಿಜ್ಯ ವಿಭಾಗದಲ್ಲಿ ಶೇ 87.18 ಮತ್ತು ವಿಜ್ಞಾನ ವಿಭಾಗದಲ್ಲಿ ಶೇ 89.2ರಷ್ಟು ಫಲಿತಾಂಶ ದಾಖಲಾಗಿದೆ ಎಂದು ಪದವಿ ಪೂರ್ವ ಶಿಕ್ಷಣ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ. 

ರೋಹಿತ್‌ ಪ್ರಸಾದ್‌
ರೋಹಿತ್‌ ಪ್ರಸಾದ್‌
ದೀಪಿಕಾ ಎನ್‌.
ದೀಪಿಕಾ ಎನ್‌.
ದೀಕ್ಷಿತಾ ದರ್ಶಿನಿ
ದೀಕ್ಷಿತಾ ದರ್ಶಿನಿ
ನಿಶ್ಚಿತಾ
ನಿಶ್ಚಿತಾ
ಭಾವನ ಬಿ.
ಭಾವನ ಬಿ.
ಐಶ್ವರ್ಯ
ಐಶ್ವರ್ಯ
ಅನು ಸಿ.
ಅನು ಸಿ.
ಭಾವನ
ಭಾವನ
ಭವಾನಿ
ಭವಾನಿ
ರಂಜಿತ
ರಂಜಿತ

ಈ ಬಾರಿಯ ಫಲಿತಾಂಶ ಉತ್ತಮವಾಗಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ವಿದ್ಯಾರ್ಥಿಗಳ ತೇರ್ಗಡೆ ಪ್ರಮಾಣ ಹೆಚ್ಚಾಗಿದೆ. ರಾಜ್ಯ ಮಟ್ಟದಲ್ಲಿ ಜಿಲ್ಲೆಯ ಸ್ಥಾನದಲ್ಲಿ ಇಳಿಕೆಯಾಗಿದೆ

-ಮಂಜುನಾಥ್‌ ಪ್ರಸನ್ನ ಪಿಯು ಇಲಾಖೆ ಉಪನಿರ್ದೇಶಕ

ಸಾಧಕರು ಏನಂತಾರೆ? ಬಡತನದ ಕುಟುಂಬ ನಮ್ಮದು. ಕಷ್ಟಪಟ್ಟು ಓದಿದರೆನೇ ಸಾಧನೆ ಸಾಧ್ಯ ಎಂಬುದು ತಿಳಿದಿದೆ. ಚೆನ್ನಾಗಿ ಓದುತ್ತಿದ್ದೆ. ಅಂಕಗಳು ಬಂದಿರುವುದು ಖುಷಿ ನೀಡಿದೆ. ಶಿಕ್ಷಕಿಯಾಗಬೇಕು ಎಂಬ ಆಸೆ ಇದೆ.  –ಮಹಾದೇವಿ ಸರ್ಕಾರಿ ಪದವಿ ಪೂರ್ವ ಕಾಲೇಜು ಬೇಗೂರು (ಕಲಾ ವಿಭಾಗದಲ್ಲಿ ಜಿಲ್ಲೆಗೆ ಮೊದಲ ಸ್ಥಾನ) ನಮ್ಮ ಕಾಲೇಜಿನಲ್ಲಿ ಅಭ್ಯಾಸಕ್ಕೆ ಹೆಚ್ಚು ನೀಡಲಾಗುತ್ತಿತ್ತು. ಎಂಟು ಪೂರ್ವ ಸಿದ್ಧತಾ ಪರೀಕ್ಷೆಗಳನ್ನು ಬರೆದಿದ್ದೇವೆ. ಹೆಚ್ಚು ಅಂಕಗಳನ್ನು ತೆಗೆಯುವ ನಿರೀಕ್ಷೆ ಇತ್ತು. ಕಂಪ್ಯೂಟರ್‌ ಸೈನ್ಸ್‌ನಲ್ಲಿ ಕಡಿಮೆ ಅಂಕ ಬಂದಿವೆ. ಪುನರ್‌ ಮೌಲ್ಯಮಾಪನಕ್ಕೆ ಅರ್ಜಿ ಹಾಕುವೆ. ಸಿಎ ಆಗುವುದು ನನ್ನ ಗುರಿ –ರೋಹಿತ್‌ ಪ್ರಸಾದ್‌ ಬೈಟ್‌ ಪಿಯು ಕಾಲೇಜು ಚಾಮರಾಜನಗರ (ವಾಣಿಜ್ಯ ವಿಭಾಗದಲ್ಲಿ ಜಿಲ್ಲೆಗೆ ಮೊದಲ ಸ್ಥಾನ) ಬೋಧಕರು ತುಂಬಾ ಚೆನ್ನಾಗಿ ಹೇಳಿಕೊಡುತ್ತಿದ್ದರು. ತಂದೆ ತಾಯಿಯರ ಪ್ರೋತ್ಸಾಹ ಕಾಲೇಜಿನಲ್ಲಿ ಉಪನ್ಯಾಸಕರ ಮಾರ್ಗದರ್ಶನದಿಂದ ಉತ್ತಮ ಅಂಕಗಳು ಸಿಕ್ಕಿವೆ. ಮುಂದೆ ಬಿಸಿಎ ಮಾಡುವೆ – ದೀಕ್ಷಿತಾ ದರ್ಶಿನಿ ಎನ್. ಬೈಟ್‌ ಪಿಯು ಕಾಲೇಜು ಚಾಮರಾಜನಗರ (ವಾಣಿಜ್ಯ ವಿಭಾಗದಲ್ಲಿ ಜಿಲ್ಲೆಗೆ ಮೊದಲ ಸ್ಥಾನ) ತಂದೆ ರಿಕ್ಷಾ ಚಾಲಕ. ಮನೆಯಲ್ಲಿ ಕಷ್ಟಪಟ್ಟು ಓದಿಸುತ್ತಿದ್ದಾರೆ. ತಾಳವಾಡಿಯಿಂದ ಪ್ರತಿ ದಿನ ಬರುವಾಗ ಬಸ್‌ನಲ್ಲೇ ಓದುತ್ತಿದ್ದೆ. ಸಮಯ ವ್ಯರ್ಥ ಮಾಡುತ್ತಿರಲಿಲ್ಲ. ಕಾಲೇಜಿನಲ್ಲೂ ಚೆನ್ನಾಗಿ ಬೋಧನೆ ಮಾಡುತ್ತಿದ್ದರು. ಬಿಸಿಎ ಮಾಡಬೇಕೆಂದಿದ್ದೇನೆ. – ದೀಪಿಕಾ ಎನ್‌.  ಬೈಟ್‌ ಪಿಯು ಕಾಲೇಜು ಚಾಮರಾಜನಗರ (ವಾಣಿಜ್ಯ ವಿಭಾಗದಲ್ಲಿ ಜಿಲ್ಲೆಗೆ ಮೊದಲ ಸ್ಥಾನ) ತಂದೆ ತಾಯಿಯ ಪ್ರೋತ್ಸಾಹ ಬೋಧಕರ ಸಹಕಾರದಿಂದ ಉತ್ತಮ ಅಂಕಗಳಿಸಲು ಸಾಧ್ಯವಾಗಿದೆ. ಕಾಲೇಜಿನಲ್ಲಿ ಪಾಠ ಚೆನ್ನಾಗಿ ಕೇಳುತ್ತಿದ್ದೆ. ಮನೆಯಲ್ಲಿ ಪ್ರತಿ ದಿನ ಅಧ್ಯಯನ ಮಾಡುತ್ತಿದ್ದೆ. ಅದುವೇ ಹೆಚ್ಚು ಅಂಕಗಳು ಸಿಗಲು ಕಾರಣ. ವೈದ್ಯೆಯಾಗಬೇಕೆಂಬ ಆಸೆ ಇದೆ.   – ನಿಶ್ಚಿತಾ ಎಸ್‌ ಜೆಎಸ್‌ಎಸ್‌ ಮಹಿಳಾ ಕಾಲೇಜು ಚಾಮರಾಜನಗರ (ವಿಜ್ಞಾನ ವಿಭಾಗದಲ್ಲಿ ಜಿಲ್ಲೆಗೆ ಮೊದಲ ಸ್ಥಾನ) ಪೋಷಕರ ಸಹಕಾರ ಕಾಲೇಜಿನಲ್ಲಿ ಬೋಧಕರ ಮಾರ್ಗದರ್ಶನದಿಂದ ದಿಂದ ನಾನು ಉತ್ತಮ ಅಂಕ ಗಳಿಸಿದ್ದೇನೆ. ಮುಂದಿನ ದಿನಗಳಲ್ಲಿ ಉನ್ನತ ಮಟ್ಟದ ಅಧಿಕಾರಿಯಾಗಬೇಕು ಎಂಬ ಕನಸು ಇದೆ. ಆ ನಿಟ್ಟಿನಲ್ಲಿ ಪ್ರಯತ್ನ ನಡೆಸುವೆ  –ಐಶ್ವರ್ಯ ನಿಸರ್ಗ ಸ್ವತಂತ್ರ ಪದವಿ ಪೂರ್ವ ಕಾಲೇಜು ಕಲಾವಿಭಾಗದಲ್ಲಿ ಜಿಲ್ಲೆಗೆ ಎರಡನೇ ಸ್ಥಾನ ಚಿಕ್ಕವಯಸ್ಸಿನಿಂದಲೂ ಸಹ ಸಾಧನೆ ಮಾಡಬೇಕು ಎಂಬ ಗುರಿ ಹೊಂದಿದ್ದೆ. ಚೆನ್ನಾಗಿ ಓದುತ್ತಿದ್ದೆ. ಉತ್ತಮ ಅಂಕಗಳೂ ಸಿಕ್ಕಿವೆ. ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚು ಸಾಧನೆ ಮಾಡುವೆ  –ಭಾವನಾ ನಿಸರ್ಗ ಸ್ವತಂತ್ರ ಪದವಿ ಪೂರ್ವ ಕಾಲೇಜು ಕೊಳ್ಳೇಗಾಲ ವಾಣಿಜ್ಯ ವಿಭಾಗದಲ್ಲಿ ಜಿಲ್ಲೆಗೆ 2ನೇ ಸ್ಥಾನ ಸಾಧನೆ ಹಾದಿಯಲ್ಲಿ ಯಶಸ್ಸು ಕಾಣುವುದು ಬಹಳ ಮುಖ್ಯ. ಪ್ರತಿ ದಿನದ ಪಾಠವನ್ನು ಅಂದೇ ಅಭ್ಯಾಸ ಮಾಡುತ್ತಿದ್ದೆ. ಆ ಕಾರಣದಿಂದ ಉತ್ತಮ ಅಂಕ ಗಳಿಸಿದ್ದೇನೆ. ಸಿಎ ಮಾಡಬೇಕು ಎಂದಿದೆ. – ಭವಾನಿ ನಿಸರ್ಗ ಸ್ವಾತಂತ್ರ ಪದವಿ ಪೂರ್ವ ಕಾಲೇಜು ಕೊಳ್ಳೇಗಾಲ (ವಾಣಿಜ್ಯ ವಿಭಾಗದಲ್ಲಿ ಜಿಲ್ಲೆಗೆ 2ನೇ ಸ್ಥಾನ) ತಂದೆ ತಾಯಿ ಹಾಗೂ ಪೋಷಕರ ಸಹಕಾರದಿಂದ ನಾನು ಉತ್ತಮ ಅಂಕ ಗಳಿಸಿದ್ದೇನೆ. ಮುಂದಿನ ದಿನಗಳಲ್ಲಿ ವೈದ್ಯೆಯಾಗಬೇಕು ಎಂಬ ಆಸೆ ಇದೆ.  –ಅನು ಸಿ. ನಿಸರ್ಗ ಸ್ವತಂತ್ರ ಪದವಿ ಪೂರ್ವ ಕಾಲೇಜು ಕೊಳ್ಳೇಗಾಲ (ವಿಜ್ಞಾನ ವಿಭಾಗದಲ್ಲಿ ಜಿಲ್ಲೆಗೆ ದ್ವಿತೀಯ ಸ್ಥಾನ ಹೆಚ್ಚು ಅಂಕ ಪಡೆಯಲು ಪೋಷಕರು ಮತ್ತು ಕಾಲೇಜಿನ ಪ್ರಾಧ್ಯಾಪಕರ ಸಹಕಾರ ಹೆಚ್ಚಿದೆ. ರೈತನ ಮಗಳಾಗಿ ಸಿಎ ಮುಗಿಸಬೇಕು ಎಂಬ ಆಸೆ ಇದೆ. - ಡಿ.ಎಸ್.ರಂಜಿತ ಜೆಎಸ್ಎಸ್ ಕಾಲೇಜು ಗುಂಡ್ಲುಪೇಟೆ (ವಾಣಿಜ್ಯ ವಿಭಾಗದಲ್ಲಿ ಜಿಲ್ಲೆಗೆ ಮೂರನೇ ಸ್ಥಾನ) ಪರಿಶ್ರಮದಿಂದ ಓದಿ ಉತ್ತಮ ಅಂಕ ಪಡೆದಿದ್ದೇನೆ. ನನ್ನ ಸಾಧನೆಗೆ ಪೋಷಕರು ಹಾಗೂ ಉಪನ್ಯಾಸಕರು ಕಾರಣ. ವೈದ್ಯೆಯಾಗಬೇಕು ಎಂಬ ಕನಸಿದೆ. ನೀಟ್‌ಗೆ ಸಿದ್ಧತೆ ಮಾಡುತ್ತಿದ್ದೇನೆ.  –ಭಾವನ ಶ್ರೀ ವಾಸವಿ ಸಂಯುಕ್ತ ಪದವಿ ಪೂರ್ವ ಕಾಲೇಜು ಕೊಳ್ಳೇಗಾಲ (ವಿಜ್ಞಾನ ವಿಭಾಗದಲ್ಲಿ ಜಿಲ್ಲೆಗೆ 3ನೇ ಸ್ಥಾನ)

3 ಕಾಲೇಜುಗಳಿಗೆ ಶೇ 100 ಫಲಿತಾಂಶ ಜಿಲ್ಲೆಯ ಮೂರು ಕಾಲೇಜುಗಳು ಶೇ 100 ಫಲಿತಾಂಶ ದಾಖಲಿಸಿವೆ. ಇವುಗಳಲ್ಲಿ ಒಂದು ಅನುದಾನಿತ ಮತ್ತು ಇನ್ನೆರಡು ಖಾಸಗಿ. ಕೊಳ್ಳೇಗಾಲದ ವಿಶ್ವಚೇತನ ಪದವಿ ಪೂರ್ವ ಕಾಲೇಜು ಅನಿದಾನಿತವಾಗಿದ್ದರೆ  ಚಾಮರಾಜನಗರದ ಬ್ರೈಟ್‌ ಪದವಿ ಪೂರ್ವ ಕಾಲೇಜು ಮತ್ತು ಕಾಮಗೆರೆಯ ಸೇಂಟ್‌ ಮಾರ್ಗರೇಟ್‌ ಪದವಿ ಪೂರ್ವ ಕಾಲೇಜು ಖಾಸಗಿ ಕಾಲೇಜುಗಳು.  ಶೇ 96.55 ರಷ್ನು ಫಲಿತಾಂಶ ದಾಖಲಿಸಿರುವ ಹನೂರು ತಾಲ್ಲೂಕಿನ ಬಂಡಳ್ಳಿ ಸರ್ಕಾರಿ ಪಿಯು ಕಾಲೇಜು ಅತಿ ಹೆಚ್ಚು ಫಲಿತಾಂಶ ಬಂದಿರುವ ಸರ್ಕಾರಿ ಪದವಿ ಪೂರ್ವ ಕಾಲೇಜು ಆಗಿದೆ. 

ಕೂಲಿ ಕಾರ್ಮಿಕ ದಂಪತಿ ಮಗಳಿಗೆ ಮೊದಲ ಸ್ಥಾನ ಕಲಾ ವಿಭಾಗದಲ್ಲಿ ಜಿಲ್ಲೆಗೆ ಮೊದಲ ಸ್ಥಾನಗಳಿಸಿರುವ ಬೇಗೂರು ಸರ್ಕಾರಿ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿನಿ ಮಹಾದೇವಿ ಕೂಲಿ ಕಾರ್ಮಿಕ ದಂಪತಿಯ ಮಗಳು. ಅವರ ತಂದೆ ತಾಯಿಗೆ ನಿಟ್ರೆಯಲ್ಲಿ ಒಂದು ಎಕರೆ ಜಮೀನು ಇದೆ. ಕೃಷಿಯಲ್ಲಿ ಬರುವ ಸಂಪಾದನೆ ಸಾಲುವುದಿಲ್ಲ ಎಂದು ಇಬ್ಬರೂ ಕೂಲಿ ಕೆಲಸಕ್ಕೆ ಹೋಗುತ್ತಾರೆ.  ಬಡತನ ಇದ್ದರೂ ಈ ದಂಪತಿ ತಮ್ಮ ನಾಲ್ಕೂ ಮಕ್ಕಳನ್ನು ಓದಿಸುತ್ತಿದ್ದಾರೆ. ದೊಡ್ಡ ಮಗ ದ್ವಿತೀಯ ಬಿಎಯಲ್ಲಿ ಓದುತ್ತಿದ್ದರೆ ಇನ್ನೊಬ್ಬ ಮಗಳು ಎಸ್‌ಎಸ್‌ಎಲ್‌ಸಿ ಪರೀಕ್ಷೆ ಬರೆದಿದ್ದಾಳೆ. ಮತ್ತೊಬ್ಬ ಮಗ ನವೋದಯದಲ್ಲಿ ಆರನೇ ತರಗತಿ ಓದುತ್ತಿದ್ದಾನೆ.  ‘ರಾಜ್ಯ ಸರ್ಕಾರ ರೂಪಿಸಿರುವ ಶಕ್ತಿ ಮತ್ತು ಗೃಹ ಲಕ್ಷ್ಮಿ ಯೋಜನೆಯಿಂದ ನನೆಗೆ ಅನುಕೂಲವಾಯಿತು. ಉಚಿತ ಬಸ್‌ ಪ್ರಯಾಣದಿಂದ ಹಣ ಉಳಿಯಿತು. ಭಾಗ್ಯ ಲಕ್ಷ್ಮಿ ಯೋಜನೆ ಹಣ ಮನೆ ಖರ್ಚಿಗೆ ಮತ್ತು ನನ್ನ ಕಾಲೇಜು ಶುಲ್ಕ ಪಾವತಿಗೆ ನೆರವಾಯಿತು ಎಂದು ಹೇಳುತ್ತಾರೆ’ ಮಹಾದೇವಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT