ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಎಸ್‌ಯುಸಿಐ (ಸಿ) ಅಭ್ಯರ್ಥಿ ಸುಮಾ ಕಣಕ್ಕೆ

ಮೆರವಣಿಗೆ ಮೂಲಕ ಬಂದು ನಾಮಪತ್ರ ಸಲ್ಲಿಕೆ
Published 31 ಮಾರ್ಚ್ 2024, 5:15 IST
Last Updated 31 ಮಾರ್ಚ್ 2024, 5:15 IST
ಅಕ್ಷರ ಗಾತ್ರ

ಚಾಮರಾಜನಗರ: ಲೋಕಸಭಾ ಕ್ಷೇತ್ರದ ಸೋಷಿಯಲಿಸ್ಟ್‌ ಯುನಿಟಿ ಸೆಂಟರ್‌ ಆಫ್‌ ಇಂಡಿಯಾ(ಎಸ್‌ಯುಸಿಐಸಿ) ಪಕ್ಷದ ಅಭ್ಯರ್ಥಿಯಾಗಿ ಸುಮಾ ಶನಿವಾರ ನಾಮಪತ್ರ ಸಲ್ಲಿಸಿದರು.

ಮುಖಂಡರು ಮತ್ತು ಕಾರ್ಯಕರ್ತರೊಂದಿಗೆ ನಗರದ ಭುವನೇಶ್ವರಿ ವೃತ್ತದಿಂದ ಜಿಲ್ಲಾಧಿಕಾರಿಗಳ ಕಚೇರಿಯವರೆಗೆ ಮೆರವಣಿಗೆ ನಡೆಸಿದ ಅವರು ಜಿಲ್ಲಾ ಚುನಾವಣಾಧಿಕಾರಿ ಶಿಲ್ಪಾನಾಗ್‌ ಅವರಿಗೆ ನಾಮಪತ್ರ ಸಲ್ಲಿಸಿದರು.

ಇದಕ್ಕೂ ಮುನ್ನ ಎಸ್‌ಯುಸಿಐ (ಸಿ) ರಾಜ್ಯ ಸಮಿತಿ ಸದಸ್ಯರಾದ ಬಿ.ರವಿ ಮಾತನಾಡಿ, ‘ಯಾವುದೇ ಪಕ್ಷ ಅಧಿಕಾರಕ್ಕೆ ಬಂದರೂ ಬೆಲೆ ಏರಿಕೆ, ನಿರುದ್ಯೋಗ, ಬಡತನ ಹೆಚ್ಚಾಗುತ್ತಲೇ ಇದ್ದು, ದುಡಿಯುವ ಜನ ಸಂಕಷ್ಟದಲ್ಲಿದ್ದಾರೆ. ಶ್ರೀಮಂತರು - ಬಡವರ ನಡುವಿನ ಅಂತರ ಹೆಚ್ಚಾಗುತ್ತಲೇ ಇದೆ. ‘ಎನ್‌ಡಿಎ’ ಮತ್ತು ‘ಇಂಡಿಯಾ’ ಎರಡೂ ಬಂಡವಾಳಶಾಹಿ ಮಾಲೀಕರ ಸೇವೆಯಲ್ಲಿ ನಿರತವಾಗಿರುವ ಕೂಟಗಳಾಗಿವೆ. ಚುನಾವಣಾ ಬಾಂಡ್‌ಗಳ ಹೆಸರಿನಲ್ಲಿ ಭ್ರಷ್ಟಾಚಾರ ನಡೆಸಲಾಗಿದ್ದು, ಎಲ್ಲ ಪಕ್ಷಗಳೂ ಇದರ ಫಲಾನುಭವಿಗಳಾಗಿವೆ.ಇಂಥ ಪಕ್ಷಗಳಿಂದ ಜನತೆಯು ಏನನ್ನು ನಿರೀಕ್ಷಿಸಲು ಸಾಧ್ಯ’ ಎಂದು ಪ್ರಶ್ನಿಸಿದರು.

‘ಅವರಿಗೆ ಪರ್ಯಾಯವಾಗಿ ದುಡಿಯುವ ಜನರ ರಾಜಕೀಯವನ್ನು ಬಲಪಡಿಸಲು, ಜನ ಹೋರಾಟಗಳನ್ನು ಕಟ್ಟುತ್ತಿರುವ ನಮ್ಮ ಪಕ್ಷದಿಂದ ಸ್ಪರ್ಧಿಸುತ್ತಿದ್ದೇವೆ. ಇದನ್ನು ಮನಗಂಡು ನಮ್ಮ ಅಭ್ಯರ್ಥಿಯನ್ನು ಮತದಾರರು ಚುನಾಯಿಸಬೇಕು’ ಎಂದು ಮನವಿ ಮಾಡಿದರು.

ಅಭ್ಯರ್ಥಿ ಸುಮಾ ಮಾತನಾಡಿ, ‘ಇಂದಿನ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರವು ಜಾತಿ ಧರ್ಮದ ಹೆಸರಿನಲ್ಲಿ ಜನರ ಒಗ್ಗಟ್ಟನ್ನು ಮುರಿಯುತ್ತಿದೆ. ದಿನೇ ದಿನೇ ಆರೋಗ್ಯಕ್ಷೇತ್ರದ ಖಾಸಗೀಕರಣ, ಶಿಕ್ಷಣದ ವ್ಯಾಪಾರೀಕರಣ, ರೈತ ಕಾರ್ಮಿಕ ವಿರೋಧಿ ನೀತಿಗಳನ್ನು ಜಾರಿ ಮಾಡುತ್ತಲೇ ಇದೆ. ಇದರ ವಿರುದ್ಧ ನಮ್ಮ ಪಕ್ಷ ಹೋರಾಟ ಮಾಡುತ್ತಿದೆ. ಕಾಡಂಚಿನ ಪ್ರದೇಶಗಳಲ್ಲಿ ವನ್ಯಜೀವಿಗಳ ಹಾವಳಿ ಮತ್ತು ಅರಣ್ಯ ಹಕ್ಕು ಕಾಯ್ದೆ, ಭೂ ಸಂತ್ರಸ್ತರಿಗೆ ಉದ್ಯೋಗ, ಕಾರ್ಮಿಕರ ಸಮಸ್ಯೆಗಳು ಹೀಗೆ ಹಲವು ಸಮಸ್ಯೆಗಳಿದ್ದು, ಇವುಗಳ ಬಗ್ಗೆ ಧ್ವನಿ ಎತ್ತಲು ನನ್ನನ್ನು ಚುನಾಯಿಸಬೇಕು’ ಎಂದು ಮನವಿ ಮಾಡಿದರು.

ಪಕ್ಷದ ಜಿಲ್ಲಾ ಸೆಕ್ರಟೇರಿಯೇಟ್ ಸದಸ್ಯರಾದ ಚಂದ್ರಶೇಖರ ‌ಮೇಟಿ, ಜಿಲ್ಲಾ ಸಮಿತಿ ಸದಸ್ಯರಾದ ಸಂಧ್ಯಾ.ಪಿ.ಎಸ್, ಸೀಮಾ, ಹರೀಶ್, ಸದಸ್ಯರಾದ ಬಸವರಾಜು, ಸುನೀಲ್ ಸುಭಾಷ್, ಚಂದ್ರಕಲಾ, ನೀತುಶ್ರೀ, ಸೇರಿದಂತೆ ಪಕ್ಷದ ಕಾರ್ಯಕರ್ತರು ಹಾಗೂ ಬೆಂಬಲಿಗರು ಭಾಗವಹಿಸಿದ್ದರು.

ಎಸ್‌ಯುಸಿಐ(ಸಿ) ಅಭ್ಯರ್ಥಿ ಸುಮಾ ಅವರು ಪಕ್ಷದ ಮುಖಂಡರೊಂದಿಗೆ ಬಂದು ಜಿಲ್ಲಾ ಚುನಾವಣಾಧಿಕಾರಿ ಶಿಲ್ಪಾನಾಗ್‌ ಅವರಿಗೆ ನಾಮಪತ್ರ ಸಲ್ಲಿಸಿದರು. ಹೆಚ್ಚುವರಿ ಜಿಲ್ಲಾಧಿಕಾರಿ ಗೀತಾ ಹುಡೇದ ಇದ್ದಾರೆ
ಎಸ್‌ಯುಸಿಐ(ಸಿ) ಅಭ್ಯರ್ಥಿ ಸುಮಾ ಅವರು ಪಕ್ಷದ ಮುಖಂಡರೊಂದಿಗೆ ಬಂದು ಜಿಲ್ಲಾ ಚುನಾವಣಾಧಿಕಾರಿ ಶಿಲ್ಪಾನಾಗ್‌ ಅವರಿಗೆ ನಾಮಪತ್ರ ಸಲ್ಲಿಸಿದರು. ಹೆಚ್ಚುವರಿ ಜಿಲ್ಲಾಧಿಕಾರಿ ಗೀತಾ ಹುಡೇದ ಇದ್ದಾರೆ

₹ 4.02 ಲಕ್ಷ ಮೌಲ್ಯದ ಚರಾಸ್ತಿ

ಎಂ.ಎ ಓದಿರುವ ಸುಮಾ ಅವರು ಸ್ಥಿರಾಸ್ತಿ ಹೊಂದಿಲ್ಲ. ₹4.02 ಲಕ್ಷ ಮೌಲ್ಯದ ಚರಾಸ್ತಿ ಹೊಂದಿದ್ದಾರೆ. ನಾಮಪತ್ರ ಸಲ್ಲಿಸುವ ಸಂದರ್ಭದಲ್ಲಿ ಚುನಾವಣಾ ಆಯೋಗಕ್ಕೆ ಸಲ್ಲಿಸಿರುವ ಪ್ರಮಾಣ ಪತ್ರದಲ್ಲಿ ಅವರು ತಮ್ಮ ಆದಾಯ ಆಸ್ತಿ ವಿವರಗಳನ್ನು ಸಲ್ಲಿಸಿದ್ದಾರೆ. ಮೂರು ಬ್ಯಾಂಕ್‌ ಖಾತೆಗಳನ್ನುಹೊಂದಿದ್ದು ಅದರಲ್ಲಿ ಕ್ರಮವಾಗಿ ₹28537 ₹35976 ಮತ್ತು ₹1000 ಇಟ್ಟಿದ್ದಾರೆ. ಕೈಯಲ್ಲಿ ₹15 ಸಾವಿರ ನಗದು ಇದೆ ಎಂದು ಹೇಳಿಕೊಂಡಿದ್ದಾರೆ.  ಅಂಚೆ ಉಳಿತಾಯ ಬ್ಯಾಂಕ್‌ನಲ್ಲಿ ಕ್ರಮವಾಗಿ ₹110200 ಮತ್ತು ₹104212 ಮೊತ್ತದ ಎನ್‌ಎಸ್‌ಸಿ ಜಂಟಿ ಬಾಂಡ್‌ ಹೊಂದಿದ್ದಾರೆ. ತಲಾ ಒಂದೊಂದು ಸರ  ಓಲೆ ಮತ್ತು ಉಂಗುರ ಸೇರಿದಂತೆ 17.5 ಗ್ರಾಂ ತೂಕದ ಚಿನ್ನಾಭರಣವನ್ನು ಸುಮಾ ಹೊಂದಿದ್ದಾರೆ. ಅವುಗಳ ಒಟ್ಟು ಮೌಲ್ಯ₹1.08 ಲಕ್ಷ.    ಒಟ್ಟಾರೆಯಾಗಿ ತಮ್ಮ ಬಳಿ ₹402925 ಮೌಲ್ಯದ ಚರಾಸ್ತಿ ಇದೆ ಎಂದು ಮಾಹಿತಿ ನೀಡಿದ್ದಾರೆ. ಅವರ ಪತಿ ಹರೀಶ್‌ ಬಳಿ ಎರಡು ದ್ವಿಚಕ್ರವಾಹನ ಸೇರಿದಂತೆ ₹79375 ಮೌಲ್ಯದ ಚರಾಸ್ತಿ ಇದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT