ಬುಧವಾರ, 19 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂತೇಮರಹಳ್ಳಿ: ಕತ್ತಿ ವರಸೆಯಲ್ಲಿ ಮನೋಜ್ ಛಾಪು

ಸಂತೇಮರಹಳ್ಳಿ ಕತ್ತಿವರಸೆ ವಸತಿ ಶಾಲೆಯಲ್ಲಿ ತರಬೇತಿ, ರಾಷ್ಟ್ರ ಮಟ್ಟದ ಸಾಧನೆಯತ್ತ ಚಿತ್ತ
Published 18 ಮೇ 2024, 5:31 IST
Last Updated 18 ಮೇ 2024, 5:31 IST
ಅಕ್ಷರ ಗಾತ್ರ

ಸಂತೇಮರಹಳ್ಳಿ: ಹೋಬಳಿ ಕೇಂದ್ರದಲ್ಲಿರುವ ಕತ್ತಿ ವರಸೆ ವಸತಿ ಶಾಲೆಯು ಹಲವು ಕತ್ತಿವರಸೆ ಪಟುಗಳನ್ನು ತಯಾರು ಮಾಡುತ್ತಿದೆ. ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲಿ ಇಲ್ಲಿನ ವಿದ್ಯಾರ್ಥಿಗಳು ಹೆಸರು ಮಾಡುತ್ತಿದ್ದಾರೆ.

ಅಂತರರಾಜ್ಯ ವಿಶ್ವ ವಿದ್ಯಾಲಯ ಕತ್ತಿ ವರಸೆಯಲ್ಲಿ ಸತತ ಮೂರು ವರ್ಷಗಳಿಂದ ಉತ್ತಮ ಸಾಧನೆ ಮಾಡುತ್ತಿರುವ ಮನೋಜ್ ಈಗ ರಾಷ್ಟ್ರಮಟ್ಟದಲ್ಲಿ ಸಾಧನೆ ಮಾಡಲು ದೃಷ್ಟಿ ನೆಟ್ಟಿದ್ದಾರೆ.

ಕುದೇರು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ದ್ವಿತೀಯ ಪದವಿ ವ್ಯಾಸಂಗ ಮಾಡುತ್ತಿರುವ ಮನೋಜ್, ಕತ್ತಿ ವರಸೆ ವಸತಿ ಶಾಲೆಯಲ್ಲಿ ತರಬೇತಿ ಪಡೆಯುತ್ತಿದ್ದಾರೆ.

ಮೈಸೂರು ವಿಶ್ವ ವಿದ್ಯಾಲಯವನ್ನು ಪ್ರತಿನಿಧಿಸಿ ದೇಶದ ವಿವಿಧ ರಾಜ್ಯಗಳಲ್ಲಿ ನಡೆದ ಕತ್ತಿ ವರಸೆ ಸ್ಪರ್ಧೆಯಲ್ಲಿ ಬಹುಮಾನಗಳನ್ನು ಗಳಿಸಿಕೊಂಡಿದ್ದಾರೆ. ಅಖಿಲ ಭಾರತ ಅಂತರ ವಿಶ್ವವಿದ್ಯಾಲಯ ಸ್ಪರ್ಧೆಯಲ್ಲಿ ಬೆಳ್ಳಿ ಪದಕಕ್ಕೂ ಅವರು ಕೊರಳೊಡ್ಡಿದ್ದಾರೆ.

ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ನಡೆದ ಸ್ಪರ್ಧೆ 2017ರಿಂದ 2023ರವರೆಗೆ ಸತತವಾಗಿ ಬೆಳ್ಳಿ ಮತ್ತು ಚಿನ್ನದ ಪದಕಗಳನ್ನು ಮನೋಜ್ ಗಳಿಸಿಕೊಂಡಿದ್ದಾರೆ. ಗುಜರಾತಿನ ಅಹಮದಾಬಾದ್‌ನ ವಿಜಯ್ ಭಾರತ್ ಅಕಾಡೆಮಿಯಲ್ಲಿ ಹೆಚ್ಚಿನ ತರಬೇತಿ ಪಡೆದು ಖೇಲೋ ಇಂಡಿಯಾ ಸ್ಪರ್ಧೆಯಲ್ಲಿ ಭಾಗವಹಿಸಿ ಬಹುಮಾನ ಪಡೆದಿದ್ದಾರೆ.

ಇದೀಗ ಗುಜರಾತ್‌ನ ಔರಾಂಗಬಾದ್‌ನಲ್ಲಿರುವ ಭಾರತೀಯ ಕ್ರೀಡಾ ಪ್ರಾಧಿಕಾರದಲ್ಲಿ (ಸಾಯಿ) ಕತ್ತಿವರಸೆಯ ವಿಶೇಷ ಶಿಬಿರದಲ್ಲಿ ಭಾಗಿಯಾಗಿ ತರಬೇತಿ ಪಡೆಯುತ್ತಿದ್ದಾರೆ.

ಬಾಲಕನಿದ್ದಾಗಲೇ ಸಾಧನೆ: ಮನೋಜ್ ಅವರು ಶಾಲಾ ಹಂತದಲ್ಲೇ ಕತ್ತಿ ವರಸೆಯಲ್ಲಿ ಪಳಗಿದ್ದರು.

ಪ್ರೌಢಶಾಲೆಯಲ್ಲಿ ವ್ಯಾಸಂಗ ಮಾಡುವಾಗಲೇ ವಿವಿಧ ರಾಜ್ಯಗಳಲ್ಲಿ ನಡೆದ ಕತ್ತಿವರಸೆ ಪಂದ್ಯಾವಳಿಗಳಲ್ಲಿ ಭಾಗವಹಿಸಿ ತಮ್ಮ ವರಸೆ ತೋರಿಸಿದ್ದರು.

ಈಗಾಗಲೇ ರಾಷ್ಟ್ರಮಟ್ಟದಲ್ಲಿ ನಡೆದಿರುವ ಅಖಿಲ ಭಾರತ ವಿಶ್ವ ವಿದ್ಯಾಲಯದಲ್ಲಿ ಸತತ 5 ವರ್ಷಗಳಲ್ಲಿ ಭಾಗವಹಿಸಿ ಕಂಚು, ಬೆಳ್ಳಿ ಹಾಗೂ ಚಿನ್ನದ ಪದಕ ಗಳಿಸಿದ್ದಾರೆ.

ಕಳೆದ ಸಾಲಿನಲ್ಲಿ ನಡೆದ ಮೈಸೂರು ದಸರಾ ಕ್ರೀಡಾಕೂಟದಲ್ಲೂ ಭಾಗವಹಿಸಿ ಪ್ರಶಸ್ತಿ ಪಡೆದಿದ್ದಾರೆ.

ಪ್ರಥಮ ಪದವಿ ವ್ಯಾಸಂಗ ಮಾಡುವಾಗ ಪಂಜಾಬ್‌ನ ಅಮೃತಸರದಲ್ಲಿ ನಡೆದ ರಾಷ್ಟ್ರೀಯ ಚಾಂಪಿಯನ್‌ ಷಿಪ್‌ನಲ್ಲಿ ಬೆಳ್ಳಿ ಪದಕ ಹಾಗೂ ಜಮ್ಮು ಮತ್ತು ಕಾಶ್ಮೀರದಲ್ಲಿ ನಡೆದ ರಾಷ್ಟ್ರೀಯ ಚಾಂಪಿಯನ್‌ ಷಿಪ್‌ನಲ್ಲಿಯೂ ಬೆಳ್ಳಿ ಪದಕ ಸಂಪಾದಿಸಿದ್ದಾರೆ.

‘ತರಬೇತಿಯಲ್ಲಿ ಹೆಚ್ಚು ಆಸಕ್ತಿಯಿಂದ ಕಲಿಯುವ ಮನೋಜ್‌ಗೆ ಮುಂದಿನ ದಿನಗಳಲ್ಲಿ ಕತ್ತಿ ವರಸೆ ಸ್ಪರ್ಧೆಯಲ್ಲಿ ಸಾಧನೆ ಮಾಡುವ ಹುಮ್ಮಸ್ಸು ಇದೆ. ನಾವು ನೀಡುವ ತರಬೇತಿ ಮಾತ್ರವಲ್ಲದೆ, ಅವರೇ ಸ್ವತಃ ಹೆಚ್ಚು ಶ್ರಮ ಹಾಕುತ್ತಾರೆ. ರಾಷ್ಟ್ರಮಟ್ಟದಲ್ಲಿ ಪ್ರಶಸ್ತಿ ಪಡೆದುಕೊಳ್ಳಲು ಇನ್ನು ಹೆಚ್ಚಿನ ರೀತಿಯಲ್ಲಿ ತರಬೇತಿ ನೀಡಲಾಗುವುದು’ ಎಂದು ತರಬೇತುದಾರ ಲೋಹಿತ್ ‘ಪ್ರಜಾವಾಣಿ’ ಗೆ ತಿಳಿಸಿದರು.

ಏಷ್ಯನ್ ಗೇಮ್ಸ್‌ನಲ್ಲಿ ಭಾಗವಹಿಸುವ ಆಸೆ

‘2024ರ ನವೆಂಬರ್ ಹಾಗೂ ಡಿಸೆಂಬರ್ ತಿಂಗಳಿನಲ್ಲಿ ನಡೆಯುವ ರಾಷ್ಟ್ರಮಟ್ಟದ ಕತ್ತಿ ವರಸೆ ಚಾಂಪಿಯನ್‌ಷಿಪ್‌ಗೆ ಮೈಸೂರು ವಿವಿಯನ್ನು ಪ್ರತಿನಿಧಿಸುವುದಕ್ಕಾಗಿ ಹೆಚ್ಚಿನ ತರಬೇತಿ ಪಡೆದುಕೊಳ್ಳುತ್ತಿದ್ದೇನೆ’ ಎಂದು ಮನೋಜ್ ಹೇಳಿದರು.

‘ರಾಜ್ಯ ಹಾಗೂ ರಾಷ್ಟ್ರಮಟ್ಟದಲ್ಲಿ ನಡೆಯುವ ಕತ್ತಿ ವರಸೆ ಸ್ಪರ್ಧೆಗಳಲ್ಲಿ ಭಾಗವಹಿಸುವುದರ ಜತೆಗೆ ನಮ್ಮ ತರಬೇತುದಾರರಿಂದ ಉತ್ತಮ ತರಬೇತಿ ಪಡೆಯುತ್ತಿದ್ದೇನೆ. ಅಲ್ಲದೇ ವೈಯಕ್ತಿಕವಾಗಿ ಹೆಚ್ಚು ಶ್ರಮ ಹಾಕಿ ತರಬೇತಿ ಪಡೆದುಕೊಳ್ಳುತ್ತಿದ್ದೇನೆ. ಏಷ್ಯನ್ ಗೇಮ್ಸ್‌ನಲ್ಲಿ ಭಾಗವಹಿಸುವ ಆಸಕ್ತಿ ಇದೆ’ ಎಂದು ಅವರು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT