ಭಾನುವಾರ, 25 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜ.23ರಿಂದ ಮಹದೇಶ್ವರ ಬೆಟ್ಟದಿಂದ ಜಿಲ್ಲಾ ಕೇಂದ್ರಕ್ಕೆ ಪಾದಯಾತ್ರೆ: ರೈತ ಸಂಘ

Published 11 ಜನವರಿ 2024, 17:01 IST
Last Updated 11 ಜನವರಿ 2024, 17:01 IST
ಅಕ್ಷರ ಗಾತ್ರ

ಚಾಮರಾಜನಗರ: ಜಿಲ್ಲೆಯ ರೈತರು, ಕಾಡಂಚಿನ ಗ್ರಾಮಗಳ ಜನರು ಎದುರಿಸುತ್ತಿರುವ ಸಮಸ್ಯೆಗಳನ್ನು ಬಗೆಹರಿಸುವಂತೆ ಆಗ್ರಹಿಸಿ ಸಾಮೂಹಿಕ ನಾಯಕತ್ವದಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆಯು ಇದೇ 23ರಿಂದ ಮೂರು ದಿನಗಳ ಕಾಲ ಮಹದೇಶ್ವರ ಬೆಟ್ಟದಿಂದ ಜಿಲ್ಲಾ ಕೇಂದ್ರದವರೆಗೆ ಪಾದಯಾತ್ರೆ ನಡೆಸಲಿದೆ. 

ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಂಘದ ಮುಖಂಡ ಹೊನ್ನೂರು ಪ್ರಕಾಶ್‌, 23ಕ್ಕೆ ಬೆಳಿಗ್ಗೆ 8 ಗಂಟೆಗೆ ಮಲೆಮಹದೇಶ್ವರ ಸ್ವಾಮಿ ದೇವಾಲಯದ ಮುಂಭಾಗದಿಂದ ಪಾದಯಾತ್ರೆ ಆರಂಭಿಸಲಾಗುವುದು. 26ರಂದು ಜಿಲ್ಲಾ ಕೇಂದ್ರದಲ್ಲಿ ನಡೆಯಲಿರುವ ನಡೆಯಲಿರುವ ಗಣರಾಜ್ಯೋತ್ಸವ ಸಮಾರಂಭದ ವೇಳೆಗೆ ಚಾಮರಾಜನಗರಕ್ಕೆ ತಲುಪಲಿದ್ದೇವೆ’ ಎಂದರು.

‘ಸಾಲೂರು ಮಠದ ಶಾಂತ ಮಲ್ಲಿಕಾರ್ಜುನ ಸ್ವಾಮಿ ಅವರು ಪಾದಯಾತ್ರೆಗೆ ಚಾಲನೆ ನೀಡುವರು. ಮುಖ್ಯ ಅತಿಥಿಗಳಾಗಿ ನೈಸರ್ಗಿಕ ಕೃಷಿ ತಜ್ಞ ಮಂಜುನಾಥ್‌ ಭಾಗವಹಿಸಲಿದ್ದಾರೆ.  ನಮ್ಮ ಸಂಘಟನೆ ಮುಖಂಡರಾದ ಕೆ.ಟಿ.ಗಂಗಾಧರ್‌, ಚುಕ್ಕಿ ನಂಜುಂಡಸ್ವಾಮಿ ಸೇರಿದಂತೆ ವಿವಿಧ ಸಂಘಟನೆಗಳ ಪ್ರತಿನಿಧಿಗಳು ಪಾಲ್ಗೊಳ್ಳಲಿದ್ದಾರೆ. ಸಾವಿರಕ್ಕೂ ಹೆಚ್ಚು ಜನರು ಅಂದು ಸೇರಲಿದ್ದಾರೆ’ ಎಂದು ಹೇಳಿದರು.    

ವಿವಿಧ ಬೇಡಿಕೆಗಳು: ‘ಮಹದೇಶ್ವರ ಬೆಟ್ಟದ ವ್ಯಾಪ್ತಿಯ ಹಾಡಿ/ಗ್ರಾಮಗಳಲ್ಲಿ ವಾಸವಿರುವ ಜನರಿಗೆ ಮೂಲಸೌಕರ್ಯಗಳನ್ನು ಒದಗಿಸಬೇಕು. ಮಹದೇಶ್ವರ ಬೆಟ್ಟ ವ್ಯಾಪ್ತಿಯ ಜನರು ಬೆಳೆಯುವ ಕೃಷಿ ಉತ್ಪನ್ನಗಳನ್ನು ಸರ್ಕಾರ ಕನಿಷ್ಠ ಬೆಂಬಲ ಬೆಲೆ ನೀಡಿ ಖರೀದಿ ಮಾಡಬೇಕು. ಬೆಟ್ಟದ ವ್ಯಾಪ್ತಿಯಲ್ಲಿ ಬೆಳೆಯುವ ವಿಶಿಷ್ಠ ದೊಡ್ಡ ರಾಗಿ, ಅವರೆ, ಸಾಸಿವೆ ತಳಿಗಳೀಗೆ ಜಿ– ಟ್ಯಾಗ್‌ ಮಾಡಬೇಕು. ಬರದಿಂದ ಬಾಧಿತರಾಗಿರುವ ರೈತರಿಗೆ ತುರ್ತಾಗಿ ₹25 ಸಾವಿರ ‍ಪರಿಹಾರ ನೀಡಬೇಕು’ ಎಂದು ಪ್ರಕಾಶ್‌ ಆಗ್ರಹಿಸಿದರು. 

‘ಸಾವಯವ/ಸಹಜ ವಿಧಾನದಲ್ಲಿ ಬೆಳೆದ ಬೆಳೆಗಳ ಖರೀದಿ ಮಾಡುವಾಗ ಘೋಷಿತ ಎಂಎಸ್‌ಪಿಗಿಂತ ಶೇ 30 ಹೆಚ್ಚುವರಿ ಬೆಲೆ ಕೊಟ್ಟು ಖರೀದಿ ಮಾಡಬೇಕು. ಜಿಲ್ಲೆಯಾದ್ಯಂತ ಅಕ್ರಮವಾಗಿ ನಡೆಯುತ್ತಿರುವ ಕಲ್ಲು ಗಣಿಗಾರಿಕೆಗಳನ್ನು ತಕ್ಷಣವೇ ನಿಲ್ಲಿಸಬೇಕು.ಮಹದೇಶ್ವರ ಬೆಟ್ಟದ ವ್ಯಾಪ್ತಿಯ ಬೆಟ್ಟದ ಗುಡ್ಡದಿಂದ ಕಣಿವೆಯ ತನಕ ವ್ಯಾಪಿಸುವ ಪ್ರದೇಶಕ್ಕೆ ನೀರಾವರಿ ಯೋಜನೆ ರೂಪಿಸಬೇಕು. ಎಲ್ಲ ಕೆರೆಗಳನ್ನು ತುಂಬಿಸಬೇಕು. ನರೇಗಾ ಯೋಜನೆಯಲ್ಲಿ ವಾರ್ಷಿಕ ಕೆಲಸದ ದಿನಗಳನ್ನು 100ರಿಂದ 200ಕ್ಕೆ ಏರಿಸಬೇಕು. ಬಸ್‌ ಸೌಕರ್ಯಗಳಿಲ್ಲದ ಗ್ರಾಮಗಳಿಗೆ ಕೆಎಸ್‌ಆರ್‌ಟಿಸಿ ಸಾರಿಗೆ ವ್ಯವಸ್ಥೆ ಕಲ್ಪಿಸಬೇಕು. ಚಂಗಡಿ ಗ್ರಾಮ ಪುನರ್ವಸತಿ ಯೋಜನೆ ಅನುಷ್ಠಾನಗೊಳಿಸಬೇಕು’ ಎಂದು ಅವರು ಒತ್ತಾಯಿಸಿದರು.

‘ಇವು ನಮ್ಮ ಪ್ರಮುಖ ಬೇಡಿಕೆಗಳು. ಇವುಗಳನ್ನೆಲ್ಲ ಈಡೇರಿಸಬೇಕು ಎಂದು ಪಾದಯಾತ್ರೆ ಮೂಲಕ ಜಿಲ್ಲಾ ಕೇಂದ್ರಕ್ಕೆ ಬಂದು ಸಚಿವರು, ಸರ್ಕಾರ, ಜಿಲ್ಲಾಡಳಿತವನ್ನು ಒತ್ತಾಯಿಸಲಾಗುವುದು’ ಎಂದು ಪ್ರಕಾಶ್‌ ಹೇಳಿದರು.  

ರೈತ ಸಂಘದ ಮುಖಂಡರಾದ ಚಂಗಡಿ ಕರಿಯಪ್ಪ, ನಟರಾಜು, ಬೆಳ್ಳಶೆಟ್ಟಿ, ಚೆನ್ನಮಲ್ಲಪ್ಪ, ಅಂಬಳೆ ಶಿವಕುಮಾರ್, ಮಣಿಕಂಠ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT