ಸೋಮವಾರ, 26 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಸವಣ್ಣನವರ ಚಿಂತನೆ ಪ್ರಚಾರ ಮಾಡಿ;ಸರ್ಕಾರಕ್ಕೆ ಮನವಿ

ಕರ್ನಾಟಕದ ಸಾಂಸ್ಕೃತಿಕ ನಾಯಕನೆಂದು ಘೋಷಿಸಿರುವ ಸಿಎಂಗೆ ಅಭಿನಂದನೆ
Published 26 ಜನವರಿ 2024, 6:30 IST
Last Updated 26 ಜನವರಿ 2024, 6:30 IST
ಅಕ್ಷರ ಗಾತ್ರ

ಚಾಮರಾಜನಗರ: ಸಮಾನತೆಯ ಹರಿಕಾರ, ವಿಶ್ವಗುರು ಬಸವಣ್ಣ ಅವರನ್ನು ಕರ್ನಾಟಕದ ಸಾಂಸ್ಕೃತಿಕ ನಾಯಕನೆಂದು ಘೋಷಿಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಜಿಲ್ಲಾ ಘಟಕ ಅಭಿನಂದಿಸಿದೆ. 

ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮಹಾಸಭಾದ ಜಿಲ್ಲಾ ಘಟಕದ  ಗೌರವ ಅಧ್ಯಕ್ಷ, ಹರೆ ವಿರಕ್ತ ಮಠದ ಸರ್ಪಭೂಷಣಸ್ವಾಮೀಜಿ, ‘ವೀರಶೈವ ಲಿಂಗಾಯತ ಸಮಾಜದ ಬಹುದಿನಗಳ ಬೇಡಿಕೆಯಾಗಿದ್ದ ಬಸವಣ್ಣನವರನ್ನು ಕರ್ನಾಟಕದ ಸಾಂಸ್ಕೃತಿಕ ನಾಯಕ ಎಂದು ಘೋಷಣೆ ಮಾಡಿರುವುದು ಸಂತಸ ಸಂಗತಿ. ಸಮಾಜದ ಮಠಾಧೀಶರು, ಬಸವ ಭಕ್ತರ ಮನವಿಗೆ ಸ್ಪಂದಿಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಈ ಘೋಷಣೆ ಮಾಡುವ ಮೂಲಕ ಬಸವಣ್ಣ ಅನುಯಾಯಿಗಳಿಗೆ ಗೌರವ ತಂದು ಕೊಟ್ಟಿದ್ದಾರೆ’ ಎಂದರು.

‘ವಿಶ್ವಗುರು ಬಸವಣ್ಣನವರ ವಿಚಾರಗಳನ್ನು ಪ್ರಚಾರ ಮಾಡುವುದಕ್ಕೆ ಸರ್ಕಾರ ಮುಂದಾಗಬೇಕು. ಅವರ ಸಾಮಾಜಿಕ ಕಳಕಳಿ, ಸಾಂಸ್ಕೃತಿಕ ಚಿಂತನೆಗಳು, ಶರಣ ಧರ್ಮ ತತ್ವ ಸಿದ್ದಾಂತಗಳನ್ನು ಎಲ್ಲರಿಗೂ ಮುಟ್ಟಿಸುವ ಕೆಲಸವನ್ನು ರಾಜ್ಯ ಸರ್ಕಾರ ಮಾಡಬೇಕು. ಅದಕ್ಕೆ ಬೇಕಾಗಿರುವ ಸೌಲಭ್ಯಗಳನ್ನು ಬಿಡುಗಡೆ ಮಾಡಬೇಕು. ಇದಕ್ಕೆ ಒಂದು ತಜ್ಞರ ಸಮಿತಿ ರಚಿಸಬೇಕು’ ಎಂದು ಒತ್ತಾಯಿಸಿದರು. 

‘ಬಸವಣ್ಣನವರ ಕುರುಹುಗಳು ಮತ್ತು ಅವರ ಕಾರ್ಯಕ್ಷೇತ್ರಗಳು, ರಚಿಸಿದ ವಚನ ಸಾಹಿತ್ಯ ಭಂಡಾರ, ಅನುಭವ ಮಂಟಪದ ಪರಿಕಲ್ಪನೆ ಇತ್ಯಾದಿಗಳನ್ನು ಕನ್ನಡಿಗರಲ್ಲಿ ಅರಿವು ಮೂಡಿಸುವ ದಿಸೆಯಲ್ಲಿ ನಿರಂತರವಾದ ಪ್ರಯತ್ನವಾಗಬೇಕು’ ಎಂದರು.

ಪ್ರತಿಭಾ ಪುರಸ್ಕಾರ: ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದಿಂದ ಶನಿವಾರ (ಜ.27) ಶಿವರಾತ್ರಿ ರಾಜೇಂದ್ರ ಶ್ರೀಗಳ ಜಯಂತ್ಯುತ್ಸವ, ಹಾನಗಲ್ ಶಿವಕುಮಾರಸ್ವಾಮೀಜಿಗಳ ಜಯಂತ್ಯುತ್ಸವ  ಹಾಗೂ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು ಆಯೋಜನೆ ಮಾಡಲಾಗಿದೆ’ ಎಂದು ಮಹಾಸಭಾದ ಉಪಾಧ್ಯಕ್ಷ ಜಿ.ಎಂ. ಪ್ರಭುಸ್ವಾಮಿ ತಿಳಿಸಿದರು.

ನಗರದ ಅನುಭವ ಮಂಟಪದಲ್ಲಿ ಸಂಜೆ 3 ಗಂಟೆಗೆ ನಡೆಯುವ ಕಾರ್ಯಕ್ರಮವ ಸಾನ್ನಿಧ್ಯವನ್ನು ಹರವೆ ಮಠಾಧ್ಯಕ್ಷರಾದ ಸರ್ಪಭೂಷಣಸ್ವಾಮೀಜಿ ವಹಿಸಲಿದ್ದು, ಗುಂಡ್ಲುಪೇಟೆ ಶಾಸಕ ಎಚ್.ಎಂ. ಗಣೇಶ್ ಪ್ರಸಾದ್ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ.

ನಗರ ಮಠದ ಚನ್ನಬಸವಸ್ವಾಮೀಜಿ, ಸೋಮಹಳ್ಳಿ ಮಠದ ಸಿದ್ದಮಲ್ಲಪ್ಪಸ್ವಾಮೀಜಿ, ಸಾಲೂರು ಮಠದ ಶಾಂತಮಲ್ಲಿಕಾರ್ಜುನಸ್ವಾಮೀಜಿ, ಆಲಹಳ್ಳಿ ಮಠದ ಶಿವಕುಮಾರಸ್ವಾಮೀಜಿ, ಗೌಡಹಳ್ಳಿ ಮಠದ ಮರಿತೋರ್ಟಂದಾಯಸ್ವಾಮೀಜಿ, ಮರಿಯಾಲ ಮಠದ ಇಮ್ಮಡಿ ಮುರುಘರಾಜೇಂದ್ರ ಸ್ವಾಮೀಜಿ ಭಾಗವಹಿಸಲಿದ್ದಾರೆ.

ಶೇ. 90ಕ್ಕಿಂತ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕೆಂದು ಪ್ರಭುಸ್ವಾಮಿ ಮನವಿ ಮಾಡಿದರು.

ಮಹಾಸಭಾದ ಜಿಲ್ಲಾಧ್ಯಕ್ಷ ಮೂಡ್ಲುಪುರ ನಂದೀಶ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಡಿ.ನಾಗೇಂದ್ರ, ಖಜಾಂಚಿ ಬಸವರಾಜು ಎಂ.ಎನ್( ಕಂಠಿ), ನಿರ್ದೇಶಕ ಎನ್.ಆರ್. ಪುರುಷೋತ್ತಮ್ ಇದ್ದರು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT