ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗುಂಡ್ಲುಪೇಟೆ | ಹೆದ್ದಾರಿ ಬದಿಗಳಲ್ಲಿ ಲೋಡುಗಟ್ಟಲೆ ಕಟ್ಟಡದ ಅವಶೇಷ, ತ್ಯಾಜ್ಯ ರಾಶಿ

Published 2 ಮಾರ್ಚ್ 2024, 6:38 IST
Last Updated 2 ಮಾರ್ಚ್ 2024, 6:38 IST
ಅಕ್ಷರ ಗಾತ್ರ

ಗುಂಡ್ಲುಪೇಟೆ: ಪಟ್ಟಣಕ್ಕೆ ಸಂಪರ್ಕ ಕಲ್ಪಿಸುವ ಎರಡು ರಾಷ್ಟ್ರೀಯ ಹೆದ್ದಾರಿ (67 ಮತ್ತು 766) ಬದಿಗಳಲ್ಲಿ ಕಟ್ಟಡದ ತ್ಯಾಜ್ಯಗಳನ್ನು ಸುರಿಯಲಾಗುತ್ತಿದ್ದು, ಪಟ್ಟಣಕ್ಕೆ ಬರುವವರಿಗೆ ತ್ಯಾಜ್ಯದ ರಾಶಿಗಳು ಸ್ವಾಗ‌ತ ಕೋರುತ್ತಿವೆ.

ಪಟ್ಟಣದವರು ಸೇರಿದಂತೆ ಸುತ್ತಲಿನವರು ಮನೆ, ಮಳಿಗೆ ಇತ್ಯಾದಿ ಕಟ್ಟಡ ನಿರ್ಮಾಣ ಮಾಡುವ ಸಂದರ್ಭದಲ್ಲಿ ಅಥವಾ ಹಳೆಯ ಮನೆಯನ್ನು ಕೆಡವಿದಾಗ ಸಿಗುವ ತ್ಯಾಜ್ಯವನ್ನು ಸಮರ್ಪಕವಾಗಿ ವಿಲೇವಾರಿ ಮಾಡದೆ ಹೆದ್ದಾರಿ ಬದಿಯಲ್ಲಿ ಸುರಿಯುತ್ತಿದ್ದಾರೆ. ಇದರಿಂದಾಗಿ ಪಟ್ಟಣದ ಸೌಂದರ್ಯ ಮತ್ತು ಪರಿಸರ ಹಾಳಾಗುತ್ತಿದೆ ಎಂಬುದು ಪರಿಸರ ಪ್ರೇಮಿಗಳ ಆರೋಪ.

ಪಟ್ಟಣದಿಂದ ಚಾಮರಾಜನಗರದ ಕಡೆಗೆ ಹೋಗುವ ರಸ್ತೆಯಲ್ಲಿ ಗುಂಡ್ಲುಪೇಟೆಯ ಹಳೆ ಸುಂಕದ ಗೇಟ್‌ನಿಂದ (ಹುತಾತ್ಮ ಶಿವಾನಂದ ಸ್ಮಾರಕದ ಮುಂದೆ) ಪ್ರಾರಂಭವಾಗಿ ಸರ್ಕಾರಿ ಆದರ್ಶ ವಿದ್ಯಾಲಯದವರೆಗೂ ರಸ್ತೆಯ ಎರಡೂ ಬದಿಗಳಲ್ಲಿ ಕಟ್ಟಡದ ತ್ಯಾಜ್ಯ ಹಾಗೂ ಇನ್ನಿತರ ತ್ಯಾಜ್ಯಗಳನ್ನು ಟ್ರ್ಯಾಕ್ಟರ್, ಟ್ರಕ್‌ಗಳಲ್ಲಿ ತಂದು ವಿಲೇವಾರಿ ಮಾಡಲಾಗುತ್ತಿದೆ. ಈ ಬಗ್ಗೆ ಸ್ಥಳೀಯ ಪುರಸಭೆಯಾಗಲಿ, ಸಂಬಂಧಿಸಿದ ಗ್ರಾಮ ಪಂಚಾಯತಿ ಅಧಿಕಾರಿಗಳಾಗಲಿ ಗಮನ ಹರಿಸುತ್ತಿಲ್ಲ.  

‘ಕಲ್ಯಾಣಿ ಕೊಳದ ಶ್ರೀಆಂಜನೇಯ ಸ್ವಾಮಿ ದೇವಾಸ್ಥಾನದ ಬಳಿ ಇರುವ ವಿಜಯನಗರ ಸಾಮ್ರಾಜ್ಯದ ಕಾಲದ ದೇವಸ್ಥಾನದ ಬಳಿಯು ಇಂತಹದ್ದೆ ಸಮಸ್ಯೆ ಇದೆ. ನಮ್ಮ ಗುಂಡ್ಲು ನದಿಯ ಸೇತುವೆಗಳಿರುವ, ವಿಜಯ ಅಮಾನಿಕೆರೆ ಹಾಗೂ ಚಿಕ್ಕಕೆರೆಗಳಿಂದ ಹಾದು ಇಂಗಾಲವಾಡಿ-ವೀರನಪುರ ಗ್ರಾಮದ ನಲ್ಲೂರು ಅಮಾನಿಕೆರೆಗೆ ಸಂಪರ್ಕ ಕಲ್ಪಿಸುವ ಹಳ್ಳವು ಈ ತ್ಯಾಜ್ಯಗಳಿಂದ ತುಂಬಿದೆ. ತ್ಯಾಜ್ಯ ಸುರಿಯುತ್ತಿರುವವರಿಗೆ ಅರಿವು ಇಲ್ಲದಿರಬಹುದು ನಾಚಿಗೇಡಿನ ಸಂಗತಿ. ಅಧಿಕಾರಿಗಳು ಗಮನಹರಿಸಿ ತ್ಯಾಜ್ಯ ಸುರಿಯುವವರ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕು’ ಎಂದು ಪರಿಸರ ಪ್ರೇಮಿ ಶ್ರೀಕಂಠ ಆಗ್ರಹಿಸಿದರು.

‘ಇಂತಹ ಅವ್ಯವಸ್ಥೆಯನ್ನು ಖಂಡಿಸಬೇಕಾಗಿದೆ. ಇನ್ನು ಮುಂದೆ ಇದಕ್ಕೆ ಅವಕಾಶ ನೀಡುವುದಿಲ್ಲ ಎಂಬುದನ್ನು ಅಧಿಕಾರಿಗಳು ಖಾತರಿ ಪಡಿಸಬೇಕು. ಇಲ್ಲದಿದ್ದರೆ ಪಟ್ಟಣದ ಪರಿಸರ ಹಾಳಾಗುತ್ತದೆ’ ಎಂದು ಅವರು ‘ಪ್ರಜಾವಾಣಿ’ಗೆ ತಿಳಿಸಿದರು. 

ಕಸಕ್ಕೆ ಬೆಂಕಿ: ‘ಕಸದ ರಾಶಿಗೆ ಬೆಂಕಿ ಹಾಕುವ ಪ್ರವೃತ್ತಿಯೂ ಪಟ್ಟಣದಲ್ಲಿ ಹೆಚ್ಚಾಗುತ್ತಿದ್ದು, ಹೆದ್ದಾರಿ ಬದಿಗಳಲ್ಲಿ ಮಾತ್ರವಲ್ಲದೆ, ಪಟ್ಟಣದ ವಾರ್ಡ್‌ಗಳಲ್ಲೂ ತರಗೆಲೆ, ಕಾಗದದ ಚೂರುಗಳು, ಪ್ಲಾಸ್ಟಿಕ್‌ ವಸ್ತುಗಳನ್ನು ರಾಶಿ ಹಾಕಿ ಬೆಂಕಿ ಹಾಕಲಾಗುತ್ತಿದೆ. ಇದು ಪರಿಸರ ಮಾಲಿನ್ಯಕ್ಕೂ ಕಾರಣವಾಗುತ್ತಿದೆ. ಬೆಂಕಿ ಹಾಕುವುದಕ್ಕೂ ಕಡಿವಾಣ ಹಾಕಬೇಕು’ ಎಂದು ಒತ್ತಾಯಿಸುತ್ತಾರೆ ಪರಿಸರ ವಾದಿಗಳು. 

ರಸ್ತೆ ಬದಿಯಲ್ಲಿ ತ್ಯಾಜ್ಯಕ್ಕೆ ಬೆಂಕಿ ಹಾಕಿರುವುದು
ರಸ್ತೆ ಬದಿಯಲ್ಲಿ ತ್ಯಾಜ್ಯಕ್ಕೆ ಬೆಂಕಿ ಹಾಕಿರುವುದು

ಕ್ರಮಕ್ಕೆ ಸೂಚನೆ: ತಹಶೀಲ್ದಾರ್‌

ಈ ಬಗ್ಗೆ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ತಹಶೀಲ್ದಾರ್‌ ರಮೇಶ್‌ ಬಾಬು ‘ಪಟ್ಟಣದ ಹೊರ ವಲಯದ ಹೆದ್ದಾರಿಗಳ ಬದಿಯಲ್ಲಿ‌ ಪ್ಲಾಸ್ಟಿಕ್ ಗ್ಲಾಸ್‌ ಪ್ಲೇಟುಗಳು ಮದ್ಯದ ಪೌಚ್‌ಗಳು ಫಾಸ್ಟ್ ಪುಡ್ ತ್ಯಾಜ್ಯಗಳನ್ನು ಸುರಿಯುತ್ತಿದ್ದಾರೆ. ಪುರಸಭೆ ಅಧಿಕಾರಿಗಳಿಗೆ ತಿಳಿಸಿ ತೆರವುಗೊಳಿಸಲು ಕ್ರಮ ವಹಿಸಲಾಗುವುದು. ಕಸ ಸುರಿದವರ ವಿರುದ್ಧ ಕ್ರಮ ಕೈಗೊಳ್ಳಲು ಸೂಚನೆ ನೀಡುತ್ತೇನೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT