ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಜಲ, ಮಣ್ಣಿನ ಸಂರಕ್ಷಣಗೆ ಒತ್ತು ನೀಡಿ: ಕೃಷಿ ವಿಜ್ಞಾನಿ ಲೋಗಾನಂದನ್‌

ನೈಸರ್ಗಿಕ ಸಂಪನ್ಮೂಲಗಳ ಸಂರಕ್ಷಣೆ ಮತ್ತು ನಿರ್ವಹಣೆ ಕುರಿತು ಕಾರ್ಯಾಗಾರ
Published 23 ಜನವರಿ 2024, 5:37 IST
Last Updated 23 ಜನವರಿ 2024, 5:37 IST
ಅಕ್ಷರ ಗಾತ್ರ

ಚಾಮರಾಜನಗರ: ‘ಹವಾಮಾನ ಬದಲಾವಣೆಗೆ ತಕ್ಕಂತೆ ರೈತರು ಕೂಡ ನೀರು, ಮಣ್ಣಿನ ಫಲವತ್ತತೆಯನ್ನು ಸಂರಕ್ಷಣೆಗೆ ಒತ್ತು ನೀಡುತ್ತ ಕೃಷಿ ನಡೆಸಬೇಕು’ ಎಂದು ತುಮಕೂರು ಜಿಲ್ಲೆಯ ಹೀರೆಹಳ್ಳಿಯ ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥ, ಹಿರಿಯ ಕೃಷಿ ವಿಜ್ಞಾನಿ ಎನ್.ಲೋಗಾನಂದನ್ ಭಾನುವಾರ ಅಭಿಪ್ರಾಯಪಟ್ಟರು.

ನಗರದ ಜೆ.ಎಚ್‌.ಪಟೇಲ್‌ ಸಭಾಂಗಣದಲ್ಲಿ ಕೊಳ್ಳೇಗಾಲದ ಜೆಎಸ್‌ಬಿ ಪ್ರತಿಷ್ಠಾನ, ತುಮಕೂರಿನ ಗಾಂಧೀಜಿ ಸಹಜ ಬೇಸಾಯ ಶಾಲೆ, ಚಾಮರಾಜನಗರ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ, ಸಾಮೂಹಿಕ ನಾಯಕತ್ವದಲ್ಲಿ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಗಳ ಸಂಯುಕ್ತ ಆಶ್ರಯದಲ್ಲಿ ನಡೆದ ‘ಕೃಷಿ ಮತ್ತು ಹವಾಮಾನ ಬದಲಾವಣೆಗೆ ಸಂಬಂಧಿಸಿದಂತೆ ನೈಸರ್ಗಿಕ ಸಂಪನ್ಮೂಲಗಳ ಸಂರಕ್ಷಣೆ ಮತ್ತು ನಿರ್ವಹಣೆ’ ಕುರಿತು ಕಾರ್ಯಗಾರದಲ್ಲಿ ಅವರು ಮಾತನಾಡಿದರು. 

‘ಈಗ ನಾವು ಕೃಷಿ ಬಿಕ್ಕಟ್ಟಿಗೆ ಕಿರು ಜಲಾನಯನ ಯೋಜನೆ ಪರಿಹಾರವಾಗಬಲ್ಲುದು. ಲಭ್ಯವಿರುವ ಮಳೆ ನೀರನ್ನು ರಕ್ಷಿಸಿಕೊಳ್ಳಲು ರೈತರು ಮುಂದಾಗಬೇಕು. ರೈತರು ಜಮೀನುಗಳಲ್ಲಿ ಕೃಷಿ ಹೊಂಡ, ಬದು ನಿರ್ಮಿಸಿಕೊಳ್ಳಬೇಕು. ಕೊಳವೆಬಾವಿಗಳ ಸುತ್ತಲೂ ನೀರು ಇಂಗಿಸುವಿಕೆಗೆ ಮುಂದಾಗಬೇಕು. ಜೊತೆಗೆ ಸರ್ಕಾರಿ ಇಲಾಖೆಗಳು ಕೆರೆಗಳಿಗೆ ನೀರು ಹರಿಸುವುದು, ಸಣ್ಣ ನಾಲೆಗಳ ದುರಸ್ತಿ, ಚೆಕ್ ಡ್ಯಾಂ ನಿರ್ಮಾಣ, ಕೆರೆ, ಕಟ್ಟೆ, ಕೊಳಗಳ ಹೂಳೆತ್ತುವ ಕೆಲಸಗಳನ್ನು ಮಾಡಬೇಕು’ ಎಂದು ಸಲಹೆ ನೀಡಿದರು. 

‘ತುಮಕೂರು, ಮೈಸೂರು, ಹಾಸನ, ಬೆಂಗಳೂರು, ಚಾಮರಾಜನಗರ ಜಿಲ್ಲೆಗಳಲ್ಲಿ ಹವಾಮಾನ ಹಾಗೂ ಮಳೆ ಪ್ರಮಾಣದಲ್ಲಿ ಸಾಮ್ಯತೆೆಯಿದೆ. ಗ್ರಾಮೀಣ ಪ್ರದೇಶದ ಹಿರಿಯರ ಪಾರಂಪರಿಕ ಕೃಷಿ ಜ್ಞಾನ ಪಡೆದುಕೊಳ್ಳಬೇಕು. ಒಂದಷ್ಟು ಹಳ್ಳಿಗಳ ಗುಂಪುಗಳನ್ನು ಮಾಡಿಕೊಂಡು ಪರ್ಯಾಯ, ಸಹಜ ಕೃಷಿ ಕೈಗೊಳ್ಳಬೇಕು. ರಾಸಾಯನಿಕ ಕೃಷಿ, ಹೈಬ್ರಿಡ್ ಬಿತ್ತನೆ ಬೀಜ ಬಳಸಿ ಬೇಸಾಯ ಮಾಡುವುದನ್ನು ಕಡಿಮೆ ಮಾಡಬೇಕು’ ಎಂದು ಸಲಹೆ ನೀಡಿದರು

ಪರಿಸರವಾದಿ ಸಿ.ಯತಿರಾಜು ಮಾತನಾಡಿ, ‘ಇತ್ತೀಚಿನ ವರ್ಷಗಳಲ್ಲಿ ಅಭಿವೃದ್ಧಿ ಎಂದು ಬಿಂಬಿಸುತ್ತಿರುವ ರಾಷ್ಟ್ರಗಳಲ್ಲಿಯೂ ಕೃಷಿ ಕ್ಷೇತ್ರ ಹವಾಮಾನ ವೈಪರೀತ್ಯದ ಸುಳಿಯಲ್ಲಿ ಸಿಲುಕಿದ್ದು, ದೊಡ್ಡ ಗಂಡಾತರ ಎದುರಿಸುತ್ತಿವೆ. ಅಮೆರಿಕಾದಂತಹ ದೇಶದಲ್ಲೂ ರೈತರು ಆತ್ಮಹತ್ಯೆ ಹಾದಿ ಹಿಡಿದಿದ್ದಾರೆ. ಕೃಷಿಯನ್ನು ಲಾಭಕ್ಕಿಂತ ಜೀವನೋಪಾಯಕ್ಕಾಗಿ ಮಾಡಿದರೆ ಮಾತ್ರ ರೈತರು ಬದುಕು ಕಟ್ಟಿಕೊಳ್ಳಲು ಸಾಧ್ಯ’ ಎಂದು ತಿಳಿಸಿದರು.

ಗಾಂಧೀಜಿ ಸಹಜ ಬೇಸಾಯ ಆಶ್ರಮದ ವಿಜ್ಞಾನಿ ಎಚ್.ಮಂಜುನಾಥ ಮಾತಾನಾಡಿ, ‘ಚಾಮರಾಜನಗರದಲ್ಲಿ ವನ್ಯಜೀವಿ –ಮಾನವ ಸಂಘರ್ಷ ನಡೆಯುತ್ತಿದೆ.  ಕಾಡು ಮತ್ತು ಕಾಡಂಚಿನಲ್ಲಿ ವಾಸಿಸುವ ಜನರಿಗೆ ಸೌಕರ್ಯಗಳಿಲ್ಲದೆ ಜೀವನ ಕಷ್ಟವಾಗಿದೆ. ಅಭಿವೃದ್ಧಿ ಹೆಸರಿನಲ್ಲಿ ದೊಡ್ಡದಾದ ರಸ್ತೆಗಳಿಗೆ ಲಕ್ಷಾಂತರ ಮರಗಳನ್ನು ಕಡಿಯಲಾಗುತ್ತಿದೆ. ಬಗರ್ ಹುಕುಂ ಹೆಸರಿನಲ್ಲಿ ಪ್ರಭಾವಿಗಳಿಗೆ ಗೋಮಾಳ ಹಂಚಿಕೆ, ಸಾರ್ವಜನಿಕ ಭೂಮಿಗಳ ಕಾರ್ಪೊರೇಟೀಕರಣ, ಜಲಸಂಪನ್ಮೂಲ ಪ್ರದೇಶಗಳ ಒತ್ತುವರಿಯಾಗುತ್ತಿದೆ. ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಮನುಷ್ಯ ಮನುಷ್ಯನ ನಡುವೆ, ಮನುಷ್ಯ ಪರಿಸರದ ನಡುವೆ ಸಹಬಾಳ್ವೆ ಗಳಿಸುವುದಾದರೂ ಹೇಗೆ ಎಂಬ ಯಕ್ಷ ಪ್ರಶ್ನೆ ನಮ್ಮೆಲ್ಲರ ಮುಂದಿದೆ’ ಎಂದರು. 

ಸಂವಾದ: ಉಪನ್ಯಾಸದ ನಂತರ ಸಂವಾದ ಕಾರ್ಯಕ್ರಮ ನಡೆಯಿತು. ಬಂಡೀಪುರ ಹುಲಿ ಯೋಜನೆ ನಿರ್ದೇಶಕ ಪಿ.ರಮೇಶಕುಮಾರ್‌, ಜಂಟಿ ಕೃಷಿ ನಿರ್ದೇಶಕ ಎಸ್‌.ಎಸ್‌.ಆಬೀದ್‌, ಉಪ ಕೃಷಿ ನಿರ್ದೇಶಕಿ ಸುಷ್ಮಾ, ಕೆವಿಕೆ ಮುಖ್ಯಸ್ಧ ಜಿ.ಎಸ್‌ ಯೋಗೇಶ್‌, ರೈತ ಸಂಘದ ಜಿಲ್ಲಾಧ್ಯಕ್ಷ ಹೊನ್ನೂರು ಪ್ರಕಾಶ್‌ ಸಂವಾದದಲ್ಲಿ ಪಾಲ್ಗೊಂಡು ರೈತರ ಪ್ರಶ್ನೆಗಳಿಗೆ ಉತ್ತರಿಸಿದರು. 

ಚಿತ್ರನಟ ಕಿಶೋರ್‌ ಪತ್ನಿ ವಿಶಾಲಾಕ್ಷಿ, ಪರಿಸರವಾದಿ ಪುಣಜನೂರು ದೊರೆಸ್ವಾಮಿ, ಮೈಸೂರಿನ ಪರಿಸರವಾದಿ ಕರುಣಾಕರನ, ಬೆಂಗಳೂರು ಸುಸಿ ಸಂಸ್ಧೆಯ ಸ್ವಾಮಿ, ನಿವೃತ್ತ ಅಧಿಕಾರಿಗಳಾದ ಹನುಮಯ್ಯ, ಅಜ್ಮಲ್‌ಪಾಷ, ಸಹಜ ಕೃಷಿಕ ಪ್ರಶಾಂತ್ ಜಯರಾಂ, ಧೀನಬಂದು ಸಂಸ್ಥೆಯ ಪ್ರೊ. ಜಯದೇವ, ನಿಸರ್ಗ, ವಿಚಾರವಾದಿಗಳು, ಜಿಲ್ಲೆಯ ಎಲ್ಲ‌ ಭಾಗಗಳಿಂದ ರೈತರು, ಪರಿಸರ ಪ್ರೇಮಿಗಳು, ಕೃಷಿ ಪದವಿ ಕಾಲೇಜಿನ ವಿದ್ಯಾರ್ಥಿಗಳು ಭಾಗವಹಿಸಿದ್ದರು.

ರೈತರು ಕೃಷಿಯಲ್ಲಿ ಅನುಭವಿಸುತ್ತಿರುವ ಸಮಸ್ಯೆಗಳ ಬಗ್ಗೆ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಇಂತಹ ಕಾರ್ಯಾಗಾರಗಳು ಮುಖ್ಯ
ಗೀತಾ ಹುಡೇದ ಹೆಚ್ಚುವರಿ ಜಿಲ್ಲಾಧಿಕಾರಿ
‘ಜಿಐ ಟ್ಯಾಗ್ ಮಾಡಿಸಿ’ 
ಜೆಎಸ್‌ಬಿ ಪ್ರತಿಷ್ಠಾನದ ಅಧ್ಯಕ್ಷ ಎಸ್ ಶಶಿಕುಮಾರ ಮಾತನಾಡಿ ‘ಮಹದೇಶ್ವರ ಬೆಟ್ಟದ ಸುತ್ತಮುತ್ತಲ ಹಾಡಿಗಳಲ್ಲಿ ರೈತರು ಸಹಜ ಕೃಷಿ ಮಾಡುತ್ತಾ ದೊಡ್ಡ ರಾಗಿ ಕಡ್ಡಿ ರಾಗಿ ಅವರೆ ಮತ್ತು ಸಾಸಿವೆ ಬೆಳೆಯುತ್ತಿದ್ದು ಇಂತಹ ತಳಿಗಳನ್ನು ಉಳಿಸಿ ಸಂರಕ್ಷಿಸಿ ಅಭಿವೃದ್ಧಿ ಪಡಿಸಬೇಕು ಮತ್ತು ಅವುಗಳಗೆ ಜಿಐ ಟ್ಯಾಗ್ ಮಾಡಿಸುವ ಕೆಲಸವನ್ನು ಕೆವಿಕೆ ಮತ್ತು ಕೃಷಿ ಇಲಾಖೆ ಮಾಡಬೇಕಿದೆ’ ಎಂದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT