ಚಾಮರಾಜನಗರ: ಹಣಕ್ಕಾಗಿ ಬೇರೆ ಪಕ್ಷಗಳಿಗೆ ಜೆಡಿಸ್‌ ಟಿಕೆಟ್‌ ಹಂಚಿಕೆ-ಆರೋಪ‍

7
ಜೆಡಿಎಸ್‌ ಜಿಲ್ಲಾಧ್ಯಕ್ಷ ಕಾಮರಾಜು ರಾಜೀನಾಮೆಗೆ ಟೌನ್ ಅಧ್ಯಕ್ಷ ಒತ್ತಾಯ

ಚಾಮರಾಜನಗರ: ಹಣಕ್ಕಾಗಿ ಬೇರೆ ಪಕ್ಷಗಳಿಗೆ ಜೆಡಿಸ್‌ ಟಿಕೆಟ್‌ ಹಂಚಿಕೆ-ಆರೋಪ‍

Published:
Updated:
Deccan Herald

ಚಾಮರಾಜನಗರ: ‘ಜೆಡಿಎಸ್‌ ಜಿಲ್ಲಾಧ್ಯಕ್ಷ ಕಾಮರಾಜು ಹಾಗೂ ಪ್ರಧಾನ ಕಾರ್ಯದರ್ಶಿ ಇಮ್ತಿಯಾಜ್‌ ಅವರು ಪಕ್ಷ ಸಂಘಟನೆಯ ಬದಲಿಗೆ ದುಡ್ಡು ಮಾಡುತ್ತಿದ್ದಾರೆ. ನಗರಸಭಾ ಚುನಾವಣೆಯಲ್ಲಿ ಪಕ್ಷ ಹೀನಾಯ ಸೋಲಿಗೆ ಇವರೇ ಕಾರಣ. ತಕ್ಷಣವೇ ಅವರು ತಮ್ಮ ಹುದ್ದೆಗಳಿಗೆ ರಾಜೀನಾಮೆ ನೀಡಬೇಕು’ ಪಕ್ಷದ ಟೌನ್‌ ಅಧ್ಯಕ್ಷ ಜಿ.ಎಂ. ಶಂಕರ್ ಗುರುವಾರ ಆಗ್ರಹಿಸಿದರು. 

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಚಾಮರಾಜನಗರ ನಗರಸಭೆಯಲ್ಲಿ 14 ಹಾಗೂ ಕೊಳ್ಳೇಗಾಲದಲ್ಲಿ ಒಬ್ಬರನ್ನು ಪಕ್ಷದಿಂದ ಕಣಕ್ಕಿಳಿಸಲಾಗಿತ್ತು. ಕನಿಷ್ಠ 5 ವಾರ್ಡ್‌ಗಳಲ್ಲಿ ಪಕ್ಷ ಗೆಲ್ಲಬೇಕಿತ್ತು. ಆದರೆ ಒಂದೂ ವಾರ್ಡ್‌ನಲ್ಲಿ ಗೆದ್ದಿಲ್ಲ. ಇದಕ್ಕೆ ಇವರಿಬ್ಬರು ಕಾರಣ. ಗೆಲ್ಲುವ ಅಭ್ಯರ್ಥಿಗಳಿಗೆ ಟಿಕೆಟ್‌ ಕೊಡದೆ, ಹಣದ ಆಸೆಗೆ ಟಿಕೆಟ್‌ಗಳನ್ನು ಬಿಜೆಪಿ, ಕಾಂಗ್ರೆಸ್‌, ಬಿಎಸ್‌ಪಿಗೆ ಹಂಚಿದ್ದಾರೆ’ ಎಂದು ಆರೋಪಿಸಿದರು.

ಚುನಾವಣಾ ಖರ್ಚಿಗಾಗಿ ಪಕ್ಷದ ನಿಧಿಯಿಂದ ಅಭ್ಯರ್ಥಿಗಳಿಗೆ ಗೆಲುವಿನ ಸಾಧ್ಯತೆಗೆ ಅನುಗುಣವಾಗಿ ₹1ಲಕ್ಷ, ₹50 ಸಾವಿರ ಮತ್ತು ₹30 ಸಾವಿರ ನೀಡಲಾಗಿತ್ತು. ಈ ಮೊತ್ತದಲ್ಲೂ ಅವರು ಕಮಿಷನ್‌ ಹೊಡೆದಿದ್ದಾರೆ. ₹ 1ಲಕ್ಷ ಪಡೆದ ಅಭ್ಯರ್ಥಿಗಳಿಂದ ₹10 ಸಾವಿರ, ಉಳಿದವರಿಂದ ₹5,000 ದುಡ್ಡು ಪಡೆದಿದ್ದಾರೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

‘ಪಕ್ಷದ ವರಿಷ್ಠರು ತಕ್ಷಣವೇ ಜಿಲ್ಲಾ ಘಟಕವನ್ನು ವಿಸರ್ಜಿಸಿ, ಚತುರ ಸಂಘಟನಾ ಸಾಮರ್ಥ್ಯವಿರುವವರನ್ನು ಹೊಸ ಅಧ್ಯಕ್ಷ, ಕಾರ್ಯದರ್ಶಿಯಾಗಿ ನೇಮಿಸಬೇಕು. ಇವರು ನಡೆಸುತ್ತಿರುವ ಅಕ್ರಮಗಳ ಬಗ್ಗೆ ರಾಷ್ಟ್ರೀಯ ಅಧ್ಯಕ್ಷ ಎಚ್‌.ಡಿ. ದೇವೇಗೌಡ, ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಮತ್ತು ರಾಜ್ಯ ಘಟಕದ ಅಧ್ಯಕ್ಷ ಎಚ್‌.ವಿಶ್ವನಾಥ್‌ ಅವರಿಗೆ ದೂರು ನೀಡುತ್ತೇವೆ’ ಎಂದರು.

ಮುಖಂಡರಾದ ಚಿಕ್ಕಅಂಕಶೆಟ್ಟಿ, ಮಂಜುನಾಥ್‌, ನಾಗಮಣಿ ಮತ್ತು ಸತ್ಯ ಕಾಗಲವಾಡಿ ಇದ್ದರು. 

‘ಕಾಮರಾಜು ಕಳ್ಳ, 420’

ಕಾಮರಾಜು ವಿರುದ್ಧ ಹರಿಹಾಯ್ದ ನಾಗಮಣಿ, ‘ಅವನೊಬ್ಬ 420, ಕಳ್ಳ, ದಗಲ್ಬಾಜಿ. 24ನೇ ವಾರ್ಡ್‌ನಿಂದ ನಾನು ಟಿಕೆಟ್‌ ಬಯಸಿದ್ದೆ.  ₹1 ಲಕ್ಷ ಕೊಟ್ಟರೆ ಟಿಕೆಟ್‌ ಕೊಡುವುದಾಗಿ ಹೇಳಿದ್ದ’ ಎಂದು ಆರೋಪಿಸಿದರು.

‘ಟಿಕೆಟ್‌ಗೆ ಹಣ ಕೇಳಿದ ವಿಚಾರಗಳನ್ನು ಮಾಧ್ಯಮಗಳಿಗೆ ತಿಳಿಸಿದರೆ, ಹಾಗೆ ಮಾಡುತ್ತೇನೆ ಹೀಗೆ ಮಾಡುತ್ತೇನೆ ಎಂದು ಬೆದರಿಕೆಯನ್ನೂ ಹಾಕಿದ್ದ’ ಎಂದು ದೂರಿದರು.

 

 

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !