ಜಿಎಸ್‌ಟಿ: ವ್ಯವಹಾರದಲ್ಲಿ ತಂದಿದೆ ಶಿಸ್ತು

7
ಗ್ರಾಹಕರಿಗೆ ಬೀಳದ ತೆರಿಗೆ ಹೊರೆ, ವಸ್ತ್ರವ್ಯಾಪಾರಿಗಳ ಮಿಶ್ರ ಪ್ರತಿಕ್ರಿಯೆ

ಜಿಎಸ್‌ಟಿ: ವ್ಯವಹಾರದಲ್ಲಿ ತಂದಿದೆ ಶಿಸ್ತು

Published:
Updated:
Deccan Herald

ಚಾಮರಾಜನಗರ: ಒಂದು ದೇಶ, ಒಂದೇ ತೆರಿಗೆ ಎಂಬ ಧ್ಯೇಯಘೋಷದ ಅಡಿಯಲ್ಲಿ ಜಾರಿಗೆ ಬಂದಿರುವ ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ವ್ಯವಸ್ಥೆಯ ಬಗ್ಗೆ ಪಟ್ಟಣದ ಜವಳಿ ವ್ಯಾಪಾರಿಗಳದ್ದು ವಿಭಿನ್ನ ನಿಲುವು. ಕೆಲವರು ಜಿಎಸ್‌ಟಿ ವ್ಯವಸ್ಥೆಯಿಂದ ಒಳ್ಳೆಯದಾಗಿದೆ ಎಂದು ಹೇಳಿದರೆ, ಇನ್ನೂ ಕೆಲವರು ಅನಿವಾರ್ಯವಾಗಿ ಹೊಂದಿಕೊಳ್ಳುತ್ತಿದ್ದೇವೆ ಎಂದು ಹೇಳಿದ್ದಾರೆ.

ಜಿಲ್ಲಾ ಕೇಂದ್ರದಲ್ಲಿ ದೊಡ್ಡ ಮಟ್ಟಿನ ಜವಳಿ ಮಳಿಗೆಗಳಿಲ್ಲ. ಬ್ರ್ಯಾಂಡೆಡ್‌ ಜವಳಿ ಕಂಪನಿಗಳ ಮಳಿಗೆಗಳೂ ಬೆರಳೆಣಿಕೆಯಷ್ಟಿವೆ. ಇಲ್ಲಿರುವ ಬಹುತೇಕ ವಸ್ತ್ರದ ಮಳಿಗೆಗಳಲ್ಲಿ ವಾರ್ಷಿಕ ವಹಿವಾಟು ಮೊತ್ತ ಒಂದು ಕೋಟಿಯೂ ಮೀರುವುದಿಲ್ಲ. ಹಾಗಾಗಿ ಬಹುತೇಕ ಬಟ್ಟೆ ವ್ಯಾಪಾರಸ್ಥರು ಜಿಎಸ್‌ಟಿ ರಾಜಿ ತೆರಿಗೆ (ಕಾಂಪೊಸಿಷನ್‌ ಸ್ಕೀಮ್‌) ವ್ಯವಸ್ಥೆಯನ್ನು ಅಳವಡಿಸಿಕೊಂಡಿದ್ದಾರೆ. ಇದರ ಪ್ರಕಾರ, ವಾರ್ಷಿಕ ₹ 1 ಕೋಟಿಗಿಂತ (ಇದನ್ನು ₹1.5 ಕೋಟಿಗೆ ಹೆಚ್ಚಿಸಲು ಕೇಂದ್ರ ಸಂಪುಟ ಒಪ್ಪಿಗೆ ನೀಡಿದೆ) ಕಡಿಮೆ ವಹಿವಾಟು ನಡೆಸುವ ವ್ಯಾಪಾರಿಗಳು ಜಿಎಸ್‌ಟಿ ಬದಲಿಗೆ ಶೇ 1ರಷ್ಟು ತೆರಿಗೆ ಪಾವತಿಸಿದರೆ ಸಾಕು. ಈ ವ್ಯಾಪಾರಸ್ಥರು ತೆರಿಗೆ ಹೊರೆಯನ್ನು ಗ್ರಾಹಕರಿಗೆ ವರ್ಗಾಯಿಸುತ್ತಿಲ್ಲ. ಹಾಗಾಗಿ, ಇಲ್ಲಿನ ಗ್ರಾಹಕರಿಗೆ ಜಿಎಸ್‌ಟಿ ಬಿಸಿ ತಟ್ಟಿಲ್ಲ.

‘ಮೈಸೂರು ನಗರ ಹತ್ತಿರದಲ್ಲೇ ಇರುವುದರಿಂದ ದೊಡ್ಡ ಪ್ರಮಾಣದ ಖರೀದಿಗೆ ಜನರು ಅಲ್ಲಿಗೇ ಹೋಗುತ್ತಾರೆ. ಹಾಗಾ‌ಗಿ, ದೊಡ್ಡ ವಹಿವಾಟು ನಡೆಯುವುದಿಲ್ಲ. ಇದೇ ಕಾರಣಕ್ಕೆ ಬೃಹತ್‌ ಮಳಿಗೆಗಳು ಇಲ್ಲ’ ಎಂದು ಹೇಳುತ್ತಾರೆ ದೊಡ್ಡ ಅಂಗಡಿ ಬೀದಿಯ ವೆರೈಟಿ ಕಲೆಕ್ಷನ್ಸ್‌ ಮಾಲೀಕ ಶ್ರೀನಿವಾಸ್‌.

ಅವರ ಪ್ರಕಾರ, ಜಿಎಸ್‌ಟಿಯಿಂದಾಗಿ ಸಮಸ್ಯೆ ಏನೂ ಆಗಿಲ್ಲ. ‘ಮೊದಲು ಮೌಲ್ಯವರ್ಧಿತ ತೆರಿಗೆ (ವ್ಯಾಟ್‌) ಪದ್ಧತಿ ಇತ್ತು. ಅದಕ್ಕೆ ಹೊಂದಿಕೊಂಡಿದ್ದೆವು. ಈಗ ಜಿಎಸ್‌ಟಿ ಬಂದಿದೆ. ಆರಂಭದಲ್ಲಿ ಸ್ವಲ್ಪ ಸಮಸ್ಯೆ ಆಯಿತು. ಈಗ ಹೊಸ ವ್ಯವಸ್ಥೆಗೂ ಹೊಂದಿಕೊಂಡಿದ್ದೇವೆ. ತಿಂಗಳಿಗೊಮ್ಮೆ ಲೆಕ್ಕಪತ್ರ ಸಲ್ಲಿಸುತ್ತೇವೆ’ ಎಂದು ಶ್ರೀನಿವಾಸ್‌ ಹೇಳಿದರು.

‘ನಾನು ರಾಜಿ ತೆರಿಗೆ ವ್ಯವಸ್ಥೆಗೆ ಒಳಪಡುವುದರಿಂದ, ಗ್ರಾಹಕರಿಗೆ ಜಿಎಸ್‌ಟಿ ಹಾಕುತ್ತಿಲ್ಲ. ಅವರ ಪರವಾಗಿ ನಾನೇ ಶೇ 1ರಷ್ಟು ತೆರಿಗೆ ಪಾವತಿಸುತ್ತೇನೆ’ ಎಂದು ಅವರು ವಿವರಿಸಿದರು. 

‘ಸಿದ್ಧ ಉಡುಪು‌ ಮಾರಾಟಗಾರರಿಗೆ ತೊಂ‌ದರೆ ಆಗಿಲ್ಲ’ ಎಂದು ಹೇಳುತ್ತಾರೆ ಸಾಮ್ರಾಟ್‌ ಫ್ಯಾಷನ್ಸ್‌ ಮಾಲೀಕ ರವಿ. ಎಸ್‌.ಎನ್‌.

‘ಮೊದಲು ಹೇಗೆ ಇತ್ತೋ, ಈಗಲೂ ಹಾಗೆಯೇ ಇದೆ. ಯಾವುದೇ ಕೆಡು‌ಕು ಆಗಿಲ್ಲ. ಪ್ರತಿ ತಿಂಗಳೂ ಲೆಕ್ಕಪತ್ರ ಸಲ್ಲಿಸಬೇಕಾಗಿರುವುದರಿಂದ ಲೆಕ್ಕಾಚಾರ ಸರಿಯಾಗಿರಬೇಕು. ಗ್ರಾಹಕರಿಗೂ ಹೊರೆಯಾಗುತ್ತಿಲ್ಲ’ ಎಂದು ಅವರು ಮಾಹಿತಿ ನೀಡಿದರು.

ಗ್ರಾಹಕರು ಒಪ್ಪುವುದಿಲ್ಲ: ದೊಡ್ಡ ಅಂಗಡಿ ಬೀದಿಯಲ್ಲಿ ಸತ್ಯನಾರಾಯಣ ಕ್ಲಾತ್‌ ಎಂಪೋರಿಯಂ ಮಾಲೀಕ ಲಕ್ಷ್ಮಿಕಾಂತ್ ಅವರು ಜಿಎಸ್‌ಟಿ ಬಗ್ಗೆ ಭಿನ್ನ ಅಭಿಪ್ರಾಯ ಹೊಂದಿದ್ದಾರೆ.

‘ಒಳ್ಳೆಯ ಉದ್ದೇಶದಿಂದ ಜಿಎಸ್‌ಟಿ ಜಾರಿ ಮಾಡಿದ್ದಾರೆ. ಆದರೆ ಇನ್ನೂ ಗೊಂದಲಗಳಿವೆ. ಹೊಸ ವ್ಯವಸ್ಥೆಯ ಬಗ್ಗೆ ಗ್ರಾಹಕರಿಗೆ, ವ್ಯಾಪಾರಸ್ಥರಿಗೆ ಸ್ಪಷ್ಟವಾದ ಮಾಹಿತಿ ಇಲ್ಲ. ಸರ್ಕಾರ ತೆರಿಗೆ ಪ್ರಮಾಣದಲ್ಲಿ ಬದಲಾವಣೆ ಮಾಡುತ್ತಿರುತ್ತದೆ. ಅದು ಮಾಧ್ಯಮಗಳಲ್ಲಿ ಬರುತ್ತದೆ. ಆದರೆ, ಆದೇಶ ಅಧಿಕೃತವಾಗಿ ಕೈಸೇರಲು ಹೆಚ್ಚಿನ ಸಮಯ ತೆಗೆದುಕೊಳ್ಳುತ್ತದೆ. ಇದರಿಂದ ಎಲ್ಲರಿಗೂ ಗೊಂದಲವಾಗುತ್ತದೆ’ ಎಂದು ಅವರು ಹೇಳಿದರು.

‘ಗ್ರಾಹಕರಿಗೆ ಈ ಬಗ್ಗೆ ಹೆಚ್ಚು ಮಾಹಿತಿ ಇಲ್ಲ. ಚಾಮರಾಜನಗರವು ಅತ್ತ ನಗರವೂ ಅಲ್ಲದ, ಇತ್ತ ಪಟ್ಟಣವೂ ಅಲ್ಲದ ಸ್ಥಿತಿಯಲ್ಲಿದೆ. ಇಲ್ಲಿನ ಜನರು ಉತ್ಪನ್ನದಲ್ಲಿ ನಮೂದಿಸಿರುವ ಬೆಲೆಗೆ ಅಥವಾ ಅದಕ್ಕಿಂತ ಕಡಿಮೆ ಬೆಲೆಗೇ ವಸ್ತುಗಳನ್ನು ಖರೀದಿಸಲು ಬಯಸುತ್ತಾರೆ. ವಾಸ್ತವ ಬೆಲೆಯ ಮೇಲೆ ಮತ್ತೆ ಜಿಎಸ್‌ಟಿ ದರ ಹಾಕಿದರೆ, ಅದನ್ನು ತಾವು ಕೊಡುವುದಿಲ್ಲ ಎಂದು ಹೇಳುತ್ತಾರೆ’ ಎಂದು ಅವರು ತಿಳಿಸಿದರು.

‘ಪ್ರತಿ ತಿಂಗಳು ಲೆಕ್ಕಪತ್ರ ಸಲ್ಲಿಸಬೇಕು. ತಡ ಆದರೆ ದಂಡ ಪಾವತಿಸಬೇಕು. ಸರ್ಕಾರ ಹೊಸ ತೆರಿಗೆ ವ್ಯವಸ್ಥೆ ಜಾರಿಗೆ ತಂದಿರುವುದರಿಂದ ಅದಕ್ಕೆ ಹೊಂದಿಕೊಳ್ಳಲೇಬೇಕು. ಆರಂಭದ ದಿನಗಳಲ್ಲಿ ವ್ಯಾಪಾರದ ಮೇಲೆ ನಕಾರಾತ್ಮಕ ಪರಿಣಾಮ ಬೀರಿತ್ತು. ಆಮೇಲೆ ಸ್ವಲ್ಪ ಸುಧಾರಿಸಿತು. ಮುಂದಿನ ದಿನಗಳಲ್ಲಿ ಸರಿಹೋಗಬಹುದು’ ಎಂದು ಲಕ್ಷ್ಮಿಕಾಂತ್‌ ಹೇಳಿದರು.

‘ನೆಮ್ಮದಿ ಸಿಕ್ಕಿದೆ’

‘ಜಿಎಸ್‌ಟಿಯಿಂದ ವಹಿವಾಟಿಗೆ ಶಿಸ್ತು ಬಂದಿದೆ. ಎಲ್ಲವೂ ಈಗ ಲೆಕ್ಕಕ್ಕೆ ಬರುವುದರಿಂದ ನೆಮ್ಮದಿ ಸಿಕ್ಕಿದೆ’ ಎಂಬುದು ಸುಧಾ ಫ್ಯಾಷನ್‌ ಪ್ಯಾರಡೈಸ್‌ ಮಾಲೀಕ ವಿಶ್ವಕುಮಾರ್‌ ಅವರ ಅಭಿಮತ. ಅವರು ಸಾಮಾನ್ಯ (ರೆಗ್ಯುಲರ್‌) ಜಿಎಸ್‌ಟಿ ವ್ಯವಸ್ಥೆಯನ್ನು ಅಳವಡಿಸಿಕೊಂಡಿದ್ದಾರೆ.

‘ಮೊದಲ ಮೂರು ತಿಂಗಳು ತುಂಬಾ ಕಷ್ಟ ಆಯಿತು. ಆಮೇಲೆ ಸರ್ಕಾರ ನಿಯಮಗಳನ್ನು ಮಾರ್ಪಾಡು ಮಾಡಿದ್ದರಿಂದ ಸಮಸ್ಯೆಗಳು ಪರಿಹಾರವಾದವು. ಪ್ರತಿ ತಿಂಗಳು ಲೆಕ್ಕಪತ್ರ ಸಲ್ಲಿಸಿರುವುದರಿಂದ ಬಿಲ್ಲಿಂಗ್‌ ವ್ಯವಸ್ಥೆ ಸರಿಯಾಗಿರಬೇಕು’ ಎಂದು ಅವರು ಹೇಳಿದರು. 

‘ಹೊಸ ತೆರಿಗೆ ಪದ್ಧತಿ ಬಗ್ಗೆ ಗ್ರಾಹಕರಲ್ಲೂ ಅರಿವು ಮೂಡಿದೆ. ಈಗೀಗ ಅವರೇ ಸ್ವತಃ ಬಿಲ್‌ ಕೇಳಿ ಪಡೆಯುತ್ತಾರೆ’ ಅವರು ಮಾಹಿತಿ ನೀಡಿದರು. 

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !