ಶುಕ್ರವಾರ, 23 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೈತನ ಕೈಹಿಡಿದ ಮಿಶ್ರ ಬೇಸಾಯ

ಬಾಳೆ ಬೆಳೆದು ಮಾದರಿಯಾದ ರೈತ
ಎ.ಎಸ್.ಜಗನ್ನಾಥ್
Published 24 ಡಿಸೆಂಬರ್ 2023, 6:56 IST
Last Updated 24 ಡಿಸೆಂಬರ್ 2023, 6:56 IST
ಅಕ್ಷರ ಗಾತ್ರ

ಗೌರಿಬಿದನೂರು: ಬಯಲು ಸೀಮೆಯಲ್ಲೂ ಬೇಸಾಯದ ಆಸಕ್ತಿ ಬತ್ತದೆ ವಿಭಿನ್ನ ರೀತಿಯಲ್ಲಿ ವ್ಯವಸಾಯ ಮಾಡುವ ಮೂಲಕ ಬಾಳೆ ಬೆಳೆಯಲ್ಲಿ ಮಿಶ್ರ ಬೇಸಾಯ ಪದ್ಧತಿ ಅಳವಡಿಸಿಕೊಂಡು ವರ್ಷದಲ್ಲಿ ಮೂರ್ನಾಲ್ಕು ಬೆಳೆ ಬೆಳೆಯುವ ಕಾಯಕಕ್ಕೆ ಮುಂದಾಗಿದ್ದಾರೆ ಮರಳೂರು‌ ಗ್ರಾಮದ ಮಾದರಿ ರೈತ ಎಂ.ಟಿ.ಅಂಬರೀಶ್ ರೆಡ್ಡಿ.

ಓದಿದ್ದು ಪ್ರೌಢಶಾಲಾ ಶಿಕ್ಷಣವಾದರೂ, ವ್ಯವಸಾಯದಲ್ಲಿ ಅಪಾರ ಆಸಕ್ತಿ ಹೊಂದಿದ್ದ ಅಂಬರೀಶ್ ರೆಡ್ಡಿ ತಾನು ಮಾಡುವ ಕಾಯಕದಲ್ಲಿಯೇ ವಿಭಿನ್ನತೆ ಕಾಣುವ ಮೂಲಕ ಇಂದಿನ ಯುವಕರಿಗೆ ದಾರಿದೀಪವಾಗಿದ್ದಾರೆ. ದುಡಿಯುವ ಕೈಗಳಿಗೆ ಕೆಲಸವಿಲ್ಲ, ನಿರುದ್ಯೋಗ ಎಲ್ಲೆಡೆ ತಾಂಡವಾಡುತ್ತಿದೆ, ಬೇಸಾಯವನ್ನು ನಂಬಿಕೊಂಡರೆ ಬದುಕು ಹಸನಾಗದು ಎಂದು ಮೂಗು ಮುರಿಯುವವರಿಗೆ ಈತನ ಬೇಸಾಯ ಪದ್ಧತಿಯು ನಿಜಕ್ಕೂ ಆತ್ಮಸ್ಥೈರ್ಯ ‌ಮೂಡಿಸುತ್ತದೆ‌.

ಮೂಲತಃ ‌ಕೃಷಿ‌ ಕುಟುಂಬದಲ್ಲಿ ಜನಿಸಿದ ಅಂಬರೀಶ್ ರೆಡ್ಡಿ ಬಾಲ್ಯದಿಂದಲೂ ಕೃಷಿಯಲ್ಲಿ ಹೆಚ್ಚು ಆಸಕ್ತಿ ಬೆಳಸಿಕೊಂಡವರು. ತನಗಿರುವ ಕಡಿಮೆ ಕೃಷಿ ಭೂಮಿಯಲ್ಲಿ ವಿಭಿನ್ನ ರೀತಿಯ ಬೆಳೆಗಳನ್ನು ‌ಬೆಳೆಯುವ ಮೂಲಕ ಕೃಷಿ ಕ್ಷೇತ್ರಕ್ಕೆ ಕೊಡುಗೆ ನೀಡಿದ್ದಾರೆ.

ಪ್ರಸ್ತುತ ಒಂದು ಎಕರೆ ಭೂಮಿಯಲ್ಲಿ ಏಲಕ್ಕಿ ಬಾಳೆಹಣ್ಣು ಬೆಳೆದಿದ್ದು, ಪ್ರತಿ ಗೊನೆ ಬಾಳೆ ಕನಿಷ್ಠ 15 ರಿಂದ 18 ಕೆ.ಜಿ ತೂಕವಿದೆ. ಆರಂಭದಿಂದಲೇ ಆಸಕ್ತಿಯಿಂದ ಬಾಳೆ ಗಿಡದ ಪೋಷಣೆ ಮಾಡಿ, ಕೊಟ್ಟಿಗೆ ಗೊಬ್ಬರ, ಮಣ್ಣು, ತರಗೆಲೆ ಗೊಬ್ಬರ ಎಲ್ಲವನ್ನೂ ‌ವ್ಯವಸ್ಥಿತವಾಗಿ ನೀಡುವ ಈತ ಒಂದು ವರ್ಷದಲ್ಲಿ ಒಂದು ಎಕರೆ ಬಾಳೆ ಬೆಳೆಯಲ್ಲಿ ₹10 ರಿಂದ ₹12 ಲಕ್ಷದವರೆಗೆ ಲಾಭಗಳಿಸುವ ಉತ್ಸಾಹದಲ್ಲಿದ್ದಾರೆ. ಆರಂಭದಿಂದ ಇಲ್ಲಿಯವರೆಗೆ ಸುಮಾರು ₹2 ಲಕ್ಷದಷ್ಟು ಬೆಳೆಗೆ ವಿನಿಯೋಗಿಸಿದ್ದು, ಶ್ರಮಕ್ಕೆ ತಕ್ಕ ಪ್ರತಿಫಲ ದೊರೆತಿರುವ ಸಾರ್ಥಕತೆಯಲ್ಲಿದ್ದಾರೆ.

ಬಾಳೆ ಗಿಡಗಳನ್ನು‌ ನಾಟಿ ಮಾಡುವ ಒಂದು ತಿಂಗಳ ಮುಂಚೆಯೇ ಮೂರುವರೆ‌ ಅಡಿ ಅಳತೆಯ ಅಂತರದಲ್ಲಿ ಸಾಲನ್ನು ತೆಗೆದು ಅದರಲ್ಲಿ ಮೆಣಸು ಹಾಗೂ ಬದನೆ ಪೈರು ನಾಟಿ ಮಾಡಿ ಪೋಷಣೆ ಮಾಡಿದ್ದಾರೆ. ನಂತರ ಒಂದೂವರೆ ತಿಂಗಳ ನಂತರ ಎರಡು ಸಾಲಿನ ಮಧ್ಯೆ ಸುಮಾರು 7 ಅಡಿ ಅಂತರದಲ್ಲಿ ಬಾಳೆ ಗಡ್ಡೆ ನಾಟಿ ಮಾಡಿದ್ದರು. ಮತ್ತೆ ಒಂದು ತಿಂಗಳ ನಂತರ ಬಾಳೆ ಮಧ್ಯೆ ಅಗಸೆ ಬೀಜ ನಾಟಿ ಮಾಡಿ ಅದಕ್ಕೆ ಅಗತ್ಯ ಗೊಬ್ಬರವನ್ನು ನೀಡಿದ್ದಾರೆ.

ಎರಡೂವರೆ ತಿಂಗಳಿಂದ ಮೂರು ತಿಂಗಳ ಅವಧಿಯಲ್ಲಿ ಮೆಣಸಿನ ಕಾಯಿ ಫಲಸಿಗೆ ಬಂದು‌ ಸುಮಾರು ಆರೇಳು ತಿಂಗಳು ಕಾಯಿ ಬಿಡುವುದರಿಂದ ಬಾಳೆಯ ಜತೆ ಜತೆಗೆ ಮೆಣಸಿನ ಕಾಯಿ‌ ಮತ್ತು ಅದರ ನಡುವಿನ ಅಗಸೆ ಸಸಿಗಳ ಪೋಷಣೆಯೂ ಆಗುತ್ತದೆ. ಮೆಣಸಿನ ಗಿಡಗಳು ಪೂರ್ಣಗೊಳ್ಳುವಷ್ಟರಲ್ಲಿ ಬಾಳೆ ಗಿಡಗಳು ಬೆಳೆಯುತ್ತವೆ. ಜತೆಗೆ ಅಗಸೆಯೂ ಎತ್ತರಕ್ಕೆ ಬೆಳೆಯುತ್ತವೆ.

ಕೃಷಿ ಚಟುವಟಿಕೆ ಜತೆಯಲ್ಲಿ ಹೈನುಗಾರಿಕೆ ಮತ್ತು ಮೇಕೆ ಸಾಕಾಣಿಕೆ ಮಾಡಿಕೊಂಡಿರುವ ಇವರಿಗೆ ಬಾಳೆ ಗಿಡಗಳ ಮಧ್ಯೆ ಬೆಳೆದು ನಿಂತಿರುವ ಅಗಸೆ ಸೊಪ್ಪು ಸಹಕಾರಿಯಾಗುತ್ತದೆ. 

‘ರೈತರು ಕೃಷಿಯಲ್ಲಿ ಆಧುನಿಕ ತಂತ್ರಜ್ಞಾನದ ಅವಿಷ್ಕಾರಗಳನ್ನು ಬಳಸಿದರೆ ಉತ್ತಮ ಇಳುವರಿ ಪಡೆಯಬಹುದು. ರಾಸಾಯನಿಕ ‌ಗೊಬ್ಬರಗಳಿಗಿಂತ ಸಾವಯವ ಗೊಬ್ಬರ ಬೆಳೆಗಳಿಗೆ ಅತ್ಯವಶ್ಯಕವಾಗಿದೆ. ಕೃಷಿ ಚಟುವಟಿಕೆಗಳ ಜತೆಗೆ ಹೈನುಗಾರಿಕೆ, ಕೋಳಿ ಸಾಕಾಣಿಕೆ, ಕುರಿ ಮತ್ತು ಮೇಕೆ ಸಾಕಾಣಿಕೆ ಆರ್ಥಿಕವಾಗಿ ಶಕ್ತಿ ನೀಡಲು ಬೆನ್ನೆಲುಬಾಗಿರುತ್ತವೆ. ವರ್ಷದ ಬಾಳೆ ಬೆಳೆ ಉತ್ತಮವಾಗಿ ಫಸಲಿಗೆ ಬಂದಿದೆ ಎಂಬುದು ರೈತ ಅಂಬರೀಶ್‌ ಅವರ ಮಾತಾಗಿದೆ.

ಕೃಷಿ ಚಟುವಟಿಕೆಯ ಜತೆಗೆ ದಶಕಗಳಿಂದಲೂ ಕೋಳಿ ಸಾಕಾಣಿಕೆ ಅಳವಡಿಸಿಕೊಂಡಿದ್ದು ಇದು ಕೃಷಿ ಜತೆಗೆ ಉಪಕಸುಬಾಗಿ ಆರ್ಥಿಕವಾಗಿ ಲಾಭ ಗಳಿಸಲು ಸಾಧ್ಯವಾಗುತ್ತದೆ.
ಅಂಬರೀಶ್ ರೆಡ್ಡಿ ರೈತ 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT