ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಚಿಕ್ಕಬಳ್ಳಾಪುರ: ಗರಿಷ್ಠ ಮತವಿದ್ದರೂ ಮಹಿಳಾ ಆಕಾಂಕ್ಷಿಗಳೇ ಗೌಣ!

ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದಲ್ಲಿ 9.80 ಲಕ್ಷ ಮಹಿಳಾ ಮತದಾರರು
ಡಿ.ಎಂ.ಕುರ್ಕೆ ಪ್ರಶಾಂತ್
Published 22 ಫೆಬ್ರುವರಿ 2024, 5:32 IST
Last Updated 22 ಫೆಬ್ರುವರಿ 2024, 5:32 IST
ಅಕ್ಷರ ಗಾತ್ರ

ಚಿಕ್ಕಬಳ್ಳಾಪುರ: ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿಯಲ್ಲಿ ಟಿಕೆಟ್‌ಗಾಗಿ ಪೈಪೋಟಿ ಜೋರಾಗಿದೆ. ಆದರೆ ಆಕಾಂಕ್ಷಿಗಳ ಹೆಸರುಗಳನ್ನು ನೋಡಿದರೆ ಒಬ್ಬ ಮಹಿಳೆಯ ಹೆಸರೂ ಇಲ್ಲ! ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಮಹಿಳಾ ಮತದಾರರೇ ಗರಿಷ್ಠ ಸಂಖ್ಯೆಯಲ್ಲಿ ಇದ್ದಾರೆ. ಹೀಗಿದ್ದರೂ ಪ್ರಮುಖ ರಾಜಕೀಯ ಪಕ್ಷಗಳ ಟಿಕೆಟ್ ಆಕಾಂಕ್ಷಿಗಳ ಪಟ್ಟಿಯಲ್ಲಿ ಮಹಿಳೆಯರ ಹೆಸರುಗಳೇ ಗೌಣ. 

ಬೆಂಗಳೂರು ನಗರ ಜಿಲ್ಲೆಯ ಯಲಹಂಕ, ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರು, ಬಾಗೇಪಲ್ಲಿ ಮತ್ತು ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ, ದೇವನಹಳ್ಳಿ, ನೆಲಮಂಗಲ ಮತ್ತು ಹೊಸಕೋಟೆ ವಿಧಾನಸಭಾ ಕ್ಷೇತ್ರಗಳು ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರ ವ್ಯಾಪ್ತಿಗೆ ಒಳಪಡುತ್ತವೆ. 

ಅಂತಿಮ ಮತದಾರರ ಪಟ್ಟಿಯ ಪ್ರಕಾರ ಕ್ಷೇತ್ರದಲ್ಲಿ ‌9,69,538 ಮಂದಿ ಪುರುಷರು ಹಾಗೂ 9,80,641 ಮಹಿಳಾ ಮತದಾರರು ಇದ್ದಾರೆ. ಪುರುಷರಿಗೆ ಹೋಲಿಸಿದರೆ ಮಹಿಳಾ ಮತದಾರರು 11 ಸಾವಿರದಷ್ಟು ಹೆಚ್ಚಿದ್ದಾರೆ.

2019ರ ಲೋಕಸಭೆ ಚುನಾವಣೆಯಲ್ಲಿ ಚಿಕ್ಕಬಳ್ಳಾಪುರ ಕ್ಷೇತ್ರದಲ್ಲಿ 9,10,463 ಮಂದಿ ಪುರುಷರು ಹಾಗೂ 8,97,659 ಮಹಿಳಾ ಮತದಾರರು ಇದ್ದಾರೆ. ಆದರೆ ಈ ಬಾರಿ ಮಹಿಳಾ ಮತದಾರರ ಪ್ರಾಬಲ್ಯವಿದೆ.

ಕಾಂಗ್ರೆಸ್‌ನಿಂದ ಮಾಜಿ ಸಂಸದ ಎಂ.ವೀರಪ್ಪ ಮೊಯಿಲಿ, ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ರಕ್ಷಾ ರಾಮಯ್ಯ, ಮಾಜಿ ಸಚಿವ ಎನ್.ಎಚ್.ಶಿವಶಂಕರ ರೆಡ್ಡಿ ಆಕಾಂಕ್ಷಿಗಳಾಗಿದ್ದಾರೆ. ಬಿಜೆಪಿಯಲ್ಲಿ ಮಾಜಿ ಸಚಿವ ಡಾ.ಕೆ.ಸುಧಾಕರ್, ಯಲಹಂಕ ಶಾಸಕ ಎಸ್.ಆರ್.ವಿಶ್ವನಾಥ್ ಅವರ ಪುತ್ರ ಅಲೋಕ್ ‍ಪ್ರಮುಖವಾಗಿದ್ದಾರೆ. ಜೆಡಿಎಸ್‌–ಬಿಜೆಪಿ ಮೈತ್ರಿ ಹಿನ್ನೆಲೆಯಲ್ಲಿ ಜೆಡಿಎಸ್‌ನಲ್ಲಿ ಆಕಾಂಕ್ಷಿಗಳು ಕಂಡು ಬರುತ್ತಿಲ್ಲ. ಕಾಂಗ್ರೆಸ್ ಮತ್ತು ಬಿಜೆಪಿಯಲ್ಲಿ ದೊಡ್ಡ ಪ್ರಮಾಣದಲ್ಲಿಯೇ ನಾಯಕಿಯರು ಇದ್ದಾರೆ. ಪುರುಷ ಆಕಾಂಕ್ಷಿಗಳ ಪೈಪೋಟಿಯೇ ಹೆಚ್ಚಿದೆ. ಮಹಿಳೆಯರ ಹೆಸರೇ ಕಾಣುತ್ತಿಲ್ಲ.

ವಿಶೇಷವೆಂದರೆ ಯಲಹಂಕ ವಿಧಾನಸಭಾ ಕ್ಷೇತ್ರ ಹೊರತುಪಡಿಸಿ ಉಳಿದ ಏಳು ಕ್ಷೇತ್ರಗಳಲ್ಲಿಯೂ ಮಹಿಳಾ ಮತದಾರರದ್ದೇ ಮೇಲುಗೈ. ಹೀಗಾಗಿ, ಈ ಬಾರಿ ಲೋಕಸಭೆ ಚುನಾವಣೆಯಲ್ಲಿ ಮಹಿಳಾ ಮತದಾರರು ನಿರ್ಣಾಯಕ ಪಾತ್ರ ವಹಿಸುವುದು ಖಚಿತ. ‌ಆದರೆ, ಟಿಕೆಟ್‌ ವಿಚಾರದಲ್ಲಿ ಅವರನ್ನು ಮಾತನಾಡಿಸುವವರೇ ಇಲ್ಲ. ‘ನಾನೂ ಟಿಕೆಟ್ ಆಕಾಂಕ್ಷಿ’ ಎಂದು ಹೇಳುವ ನಾಯಕಿಯರೂ ಇಲ್ಲ. 

ಚುನಾವಣೆ ಸಂದರ್ಭದಲ್ಲಿ ಮಹಿಳಾ ಮತದಾರರನ್ನು ಸೆಳೆಯಲು ಎಲ್ಲ ರಾಜಕೀಯ ಪಕ್ಷಗಳು ಇನ್ನಿಲ್ಲದ ಕಸರತ್ತು ನಡೆಸುತ್ತವೆ. ಯಶಸ್ವಿಯಾದವರಿಗೆ ‘ವಿಜಯಲಕ್ಷ್ಮಿ’ ಕೈಹಿಡಿಯುವ ಸಾಧ್ಯತೆ ಹೆಚ್ಚು. 

ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರ ಸ್ವತಂತ್ರ ಅಸ್ತಿತ್ವ ಪಡೆದ ಬಳಿಕ ಈವರೆಗೆ 12 ಚುನಾವಣೆಗಳು ನಡೆದಿವೆ. ಈ ಪೈಕಿ ಒಬ್ಬೇ ಒಬ್ಬ ಮಹಿಳೆ ಸಂಸತ್ತಿಗೆ ಆಯ್ಕೆಯಾದ ಉದಾಹರಣೆ ಇಲ್ಲ. ಸೋಜಿಗದ ಸಂಗತಿ ಎಂದರೆ ಕಳೆದ 12 ಚುನಾವಣೆಗಳಲ್ಲಿ 7ರಲ್ಲಿ ಮಹಿಳೆಯರು ನಾಮಪತ್ರವನ್ನೇ ಸಲ್ಲಿಸಿಲ್ಲ. ನಾಲ್ಕು (1984, 1998, 1999, 2014) ಚುನಾವಣೆಗಳಲ್ಲಿ ತಲಾ ಒಬ್ಬರಂತೆ ನಾಲ್ಕು ನಾಮಪತ್ರಗಳು ಸಲ್ಲಿಕೆಯಾಗಿವೆ. ಈ ಪೈಕಿ 1998ರಲ್ಲಿ ಲೋಕಶಕ್ತಿ ಪಕ್ಷದ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದ ಚಿತ್ರನಟಿ ಜಯಂತಿ  2,04,359 ಮತಗಳನ್ನು ಪಡೆಯುವ ಮೂಲಕ ಉತ್ತಮ ಸಾಧನೆ ತೋರಿದ್ದಾರೆ. ಇವರನ್ನು ಹೊರತುಪಡಿಸಿದರೆ, ಉಳಿದವರ ಸ್ಪರ್ಧೆ ಅಷ್ಟಕಷ್ಟೇ ಎಂಬಂತಿದೆ. ಚಿಕ್ಕಬಳ್ಳಾಪುರ ಕ್ಷೇತ್ರದಲ್ಲಿ 2019ರ ಚುನಾವಣೆಯಲ್ಲಿ ಎಸ್.ವರಲಕ್ಷ್ಮಿ ಸಿಪಿಎಂ ಅಭ್ಯರ್ಥಿಯಾಗಿದ್ದರು. ಇದೇ ಮೊದಲ ಬಾರಿಗೆ ಮಹಿಳಾ ಅಭ್ಯರ್ಥಿಯನ್ನು ಸಿಪಿಎಂ ಕಣಕ್ಕೆ ಇಳಿಸಿತ್ತು. 

ಚಿಕ್ಕಬಳ್ಳಾಪುರ ರಾಜಕಾರಣದಲ್ಲಿ ಮಹಿಳೆಯರನ್ನು ರಾಜಕೀಯ ಪಕ್ಷಗಳು ಮತಕ್ಕಾಗಿ ಮಾತ್ರ ಬಳಸಿಕೊಳ್ಳುತ್ತಿವೆ. ಟಿಕೆಟ್ ನೀಡುವ ವಿಚಾರದಲ್ಲಿ ನಿರ್ಲಕ್ಷ್ಯವಹಿಸುತ್ತಿವೆ.  

ಉಷಾ
ಉಷಾ

‘ಅವಕಾಶಗಳನ್ನೇ ಕೊಡುವುದಿಲ್ಲ’

ರಾಜಕೀಯ ಕ್ಷೇತ್ರದಲ್ಲಿ ಮಹಿಳೆಯರಿಗೆ ಮೀಸಲಾತಿ ಕಲ್ಪಿಸುವ ಬಗ್ಗೆ ಪಕ್ಷಗಳ ಭರವಸೆ ನೀಡುತ್ತವೆ. ಆದರೆ ಚುನಾವಣೆಗಳಲ್ಲಿ ಎಷ್ಟರ ಪ್ರಮಾಣದಲ್ಲಿ ಟಿಕೆಟ್ ನೀಡಿದ್ದಾರೆ ಎಂದು ನೋಡಿದರೆ ನಿರಾಸೆ ಎದ್ದು ಕಾಣುತ್ತದೆ ಎಂದು ಸಿಐಟಿಯು ಜಿಲ್ಲಾ ಅಧ್ಯಕ್ಷೆ ಲಕ್ಷ್ಮಿದೇವಮ್ಮ ಬೇಸರ ವ್ಯಕ್ತಪಡಿಸುವರು.  ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದಲ್ಲಿ ಮಹಿಳಾ ಮತದಾರರೇ ನಿರ್ಣಾಯಕ. ಆದರೆ ಯಾವುದೇ ಪಕ್ಷದಲ್ಲಾದರೂ ಹೆಸರಿಗಾದರೂ ಟಿಕೆಟ್ ಆಕಾಂಕ್ಷಿ ಇದ್ದಾರೆಯೇ? ಬರಿ ಮತದಾನಕ್ಕೆ ಮಾತ್ರ ಮಹಿಳೆಯನ್ನು ಸೀಮಿತಗೊಳಿಸಲಾಗಿದೆ ಎಂದರು.

'ಸಮರ್ಥರಿದ್ದರೂ ಕಡೆಗಣನೆ’‌

ಮಹಿಳೆಯರು ಎಲ್ಲ ಕ್ಷೇತ್ರಗಳಲ್ಲಿಯೂ ಸಾಧನೆ ಮಾಡುತ್ತಿದ್ದಾರೆ. ಆದರೆ ರಾಜಕೀಯ ಕ್ಷೇತ್ರದಲ್ಲಿ ಮಾತ್ರ ಹೆಚ್ಚು ಅವಕಾಶಗಳು ಇಲ್ಲವಾಗಿವೆ. ಸಮರ್ಥರಿದ್ದರೂ ರಾಜಕಾರಣದ ವಿಚಾರದಲ್ಲಿ ಮಹಿಳೆಯರನ್ನು ಕಡೆಗಣಿಸಲಾಗುತ್ತಿದೆ ಎನ್ನುವರು ಶಾಶ್ವತ ನೀರಾವರಿ ಹೋರಾಟ ಸಮಿತಿ ನಾಯಕಿ ಉಷಾ. ಲೋಕಸಭೆ ವಿಧಾನಸಭೆ ಚುನಾವಣೆಗಳಲ್ಲಿ ಸ್ಪರ್ಧಿಸಲು ಮಹಿಳೆಯರಿಗೆ ರಾಜಕೀಯ ಪಕ್ಷಗಳು ಅವಕಾಶ ಮಾಡಿಕೊಡಬೇಕು ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT