ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿಂತಾಮಣಿ | ನೀರು ಪೂರೈಕೆ ಕೆರೆಗಳು ಬಹುತೇಕ ಖಾಲಿ

ಎಂ.ರಾಮಕೃಷ್ಣಪ್ಪ
Published 6 ಮೇ 2024, 6:59 IST
Last Updated 6 ಮೇ 2024, 6:59 IST
ಅಕ್ಷರ ಗಾತ್ರ

ಚಿಂತಾಮಣಿ: ತಾಲ್ಲೂಕಿನಲ್ಲಿ ಬರಗಾಲ ಆವರಿಸಿದೆ. ನಗರಕ್ಕೆ ನೈಸರ್ಗಿಕ ನೀರು ಪೂರೈಕೆ ಪ್ರಮುಖ ಆಸರೆಯಾಗಿದ್ದ ಕನಂಪಲ್ಲಿ ಕೆರೆ ಖಾಲಿಯಾಗಿದೆ. ಇದರಿಂದ ಕುಡಿಯುವ ನೀರಿನ ಸಮಸ್ಯೆ ಗಂಭೀರ ಸ್ವರೂಪ ಪಡೆದುಕೊಂಡಿದೆ.

ಕಳೆದ ವರ್ಷ ಮಳೆ ಕೈಕೊಟ್ಟಿದ್ದರಿಂದ ಕೆರೆಗೆ ನೀರು ಹರಿದು ಬರಲೇ ಇಲ್ಲ. ದಿನದಿಂದ ದಿನಕ್ಕೆ ಬಿಸಿಲಿನ ಧಗೆ ಹೆಚ್ಚುತ್ತಿದ್ದು ಕೊಳವೆ ಬಾವಿಗಳು ಬತ್ತಿ ಹೋಗುತ್ತಿವೆ. ನಗರಕ್ಕೆ ನೀರು ಪೂರೈಕೆ ಮಾಡುವ ಮತ್ತೊಂದು ಮೂಲ ಭಕ್ತರಹಳ್ಳಿ-ಅರಸೀಕೆರೆಯಲ್ಲಿ ಕೂಡ ಕೇವಲ ಒಂದು ತಿಂಗಳಿಗಾಗುವಷ್ಟು ನೀರು ಮಾತ್ರ ಲಭ್ಯವಿದೆ.

ಮೇ ಅಂತ್ಯದೊಳಗೆ ಮಳೆ ಆಗದಿದ್ದರೆ ಮತ್ತಷ್ಟು ಸಂಕಷ್ಟ ಎದುರಿಸಬೇಕಾಗುತ್ತದೆ. ಸದ್ಯಕ್ಕೆ ನಗರದ ಯಾವುದೇ ಬಡಾವಣೆಗೆ ಟ್ಯಾಂಕರ್ ಮೂಲಕ ನೀರು ಪೂರೈಕೆ ಮಾಡುವ ಪರಿಸ್ಥಿತಿ ಸೃಷ್ಟಿಯಾಗಿಲ್ಲ. ಮಳೆಯಾಗದಿದ್ದರೆ ಸಮಸ್ಯೆ ಗಂಭೀರವಾಗುತ್ತದೆ ಎಂಬ ಆತಂಕ ನಾಗರಿಕರನ್ನು ಕಾಡುತ್ತಿದೆ.

ನಗರದಲ್ಲಿ 2011ರ ಜನಗಣತಿ ಪ್ರಕಾರ 76,306 ಜನಸಂಖ್ಯೆ ಇದೆ. ಈಗಿನ ಜನಸಂಖ್ಯೆ ಸುಮಾರು ಒಂದು ಲಕ್ಷ ಆಗಬಹುದು. ಪ್ರತಿನಿತ್ಯ ಹೊರಗಡೆಯಿಂದ ಬಂದು ಹೋಗುವವರು ಇರುತ್ತಾರೆ.

ಪ್ರತಿನಿತ್ಯ 12 ಎಂ.ಎಲ್.ಡಿ ನೀರು ಬೇಕಾಗಿದೆ. ಕನಂಪಲ್ಲಿ ಕೆರೆ ಸಂಪೂರ್ಣವಾಗಿ ಬತ್ತಿಹೋಗಿದೆ. ಪ್ರಸ್ತುತ 7 ಎಂ.ಎಲ್.ಡಿ ನೀರು ಪೂರೈಕೆ ಮಾಡಲಾಗುತ್ತಿದೆ.

ಭಕ್ತರಹಳ್ಳಿ-ಅರಸೀಕೆರೆ ಮತ್ತು ಕೊಳವೆ ಬಾವಿಗಳಿಂದ ನೀರು ಪೂರೈಕೆ ಮಾಡಬೇಕಾಗಿದೆ ಎಂದು ನಗರಸಭೆ ಅಧಿಕಾರಿಗಳು ಹೇಳುತ್ತಾರೆ.

ನಗರದ ನೀರು ಸರಬರಾಜುಗಾಗಿ 104 ಕೊಳವೆ ಬಾವಿಗಳಿವೆ.

ಜತೆಗೆ 4 ಖಾಸಗಿ ಕೊಳವೆ ಬಾವಿಗಳಿಂದ ನೀರು ಪಡೆಯಲಾಗುತ್ತಿದೆ. ನಗರದ 8 ವಾರ್ಡ್‌ಗಳಲ್ಲಿ ಖಾಸಗಿ ಕೊಳವೆ ಬಾವಿಗಳಿಂದ ನೀರು ಪೂರೈಕೆ ಮಾಡಲಾಗುತ್ತಿದೆ. ಏಪ್ರಿಲ್ ಅಂತ್ಯದಲ್ಲಿ ಒಂದು ವಾರ್ಡ್ ನಲ್ಲಿ ಮೂರು ದಿನಕ್ಕೊಮ್ಮೆ, 2 ವಾರ್ಡ್‌ಗಳಲ್ಲಿ 5 ದಿನಕ್ಕೊಮ್ಮೆ, 28 ವಾರ್ಡ್‌ಗಳಲ್ಲಿ ವಾರಕ್ಕೊಮ್ಮೆ ನೀರು ಸರಬರಾಜು ಮಾಡುತ್ತಿರುವುದಾಗಿ ಅಧಿಕಾರಿಗಳು ಮಾಹಿತಿ ನೀಡಿದರು.

ಪರ್ಯಾಯ ವ್ಯವಸ್ಥೆ ಮಾಡಿಕೊಳ್ಳದಿರುವುದರಿಂದ ಜನರು ಪರಿತಪಿಸುವಂತಾಗಿದೆ. ಇರುವ ನೀರು ಸಮರ್ಪಕವಾಗಿ ವಿತರಿಸಿದರೆ ಪರಿಸ್ಥಿತಿ ಸುಧಾರಿಸಬಹುದು. ನೀರು ಬಿಡುವ ವಾಟರ್‌ಮನ್‌ಗಳ ಕೈವಾಡ ಅತಿಯಾಗಿದೆ. ಅಧಿಕಾರಿಗಳಿಗೆ ಅವರ ಮೇಲೆ ಹಿಡಿತವೇ ಇಲ್ಲ ಎಂದು ನಾಗರಿಕರು ದೂರುತ್ತಾರೆ. ‌

ಚುನಾಯಿತ ಆಡಳಿತ ಮಂಡಳಿ ಇಲ್ಲದೆ ಅಧಿಕಾರಿಗಳಿಗೆ ಅಂಕುಶ ಹಾಕುವವರೇ ಇಲ್ಲವಾಗಿದ್ದಾರೆ ಎಂಬುದು ಸಾರ್ವಜನಿಕರ ಆರೋಪ‍.

ನಗರದ ಚೌಡರೆಡ್ಡಿಪಾಳ್ಯ, ವಿನಾಯಕ ನಗರ, ತಪತೇಶ್ವರ ಕಾಲೊನಿ, ಶ್ರೀರಾಮನಗರ, ಆಶ್ರಯ ಬಡಾವಣೆಯಲ್ಲಿ ನೀರಿನ ಸಮಸ್ಯೆ ಇದೆ. ಸಾಮಾನ್ಯವಾಗಿ ಬಡವರೇ ಹೆಚ್ಚಾಗಿ ವಾಸಿಸುವ ಈ ಪ್ರದೇಶಗಳಲ್ಲಿ ನಾಗರಿಕರ ಮನೆಗಳಲ್ಲಿ ನೀರಿನ ಸಂಗ್ರಹ ತೊಟ್ಟಿಗಳು ಇರುವುದಿಲ್ಲ ಎನ್ನುತ್ತಾರೆ ಅಧಿಕಾರಿಗಳು.

ಲಭ್ಯವಿರುವ ನೀರು ಸಮರ್ಪಕವಾಗಿ ಪೂರೈಸಿದರೆ ಈಗಲೂ ವಾರಕ್ಕೊಮ್ಮೆ ನೀರು ಪೂರೈಸಬಹುದು.

ಅಧಿಕಾರಿಗಳ ಆಡಳಿತ ವೈಫಲ್ಯ ನೀರಿನ ಸಮಸ್ಯೆ ಉಲ್ಬಣಕ್ಕೆ ಕಾರಣ ಎಂದು ನಗರಸಭೆ ಸದಸ್ಯರೊಬ್ಬರು

ಕನಂಪಲ್ಲಿ ಕೆರೆ ಖಾಲಿ

ನಗರಕ್ಕೆ ನೀರು ಪೂರೈಕೆ ಮಾಡುತ್ತಿದ್ದ ಕನಂಪಲ್ಲಿ ಕೆರೆ ಖಾಲಿಯಾಗಿದೆ. ಭಕ್ತರಹಳ್ಳಿ-ಅರಸೀಕೆರೆ ನೀರು ಇನ್ನೂ ಒಂದು ತಿಂಗಳವರೆಗೂ ಪೂರೈಸಬಹುದು. ಮೇ ಅಂತ್ಯದ ಒಳಗೆ ಮಳೆ ಬಾರದಿದ್ದರೆ ಸಾರ್ವಜನಿಕರಿಗೆ ನೀರು ಪೂರೈಸುವುದು ನಗರಸಭೆಗೆ ಸವಾಲಾಗಲಿದೆ. ಖಾಸಗಿ ಕೊಳವೆ ಬಾವಿಗಳನ್ನು ಬಾಡಿಗೆ ಆಧಾರದ ಮೇಲೆ ಪಡೆದುಕೊಳ್ಳಲು ಚಿಂತನೆ ನಡೆಸಲಾಗಿದೆ. - ಮಾಧವಿ,ಪೌರಾಯುಕ್ತೆ 

ಅಧಿಕಾರಿಗಳ ಸಿದ್ಧ ಉತ್ತರ

ಅಧಿಕಾರಿಗಳು ಮಳೆ ಕೊರತೆ, ನೀರಿಲ್ಲ ಎಂಬ ಸಿದ್ಧ ಉತ್ತರ ಹೇಳುವುದನ್ನು ಬಿಟ್ಟು ಲಭ್ಯ ಇರುವ ನೀರು ಸಮರ್ಪಕವಾಗಿ ವಿತರಿಸಿದರೆ ಈಗಲೂ ಪರಿಸ್ಥಿತಿ ಉತ್ತಮಪಡಿಸಬಹುದು. ಕೆಟ್ಟು ನಿಂತ ಪಂಪ್ ಮೋಟಾರು ಕೂಡಲೇ ರಿಪೇರಿ ಮಾಡುವುದಿಲ್ಲ. - ಅಗ್ರಹಾರ ಮೋಹನ್, ನಾಗರಿಕ

‌‌

ಮಿತ ನೀರು ಬಳಕೆಗೆ ಸಲಹೆ

ನಾಗರಿಕರಿಗೆ ನೀರು ಪೂರೈಸಲು ಮುಂಜಾಗ್ರತ ಕ್ರಮ ಕೈಗೊಳ್ಳಲಾಗುತ್ತಿದೆ. ವಿದ್ಯುತ್ ಸಮಸ್ಯೆ, ಕೆಟ್ಟು ಹೋಗುವ ಮೋಟಾರು ಪಂಪ್‌ ಸಮಸ್ಯೆ ಎದುರಾಗುತ್ತಿದೆ. ನಾಗರಿಕರು ಕೂಡ ಮಿತವಾಗಿ ನೀರು ಬಳಸಬೇಕು. ಉದ್ಯಾನಕ್ಕೆ, ವಾಹನ ತೊಳೆಯಲು ಕುಡಿಯುವ ನೀರು ಬಳಸಬೇಡಿ. ನೀರಿನ ಮಿತ ಬಳಕೆ ಕುರಿತು ಜಾಗೃತಿ ಮೂಡಿಸಲಾಗುತ್ತಿದೆ. -ನಾಗರಾಜ್, ಎ.ಇ.ಇ, ನಗರಸಭೆ, ಚಿಂತಾಮಣಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT