ಶನಿವಾರ, ಮಾರ್ಚ್ 25, 2023
22 °C
ಕನ್ನಡ ರಾಜ್ಯೋತ್ಸವದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಡಾ.ಕೆ.ಸುಧಾಕರ್ ವಿಶ್ವಾಸ

ಗಡಿಭಾಗದಲ್ಲಿ ಕನ್ನಡ ಬೆಳೆಸಲು ಒತ್ತು: ಸಚಿವ ಡಾ.ಕೆ.ಸುಧಾಕರ್ ವಿಶ್ವಾಸ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಿಕ್ಕಬಳ್ಳಾಪುರ: ರಾಜ್ಯದ ಗಡಿಭಾಗದ ಜಿಲ್ಲೆಗಳಲ್ಲಿ ಕನ್ನಡವನ್ನು ಮತ್ತಷ್ಟು ಬೆಳೆಸುವ ಕಡೆ ಒತ್ತು ನೀಡಬೇಕಿದೆ. ಈ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಕಾರ್ಯನಿರ್ವಹಿಸುತ್ತಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ.ಕೆ.ಸುಧಾಕರ್ ಹೇಳಿದರು.

ಜಿಲ್ಲಾಡಳಿತದಿಂದ ಇಲ್ಲಿನ ಸರ್‌.ಎಂ.ವಿಶ್ವೇಶ್ವರಯ್ಯ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆದ 66ನೇ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು. 

ಕನ್ನಡವನ್ನು ಪ್ರೀತಿಸುವುದರೊಂದಿಗೆ ಅನ್ಯಭಾಷೆಗಳನ್ನೂ ಕಲಿಯಬೇಕು. ಆದರೆ ಕನ್ನಡವನ್ನು ಉಸಿರಾಗಿಸಿಕೊಳ್ಳಬೇಕು. ಯುವಜನರಲ್ಲಿ ಹೆಚ್ಚಾಗಿ ಪುಸ್ತಕ ಓದುವ ಹವ್ಯಾಸ ಬೆಳೆಸಬೇಕು. ಚಿಕ್ಕಬಳ್ಳಾಪುರ, ಕೋಲಾರ ಸೇರಿದಂತೆ ಗಡಿಭಾಗದ ಜಿಲ್ಲೆಗಳಲ್ಲಿ ಕನ್ನಡವನ್ನು ಬೆಳೆಸುವ ಕೆಲಸವನ್ನು ಮಾಡಬೇಕು. ಅದಕ್ಕಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು 'ಕನ್ನಡಕ್ಕಾಗಿ ನಾವು' ಅಭಿಯಾನ ಆರಂಭಿಸಿದ್ದಾರೆ. ಕನ್ನಡದ ಗೀತೆ ಗಾಯನ, ಕನ್ನಡ ಬಳಕೆ ಮೊದಲಾದ ಕಾರ್ಯಕ್ರಮ ನಡೆದಿದೆ ಎಂದರು.

ಕನ್ನಡಿಗರಾದ ನಾವು ದೇಶದಲ್ಲಿಯೇ ಸೌಹಾರ್ದಕ್ಕೆ ಹೆಸರುವಾಸಿ. ಬೆಂಗಳೂರಿನಲ್ಲಿ 100ಕ್ಕೂ ಹೆಚ್ಚು ಭಾಷೆಗಳ ಜನರು ನೆಮ್ಮದಿಯಿಂದ ವಾಸಿಸುತ್ತಿದ್ದಾರೆ ಎಂದು ಹೇಳಿದರು.

ದೇಶಕ್ಕೆ ಸ್ವಾತಂತ್ರ್ಯ ಬಂದ ಬಳಿಕವೂ ಕರ್ನಾಟಕವು ಐದು ಪ್ರಾಂತ್ಯಗಳಾಗಿ ಹಂಚಿಹೋಗಿತ್ತು. ಅನೇಕ ಮಹನೀಯರ ಹೋರಾಟದ ಫಲವಾಗಿ 1956, ನ.1ರರಂದು ಮೈಸೂರು ರಾಜ್ಯ ಉದಯವಾಯಿತು. ನಂತರ ಕರ್ನಾಟಕ ಎಂದು ಮರುನಾಮಕರಣ ಪಡೆಯಿತು ಎಂದು ಹೇಳಿದರು. 

ದೇಶದಲ್ಲಿ ಕಾಫಿಯನ್ನು ಹೆಚ್ಚು ಬೆಳೆಯುತ್ತಿರುವ ರಾಜ್ಯ ನಮ್ಮದು. ಶೇ 40ರಷ್ಟು ರಫ್ತು ರಾಜ್ಯದಿಂದಾಗುತ್ತಿದೆ. ಪ್ರಾಕೃತಿಕ ಸಂಪನ್ಮೂಲ, ಐತಿಹಾಸಿಕ ತಾಣ ಹೀಗೆ ಎಲ್ಲ ವಿಚಾರದಲ್ಲಿಯೂ ರಾಜ್ಯಕ್ಕೆ ತನ್ನದೇ ಆದ ದೊಡ್ಡ ಐತಿಹಾಸಿಕ ಹಿನ್ನೆಲೆ ಇದೆ. ಜಗತ್ತಿನ ಅನೇಕ ಕಡೆಗಳಿಂದ ಉದ್ಯೋಗಕ್ಕಾಗಿ ಬಂದ ಜನರು ಬೆಂಗಳೂರಿನಲ್ಲಿ ವಾಸಿಸುತ್ತಿದ್ದಾರೆ. ಪ್ರತಿ ಜಿಲ್ಲೆಯಲ್ಲಿ ವಿಶಿಷ್ಟ ಆಹಾರ ಪದ್ಧತಿ ಇದೆ. ಭಾಷಾ ವೈವಿಧ್ಯವೂ ಇಲ್ಲಿದೆ. ಬಹುವೈವಿಧ್ಯಗಳನ್ನು ರಾಜ್ಯದಲ್ಲಿ ಕಾಣಬಹುದು ಎಂದರು.

ಜಿಲ್ಲೆಯಲ್ಲಿ ಎಚ್.ಎನ್.ವ್ಯಾಲಿಯಿಂದ 43 ಕೆರೆಗಳನ್ನು ತುಂಬಿಸಲಾಗಿದೆ. ಕಿಸಾನ್ ಸಮ್ಮಾನ್ ನಡಿ ರೈತರಿಗೆ ₹ 147 ಕೋಟಿ ನೀಡಲಾಗಿದೆ. 4 ಸಾವಿರ ಎಕರೆಯಲ್ಲಿ ಕೈಗಾರಿಕೆ ಹಬ್ ಅಭಿವೃದ್ಧಿಪಡಿಸಲಾಗುತ್ತಿದೆ. ಈ ಮೂಲಕ ಪ್ರತಿ ಯುವಜನರಿಗೆ ಕೆಲಸ ದೊರೆಯಲಿದೆ. ಚಿಂತಾಮಣಿ, ಗೌರಿಬಿದನೂರಿನಲ್ಲೂ ಕೈಗಾರಿಕಾ ವಲಯವನ್ನು ಮತ್ತಷ್ಟು ಅಭಿವೃದ್ಧಿಪಡಿಸಲಾಗುತ್ತಿದೆ ಎಂದರು.

ಸಾವಿರಾರು ವರ್ಷಗಳ ಇತಿಹಾಸವಿರುವ ಕನ್ನಡ ಭಾಷೆ ಮತ್ತು ಸಾಹಿತ್ಯ ಅತ್ಯಂತ ವಿಶಿಷ್ಟವಾದುದು. ಜಾಗತಿಕವಾಗಿಯೂ ಗಮನ ಸೆಳೆದಿದೆ. ಕನ್ನಡ ನಾಡುನುಡಿಯನ್ನು ಆದಿಕವಿ ಪಂಪ, ರನ್ನ, ಪೊನ್ನ , ಸರ್ವಜ್ಞ ಕವಿ, ಸಂತರು, ದಾಸರು, ಬಸವಾದಿ ಶಿವಶರಣರು ಕಟ್ಟಿ ಬೆಳೆಸಿದ್ದಾರೆ ಎಂದು ಹೇಳಿದರು.

ಜಿಲ್ಲಾ ರಾಜ್ಯೋತ್ಸವ ಪುರಸ್ಕೃತರಿಗೆ ಪ್ರಶಸ್ತಿ ಪ್ರಧಾನ ಮಾಡಲಾಯಿತು. ಜಿಲ್ಲಾಧಿಕಾರಿ ಆರ್.ಲತಾ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪಿ.ಶಿವಶಂಕರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ.ಕೆ.ಮಿಥುನ್ ಕುಮಾರ್, ನಗರಸಭೆ ಅಧ್ಯಕ್ಷ ಡಿ.ಎಸ್.ಆನಂದರೆಡ್ಡಿ ಬಾಬು, ಉಪವಿಭಾಗಾಧಿಕಾರಿ ಎ.ಎನ್.ರಘುನಂದನ್, ಹೆಚ್ಚುವರಿ ಜಿಲ್ಲಾಧಿಕಾರಿ ಎಚ್.ಅಮರೇಶ್‌, ಜಿಲ್ಲಾ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಹರೀಶ್ ವೇದಿಕೆಯಲ್ಲಿ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು