ಭಾನುವಾರ, 12 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾವಯವ ಗೊಬ್ಬರದಲ್ಲೇ ಬೆಳೆದ ಕೆಂಪು ಮೂಲಂಗಿ

ತಮಿಳುನಾಡಿನಿಂದ ಬೀಜ ತಂದು ನೆಟ್ಟ ನಿವೃತ್ತ ಯೋಧ
ಡಿ.ಜಿ.ಮಲ್ಲಿಕಾರ್ಜುನ
Published 28 ಏಪ್ರಿಲ್ 2024, 6:20 IST
Last Updated 28 ಏಪ್ರಿಲ್ 2024, 6:20 IST
ಅಕ್ಷರ ಗಾತ್ರ

ಶಿಡ್ಲಘಟ್ಟ: ಮೂಲಂಗಿ ನಮ್ಮ ದೇಹಕ್ಕೆ ಆರೋಗ್ಯಕರ. ಹೆಚ್ಚಾಗಿ ಬಿಳಿಬಣ್ಣದ ಮೂಲಂಗಿ ಎಲ್ಲೆಡೆ ಕಂಡುಬರುತ್ತದೆ. ಆದರೆ ಕೆಂಪು ಮೂಲಂಗಿ ನಮಗೆ ಕಣ್ಣಿಗೆ ಕಾಣಿಸುವುದು ತುಂಬಾ ವಿರಳ. ಆದರೆ ಕೆಂಪು ಮೂಲಂಗಿಯಿಂದ ಸಿಗುವ ಆರೋಗ್ಯ ಪ್ರಯೋಜನ ಮಾತ್ರ ಹೆಚ್ಚು.

ಅದಕ್ಕೆಂದೇ ನಿವೃತ್ತ ಯೋಧ ಆರ್.ವಿ.ಮಂಜುನಾಥ್, ತಮಿಳುನಾಡಿನ ದಿಂಡಿಗಲ್‌ನಿಂದ ಬೀಜಗಳನ್ನು ತಂದು ನೆಟ್ಟು ಉತ್ತಮ ಫಸಲನ್ನು ಪಡೆದಿದ್ದಾರೆ.

ಸೇನೆಯಿಂದ ನಿವೃತ್ತರಾದ ಮೇಲೆ ಪಲಿಚೇರ್ಲು ಬಳಿ ಐದು ಎಕರೆ ಜಮೀನಿನಲ್ಲಿ ಆರ್.ವಿ.ಮಂಜುನಾಥ್ ವಿವಿಧ ರೀತಿಯ ಬೆಳೆಗಳನ್ನು ಬೆಳೆಯುತ್ತಾ ಕೃಷಿ ಪ್ರಯೋಗಗಳನ್ನು ಕೈಗೊಂಡಿದ್ದಾರೆ.

‘ಯಾವುದೋ ಮದುವೆಗೆಂದು ಹೋದಾಗ, ದಿಂಡಗಲ್‌ನಲ್ಲಿ ಕೆಂಪು ಮೂಲಂಗಿ ಬೆಳೆದಿರುವುದನ್ನು ನೋಡಿದೆ. ನಮ್ಮ ಕಡೆ ಬೆಳೆಯದ ಬೆಳೆಯಿದು. ಇದನ್ನು ನನ್ನ ತೋಟದಲ್ಲಿ ಏಕೆ ಬೆಳೆಯಬಾರದು ಎಂದು ಅಲ್ಲಿಂದ ಬೀಜಗಳನ್ನು ತಂದೆ. ಅರ್ಧ ಎಕರೆಗೆ ಬೆಳೆ ಹಾಕಿ ನಲವತ್ತು ದಿನಗಳಾಗಿವೆ. ಅಂದಾಜು ಎರಡೂವರೆ ಟನ್ ಇಳುವರಿ ಪಡೆಯುತ್ತೇನೆ. ನಮ್ಮಲ್ಲಿ ಇದರ ಮಾರುಕಟ್ಟೆ ಕಡಿಮೆ. ತಮಿಳುನಾಡಿನಲ್ಲಿ ಬೇಡಿಕೆ ಇದೆ. ಈಗೀಗ ಇದರ ಪೌಷ್ಟಿಕಾಂಶದ ಬಗ್ಗೆ ಅರಿವಾಗಿ ಜನರು ಖರೀದಿಸುತ್ತಿದ್ದಾರೆ’ ಎಂದು ನಿವೃತ್ತ ಯೋಧ ಆರ್.ವಿ.ಮಂಜುನಾಥ್ ತಿಳಿಸಿದರು.

‘ಸಂಪೂರ್ಣ ಸಾವಯವ ಪದ್ಧತಿಯಲ್ಲಿಯೇ ಬೆಳೆದಿರುವೆ. ಬೇವಿನೆಣ್ಣೆ ಮಾತ್ರ ಸಿಂಪಡಿಸಲಾಗಿದೆ. ಸಾವಯವ ಗೊಬ್ಬರ ಕೊಟ್ಟಿರುವೆ. ಪೌಷ್ಟಿಕಾಂಶಭರಿತ ತರಕಾರಿಗಳನ್ನು ಜನರಿಗೆ ತಲುಪಿಸುವ ಉದ್ದೇಶ ನನ್ನದು. ಅದಕ್ಕಾಗಿ ಕೆಲವು ಸಾಮಾಜಿಕ ಜಾಲತಾಣಗಳಲ್ಲಿ ನನ್ನ ಮೊಬೈಲ್ ಸಂಖ್ಯೆ ನೀಡಿ ಕೊಳ್ಳಬಯಸುವವರು ಸಂಪರ್ಕಿಸಲು ಕೋರಿದ್ದೇನೆ. ರೈತರು ಗ್ರಾಹಕರು ನೇರವಾಗಿ ಸಂಪರ್ಕ ಸಾಧಿಸಿದಾಗ, ರೈತನ ಬೆಳೆಗೆ ಒಳ್ಳೆಯ ಬೆಲೆ ಬರುತ್ತದೆ’ ಎಂದು ವಿವರಿಸಿದರು.

ಕೆಂಪು ಮೂಲಂಗಿಯಲ್ಲಿ ಕಂಡು ಬರುವ ಹೇರಳವಾದ ವಿಟಮಿನ್ ಸಿ, ವಿಟಮಿನ್ ಬಿ9, ನಾರಿನ ಅಂಶ, ಪೊಟ್ಯಾಶಿಯಂ ಅಂಶ ಮತ್ತು ಮ್ಯಾಗ್ನಿಷಿಯಂ ಅಂಶ ದೇಹದ ರೋಗ ನಿರೋಧಕ ವ್ಯವಸ್ಥೆಯನ್ನು ಸದಾ ಚುರುಕಾಗಿ ಕಾರ್ಯ ನಿರ್ವಹಿಸುವಂತೆ ನೋಡಿಕೊಳ್ಳುತ್ತದೆ. ನರ ಮಂಡಲದ ವ್ಯವಸ್ಥೆಯನ್ನು ಅಚ್ಚುಕಟ್ಟಾಗಿ ಕಾಪಾಡುತ್ತದೆ. ಸಾಧಾರಣವಾಗಿ ನಾವು ಪ್ರತಿ ದಿನ ಸೇವಿಸುವ ಎಲ್ಲ ಬಗೆಯ ತರಕಾರಿಗಳಲ್ಲಿ ಸಲ್ಫರ್ ಅಂಶ ಕಂಡು ಬರುವುದಿಲ್ಲ. ಆದರೆ ಮೂಲಂಗಿಗಳಲ್ಲಿ ಸಲ್ಫರ್ ಅಂಶ ಇರುವುದರಿಂದ ಹೊಟ್ಟೆ ಹಸಿವು ಹೆಚ್ಚಾಗಿ ಸದಾ ತಾಜಾ ಆಹಾರ ಸೇವಿಸಲು ಪ್ರೇರೇಪಿಸುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT