ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಚಿಂತಾಮಣಿ | ಖಾಸಗಿ ಶಾಲೆಗೆ ಸೆಡ್ಡು ಹೊಡೆಯುವ ಮಾದರಿ ಶಾಲೆ

ಮೂಲಭೂತ ಸೌಲಭ್ಯಗಳಿಂದ ಕಲಿಕೆಗೆ ಪೂರಕ ವಾತಾವರಣ
Published 8 ಜೂನ್ 2024, 7:37 IST
Last Updated 8 ಜೂನ್ 2024, 7:37 IST
ಅಕ್ಷರ ಗಾತ್ರ

ಚಿಂತಾಮಣಿ: ಚಿಲಕಲನೇರ್ಪು ಹೋಬಳಿಯ ಮರಬಹಳ್ಳಿ ಪುಟ್ಟ ಗ್ರಾಮದಲ್ಲಿ ಸುಮಾರು 90 ಮನೆಗಳಿದ್ದು, ಶೇ 90 ರಷ್ಟು ಪರಿಶಿಷ್ಟ ಪಂಗಡದ ಸಮುದಾಯದವರಿದ್ದಾರೆ. ತಾಲ್ಲೂಕು ಕೇಂದ್ರದಿಂದ 18 ಕಿ.ಮೀ ದೂರವಿರುವ ಈ ಗ್ರಾಮದಲ್ಲಿ ಗ್ರಾಮ ಪಂಚಾಯಿತಿ, ತಾಲ್ಲೂಕು ಪಂಚಾಯಿತಿ, ಸಾರ್ವಜನಿಕ ಶಿಕ್ಷಣ ಇಲಾಖೆ, ಹಳೆ ವಿದ್ಯಾರ್ಥಿಗಳು ಹಾಗೂ ದಾನಿಗಳ ನೆರವಿನಿಂದ ಎಲ್ಲಾ ಮೂಲಭೂತ ಸೌಲಭ್ಯಗಳಿದ್ದು, ಶಿಕ್ಷಣಕ್ಕೆ ಉತ್ತಮ ವಾತಾವರಣವಿದೆ.

ಶಿಕ್ಷಕರು ಮನಸ್ಸು ಮಾಡಿದರೆ ಶಾಲೆಯನ್ನು ಸಾಕಷ್ಟು ಅಭಿವೃದ್ಧಿ ಪಥದಲ್ಲಿ ಮನ್ನಡೆಸಿ ಮಾದರಿ ಶಾಲೆಯನ್ನಾಗಿ ಮಾಡಬಹುದು ಎನ್ನುವುದಕ್ಕೆ ಮರಬಹಳ್ಳಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಉತ್ತಮ ನಿದರ್ಶನ. ಗ್ರಾಮೀಣ ಭಾಗದ ಶಾಲೆಯಾದರೂ 2016, 2017, 2018 ಸತತವಾಗಿ ಮೂರು ವರ್ಷ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯಿಂದ ಜಿಲ್ಲಾ ಮಟ್ಟದ ಪರಿಸರಮಿತ್ರ ಹಸಿರು ಶಾಲೆಯ ಪ್ರಶಸ್ತಿ ಮುಡಿಗೇರಿಸಿಕೊಂಡು ಹ್ಯಾಟ್ರಿಕ್ ಸಾಧನೆ ಮಾಡಿದೆ. ಸ್ವಚ್ಛತಾ ಶಾಲೆಯಾಗಿಯೂ ಆಯ್ಕೆಗೊಂಡಿದೆ.

ಖಾಸಗಿ ಶಾಲೆಗಳಿಗೆ ಸೆಡ್ಡು ಹೊಡೆಯುವಂತೆ ಶಾಲೆ ಕಂಗೊಳಿಸುತ್ತಿದೆ. ಶಾಲೆಯ ಆವಣದಲ್ಲಿ ತೆಂಗು, ಸಪೋಟಾ, ನೇರಳೆ, ನಿಂಬೆ, ನಲ್ಲಿ, ಬಾಳೆ, ಹಲಸು ಸೇರಿದಂತೆ ವಿವಿಧ ಪ್ರಕಾರದ ಹಣ್ಣು ಹಾಗೂ ಹೂವಿನ ಗಿಡಗಳನ್ನು ಬೆಳೆಸಲಾಗಿದೆ. ಶಾಲೆಯ ಕೈತೋಟವಿದ್ದು ತರಕಾರಿಯನ್ನು ಬೆಳೆಯಲಾಗುತ್ತಿದೆ. ಪ್ರತಿದಿನ ಶಾಲಾ ಸಮಯದ ಮುಂಚೆ ಹಾಗೂ ಶಾಲಾ ಸಮಯದ ನಂತರ ವಿದ್ಯಾರ್ಥಿಗಳು ಗಿಡಗಳಿಗೆ ನೀರು ಉಣಿಸುವುದು, ಕಳೆ ಕೀಳುವುದು, ಪಾತಿ ಮಾಡುವ ಕಾರ್ಯದಲ್ಲಿ ತೊಡಗುತ್ತಾರೆ. ಪರಿಸರ ಸ್ವಚ್ಛತೆ ಕೆಲಸ ಮಾಡುತ್ತಾರೆ.

ಶಾಲೆಯಲ್ಲಿ ಶೈಕ್ಷಣಿಕ ಬೆಳವಣಿಗೆ, ಕಲಿಕೆಗೆ ಪೂರಕವಾದ ವಾತಾವರಣವಿದೆ. ದಾನಿಗಳ ನೆರವಿನಿಂದ ಗಣಪತಿ ದೇವಾಲಯ ನಿರ್ಮಾಣ ಮಾಡಲಾಗಿದೆ. ಕಂಪ್ಯೂಟರ್, ಗ್ರಥಾಲಯ, ವಿಜ್ಞಾನ ಕಿಟ್ ಲಭ್ಯವಿದೆ. ಗಂಡು ಮತ್ತು ಹೆಣ್ಣು ಮಕ್ಕಳಿಗೆ ಪ್ರತ್ಯೇಕ ಶೌಚಾಲಯ, ಉತ್ತಮ ನೀರಿನ ವ್ಯವಸ್ಥೆ ಇದ್ದು ಯಾವುದೇ ಖಾಸಗಿ ಶಾಲೆಗಿಂತ ಕಡಿಮೆ ಇಲ್ಲ.

ಶಾಲೆಯ ಆವರಣದಲ್ಲೇ ಅಂಗನವಾಡಿ ಇದೆ. ಮಧ್ಯಾಹ್ನ ಬಿಸಿಯೂಟದ ಅಡುಗೆ ಮನೆ, ದಾಸ್ತಾನು ಕೊಠಡಿ, ಎರಡು ನೀರಿನ ಸಂಪ್, ನೀರಿನ ಫಿಲ್ಟರ್ ಸೌಲಭ್ಯವಿದೆ. ಶಾಲೆಯಲ್ಲಿ ಪ್ರತಿ ವರ್ಷ ವಿಶ್ವ ಪರಿಸರ ದಿನಾಚರಣೆ, ಕಲಿಕೋತ್ಸವ ದಿನಾಚರಣೆ ಹಾಗೂ ರಾಷ್ಟ್ರೀಯ ಹಬ್ಬಗಳನ್ನು ವಿಜೃಂಭಣೆಯಿಂದ ಆಚರಿಸುತ್ತಾರೆ.

ಮಕ್ಕಳಿಗೆ ಬಾಲ್ಯದಿಂದಲೇ ಪರಿಸರ ಮಹತ್ವ ತಿಳಿಸಿಕೊಡುವ ಹಾಗೂ ಪರಿಸರ ಕಾಳಜಿ ಮೂಡಿಸಲು ಶ್ರಮಿಸುತ್ತಿದ್ದೇವೆ. ಮಕ್ಕಳನ್ನು ಸೇರಿಸಿಕೊಂಡು ಹಸಿರನ್ನು ನಿರ್ವಹಣೆ ಮಾಡುತ್ತಿರುವುದರಿಂದ ಅವರಿಗೆ ಜವಾಬ್ದಾರಿ ಬಂದಿದೆ. ಮಕ್ಕಳು ಸಂತೋಷದಿಂದ ಪ್ರತಿನಿತ್ಯ ಗಿಡಗಳ ಬಗ್ಗೆ ಕಾಳಜಿ ಮಾಡುತ್ತಾರೆ. ಹಸಿರು ಮೂಡಿಸುವ ಕಾರ್ಯಕ್ರಮಕ್ಕೆ ಶಾಲೆಯ ಎಸ್‌ಡಿಎಂಸಿ ಸದಸ್ಯರು ಹಾಗೂ ಪೋಷಕರ ಸಹಕಾರ ದೊರೆಯುತ್ತಿದೆ ಎಂಬುದು ಮುಖ್ಯ ಶಿಕ್ಷಕ ರಮೇಶ್ ಅವರ ಮಾತಾಗಿದೆ.

ಶಾಲೆಯ ಆವರಣವನ್ನು ಹೇಗಾದರೂ ಮಾಡಿ ಹಸಿರಿನಿಂದ ಕಂಗೊಳಿಸುವಂತೆ ಮಾಡಬೇಕು ಎಂಬ ಉದ್ದೇಶದಿಂದ ವರ್ಷದಿಂದ ವರ್ಷಕ್ಕೆ ಸಸಿಗಳನ್ನು ನೆಡುತ್ತಾ ಪೋಷಣೆ ಮಾಡಲಾಗುತ್ತದೆ. ನಮ್ಮ ಶ್ರಮ ಫಲಿಸಿದ್ದು ಈಗ ಶಾಲೆಯ ಆವರಣ ಹಸಿರಿನಿಂದ ಕಂಗೊಳಿಸುತ್ತಿದೆ. ಗ್ರಾಮ ಪಂಚಾಯಿತಿ ವತಿಯಿಂದ ನೀರಿನ ಪೂರೈಕೆ ಸೌಲಭ್ಯವಿದೆ. ಕೆಲವು ಗಿಡಗಳಿಗೆ ಹನಿ ನೀರಾವರಿ ಪದ್ಧತಿಯನ್ನು ಅಳವಡಿಸಲಾಗಿದೆ ಎಂದು ಸಂತಸ ವ್ಯಕ್ತಪಡಿಸುತ್ತಾರೆ ಮಕ್ಕಳು.

ಶಾಲೆಯಲ್ಲಿ 25 ವಿದ್ಯಾರ್ಥಿಗಳಿದ್ದು, ಇಬ್ಬರು ಶಿಕ್ಷಕರಿದ್ದಾರೆ. ಮುಖ್ಯ ಶಿಕ್ಷಕ ರಮೇಶ್ ಕಳೆದ 29 ವರ್ಷಗಳಿಂದ ಇದೇ ಶಾಲೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. 2007ನೇ ಸಾಲಿನಲ್ಲಿ ಅವರು ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಕ್ಲಸ್ಟರ್ ಮಟ್ಟದ ಉತ್ತಮ ಶಾಲೆ ಸೇರಿದಂತೆ ಇನ್ನೂ ಹಲವು ಪ್ರಶಸ್ತಿಗಳನ್ನು ಶಾಲೆ ತನ್ನ ಮುಡಿಗೇರಿಸಿಕೊಂಡಿದೆ.

ಶಾಲೆಯಲ್ಲಿ ಮಕ್ಕಳಿಗೆ ಪೀಠೋಪಕರಣಗಳ ಕೊರತೆ ಇದೆ. ನಲಿ-ಕಲಿ ಕೊಠಡಿಗೆ ಅಗತ್ಯವಾದ ವಿಶೇಷ ವೃತ್ತಾಕಾರದ ಟೇಬಲ್ ಮತ್ತಿತರ ಪೀಠೋಪಕರಣಗಳ ಅಗತ್ಯವಿದೆ. ದಾನಿಗಳು ಕೈಜೋಡಿಸಿದರೆ ಅನುಕೂಲವಾಗುತ್ತದೆ ಎಂಬುದು ಪೋಷಕರ ಮಾತಾಗಿದೆ.

ಮರಬಹಳ್ಳಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಹಸಿರುಮಯ ವಾತಾವರಣ
ಮರಬಹಳ್ಳಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಹಸಿರುಮಯ ವಾತಾವರಣ
ರಮೇಶ್
ರಮೇಶ್

ಕಲಿಕಾ ವಾತಾವರಣ ಮುಂದುವರೆಯಲಿ ಗ್ರಾಮೀಣ ಭಾಗದ ಮಕ್ಕಳಿಗೆ ಕಾನ್ವೆಂಟ್ ಮಾದರಿಯ ಉತ್ತಮ ಗುಣಮಟ್ಟದ ಶಿಕ್ಷಣ ದೊರೆಯಬೇಕು. ಬಹುತೇಕ ಪರಿಶಿಷ್ಟ ಪಂಗಡದವರೇ ವಾಸವಾಗಿರುವ ಗ್ರಾಮದಲ್ಲಿ ಉತ್ತಮ ಕಲಿಕಾ ವಾತಾವರಣವನ್ನು ರೂಪಿಸಲು ಹಳೆಯ ವಿದ್ಯಾರ್ಥಿಗಳು ಗ್ರಾಮಸ್ಥರು ಸಹಕಾರ ನೀಡಿದ್ದಾರೆ. ಇದೇ ವರ್ಷದ ಅಕ್ಟೋಬರ್‌ನಲ್ಲಿ ನಿವೃತ್ತಿ ಹೊಂದುತ್ತೇನೆ. ಮುಂದೆ ಬರುವವರು ಕಲಿಕಾ ವಾತಾವರಣವನ್ನು ಇದೇ ರೀತಿ ಮುಂದುವರೆಸಿಕೊಂಡು ಹೋಗಬೇಕು ಎನ್ನುವುದು ನನ್ನ ಕಳಕಳಿ. ರಮೇಶ್ ಮುಖ್ಯ ಶಿಕ್ಷಕ ===== ಮಾದರಿ ಶಾಲೆಗೆ ಶಿಕ್ಷಕರ ಪಾತ್ರ ಮಹತ್ವದ್ದು   ಹಿಂದುಳಿದ ಪ್ರದೇಶದ ಗ್ರಾಮೀಣ ಸರ್ಕಾರಿ ಶಾಲೆ ಖಾಸಗಿ ಶಾಲೆಗಳಿಗೆ ಸೆಡ್ಡು ಹೊಡೆಯುವಂತೆ ಮಾದರಿ ಶಾಲೆಯಾಗಿ ಮಾಡುವುದರಲ್ಲಿ ಮುಖ್ಯ ಶಿಕ್ಷಕ ರಮೇಶ್ ಪಾತ್ರ ಮಹತ್ವದ್ದು. ಇದೇ ಶಾಲೆಯಲ್ಲಿ ಕರ್ತವ್ಯಕ್ಕೆ ಸೇರಿ ಕಳೆದ 29 ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವ ರಮೇಶ್ ಸಮುದಾಯದ ಸಹಭಾಗಿತ್ವದಲ್ಲಿ ಶಾಲೆಯ ಅಭಿವೃದ್ಧಿಗಾಗಿ ಸಾಕಷ್ಟು ಶ್ರಮಿಸಿದ್ದಾರೆ. ಮುನಿಯಪ್ಪ ಪೋಷಕ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT