ಗುರುವಾರ, 23 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿಂತಾಮಣಿ | 8 ತಿಂಗಳಿನಿಂದ ಸಿಗದ ಪ್ರೋತ್ಸಾಹ ಧನ: ಸಂಕಷ್ಟದಲ್ಲಿ ಹೈನೋದ್ಯಮ

Published 7 ಮೇ 2024, 6:16 IST
Last Updated 7 ಮೇ 2024, 6:16 IST
ಅಕ್ಷರ ಗಾತ್ರ

ಚಿಂತಾಮಣಿ: ಬರಗಾಲದಿಂದ ಬಯಲುಸೀಮೆ ಜಿಲ್ಲೆಗಳು ತತ್ತರಿಸುತ್ತಿವೆ. ಜಾನುವಾರುಗಳು ಮೇವು ಮತ್ತು ನೀರಿಗಾಗಿ ಪರದಾಡುವಂತಾಗಿದೆ. ‌

ತಾಲ್ಲೂಕಿನ ಜನರ ಜೀವನಾಡಿಯಾಗಿದ್ದ ಹೈನುಗಾರಿಕೆ ಅವಸಾನದ ಹಂಚಿಗೆ ಸಾಗುತ್ತಿದೆ. ಇಂತಹ ಸಂಕಷ್ಟ ಕಾಲದಲ್ಲಿ ಸರ್ಕಾರ ಹಾಲು ಉತ್ಪಾದಕರಿಗೆ ನೀಡಬೇಕಾದ ಪ್ರೋತ್ಸಾಹ ದನವನ್ನು ಕಳೆದ ಸೆಪ್ಟೆಂಬರ್ ತಿಂಗಳಿನಿಂದ ಬಿಡುಗಡೆ ಮಾಡದಿರುವುದು ಗಾಯದ ಮೇಲೆ ಬರೆ ಎಳೆದಂತಾಗಿದೆ.

ಒಂದೆಡೆ ಕಡು ಬೇಸಿಗೆಯಿಂದ ಮೇವು ನೀರಿಗಾಗಿ ತತ್ವಾರ ಎದುರಾಗಿದ್ದರೆ ಮತ್ತೊಂದೆಡೆ ಜಾನುವಾರು ಮೇವು, ಹಿಂಡಿ, ಚೆಕ್ಕೆ, ಬೂಸಾ ಮತ್ತಿತರ ಜಾನುವಾರ ಆಹಾರ ಬೆಲೆ ಹೆಚ್ಚಾಗಿದೆ. ಜಿಲ್ಲೆಯಲ್ಲಿ ಹೆಚ್ಚಿನ ರೈತರು ಹೈನುಗಾರಿಕೆ ಅವಲಂಬಿಸಿದ್ದಾರೆ. ಬೇಸಿಗೆ ಬಿಸಿಲಿನ ಝಳದಿಂದ ಹಾಲಿನ ಗುಣಮಟ್ಟ ಹಾಗೂ ಉತ್ಪಾದನೆಯೂ ಕುಸಿಯುತ್ತಿದೆ. ಉತ್ಪಾದನೆಗೆ ಅನುಗುಣವಾಗಿ ಹಾಲಿನ ಬೆಲೆ ನಿಗದಿ ಮಾಡುತ್ತಿಲ್ಲ. ಪ್ರತಿ ಲೀಟರ್ ಹಾಲಿಗೆ ₹32.50 ಬೆಲೆಯನ್ನು ಒಕ್ಕೂಟ‌ ನಿಗದಿ ಮಾಡಿದೆ. ರೈತರ ಹೋರಾಟ ಮತ್ತು ಒತ್ತಾಯದ ಫಲವಾಗಿ ‘ಕ್ಷೀರ ಸಿರಿ' ಯೋಜನೆಯಡಿ ಪ್ರತಿ ಲೀಟರ್‌ಗೆ ₹5 ಪ್ರೋತ್ಸಾಹ ಧನ ನೀಡುತ್ತಿದೆ.

ಪ್ರೋತ್ಸಾಹ ಧನ ಪ್ರತಿ ತಿಂಗಳು ಉತ್ಪಾದಕರ ಕೈ ಸೇರುವುದಿಲ್ಲ. 2-3 ತಿಂಗಳಿಗೊಮ್ಮೆ ಬಿಡುಗಡೆ ಮಾಡಲಾಗುತ್ತಿತ್ತು. ಅದರಲ್ಲೂ ಸಾಮಾನ್ಯ ಮತ್ತು ಪರಿಶಿಷ್ಟ ಜಾತಿ, ಪಂಗಡ ಎಂದು ವಿಭಜಿಸಲಾಗಿದೆ. ಪರಿಶಿಷ್ಟ ಜಾತಿ, ಪಂಗಡದ ಉತ್ಪಾದಕರಿಗೆ ಮಾರ್ಚ್‌ವರೆಗೂ ಪ್ರೋತ್ಸಾಹ ಧನ ಬಿಡುಗಡೆಯಾಗಿದೆ. ‌

ಸಾಮಾನ್ಯ ವರ್ಗದ ಉತ್ಪಾದಕರಿಗೆ 2023ರ ಸೆಪ್ಟೆಂಬರ್‌ನಿಂದ ಪ್ರೋತ್ಸಾಹ ಧನ ಬಿಡುಗಡೆಯಾಗಿಲ್ಲ. ಸಂಕಷ್ಟದಲ್ಲಿ ತತ್ತರಿಸುತ್ತಿರುವ ಉತ್ಪಾದಕರು ಪದೇ ಪದೇ ಡೇರಿಗೆ ಎಡತಾಕುವಂತಾಗಿದೆ. ತಾಲ್ಲೂಕಿನಲ್ಲಿ 22 ಮಹಿಳಾ ಸಂಘಗಳು ಸೇರಿ ಒಟ್ಟು 234 ಹಾಲು ಉತ್ಪಾದಕರ ಸಹಕಾರ ಸಂಘಗಳಿವೆ. ಸುಮಾರು 10 ಸಾವಿರ ಜನ ಹಾಲು ಉತ್ಪಾದಕರಿದ್ದಾರೆ. ಪ್ರತಿನಿತ್ಯ 1.11 ಲಕ್ಷ ಲೀಟರ್ ಹಾಲು ಉತ್ಪಾದನೆ ಆಗುತ್ತಿದೆ. ಉತ್ಪಾದಕರಿಗೆ ವೈಜ್ಞಾನಿಕವಾಗಿ ಬೆಲೆ ನೀಡುತ್ತಿಲ್ಲ ಎಂಬ ಅಸಮಾಧಾನವನ್ನು ರೈತರು ವ್ಯಕ್ತಪಡಿಸಿದ್ದಾರೆ.

ಹಲವು ಬಾರಿ ಮನವಿ, ಹೋರಾಟ, ಒತ್ತಾಯದಿಂದ 2008-09ರಲ್ಲಿ ಲೀಟರ್ ಗೆ ₹2 ಪ್ರೋತ್ಸಾಹ ಧನ ನಿಗದಿಯಾಗಿತ್ತು. 2013ರಲ್ಲಿ ಪ್ರೋತ್ಸಾಹ ಧನ ಲೀಟರ್‌ಗೆ ₹2ರಿಂದ 4 ಏರಿಕೆ ಮಾಡಲಾಯಿತು. ಹೈನೋದ್ಯಮ ಪ್ರೋತ್ಸಾಹಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಪ್ರಸ್ತುತ ಲೀಟರ್‌ಗೆ ₹5 ಪ್ರೋತ್ಸಾಹ ಧನ ನೀಡುತ್ತಿದೆ. ಕಳೆದ 4-5 ವರ್ಷಗಳಿಂದ ಏರಿಕೆಯೂ ಆಗಿಲ್ಲ. ಕಾಲ ಕಾಲಕ್ಕೆ ನೀಡುವುದು ಇಲ್ಲ. 6 ತಿಂಗಳಿಗೋ, ವರ್ಷಕ್ಕೊ ರೈತರ ಖಾತೆಗೆ ಜಮಾ ಆಗುತ್ತದೆ ಎಂದು ಉತ್ಪಾದಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಚಳಿಗಾಲದ ವಿಧಾನ ಮಂಡಲ ಅಧಿವೇಶನದಲ್ಲಿ ಉತ್ಪಾದಕರಿಗೆ ನೀಡುತ್ತಿರುವ ಪ್ರೋತ್ಸಾಹಧನ ₹2 ಹೆಚ್ಚಿಸಲಾಗುವುದು ಎಂದು ಪಶು ಸಂಗೋಪನಾ ಇಲಾಖೆ ಸಚಿವ ಕೆ.ವೆಂಕಟೇಶ್ ಭರವಸೆ ನೀಡಿದ್ದರು. ಭರವಸೆಯೂ ಈಡೇರಲಿಲ್ಲ. ಪ್ರಸ್ತುತ ನೀಡುತ್ತಿದ್ದ ಹಣವನ್ನು ಕಳೆದ 7 ತಿಂಗಳಿನಿಂದ ಬಿಡುಗಡೆ ಮಾಡಿಲ್ಲ. ಲೋಕಸಭೆ ಚುನಾವಣೆ ಪ್ರಚಾರದಲ್ಲಿ ನಿರತವಾಗಿರುವ ಸರ್ಕಾರ ಮತ್ತು ವಿರೋಧಪಕ್ಷದ ಜನಪ್ರತಿನಿಧಿಗಳು ಪರಸ್ಪರ ಕೆಸರೆರಚಾಟದಲ್ಲಿ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಉತ್ಪಾದನಾ ವೆಚ್ಚವನ್ನು ಆಧರಿಸಿ ವೈಜ್ಞಾನಿಕವಾಗಿ ಹಾಲಿಗೆ ಬೆಲೆ ನಿಗದಿ ಮಾಡಬೇಕು. ಪ್ರೋತ್ಸಾಹ ಧನ ಕೂಡ ಹೆಚ್ಚಿಸಬೇಕು ಮತ್ತು ಬಾಕಿ ಕೂಡಲೇ ಬಿಡುಗಡೆ ಮಾಡಬೇಕು ಎಂದು ರೈತರು ಒತ್ತಾಯಿಸಿದ್ದಾರೆ. ಆದರೆ, ಸರ್ಕಾರ ಮತ್ತು ಕರ್ನಾಟಕ ಹಾಲು ಮಹಾಮಂಡಲ (ಕೆ.ಎಂ.ಎಫ್) ಇದರ ಬಗ್ಗೆ ಚಕಾರವೆತ್ತದೆ ಪಶು ಆಹಾರದ ಬೆಲೆ 50 ಕೆ.ಜಿ.ಮೂಟೆಗೆ ₹25 ಏರಿಕೆ ಏರಿಕೆ ಮಾಡಿರುವುದು ಖಂಡನೀಯ ಎನ್ನುತ್ತಾರೆ ಹಾಲು ಉತ್ಪಾದಕ ಕೈವಾರದ ವಿಶ್ವನಾಥ್.

ಹೈನುಗಾರರ ಶ್ರಮಕ್ಕೆ ತಕ್ಕ ಬೆಲೆ ಸಿಗುತ್ತಿಲ್ಲ. ಜೀವನ ನಡೆಸುವುದೇ ಕಷ್ಟಕರವಾಗಿದೆ. ಉತ್ಪಾದಕರ ಒತ್ತಾಯದಿಂದ ಸರ್ಕಾರ ಲೀಟರ್‌ಗೆ ₹3 ಹೆಚ್ಚಿಸಿತು. ಆದರೆ, ಒಕ್ಕೂಟ ಹಾಲಿನ ಬೆಲೆ ಒಮ್ಮೆ ₹2, ಮತ್ತೊಮ್ಮೆ ₹1 ಕಡಿಮೆ ಮಾಡುವ ಮೂಲಕ ಸರ್ಕಾರ ನೀಡಿದ್ದನ್ನು ಕಿತ್ತುಕೊಂಡಿತು ಎಂದು ಉತ್ಪಾದಕರು ದೂರುತ್ತಾರೆ.

ಹಸುಗಳಿಗೆ ಕೆಚ್ಚಲು ಬಾವು ಮತ್ತು ಬೊಬ್ಬೆ ರೋಗ ಅಧಿಕವಾಗಿದೆ. ಚಿಕಿತ್ಸಾ ವೆಚ್ಚ ಭರಿಸುವುದು ಕಷ್ಟಕರವಾಗಿದೆ. ಹೈನೋದ್ಯಮ ಕಣ್ಮುಚ್ಚುವ ದಿನಗಳು ದೂರವಿಲ್ಲ
ವಿಶ್ವನಾಥ್ ನಿರ್ದೇಶಕ ಹಾ.ಉ.ಸ.ಸ ಕೈವಾರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT