ಶನಿವಾರ, 2 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋಚಿಮುಲ್‌ಗೆ ಚುನಾವಣೆ; ನನೆಗುದಿಗೆ ವಿಭಜನೆ

ಏ.28ಕ್ಕೆ ಒಕ್ಕೂಟಕ್ಕೆ ಚುನಾವಣೆ ನಿಗದಿ; ಬಿಜೆಪಿಗೆ ಚುನಾವಣಾ ಅಸ್ತ್ರವಾಗುವ ಸಾಧ್ಯತೆ
ಡಿ.ಎಂ.ಕುರ್ಕೆ ಪ್ರಶಾಂತ್
Published 8 ಫೆಬ್ರುವರಿ 2024, 6:28 IST
Last Updated 8 ಫೆಬ್ರುವರಿ 2024, 6:28 IST
ಅಕ್ಷರ ಗಾತ್ರ

ಚಿಕ್ಕಬಳ್ಳಾಪುರ: ಕೋಲಾರ, ಚಿಕ್ಕಬಳ್ಳಾಪುರ ಹಾಲು ಒಕ್ಕೂಟದ ಆಡಳಿತ ಮಂಡಳಿಯ ನಿರ್ದೇಶಕ ಸ್ಥಾನಗಳಿಗೆ ಏ.28ಕ್ಕೆ ಚುನಾವಣೆ ನಿಗದಿಯಾಗಿದೆ. ಚುನಾವಣೆ ನಿಗದಿಯಾಗಿರುವುದು ಕೋಚಿಮುಲ್ ವಿಭಜನೆ ಮತ್ತು ಚಿಕ್ಕಬಳ್ಳಾಪುರ ಹಾಲು ಒಕ್ಕೂಟ (ಚಿಮುಲ್) ಅಸ್ತಿತ್ವವು ನನೆಗುದಿಗೆ ಬೀಳುವ ಸಾಧ್ಯತೆ ಹೆಚ್ಚಿಸಿದೆ. 

ಕೋಚಿಮುಲ್ ಪ್ರತ್ಯೇಕಗೊಳಿಸಬೇಕು ಎನ್ನುವ ಜಿಲ್ಲೆಯ ಬಿಜೆಪಿ ಮುಖಂಡರ ಕೂಗು ಅರಣ್ಯ ರೋದನವಾಗಿದೆ. ಕಳೆದ ವರ್ಷದ ಆ.5ರಂದು ಚಿಂತಾಮಣಿಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಂ.ಸಿ.ಸುಧಾಕರ್, ‘ಸೆಪ್ಟೆಂಬರ್‌ನಲ್ಲಿ ಕೋಚಿಮುಲ್ ವಿಭಜನೆ ತೀರ್ಮಾನ’ ಎಂದಿದ್ದರು. ಹೀಗೆ ಜಿಲ್ಲಾ ಉಸ್ತುವಾರಿ ಸಚಿವರು ಭರವಸೆ ನೀಡಿದ್ದ ಕಾರಣ ವಿಭಜನೆಯ ಕುರಿತು ನಾನಾ ರೀತಿಯ ಚರ್ಚೆಗೆ ಕಾರಣವಾಗಿತ್ತು. ಆದರೆ ‌ಈಗ ವಿಭಜನೆಯ ವಿಚಾರ ಹಿನ್ನಲೆಗೆ ಸರಿದು ಚುನಾವಣೆಯೇ ನಿಗದಿಯಾಗಿದೆ. 

ಕೋಚಿಮುಲ್ ವಿಭಜನೆಯ ವಿಚಾರವು ಲೋಕಸಭೆ ಚುನಾವಣೆಗೆ ಜಿಲ್ಲೆಯಲ್ಲಿ ಬಿಜೆಪಿಗೆ ಅಸ್ತ್ರವಾಗುವುದು ಖಚಿತ. ಈಗಾಗಲೇ ಪಕ್ಷದ ವೇದಿಕೆಗಳಲ್ಲಿ ಮತ್ತು ಸಾರ್ವಜನಿಕವಾಗಿ ಬಿಜೆಪಿ ಮುಖಂಡರು ಕೋಚಿಮುಲ್ ವಿಭಜನೆಯ ಕುರಿತು ಧ್ವನಿ ಎತ್ತುತ್ತಿದ್ದಾರೆ. ‘ಕಾಂಗ್ರೆಸ್ ಸರ್ಕಾರದಿಂದ ಜಿಲ್ಲೆಯ ರೈತರಿಗೆ ಅನ್ಯಾಯವಾಗಿದೆ’ ಎಂದು ಪ್ರತಿಪಾದಿಸುತ್ತಿದ್ದಾರೆ.

2019ರಲ್ಲಿ ಕೋಚಿಮುಲ್ ಆಡಳಿತ ಮಂಡಳಿ ಅಸ್ತಿತ್ವಕ್ಕೆ ಬಂದಿತು. 2024ರ ಮೇ 12ಕ್ಕೆ ಆಡಳಿತ ಮಂಡಳಿಯ ಅಧಿಕಾರದ ಅವಧಿ ಪೂರ್ಣಗೊಳ್ಳಲಿದೆ. ಒಟ್ಟು 13 ಮಂದಿ ನಿರ್ದೇಶಕ ಸ್ಥಾನಗಳಿಗೆ ಚುನಾವಣೆ ನಡೆಯಲಿದೆ. ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಒಟ್ಟು 1,928 ಹಾಲು ಉತ್ಪಾದಕರ ಸಹಕಾರ ಸಂಘಗಳು ಇವೆ. ಕೋಲಾರ ಜಿಲ್ಲೆಯಲ್ಲಿ 952 ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ 976 ಸಂಘಗಳು ಕಾರ್ಯನಿರ್ವಹಿಸುತ್ತಿವೆ. ನಿತ್ಯ ಒಕ್ಕೂಟಕ್ಕೆ 10 ಲಕ್ಷ ಲೀಟರ್‌ಗೂ ಅಧಿಕ ಹಾಲು ಪೂರೈಕೆ ಆಗುತ್ತಿದೆ. ಎರಡೂ ಜಿಲ್ಲೆಯಲ್ಲಿ ಒಕ್ಕೂಟ ದೊಡ್ಡ ಮಟ್ಟದಲ್ಲಿ ಹರಡಿದೆ. 

ಈ ಹಿಂದಿನ ಬಿಜೆಪಿ ಸರ್ಕಾರದ ಕೋಚಿಮುಲ್ ವಿಭಜನೆಯ ತೀರ್ಮಾನವನ್ನು ಕಳೆದ ಜೂನ್‌ನಲ್ಲಿ ಕಾಂಗ್ರೆಸ್ ನೇತೃತ್ವದ ರಾಜ್ಯ ಸರ್ಕಾರ ವಾಪಸ್ ಪಡೆದಿತ್ತು. ಈ ಮೂಲಕ ಚಿಕ್ಕಬಳ್ಳಾಪುರ ಹಾಲು ಒಕ್ಕೂಟ (ಚಿಮುಲ್) ರಚನೆಗೆ ತಡೆ ಸಹ ಬಿದ್ದಿತ್ತು. ಕೋಚಿಮುಲ್ ವಿಭಜನೆಯ ವಿಚಾರವು ಈ ಹಿಂದಿನಿಂದಲೂ ಜಿಲ್ಲೆಯಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ರಾಜಕೀಯ ಜಟಾಪಟಿಗೆ ಕಾರಣವಾಗಿದೆ. ಕಾಂಗ್ರೆಸ್‌ನ ಶಿವಶಂಕರರೆಡ್ಡಿ ಅವರು ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದಾಗಲೂ  ಕೋಚಿಮುಲ್ ವಿಭಜನೆಯ ಮಾತುಗಳು ಕೇಳಿ ಬಂದಿದ್ದವು. ನಂತರ ಬಿಜೆಪಿ ಸರ್ಕಾರದಲ್ಲಿ ಡಾ.ಕೆ.ಸುಧಾಕರ್ ಸಚಿವರಾದ ವೇಳೆ ವಿಭಜನೆಗೆ ಮುದ್ರೆ ಬಿದ್ದಿತ್ತು.

ಡಾ.ಕೆ.ಸುಧಾಕರ್ ವಿಭಜನೆಯ ವಿಚಾರವನ್ನು ಪ್ರತಿಷ್ಠೆಯಾಗಿ ತೆಗೆದುಕೊಂಡಿದ್ದರು. 2021ರ ನವೆಂಬರ್ 8ರಂದು ನಡೆದ ರಾಜ್ಯ ಸಚಿವ ಸಂಪುಟದ ಸಭೆಯಲ್ಲಿ ವಿಭಜನೆಗೆ ಮುದ್ರೆ ಬಿದ್ದಿತ್ತು. ಚಿಕ್ಕಬಳ್ಳಾಪುರ ‌ಜಿಲ್ಲೆಗೆ ಪ್ರತ್ಯೇಕ ಹಾಲು‌ ಒಕ್ಕೂಟ ಸ್ಥಾಪಿಸಿ ಅದಕ್ಕೆ ಅಗತ್ಯ ಕ್ರಮ ಕೈಗೊಳ್ಳುವಂತೆ ಸಹಕಾರ ಇಲಾಖೆಯ ಜಂಟಿ‌ ಕಾರ್ಯದರ್ಶಿ ಆಡಳಿತಾತ್ಮಕ ಅನುಮೋದನೆ ನೀಡಿದ್ದರು. ಆಸ್ತಿ‌ ಮತ್ತು ಜವಾಬ್ದಾರಿ ವಿಭಜನೆಯನ್ನು ಆರು ತಿಂಗಳಲ್ಲಿ ಪೂರ್ಣಗೊಳಿಸಬೇಕು ಎಂದು 2021ರ ಡಿಸೆಂಬರ್‌ನಲ್ಲಿ ಸರ್ಕಾರ ಆದೇಶಿತ್ತು.

2022ರ ಜೂನ್‌ನಲ್ಲಿ ಚಿಕ್ಕಬಳ್ಳಾಪುರ ಜಿಲ್ಲಾ ಸಹಕಾರ ಹಾಲು ಉತ್ಪಾದಕರ ಸಂಘಗಳ ಒಕ್ಕೂಟ (ಚಿಮುಲ್) ಸಹಕಾರ ಸಂಘಗಳ ಕಾಯ್ದೆಯಡಿ ಅಧಿಕೃತವಾಗಿ ನೋಂದಣಿಯೂ ಆಯಿತು. ಜಿಲ್ಲಾಧಿಕಾರಿಯನ್ನು ಆಡಳಿತಾಧಿಕಾರಿಯನ್ನಾಗಿ ನೇಮಿಸಲಾಯಿತು. ನಂತರ ಚಿಮುಲ್ ಆಡಳಿತ ಮಂಡಳಿ ರಚನೆಗೆ ಸರ್ಕಾರ ಮುಂದಾಯಿತು. ಕೋಚಿಮುಲ್ ನಿರ್ದೇಶಕರಾಗಿ ಆಯ್ಕೆಯಾಗಿದ್ದ ಜಿಲ್ಲೆಯ ಕಾಂಗ್ರೆಸ್ ಬೆಂಬಲಿತ ನಿರ್ದೇಶಕರ ಅಧಿಕಾರದ ಅವಧಿಗೆ ಇದರಿಂದ ಕುತ್ತು ಎದುರಾಯಿತು. ಆಗ ಕಾಂಗ್ರೆಸ್ ಬೆಂಬಲಿತ ನಿರ್ದೇಶಕರು ಹೈಕೋರ್ಟ್ ಮೆಟ್ಟಿಲೇರಿದರು.  

ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರದಿಂದ ಕೆಳಕ್ಕೆ ಇಳಿದು ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರುತ್ತಿದ್ದಂತೆ ಕೋಚಿಮುಲ್ ವಿಭಜನೆಯ ಯಾವ ತಿರುವು ಪಡೆಯುತ್ತದೆ ಎನ್ನುವ ಕುತೂಹಲ ಜಿಲ್ಲೆಯ ಸಹಕಾರ ವಲಯ ಹಾಗೂ ಹೈನುಗಾರರಲ್ಲಿ ಇತ್ತು. ಕೋಚಿಮುಲ್‌ನಲ್ಲಿ ಕಾಂಗ್ರೆಸ್ ಬೆಂಬಲಿತ ನಿರ್ದೇಶಕರು ಹೆಚ್ಚಿದ್ದಾರೆ.

ಹಾಲು ಉತ್ಪಾದಕರ ಸಹಕಾರ ಸಂಘಗಳು, ನಿರ್ದೇಶಕರ ಅಭಿಪ್ರಾಯ ಪಡೆದು ಮುಂದಿನ ದಿನಗಳಲ್ಲಿ ವಿಭಜನೆಯ ಬಗ್ಗೆ ಕ್ರಮಕೈಗೊಳ್ಳಲಾಗುವುದು. ವಿಭಜನೆಯಿಂದ ಒಕ್ಕೂಟದ ಅಭಿವೃದ್ಧಿಗೆ ತೊಂದರೆ ಆಗಲಿದೆ. ಉತ್ಪಾದಕರಿಗೂ ಸಮಸ್ಯೆ ಆಗಲಿದೆ ಎಂದು ರಾಜ್ಯ ಸರ್ಕಾರ ಜೂನ್‌ನಲ್ಲಿ ಹೈಕೋರ್ಟ್‌ಗೆ ತಿಳಿಸಿತ್ತು. ವಿಭಜನೆಯ ಆದೇಶವನ್ನು ವಾಪಸ್ ಪಡೆದಿತ್ತು.

ವಿಭಜನೆಯ ಆದೇಶ ವಾಪಸ್ ಪಡೆಯುತ್ತಿದ್ದಂತೆ ಬಿಜೆಪಿ ಮುಖಂಡರು ತೀವ್ರ ಆಕ್ರೋಶ ಸಹ ವ್ಯಕ್ತಪಡಿಸಿದ್ದರು. ಕಾಂಗ್ರೆಸ್ ಸರ್ಕಾರ ಜಿಲ್ಲೆಯ ಹೈನುಗಾರರ ಅಭಿವೃದ್ಧಿಗೆ ನೀಡಿದ ಪೆಟ್ಟು ಎಂದು ಗುಡುಗಿದ್ದರು. ಆಗ ಖುದ್ದು ಜಿಲ್ಲಾ ಉಸ್ತುವಾರಿ ಸಚಿವರೇ ಮುಂದಿನ ದಿನಗಳಲ್ಲಿ ವಿಭಜನೆಯ ಬಗ್ಗೆ ತೀರ್ಮಾನ ಕೈಗೊಳ್ಳಲಾಗುವುದು ಎನ್ನುವ ಮೂಲಕ ಮತ್ತೆ ಕೋಚಿಮುಲ್ ವಿಭಜನೆಯ ಚರ್ಚೆಗೆ ಕಾರಣರಾಗಿದ್ದರು. 

ಆದರೆ ಏ.28ಕ್ಕೆ ಕೋಚಿಮುಲ್ ಚುನಾವಣೆ ನಿಗದಿಗೊಳಿಸಿರುವುದರಿಂದ ಕೋಚಿಮುಲ್ ವಿಭಜನೆ ನನೆಗುದಿಗೆ ಬೀಳುವುದು ಖಚಿತವಾಗಿದೆ. 

‘ಶಾಸಕರು ಸರ್ಕಾರದ ಮೇಲೆ ಒತ್ತಡ ಹೇರಲಿ’
ಕೋಲಾರ ಚಿಕ್ಕಬಳ್ಳಾಪುರ ಹಾಲು ಒಕ್ಕೂಟದ ನಿರ್ದೇಶಕ ಸ್ಥಾನಗಳಿಗೆ ಏ.28ರಂದು ಚುನಾವಣೆ ನಿಗದಿಗೊಳಿಸಲಾಗಿದೆ. ಚುನಾವಣೆ ನಡೆದು ನೂತನ ಆಡಳಿತ ಮಂಡಳಿ ಅಧಿಕಾರಕ್ಕೆ ಬಂದಲ್ಲಿ ಚಿಕ್ಕಳ್ಳಾಪುರ ಜಿಲ್ಲೆಗೆ ಪ್ರತ್ಯೇಕ ಒಕ್ಕೂಟ ರಚನೆಯು ವಿಳಂಬವಾಗುತ್ತದೆ. ಈ ವಿಚಾರವಾಗಿ ಜಿಲ್ಲೆಯ ಎಲ್ಲ ಶಾಸಕರು ಸರ್ಕಾರದ ಮೇಲೆ ಒತ್ತಡ ಹೇರಬೇಕು. ಒಕ್ಕೂಟಕ್ಕೆ ಅಗತ್ಯವಿರುವ ಜಮೀನು ಹಾಗೂ ಅನುದಾನವನ್ನು ಸರ್ಕಾರದಿಂದ ಪಡೆದು ಅಭಿವೃದ್ಧಿಗೆ ಮುಂದಾಗಬೇಕು. ಕೆ.ವಿ.ನಾಗರಾಜ್ ಕೋಚಿಮುಲ್ ಮಾಜಿ ಅಧ್ಯಕ್ಷ ಚಿಕ್ಕಬಳ್ಳಾಪುರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT