ಎಲ್ಐಸಿ: ಸೆ.7ರ ವರೆಗೆ ವಿಮಾ ಸಪ್ತಾಹ

ಚಿಕ್ಕಬಳ್ಳಾಪುರ: ‘ಭಾರತೀಯ ಜೀವ ವಿಮಾ ನಿಗಮವು (ಎಲ್ಐಸಿ) 62 ನೇ ವಾರ್ಷಿಕೋತ್ಸವದ ಪ್ರಯುಕ್ತ ಸೆಪ್ಟೆಂಬರ್ 1 ರಿಂದ 7ರ ವರೆಗೆ ವಿಮಾ ಸಪ್ತಾಹ ಮಹೋತ್ಸವ ಆಚರಿಸುತ್ತಿದೆ’ ಎಂದು ಎಲ್ಐಸಿಯ ಬೆಂಗಳೂರು ವಿಭಾಗ- –2ರ ಹಿರಿಯ ವಿಭಾಗೀಯ ವ್ಯವಸ್ಥಾಪಕ ಎಲ್.ಜಗದೀಶ್ ತಿಳಿಸಿದರು.
ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ದೇಶದ ಅತ್ಯಂತ ಹೆಚ್ಚು ಜನರ ವಿಶ್ವಾಸ ಮತ್ತು ನಂಬಿಕೆಗೆ ಪಾತ್ರವಾಗಿರುವ ನಿಗಮವು ಕಳೆದ ಹಣಕಾಸು ವರ್ಷದಲ್ಲಿ 213.38 ಲಕ್ಷ ಪಾಲಿಸಿಗಳನ್ನು ಪೂರ್ಣಗೊಳಿಸಿ ₹1.34 ಲಕ್ಷ ಕೋಟಿ ಪ್ರಥಮ ಪ್ರೀಮಿಯಂ ಸಂಗ್ರಹಿಸಿದೆ. ಶೇ 95.36 ರಷ್ಟು ದಾವೆಗಳನ್ನು ಇತ್ಯರ್ಥಗೊಳಿಸಿದೆ’ ಎಂದು ಹೇಳಿದರು.
‘ಎಲ್ಐಸಿ ₹28.48 ಲಕ್ಷ ಕೋಟಿ ಆಸ್ತಿ, ₹25.85 ಲಕ್ಷ ಕೋಟಿ ಜೀವನಿಧಿ (ಲೈಫ್ ಫಂಡ್) ಹೊಂದಿದೆ. ಇದು ದೇಶದ ಒಟ್ಟು ರಾಷ್ಟ್ರೀಯ ಉತ್ಪನ್ನಕ್ಕಿಂತ (ಜಿಡಿಪಿ) ಹೆಚ್ಚಿನದಾಗಿದೆ. ಪ್ರಸ್ತುತ 2,048 ಶಾಖೆಗಳು, 1430 ಉಪ ಶಾಖೆಗಳನ್ನು ಹೊಂದಿರುವ ನಿಗಮದಲ್ಲಿ 1.11ಲಕ್ಷ ಉದ್ಯೋಗಿಗಳು ಹಾಗೂ 12 ಲಕ್ಷ ವಿಮಾ ಪ್ರತಿನಿಧಿಗಳು ಕೆಲಸ ಮಾಡುತ್ತಿದ್ದಾರೆ. ಹೆಚ್ಚು ಗ್ರಾಹಕರನ್ನು ತಲುಪುವ ಉದ್ದೇಶದಿಂದ 1,227 ಮಿನಿ ಕಚೇರಿಗಳನ್ನು ತೆರೆಯಲಾಗಿದೆ’ ಎಂದರು.
‘ಎಲ್ಐಸಿ ಆದಾಯದಲ್ಲಿ ಶೇ 80 ರಷ್ಟು ಹಣ ನೀರಾವರಿ, ಕೃಷಿ, ರಸ್ತೆ ನಿರ್ಮಾಣದಂತಹ ಅಭಿವೃದ್ಧಿ ಕಾರ್ಯಗಳಿಗೇ ಬಳಕೆಯಾಗುತ್ತಿದೆ. ಪಂಚವಾರ್ಷಿಕ ಯೋಜನೆಗಳಿಗೆ ಸಿಂಹಪಾಲಿನ ಕೊಡುಗೆ ಎಲ್ಐಸಿಯದ್ದೇ ಆಗಿದೆ ಎಂಬುದು ಹೆಮ್ಮೆಯ ವಿಷಯ. ಕೇಂದ್ರ ಸರ್ಕಾರ ಇತ್ತೀಚೆಗೆ ಜಾರಿ ಮಾಡಿರುವ ಬಲಿಷ್ಠ್ ಭೀಮಾ ಪಿಂಚಣಿ ಯೋಜನೆಯ ಅನುಷ್ಠಾನದ ಜವಾಬ್ದಾರಿಯನ್ನೂ ನಿಗಮವೇ ವಹಿಸಿಕೊಂಡಿದೆ’ ಎಂದು ಹೇಳಿದರು.
‘ನಿಗಮವೂ ಸಾಮಾಜಿಕ ಜವಾಬ್ದಾರಿ ವಿಷಯದಲ್ಲಿ ಸಹ ಹಿಂದೆ ಬಿದ್ದಿಲ್ಲ. ಕೇರಳದ ಪ್ರವಾಹದಲ್ಲಿ ಮರಣ ಹೊಂದಿರುವವರ ದಾವೆಗಳನ್ನು ಇತ್ಯರ್ಥಗೊಳಿಸಲು ನಿಗಮ ಹಲವು ನಿಯಮಗಳನ್ನು ಸಡಿಲಿಸಿದೆ. ಅಲ್ಲದೆ, ನಿಗಮದ ಅಧ್ಯಕ್ಷರ ಮನವಿ ಮೇರೆಗೆ ಸಿಬ್ಬಂದಿ ವರ್ಗದವರು ಕೇರಳಕ್ಕೆ ಆರ್ಥಿಕ ನೆರವು ನೀಡುವ ಮೂಲಕ ಸಹಾಯಹಸ್ತ ಚಾಚಿದ್ದಾರೆ’ ಎಂದು ತಿಳಿಸಿದರು.
‘ಬೆಂಗಳೂರು ವಿಭಾಗ-2 ರ ವ್ಯಾಪ್ತಿಯಲ್ಲಿ ಚಿಕ್ಕಬಳ್ಳಾಪುರ, ರಾಮನಗರ ಮತ್ತು ಕೋಲಾರ ಜಿಲ್ಲೆಗಳಿವೆ. ಕಳೆದ ವರ್ಷ ಈ ವಿಭಾಗದಲ್ಲಿ ₹490 ಕೋಟಿ ವಹಿವಾಟು ನಡೆದಿದೆ. ಈ ವಿಭಾಗ ವ್ಯಾಪ್ತಿಯಲ್ಲಿ 1.85 ಲಕ್ಷ ಪಾಲಿಸಿಗಳಿದ್ದು, ಶೇ 40 ರಷ್ಟು ಕುಟುಂಬಗಳನ್ನು ತಲುಪಲಾಗಿದೆ. ವಿಭಾಗದ 32 ಶಾಖೆಗಳೂ ಉತ್ತಮವಾಗಿ ಕಾರ್ಯನಿರ್ವಹಿಸಿ ಜನರ ಮೆಚ್ಚುಗೆಗೆ ಪಾತ್ರವಾಗಿವೆ’ ಎಂದರು.
ಎಲ್ಐಸಿ ಬೆಂಗಳೂರು ವಿಭಾಗ-2ರ ಮಾರುಕಟ್ಟೆ ವ್ಯವಸ್ಥಾಪಕ ಶ್ರೀಕುಮಾರ್, ಹಿರಿಯ ಅಧಿಕಾರಿಗಳಾದ ಪುಟ್ಟಸ್ವಾಮಿ, ಸ್ಥಳೀಯ ಶಾಖೆಯ ವ್ಯವಸ್ಥಾಪಕ ಗೋಪಾಲ್ ಮತ್ತು ಅಭಿವೃದ್ಧಿ ಅಧಿಕಾರಿ ಎಸ್.ಎನ್.ಅಮೃತ್ ಕುಮಾರ್ ಇದ್ದರು.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.