ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಚಿಕ್ಕಬಳ್ಳಾಪುರ: ಜೆಡಿಎಸ್ ಒಲವುಗಳಿಸಿದವರೇ ಬಿಜೆಪಿ ಅಭ್ಯರ್ಥಿ!

ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರ–‘ಮೈತ್ರಿ’ ಅಭ್ಯರ್ಥಿ ಆಯ್ಕೆಯಲ್ಲಿ ನಾನಾ ಲೆಕ್ಕಾಚಾರ‌
ಡಿ.ಎಂ.ಕುರ್ಕೆ ಪ್ರಶಾಂತ್
Published 23 ಫೆಬ್ರುವರಿ 2024, 4:16 IST
Last Updated 23 ಫೆಬ್ರುವರಿ 2024, 4:16 IST
ಅಕ್ಷರ ಗಾತ್ರ

ಚಿಕ್ಕಬಳ್ಳಾಪುರ: ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ–ಜೆಡಿಎಸ್ ಮೈತ್ರಿಕೂಟದ ಅಭ್ಯರ್ಥಿ ಆಯ್ಕೆ ಕಗ್ಗಂಟಾಗುವ ಸಾಧ್ಯತೆ ಹೆಚ್ಚಿದೆ. 

ಅಭ್ಯರ್ಥಿ ಆಯ್ಕೆಯಲ್ಲಿ ಬಿಜೆಪಿ ಬಿಟ್ಟು ಜೆಡಿಎಸ್ ಮತ್ತು ಜೆಡಿಎಸ್ ಬಿಟ್ಟು ಬಿಜೆಪಿ ಏಕಪಕ್ಷೀಯವಾಗಿ ತೀರ್ಮಾನಗಳನ್ನು ಕೈಗೊಳ್ಳಲು ಸಾಧ್ಯವೇ ಇಲ್ಲ ಎನ್ನುವ ಸ್ಥಿತಿ ಇದೆ. ಕ್ಷೇತ್ರದಲ್ಲಿ ಎರಡೂ ಪಕ್ಷಗಳು ನೆಲೆಗಟ್ಟು ಹೊಂದಿರುವ ಕಾರಣ ಎರಡೂ ಪಕ್ಷಗಳು ಅಳೆದುತೂಗಿ ‘ಒಮ್ಮತ’ದ ಅಭ್ಯರ್ಥಿಯನ್ನು ಆಯ್ಕೆ ಮಾಡಬೇಕಿದೆ. ಜೆಡಿಎಸ್‌ ಚಿಕ್ಕಬಳ್ಳಾಪುರ ಕ್ಷೇತ್ರದ ಮೇಲೆ ‘ಪ್ರಭಾವ’ ಹೊಂದಿರುವ ಕಾರಣ ಬಿಜೆಪಿಗೆ ಸ್ಥಾನ ದೊರೆತರೂ ಅಭ್ಯರ್ಥಿ ಆಯ್ಕೆಯಲ್ಲಿ ಜೆಡಿಎಸ್ ಪ್ರಭಾವ ಬೀರುವ ಸಾಧ್ಯತೆ ಹೆಚ್ಚಿದೆ.

ತನ್ನ ಒಲವುಗಳಿಸಿದ ಮುಖಂಡರನ್ನು ಅಭ್ಯರ್ಥಿಯನ್ನಾಗಿಸುವ ನಿಟ್ಟಿನಲ್ಲಿ ಬಿಜೆಪಿಯ ಮೇಲೆ ಜೆಡಿಎಸ್ ಪ್ರಭಾವ ಬೀರುವ ಸಾಧ್ಯತೆ ಇದೆ. ಬಿಜೆಪಿ ಮುಖಂಡರನ್ನೇ ಜೆಡಿಎಸ್ ಚಿಹ್ನೆಯಡಿ ಅಭ್ಯರ್ಥಿಯನ್ನಾಗಿಸುವ ಸಾಧ್ಯತೆಯನ್ನೂ ತಳ್ಳಿ ಹಾಕುವಂತಿಲ್ಲ. ಈ ಹಿಂದಿನ ಲೋಕಸಭಾ ಚುನಾವಣೆಗಳಲ್ಲಿ ರಾಜ್ಯದಲ್ಲಿ ಇಂತಹ ಪ್ರಯೋಗಗಳು ಸಹ ನಡೆದಿವೆ. ಮುಂದಿನ ದಿನಗಳಲ್ಲಿ ‘ಮೈತ್ರಿ’ ಅಭ್ಯರ್ಥಿ ಆಯ್ಕೆಯಲ್ಲಿ ನಾನಾ ಲೆಕ್ಕಾಚಾರಗಳು ಗರಿಗೆದರಲಿವೆ. 

ಇಲ್ಲಿಯವರೆಗೂ ಜೆಡಿಎಸ್‌ನ ದಳಪತಿಗಳು ಲೋಕಸಭೆ ಚುನಾವಣೆಯ ವಿಚಾರವಾಗಿ ಮೌನವಹಿಸಿದ್ದಾರೆ. ಜೆಡಿಎಸ್‌ಗೆ ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ನೆಲೆಗಟ್ಟಿದೆ. ಅಷ್ಟು ಸುಲಭವಾಗಿ ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಮೇಲಿನ ಹಿಡಿತ ಸಡಿಲಿಸಲು ಜೆಡಿಎಸ್ ನಾಯಕರು ಒಪ್ಪುವುದಿಲ್ಲ. ಆದ್ದರಿಂದ ಬಿಜೆಪಿಗೆ ಸ್ಥಾನ ದೊರೆತರೂ ಜೆಡಿಎಸ್‌ ನಾಯಕರ ‘ಸ್ನೇಹ’ವುಳ್ಳವರೇ ಅಭ್ಯರ್ಥಿ ಆಗಬೇಕು.

ಜೆಡಿಎಸ್ ನಾಯಕ ಎಚ್‌.ಡಿ.ಕುಮಾರಸ್ವಾಮಿ ಮತ್ತು ನಿಖಿಲ್ ಕುಮಾರಸ್ವಾಮಿ ಅವರು ಗುರುವಾರ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿಯಾದ ತರುವಾಯ ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ರಾಜಕಾರಣದಲ್ಲಿ ನಾನಾ ರೀತಿಯ ಚರ್ಚೆಗಳು ಗರಿಗೆದರಿವೆ.

ಮಾಜಿ ಸಚಿವ ಡಾ.ಕೆ.ಸುಧಾಕರ್, ಯಲಹಂಕ ಶಾಸಕ ಎಸ್‌.ಆರ್.ವಿಶ್ವನಾಥ್ ಅವರ ಪುತ್ರ ಅಲೋಕ್ ಸದ್ಯ ಬಿಜೆಪಿ ಟಿಕೆಟ್ ಆಕಾಂಕ್ಷಿಗಳ ಸಾಲಿನಲ್ಲಿ ಮುಂಚೂಣಿಯಲ್ಲಿ ಇದ್ದಾರೆ. ಜೆಡಿಎಸ್‌ನಿಂದ ಯಾರೂ ಆಕಾಂಕ್ಷಿಗಳು ಇಲ್ಲ. ಲೋಕಸಭೆ ಚುನಾವಣೆಯ ರಾಜಕಾರಣ ಮತ್ತಷ್ಟು ರಂಗುಪಡೆದಂತೆ ಹೊಸ ಹೆಸರುಗಳು ಸೇರ್ಪಡೆಯಾದರೂ ಅಚ್ಚರಿಯಿಲ್ಲ.

ಜೆಡಿಎಸ್‌ನ ವಿಶ್ವಾಸಗಳಿಸಲೇಬೇಕು ಎನ್ನುವುದರನ್ನು ಅರಿತಿರುವ ಮಾಜಿ ಸಚಿವ ಡಾ.ಕೆ.ಸುಧಾಕರ್, ಈಗಾಗಲೇ ಮೂರ್ನಾಲ್ಕು ಬಾರಿ ಎಚ್‌.ಡಿ.ಕುಮಾರಸ್ವಾಮಿ ಮತ್ತು ನಿಖಿಲ್ ಕುಮಾರಸ್ವಾಮಿ ಅವರನ್ನು ಭೇಟಿ ಮಾಡಿದ್ದಾರೆ. ವಿಶ್ವನಾಥ್ ಸಹ ಜೆಡಿಎಸ್ ಮುಖಂಡರನ್ನು ಸಂಪರ್ಕಿಸುತ್ತಿದ್ದಾರೆ. ಈ ರಾಜಕೀಯ ಆಟಗಳನ್ನು ಗಮನಿಸಿದರೆ ಬಿಜೆಪಿ ಅಭ್ಯರ್ಥಿ ಆಯ್ಕೆಯಲ್ಲಿ ಜೆಡಿಎಸ್ ಪ್ರಭಾವ ಬೀರುವ ಸಾಧ್ಯತೆಯನ್ನು ತಳ್ಳಿಹಾಕುವಂತಿಲ್ಲ.

ಒಕ್ಕಲಿಗ ಸಮುದಾಯದ ಅಂದಾಜು 7 ಲಕ್ಷ ಮತದಾರರು ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಇದ್ದಾರೆ. ಜೆಡಿಎಸ್‌ ಈ ಸಮುದಾಯದ ಮೇಲೆ ರಾಜಕೀಯ ಪ್ರಭಾವ ಸಹ ಹೊಂದಿದೆ. ಪರಿಶಿಷ್ಟ ಸಮುದಾಯದ ನಿಸರ್ಗ ನಾರಾಯಣಸ್ವಾಮಿ ಅವರನ್ನು ಲೋಕಸಭಾ ಕ್ಷೇತ್ರದ ಉಸ್ತುವಾರಿಯನ್ನಾಗಿ ಜೆಡಿಎಸ್ ನೇಮಿಸಿದೆ. 

ರಾಜ್ಯದ ಬೆರಳೆಣಿಕೆಯ ಕ್ಷೇತ್ರಗಳಲ್ಲಿ ಮೈತ್ರಿಕೂಟದ ಅಭ್ಯರ್ಥಿಯನ್ನು ಆಯ್ಕೆ ಮಾಡುವಲ್ಲಿ ಎರಡೂ ಪಕ್ಷಗಳಿಗೆ ನಾನಾ ಸಮಸ್ಯೆಗಳು ಎದುರಾಗಿದೆ. ಹೀಗೆ ಸಮಸ್ಯೆ ಮತ್ತು ಸವಾಲು ಎದುರಾಗುವ ಕ್ಷೇತ್ರಗಳಲ್ಲಿ ಚಿಕ್ಕಬಳ್ಳಾಪುರ ಸಹ ಒಂದು.

ಕೆ.ಎಂ.ಮುನೇಗೌಡ
ಕೆ.ಎಂ.ಮುನೇಗೌಡ

‘ಜೆಡಿಎಸ್‌ ಚಿಹ್ನೆಯಲ್ಲಿಯೇ ಸ್ಪರ್ಧಿಸಲಿ’

‘ಲೋಕಸಭೆ ಚುನಾವಣೆಯಲ್ಲಿ ಮೈತ್ರಿಯಾದರೆ ಬಿಜೆಪಿ–ಜೆಡಿಎಸ್ ಎನ್ನುವುದು ಬರುವುದಿಲ್ಲ. ಒಟ್ಟಾರೆ ಎನ್‌ಡಿಎ ಮೈತ್ರಿಕೂಟದ ಅಭ್ಯರ್ಥಿಯಾಗುವರು. ಸದ್ಯದ ಮಟ್ಟಿಗೆ ಜೆಡಿಎಸ್‌ಗೆ ಮೂರು ಕ್ಷೇತ್ರಗಳನ್ನು ನೀಡಲಾಗುತ್ತದೆ ಎನ್ನುವ ಮಾತುಗಳಿವೆ. ಆದರೆ ಆರು ಕ್ಷೇತ್ರಗಳನ್ನು ಪಕ್ಷಕ್ಕೆ ನೀಡಬೇಕು’ ಎನ್ನುತ್ತಾರೆ ಜೆಡಿಎಸ್ ಮುಖಂಡರು. ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಮುಖಂಡರು ಜೆಡಿಎಸ್‌ ಚಿಹ್ನೆಯಲ್ಲಿಯೇ ಸ್ಪರ್ಧಿಸಲಿ. ಇದರಿಂದ ಎರಡೂ ಪಕ್ಷಗಳಿಗೂ ಅನುಕೂಲ. ಇದಕ್ಕೆ ನಮ್ಮ ಅಭ್ಯಂತರವಿಲ್ಲ. ಸಹರಿಸುತ್ತೇವೆ ಎನ್ನುವರು.

‘ಮೈತ್ರಿ; ದೇಶಕ್ಕೆ ಒಳ್ಳೆಯದು’

ಬಿಜೆಪಿ ಜೆಡಿಎಸ್‌ ಮೈತ್ರಿ ವಿಚಾರದಲ್ಲಿ ಮುಂದಿನ ದಿನಗಳಲ್ಲಿ ಸುಖಕರ ವಾತಾವರಣ ಬರಲಿದೆ. ಆದರೆ ಮುಖಂಡರಿಗಿಂತ ಹೇಗೆ ಮತದಾರರನ್ನು ಪರಿವರ್ತನೆ ಮಾಡಬಹುದು ಎನ್ನುವುದು ನಮ್ಮ ಮುಂದೆ ಇರುವ ವಿಚಾರ. ಈ ಹಿಂದಿನಿಂದಲೂ ಎರಡೂ ಪಕ್ಷಗಳ  ಕಾರ್ಯಕರ್ತರು ಸ್ಥಳೀಯವಾಗಿ ಜಿದ್ದಾಜಿದ್ದಿ ರಾಜಕಾರಣ ಮಾಡಿಕೊಂಡು ಬಂದಿದ್ದಾರೆ ಎಂದು ಬೆಂಗಳೂರು ಗ್ರಾಮಾಂತರ ಜಿಲ್ಲಾ ಜೆಡಿಎಸ್ ಅಧ್ಯಕ್ಷ ಬಿ.ಮುನೇಗೌಡ ‘ಪ್ರಜಾವಾಣಿ’ಗೆ ತಿಳಿಸಿದರು.  ಮೈತ್ರಿಯಾದರೆ ದೇಶಕ್ಕೆ ಒಳ್ಳೆಯದು. ಆದರೆ ನಾವು ಮೂರು ಸ್ಥಾನಗಳವರಲ್ಲ. ಆರು ಸ್ಥಾನಗಳನ್ನು ಅಪೇಕ್ಷಿಸುತ್ತಿರುವವರು. ಮೈತ್ರಿಕೂಟದಲ್ಲಿ ಜೆಡಿಎಸ್‌ಗೆ ಹಿಡಿತಬೇಕು ಎಂದರೆ ಆರು ಸ್ಥಾನಗಳನ್ನು ನೀಡಬೇಕು ಎಂದರು.

‘ವರಿಷ್ಠರ ತೀರ್ಮಾನಕ್ಕೆ ಬದ್ಧ’

ಕೋಲಾರ ಮಂಡ್ಯ ಮತ್ತು ಹಾಸನ ಕ್ಷೇತ್ರ ಜೆಡಿಎಸ್‌ಗೆ ದೊರೆತಿವೆ. ಉಳಿದಂತೆ ತುಮಕೂರು ಚಿಕ್ಕಬಳ್ಳಾಪುರ ಮತ್ತು ಬೆಂಗಳೂರು ಗ್ರಾಮಾಂತರ ಕ್ಷೇತ್ರಗಳ ಅಭ್ಯರ್ಥಿ ಆಯ್ಕೆ ಕಗ್ಗಂಟಾಗಿದೆ ಎಂದು ಚಿಕ್ಕಬಳ್ಳಾಪುರ ಜಿಲ್ಲಾ ಜೆಡಿಎಸ್ ಅಧ್ಯಕ್ಷ ಕೆ.ಎಂ.ಮುನೇಗೌಡ ತಿಳಿಸಿದರು.  ನಾವು ಪಕ್ಷದ ವರಿಷ್ಠರ ತೀರ್ಮಾನಕ್ಕೆ ಬದ್ಧವಾಗಿರುತ್ತೇವೆ. ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದಲ್ಲಿ ಎರಡೂ ಪಕ್ಷಗಳು ಒಮ್ಮತದಿಂದಲೇ ಅಭ್ಯರ್ಥಿ ಕಣಕ್ಕೆ ಇಳಿಸಬೇಕು. ಗೆಲ್ಲುವ ಮಾನದಂಡಗಳನ್ನು ಆಧರಿಸಿ ಹೊರ ಅಭ್ಯರ್ಥಿಯಾದರೂ ಸರಿ. ಇಲ್ಲ ಬಿಜೆಪಿ ಮುಖಂಡರೇ ಜೆಡಿಎಸ್ ಚಿಹ್ನೆಯಲ್ಲಿ ಸ್ಪರ್ಧಿಸಿದರೂ ಕೆಲಸ ಮಾಡುತ್ತೇವೆ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT