ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಚಿಂತಾಮಣಿ | ಸುಗ್ಗಿ-ಹುಗ್ಗಿ ಸಡಗರದ ಆಚರಣೆಗೆ ಸಿದ್ಧತೆ

Published 15 ಜನವರಿ 2024, 6:22 IST
Last Updated 15 ಜನವರಿ 2024, 6:22 IST
ಅಕ್ಷರ ಗಾತ್ರ

ಚಿಂತಾಮಣಿ: ಚಿಂತಾಮಣಿ ನಗರ ಹಾಗೂ ತಾಲ್ಲೂಕಿನಾದ್ಯಂತ ಸಂಕ್ರಾಂತಿ ಸಡಗರ ಮನೆಮಾಡಿದೆ. ರೈತರು ಸಂಭ್ರಮದಿಂದ ಸಿದ್ಧತೆ ನಡೆಸುತ್ತಿದ್ದಾರೆ.

ಹಿಂದೆ ಸಂಕ್ರಾಂತಿ ಬಂತೆಂದರೆ ಸುಗ್ಗಿಯ ಜತೆಗೆ ಹಿಗ್ಗೂ ಬರುತ್ತಿತ್ತು. ರೈತರ ಮುಖದಲ್ಲಿ ನಗೆ, ಸಂಭ್ರಮ ಚೆಲ್ಲುತ್ತಿತ್ತು. ಈ ಬಾರಿ ರೈತರ ಮುಖದಲ್ಲೂ ಸ್ವಲ್ಪ ಸಂತಸ ಕಾಣುತ್ತಿದೆ. ಈ ವರ್ಷ ಸಮಾಧಾನಕರವಾಗಿ ಹಬ್ಬದ ಆಚರಣೆ ಮಾಡಲು ಮುಂದಾಗಿದ್ದೇವೆ ಎನ್ನುತ್ತಾರೆ ರೈತ ಮುಖಂಡ ಸೀಕಲ್ ರಮಣಾರೆಡ್ಡಿ.

ಭಾನುವಾರ ಪೂಜಾ ಸಾಮಗ್ರಿಗಳನ್ನು ಖರೀದಿಸಲು ನಗರದ ಮಾರುಕಟ್ಟೆಯಲ್ಲಿ ಜನರು ಮುಗಿಬಿದ್ದಿದ್ದರು. ನಗರದ ಐಡಿಎಸ್‌ಎಂಟಿ ಕಾಂಪ್ಲೆಕ್ಸ್, ಜೋಡಿ ರಸ್ತೆ, ಗುರುಭವನದ ಮುಂಭಾಗ ಸೇರಿದಂತೆ ಪ್ರಮುಖ ವಾಣಿಜ್ಯ ಸ್ಥಳಗಳಲ್ಲಿ ಜನಜಂಗುಳಿಯೇ ಕಂಡುಬಂತು. ಹೂ, ಹಣ್ಣು, ಕಬ್ಬಿನ ಜಲ್ಲೆ, ಎಳ್ಳು ಬೆಲ್ಲ, ಕಡಲೆಕಾಯಿ, ಅವರೆಕಾಯಿ, ಗೆಣಸು ಹೆಚ್ಚು ಮಾರಾಟವಾಯಿತು.

ಸಂಕ್ರಾಂತಿ ಬಂತೆಂದರೆ ಸುಗ್ಗಿ ಎಂದು ಹಿಗ್ಗುತ್ತಿದ್ದರು. ಬೆಳೆಯನ್ನು ಒಕ್ಕಣೆ ಮಾಡಿ ಬೇಕಾದಷ್ಟು ದವಸಧಾನ್ಯವನ್ನು ಉಳಿಸಿಕೊಂಡು ಮಿಕ್ಕಿದ್ದನ್ನು ಮಾರಿ ಸಂಕ್ರಾಂತಿ ಆಚರಣೆ ಮಾಡುತ್ತಿದ್ದರು. ದನಗಳನ್ನು ಕಿಚ್ಚು ಹಾಯಿಸಿ ಖುಷಿಪಡುತ್ತಿದ್ದರು. ಈಚೆಗೆ ಆ ಸಂಭ್ರಮ ಮರೆಯಾಗುತ್ತಿದೆ.

ಇತ್ತೀಚಿನ ವರ್ಷಗಳಲ್ಲಿ ಮಳೆ, ಬೆಳೆ ಇಲ್ಲದೆ, ಬೆಳೆದ ಉತ್ಪನ್ನಗಳಿಗೆ ಬೆಲೆ ಇಲ್ಲದೆ ತೀವ್ರ ಸಂಕಷ್ಟದಿಂದ ಒದ್ದಾಡುವಂತಾಗಿದೆ ಎಂದು ರೈತ ಶಿವಾರೆಡ್ಡಿ ಹೇಳುತ್ತಾರೆ.

ಬರ, ಮಳೆ ಕೊರತೆ, ವಿದ್ಯುತ್ ಮತ್ತಿತರ ಸಮಸ್ಯೆಗಳ ನಡುವೆಯೂ ಸಾವಿರಾರು ಅಡಿ ಆಳದಿಂದ ಸಿಗುವ ಅಲ್ಪ-ಸ್ವಲ್ಪ ನೀರನ್ನು ರಾತ್ರಿ ಹಗಲೆನ್ನದೆ ಮೇಲೆತ್ತಿ ಬೆಳೆದ ತರಕಾರಿಗಳನ್ನು ಬೀದಿಗೆ ಚೆಲ್ಲುವಂತಾಗಿದೆ.

ಆರ್ಥಿಕ ಸಂಕಷ್ಟದ ಮಧ್ಯೆಯೂ ಮಾರುಕಟ್ಟೆಯಲ್ಲಿ ಜನ ಸಾಗರ ನೆರೆದಿತ್ತು. ಹಳ್ಳಿ ನಗರ ಮತ್ತು ಪಟ್ಟಣ ಎನ್ನದೆ ಎಲ್ಲರಲ್ಲೂ ಹಬ್ಬದ ವಾತಾವರಣ ಕಂಡು ಬರುತ್ತಿದೆ. ರಸ್ತೆಗಳ ಅಂಚಿನಲ್ಲಿ ಕಬ್ಬಿನ ರಾಶಿ, ಹೂವು ಮತ್ತು ಹಣ್ಣುಗಳ ರಾಶಿ ಕಾಣುತ್ತಿತ್ತು.

ಈ ವರ್ಷ ಮಳೆ ಕಡಿಮೆಯಾಗಿ ಬರಗಾಲ ಘೋಷಣೆಯಾಗಿದ್ದರೂ ರೈತರು ಸುಗ್ಗಿಯಲ್ಲಿ ತಮ್ಮ ಉತ್ಪನ್ನಗಳನ್ನು ಮನೆ ತುಂಬಿಸಿಕೊಂಡಿದ್ದಾರೆ. ಮನದಲ್ಲಿ ಚಿಂತೆ ಕಾಡುತ್ತಿದ್ದರೂ ರೈತ ಸಮೂಹ ಈ ವರ್ಷ ಲಗುಬಗೆಯಿಂದ ಹಬ್ಬದ ಆಚರಣೆಯಲ್ಲಿ ತೊಡಗಿದ್ದಾರೆ ಎನ್ನುತ್ತಾರೆ ರೈತ ರಮೇಶ್. 

ಚಿಂತಾಮಣಿಯಲ್ಲಿ ಸಂಕ್ರಾಂತಿ ಹಬ್ಬದ ಮುನ್ನಾ ದಿನ ಭಾನುವಾರ ಮಾರಾಟಕ್ಕೆ ಬಂದಿರುವ ಕಬ್ಬಿನ ರಾಶಿ
ಚಿಂತಾಮಣಿಯಲ್ಲಿ ಸಂಕ್ರಾಂತಿ ಹಬ್ಬದ ಮುನ್ನಾ ದಿನ ಭಾನುವಾರ ಮಾರಾಟಕ್ಕೆ ಬಂದಿರುವ ಕಬ್ಬಿನ ರಾಶಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT