ಶುಕ್ರವಾರ, ಆಗಸ್ಟ್ 19, 2022
27 °C
ಕನ್ನಡ ಸಾಹಿತ್ಯ ಪರಿಷತ್‌ ಜಿಲ್ಲಾ ಅಧ್ಯಕ್ಷ ಸ್ಥಾನದ ಚುನಾವಣಾ ಪೂರ್ವಭಾವಿ ಸಭೆ

ಅವಿರೋಧ ಆಯ್ಕೆಗೆ ತೀರ್ಮಾನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಿಕ್ಕಬಳ್ಳಾಪುರ: ಗಡಿ ಜಿಲ್ಲೆಯಲ್ಲಿ ಕನ್ನಡ ಬೆಳವಣಿಗೆಗೆ ಉತ್ತಮ ವಾತಾವರಣ ಕಲ್ಪಿಸಿ, ಕನ್ನಡದ ಶ್ರೇಯೋಭಿವೃದ್ಧಿಗೆ ಶ್ರಮಿಸುವ ಉದ್ದೇಶದಿಂದ ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಘಟಕದ ಅಧ್ಯಕ್ಷರನ್ನು ಅವಿರೋಧವಾಗಿ ಆಯ್ಕೆ ಮಾಡುವ ಮೂಲಕ ಪರಿಷತ್ತಿಗೆ ಗೌರವ ನೀಡಲು ಜಿಲ್ಲೆಯ ಸಮಾನ ಮನಸ್ಕರು ಒಕ್ಕೊರಲಿನಿಂದ ತೀರ್ಮಾನಿಸಿದರು.

ಕನ್ನಡ ಸಾಹಿತ್ಯ ಪರಿಷತ್ತಿನ ರಾಜ್ಯ ಮತ್ತು ಜಿಲ್ಲಾ ಘಟಕಗಳ ಅಧ್ಯಕ್ಷ ಸ್ಥಾನಗಳಿಗೆ ಮುಂಬರುವ ಮಾರ್ಚ್‍ನಲ್ಲಿ ನಡೆಯುವ ಚುನಾವಣೆ ಪೂರ್ವಭಾವಿಯಾಗಿ ನಗರದಲ್ಲಿ ಸೋಮವಾರ ನಡೆದ ಸಮಾನ ಮನಸ್ಕರ ಸಭೆಯಲ್ಲಿ ಬಹುತೇಕರು ಅವಿರೋಧ ಆಯ್ಕೆಯ ನಿರ್ಧಾರಕ್ಕೆ ಸಹಮತ ಸೂಚಿಸಿದರು.

ಸಭೆಯಲ್ಲಿ ಮಾತನಾಡಿದ ಸಾಹಿತಿ ಗೋಪಾಲಗೌಡ ಕಲ್ವಮಂಜಲಿ, ‘ಜಿಲ್ಲೆಯಲ್ಲಿ ಕನ್ನಡದ ಬೆಳವಣಿಗೆ ಕುಂಠಿತವಾಗಿದ್ದು, ಹಿಂದಿನ ಅವಧಿಯಲ್ಲಿ ಕಸಾಪವು ಕನ್ನಡಿಗರ ನಿರೀಕ್ಷೆಗಳನ್ನು ಮುಟ್ಟುವಲ್ಲಿ ವಿಫಲವಾಗಿದೆ. ಜಿಲ್ಲೆಯಾದ್ಯಂತ ಅನೇಕ ಕನ್ನಡ ಪ್ರೇಮಿಗಳಿಗೆ ನೋವುಂಟು ಮಾಡಿದೆ. ಹಿಂದೆ ಆದ ತಪ್ಪುಗಳನ್ನು ಸರಿಪಡಿಸಿಕೊಂಡು, ಕಸಾಪದ ತತ್ವ ಮತ್ತು ಮೌಲ್ಯಗಳಿಗೆ ಅನುಗುಣವಾಗಿ ನಡೆದುಕೊಳ್ಳುವಂತಹ ಉತ್ತಮ ಅಭ್ಯರ್ಥಿಯನ್ನು ಆಯ್ಕೆ ಮಾಡುವುದು ನಮ್ಮ ಕರ್ತವ್ಯ’ ಎಂದು ತಿಳಿಸಿದರು.

ಕಸಾಪ ಜಿಲ್ಲಾ ಘಟಕದ ಮಾಜಿ ಅಧ್ಯಕ್ಷ ಎಸ್.ವಿ. ನಾಗರಾಜರಾವ್‍ ಮಾತನಾಡಿ, ‘ನಮ್ಮ ಹಿರಿಯರು ಕಸಾಪ ರಾಜ್ಯ ಮತ್ತು ಜಿಲ್ಲಾ ಘಟಕಗಳ ಅಧ್ಯಕ್ಷರ ಅವಧಿಯನ್ನು ಮೂರು ವರ್ಷಗಳಿಗೆ ನಿಗದಿಪಡಿಸಿ, ಎಲ್ಲರಿಗೂ ಅವಕಾಶವಾಗುವಂತೆ ಬುನಾದಿ ಹಾಕಿದ್ದರು. ಆದರೆ ಈಗಿನ ಅಧ್ಯಕ್ಷರು ಅಧ್ಯಕ್ಷರ ಅವಧಿಯನ್ನು ಐದು ವರ್ಷಗಳಿಗೆ ವಿಸ್ತರಿಸುವ ಮೂಲಕ ಕನ್ನಡ ಕಟ್ಟುವಂತಹ ಕೆಲಸ ಮಾಡುವವರಿಗೆ ಅವಕಾಶ ವಂಚನೆ ಮಾಡಿದರು’ ಎಂದು ಬೇಸರ ವ್ಯಕ್ತಪಡಿಸಿದರು.

‘ಜಿಲ್ಲಾ ಘಟಕಕ್ಕೆ ಒಂದು ಬಾರಿ ಅಧ್ಯಕ್ಷರಾಗಿ ಆಯ್ಕೆಯಾದವರು ಎರಡನೇ ಬಾರಿಗೆ ಸ್ಪರ್ಧಿಸದೆ ಇತರರಿಗೆ ಅವಕಾಶ ಮಾಡಿಕೊಡುವ ಸಂಪ್ರದಾಯವನ್ನು ಹಿಂದಿನಿಂದಲೂ ಪಾಲಿಸಿಕೊಂಡು ಬರಲಾಗುತ್ತಿದೆ. ಅದರಂತೆ ಮುಂಬರುವ ಚುನಾವಣೆಯಲ್ಲಿ ಸಹ ಹೊಸಬರಿಗೆ ಅವಕಾಶ ನೀಡುವ ತೀರ್ಮಾನಕ್ಕೆ ನಾವೆಲ್ಲರೂ ಬದ್ಧರಾಗಿರಬೇಕು’ ಎಂದು ತಿಳಿಸಿದರು. ಅದಕ್ಕೆ ಸಭೆಯಲ್ಲಿದ್ದವರೆಲ್ಲ ಸಹಮತ ಸೂಚಿಸಿದರು.

ಶಿಕ್ಷಣ ತಜ್ಞ ಪ್ರೊ.ಕೋಡಿರಂಗಪ್ಪ ಮಾತನಾಡಿ, ‘‍ಪರಿಷತ್ತಿನ ಚುನಾವಣೆಗೆ ತನ್ನದೇ ಆದ ಪಾವಿತ್ರ್ಯ ಇದೆ. ಆದ್ದರಿಂದ, ಅದರಲ್ಲಿ ರಾಜಕೀಯ ಚುನಾವಣೆಗಳಂತೆ ಹಣ ಹಂಚುವುದು, ಡಾಬಾ ಸಂಸ್ಕೃತಿಯನ್ನು ಪರಿಚಯಿಸುವುದು ತರವಲ್ಲ. ಸಚ್ಚ್ಯಾರಿತ್ರ್ಯಉಳ್ಳ, ಜಾತ್ಯತೀತ ಮನೋಭಾವದ ಮತ್ತು ಕನ್ನಡ ನಿಷ್ಠೆಯ ವ್ಯಕ್ತಿಯನ್ನು ಆಯ್ಕೆ ಮಾಡುವ ಮೂಲಕ ನಾವೆಲ್ಲ ಕನ್ನಡ ಅಭಿವೃದ್ಧಿಗೆ ಶ್ರಮಿಸಬೇಕು’ ಎಂದು ಸಲಹೆ ನೀಡಿದರು.

ಸಭೆಯಲ್ಲಿ ಅನೇಕರು ಜಿಲ್ಲಾ ಘಟಕದ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸುವ ಇಚ್ಛೆ ವ್ಯಕ್ತಪಡಿಸಿದರು. ಮುಂದಿನ ಸಭೆಯಲ್ಲಿ ಅಭ್ಯರ್ಥಿ ಆಯ್ಕೆಯ ವಿಚಾರವಾಗಿ ಚರ್ಚಿಸಿ ಅಂತಿಮ ತೀರ್ಮಾನ ಕೈಗೊಳ್ಳಲು ಸಭೆ ನಿರ್ಧರಿಸಿತು.

ಸಾಹಿತಿ ಎಸ್. ಶಿವರಾಮ್, ಕಸಾಪ ಜಿಲ್ಲಾ ಘಟಕದ ಅಧ್ಯಕ್ಷ ಕೈವಾರ ಶ್ರೀನಿವಾಸ್, ಪದಾಧಿಕಾರಿಗಳಾದ ವೈ.ಎಲ್. ಹನುಮಂತರಾವ್, ಎಸ್.ಎನ್. ಅಮೃತ್‍ಕುಮಾರ್, ಯಲುವಳ್ಳಿ ಸೊಣ್ಣೇಗೌಡ, ಟಿ.ಎಸ್. ನಾಗೇಂದ್ರಬಾಬು, ಕೆ.ಪಿ. ನವಮೋಹನ್, ಮಂಚನಬಲೆ ಶ್ರೀನಿವಾಸ್, ಸುಧಾ ವೆಂಕಟೇಶ್, ಪ್ರೇಮಲೀಲಾ ವೆಂಕಟೇಶ್, ಉಷಾ ಶ್ರೀನಿವಾಸ್, ಪ್ರಭಾ ನಾರಾಯಣಗೌಡ ಸಭೆಯಲ್ಲಿ ಹಾಜರಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.