ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಚಿಕ್ಕಬಳ್ಳಾಪುರ: ನೋಂದಣಿಗೆ ಸೀಮಿತವಾದ ರಾಗಿ ಖರೀದಿ

ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಕಳೆದ ವರ್ಷ ಈ ವೇಳೆಗಾಗಲೆ ಖರೀದಿ
ಡಿ.ಎಂ.ಕುರ್ಕೆ ಪ್ರಶಾಂತ್
Published 7 ಫೆಬ್ರುವರಿ 2024, 6:07 IST
Last Updated 7 ಫೆಬ್ರುವರಿ 2024, 6:07 IST
ಅಕ್ಷರ ಗಾತ್ರ

ಚಿಕ್ಕಬಳ್ಳಾಪುರ: ಜಿಲ್ಲೆಯಲ್ಲಿ ಬೆಂಬಲ ಬೆಲೆ ಯೋಜನೆಯಡಿ ರಾಗಿ ಖರೀದಿಗೆ ನೋಂದಣಿ ಆರಂಭವಾಗಿ ಒಂದು ತಿಂಗಳಾಗಿದೆ. ಆದರೆ ಇಂದಿಗೂ ನೋಂದಣಿಯಾದ ರೈತರ ರಾಗಿಯನ್ನು ಖರೀದಿಸುತ್ತಿಲ್ಲ. ರಾಗಿ ಮಾರಾಟದಿಂದ ಒಂದಿಷ್ಟು ಹಣ ಬರುತ್ತದೆ ಎನ್ನುವ ನಿರೀಕ್ಷೆ ಹೊತ್ತ ರೈತರಿಗೆ ನಿರಾಸೆಯಾಗಿದೆ. 

ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಫೆ.5ಕ್ಕೆ ಒಟ್ಟು 3,814 ರೈತರು 86,729 ಕ್ವಿಂಟಲ್ ರಾಗಿ ಮಾರಾಟಕ್ಕೆ ನೋಂದಣಿ ಮಾಡಿಕೊಂಡಿದ್ದಾರೆ. ಕಳೆದ ವರ್ಷ ಈ ವೇಳೆಗಾಗಲೇ ರೈತರಿಂದ ರಾಗಿ ಖರೀದಿಸಲಾಗುತ್ತಿತ್ತು. ಕ್ವಿಂಟಲ್ ರಾಗಿಗೆ ಸರ್ಕಾರ ₹ 3,846 ಬೆಲೆ ಸಹ ನಿಗದಿಗೊಳಿಸಿದೆ. ಕಳೆದ ಮುಂಗಾರಿನಲ್ಲಿ ಮಳೆ ಇಲ್ಲದ ಕಾರಣ ಜಿಲ್ಲೆಯಲ್ಲಿ ರಾಗಿ ಬೆಳೆ ದೊಡ್ಡ ಪ್ರಮಾಣದಲ್ಲಿ ನಷ್ಟವಾಯಿತು. ಅಳಿದುಳಿದ ಫಸಲನ್ನು ರೈತರು ಕಾಪಾಡಿಕೊಂಡಿದ್ದಾರೆ. ಈಗ ರಾಗಿ ಮಾರಾಟದಿಂದ ಒಂದಿಷ್ಟು ಹಣ ಕಾಣಬಹುದು ಎನ್ನುವ ಅವರ ನಿರೀಕ್ಷೆ ಇಂದಿಗೂ ಈಡೇರಿಲ್ಲ. 

 ಸರ್ಕಾರದ ಆದೇಶದಂತೆ 2023-24 ನೇ ಸಾಲಿನ ಮುಂಗಾರು ಋತುವಿನಲ್ಲಿ ಕೇಂದ್ರ ಸರ್ಕಾರದ ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ರಾಜ್ಯದ ರೈತರಿಂದ 8 ಲಕ್ಷ ಮೆಟ್ರಿಕ್ ಟನ್ ರಾಗಿ ಖರೀದಿಸಲು ಗುರಿ ನಿಗದಿಪಡಿಸಲಾಗಿದೆ. ನೋಂದಣಿಗೊಂಡ ರೈತರಿಂದ 2024ರ ಜ.1 ರಿಂದ ಮಾರ್ಚ್ 31 ರವರೆಗೆ ರಾಗಿ ಖರೀದಿಸಲಾಗುತ್ತದೆ ಎಂದು ಸರ್ಕಾರ ತಿಳಿಸಿತ್ತು.

‌‌2023ರ ನ.27ರಂದು ಜಿಲ್ಲೆಯಲ್ಲಿ ರಾಗಿ ಖರೀದಿ ಕುರಿತ ಪೂರ್ವ ಸಿದ್ಧತಾ ಸಭೆ ನಡೆಸಿದ್ದ ಜಿಲ್ಲಾಧಿಕಾರಿ ಪಿ.ಎನ್.ರವೀಂದ್ರ ಅವರು ಡಿ.1ರಿಂದ ರಾಗಿ ಖರೀದಿಗೆ ನೋಂದಣಿ ಆರಂಭವಾಗುತ್ತದೆ ಎಂದಿದ್ದರು. ಆದರೆ ತಾಂತ್ರಿಕ ಸಮಸ್ಯೆಗಳ ಕಾರಣ ನೋಂದಣಿ ಪ್ರಕ್ರಿಯೆಯು 20 ದಿನಗಳಿಗೂ ಹೆಚ್ಚು ಸಮಯ ತಡವಾಯಿತು. ಡಿಸೆಂಬರ್ ಅಂತ್ಯದಿಂದ ಜಿಲ್ಲೆಯ ಐದು ಖರೀದಿ ಕೇಂದ್ರಗಳಲ್ಲಿ ರಾಗಿ ಖರೀದಿಗೆ ನೋಂದಣಿ ಆರಂಭವಾಯಿತು.

ಕರ್ನಾಟಕ ಆಹಾರ ಮತ್ತು ನಾಗರಿಕ ಸರಬರಾಜು ನಿಗಮ, ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾಮಂಡಳ, ಕರ್ನಾಟಕ ರಾಜ್ಯ ಕೃಷಿ ಮಾರಾಟ ಮಂಡಳವನ್ನು ಖರೀದಿ ಏಜೆನ್ಸಿಗಳಾಗಿ ಸರ್ಕಾರವು ನಿಯೋಜಿಸಿದೆ. ಈ ಪ್ರಕಾರ ಚಿಕ್ಕಬಳ್ಳಾಪುರದಲ್ಲಿ ಕರ್ನಾಟಕ ರಾಜ್ಯ ಕೃಷಿ ಮಾರಾಟ ಮಂಡಳ ಖರೀದಿ ಏಜೆನ್ಸಿಯಾಗಿದೆ.

ಈ ಹಿಂದೆ ಬೆಂಬಲ ಬೆಲೆ ಯೋಜನೆಯಡಿ ರಾಗಿ ಮಾರಾಟಕ್ಕೆ ರೈತರು ‘ಫ್ರೂಟ್ಸ್‌’ ಐಡಿ ಸಂಖ್ಯೆ ನೀಡಿ ನೋಂದಣಿ ಮಾಡಿಸುತ್ತಿದ್ದರು. ಆ ಸಮಯದಲ್ಲಿ ನೀಡಲಾಗುವ ನಿಗದಿತ ದಿನ ರಾಗಿ ಖರೀದಿ ಕೇಂದ್ರಕ್ಕೆ ಸರಕನ್ನು ತರಬೇಕಾಗಿತ್ತು. ಆದರೆ ಇದೇ ಮೊದಲ ಬಾರಿಗೆ ಪಹಣಿಯಲ್ಲಿ(ಆರ್‌ಟಿಸಿ) ಹೆಸರು ಇರುವ ರೈತರೇ ಖರೀದಿ ಕೇಂದ್ರಕ್ಕೆ ಖುದ್ದಾಗಿ ಭೇಟಿ ನೀಡಿ ಬಯೊಮೆಟ್ರಿಕ್‌ ಮೂಲಕ ರಾಗಿ ಖರೀದಿಗೆ ಹೆಸರು ನೋಂದಣಿ ಮಾಡಿಸಬೇಕಿದೆ.  

ಈ ಹಿಂದಿನ ಎರಡು ವರ್ಷಗಳಲ್ಲಿ ಈ ವೇಳೆಗಾಗಲೇ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಒಂದು ಲಕ್ಷ ಕ್ವಿಂಟಲ್ ರಾಗಿ ನೋಂದಣಿ ಮತ್ತು ಖರೀದಿ ಪ್ರಕ್ರಿಯೆಗಳು ನಡೆದಿದ್ದವು. 2023ರಲ್ಲಿ 1,16,260 ಕ್ವಿಂಟಲ್ ರಾಗಿ ಮಾರಾಟಕ್ಕೆ ಜಿಲ್ಲೆಯಲ್ಲಿ ನೋಂದಣಿ ಮಾಡಿಕೊಳ್ಳಲಾಗಿತ್ತು. 2022ರಲ್ಲಿ 1.22 ಲಕ್ಷ ಕ್ವಿಂಟಲ್ ರಾಗಿ ಖರೀದಿ ನಡೆದಿತ್ತು.

ಲೋಕೇಶ್ ಗೌಡ
ಲೋಕೇಶ್ ಗೌಡ

‘ಖರೀದಿಯ ತಂತ್ರಾಂಶ ಸಕ್ರಿಯಗೊಳಿಸಿಲ್ಲ’

ಇದೇ ಮೊದಲ ಬಾರಿಗೆ ಪಹಣಿಯಲ್ಲಿ ಹೆಸರು ಇರುವ ರೈತರು ಖುದ್ದಾಗಿ ಭೇಟಿ ನೀಡಿ ಬಯೊಮೆಟ್ರಿಕ್‌ ಮೂಲಕ ರಾಗಿ ಖರೀದಿಗೆ ಹೆಸರು ನೋಂದಾಯಿಸಬೇಕಾಗಿದೆ. ಈ ಬೆರಳಚ್ಚು ಮಾಹಿತಿಯನ್ನು ಖರೀದಿ ಸಾಪ್ಟ್‌ವೇರ್‌ನಲ್ಲಿಯೂ ಸೇರಿಸಬೇಕಾಗಿದೆ. ಹೀಗೆ ಸಾಪ್ಟ್‌ವೇರ್ ಅಪ್‌ಡೇಟ್ ಆಗದ ಕಾರಣ ಖರೀದಿ ಪ್ರಕ್ರಿಯೆ ಆರಂಭವಾಗಿಲ್ಲ ಎಂದು ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆ ಜಂಟಿ ನಿರ್ದೇಶಕಿ ಪಿ.ಸವಿತಾ ‘ಪ್ರಜಾವಾಣಿ’ಗೆ ತಿಳಿಸಿದರು.   ಖರೀದಿ ತಂತ್ರಾಂಶವನ್ನು ಇನ್ನೂ ಸಕ್ರಿಯಗೊಳಿಸಿಲ್ಲ. ನಿಗದಿತ ಗುರಿ ತಲುಪುವವರೆಗೂ ರೈತರ ನೋಂದಣಿ ಮುಂದುವರಿಯುತ್ತದೆ ಎಂದರು. 

‘ಖರೀದಿಗೆ ಕಾಯುತ್ತಿರುವ ರೈತರು’

ಸರ್ಕಾರ ನೋಂದಣಿ ಮಾಡಿಕೊಂಡ ರೈತರಿಂದ ರಾಗಿ ಖರೀದಿಸಿದರೆ ಆ ಹಣ ಬರಬೇಕಾದರೆ ಎರಡು ವಾರಕ್ಕೂ ಮೇಲಾಗುತ್ತದೆ. ಬರದಿಂದ ರೈತರು ಕಷ್ಟಕ್ಕೆ ಸಿಲುಕಿದ್ದಾರೆ. ರಾಗಿ ಮಾರಾಟದಿಂದ ಅಲ್ಪಸ್ವಲ್ಪವಾದರೂ ಹಣ ದೊರೆಯುತ್ತದೆ. ಆ ಮೂಲಕ ಬದುಕು ನಡೆಯುತ್ತದೆ ಎಂದುಕೊಂಡಿದ್ದರು. ಆದರೆ ಇಂದಿಗೂ ಖರೀದಿ ಆಗುತ್ತಿಲ್ಲ ಎಂದು ಗೌರಿಬಿದನೂರು ತಾಲ್ಲೂಕು ರೈತ ಸಂಘದ ಅಧ್ಯಕ್ಷ ಲೋಕೇಶ್ ಗೌಡ ತಿಳಿಸಿದರು.  ಸರ್ಕಾರ ಮೊದಲು ರಾಗಿ ಖರೀದಿಗೆ ಮುಂದಾಗಬೇಕು. ರೈತರ ಕಷ್ಟಗಳನ್ನು ಅರ್ಥ ಮಾಡಿಕೊಳ್ಳಬೇಕು ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT