ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಹೆಚ್ಚುತ್ತಲೇ ಇದೆ ಅಪಘಾತ: ಸಾವಿನ ಹಾದಿಗೆ 346 ಮಂದಿ

ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಲೇ ಇದೆ ರಸ್ತೆ ಅಪಘಾತದಿಂದ ಸಾಯುವವರ ಸಂಖ್ಯೆ
ಡಿ.ಎಂ.ಕುರ್ಕೆ ಪ್ರಶಾಂತ್
Published 16 ಮಾರ್ಚ್ 2024, 7:09 IST
Last Updated 16 ಮಾರ್ಚ್ 2024, 7:09 IST
ಅಕ್ಷರ ಗಾತ್ರ

ಚಿಕ್ಕಬಳ್ಳಾಪುರ: ಜಿಲ್ಲೆಯಲ್ಲಿ ರಸ್ತೆ ಅಪಘಾತಗಳ ಸಂಖ್ಯೆ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಲೇ ಇದೆ. ನಿತ್ಯವೂ ಒಂದಲ್ಲಾ ಒಂದು ಕಡೆಯಲ್ಲಿ ರಸ್ತೆ ಅಪಘಾತದಿಂದ ಜನರು ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಕೆಲವರು ಶಾಶ್ವತವಾಗಿ ಕೈ, ಕಾಲು ಕಳೆದುಕೊಂಡರೆ ಮತ್ತಷ್ಟು ಮಂದಿ ಗಾಯಾಳುಗಳಾಗುತ್ತಿದ್ದಾರೆ. 

2023ರಲ್ಲಿ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ರಸ್ತೆ ಅಪಪಘಾತದಿಂದ 346 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. 312 ಮಾರಣಾಂತಿಕ ಅಪಘಾತಗಳು ನಡೆದಿದ್ದರೆ 628 ಮಾರಣಾಂತಿಕವಲ್ಲದ ಪ್ರಕರಣಗಳು ವರದಿಯಾಗಿವೆ. 1,082 ಮಂದಿ ಗಾಯಗೊಂಡಿದ್ದಾರೆ.

ರಾಜ್ಯದಲ್ಲಿ 2023ರಲ್ಲಿ ನಡೆದ ಅಪಘಾತಗಳಲ್ಲಿ 12,327 ಜನರು ಪ್ರಾಣ ಕಳೆದುಕೊಂಡಿದ್ದರೆ, 52, 531 ಜನರು ಗಾಯಗೊಂಡಿದ್ದಾರೆ. 11,608 ಮಾರಣಾಂತಿಕ ಅಪಘಾತ ಪ್ರಕರಣಗಳು ಮತ್ತು 31,832 ಮಾರಣಾಂತಿಕವಲ್ಲದ ಪ್ರಕರಣಗಳು ವರದಿಯಾಗಿವೆ. 

ಈ ಅಪಘಾತಗಳ ಕುರಿತು ‘ಎಕ್ಸ್‌’ನಲ್ಲಿ ಪೋಸ್ಟ್ ಪ್ರಕಟಿಸಿರುವ ಸಂಚಾರ ಮತ್ತು ರಸ್ತೆ ಸುರಕ್ಷತೆ ಎಡಿಜಿಪಿ ಅಲೋಕ್‌ ಕುಮಾರ್, ‘2023ರಲ್ಲಿ ಪ್ರತಿ‌ದಿನ ಅಪಘಾತದಲ್ಲಿ 34 ಮಂದಿ ಮೃತಪಟ್ಟಿದ್ದಾರೆ. ಹಳೇ ವರ್ಷಕ್ಕೆ ಹೋಲಿಸಿದರೆ ಶೇ 5ರಷ್ಟು ಅಪಘಾತಗಳು‌ ಹೆಚ್ಚಾಗಿವೆ’ ಎಂದು  ಮಾಹಿತಿ ನೀಡಿದ್ದಾರೆ.

ಜಿಲ್ಲೆಯಲ್ಲಿ 2023ರಲ್ಲಿ ನಡೆದ ಅಪಘಾತ ಮತ್ತು ಈ ಹಿಂದಿನ ವರ್ಷಗಳಲ್ಲಿ ನಡೆದ ಅಪಘಾತ ಪ್ರಕರಣಗಳ ಅಂಕಿ ಅಂಶಗಳು ಅಪಘಾತಗಳ ಭೀಕರತೆ ಸಾರುತ್ತಿವೆ. ಇವು ರಸ್ತೆಗಳಲ್ಲ, ಸಾವಿನ ದಾರಿಗಳು ಎನಿಸಿವೆ. ಕಳೆದ ಮೂರು ವರ್ಷಗಳಲ್ಲಿ ಜಿಲ್ಲೆಯಲ್ಲಿ ಸಂಭವಿಸಿದ ರಸ್ತೆ ಅಪಘಾತದಿಂದ 907 ಮಂದಿ ಮೃತಪಟ್ಟಿದ್ದಾರೆ. 

ನಿರ್ಲಕ್ಷ್ಯದ‌ ಚಾಲನೆ, ಚಾಲನೆ ಕೌಶಲ ಇಲ್ಲದಿದ್ದರೂ ಚಾಲನೆ ಮಾಡಿದ್ದರಿಂದ, ರಸ್ತೆ ಸರಿ ಇಲ್ಲದಿದ್ದರಿಂದ, ರಸ್ತೆ, ಹೆದ್ದಾರಿಗಳಲ್ಲಿ ಸೂಕ್ತ ಸರ್ವಿಸ್ ರಸ್ತೆಗಳು, ಸೂಚನ ಫಲಕಗಳು ಇಲ್ಲದಿರುವುದು, ಸಾರಿಗೆ ನಿಯಮಗಳ ಉಲ್ಲಂಘನೆಯ ಬಗ್ಗೆ ಕಠಿಣ ಕ್ರಮಕೈಗೊಳ್ಳಬೇಕಾದ ಅಧಿಕಾರಿಗಳು ನಿರ್ಲಕ್ಷ್ಯ..ಹೀಗೆ ನಾನಾ ಕಾರಣಗಳಿಂದ ಅಪಘಾತಗಳು ಸಂಭವಿಸುತ್ತಿವೆ. 

ಚಿಕ್ಕಬಳ್ಳಾಪುರ ಜಿಲ್ಲಾ ಕೇಂದ್ರಕ್ಕೆ ಕೂಗಳತೆಯ ದೂರದಲ್ಲಿರುವ ರಾಷ್ಟ್ರೀಯ ಹೆದ್ದಾರಿ 44ರ ಅಕ್ಕಪಕ್ಕ ಸಮರ್ಪಕವಾಗಿ ಇಂದಿಗೂ ಸರ್ವಿಸ್ ರಸ್ತೆಗಳು ಇಲ್ಲ. ಹೆದ್ದಾರಿ ಅಕ್ಕಪಕ್ಕದ ಗ್ರಾಮಸ್ಥರು, ವಾಹನ ಸವಾರರು ಜೀವಭಯದಲ್ಲಿ ಹೆದ್ದಾರಿ ದಾಟಬೇಕಿದೆ. ಹೆದ್ದಾರಿಗಳಲ್ಲಿ ಮಾರ್ಗಸೂಚಿ ಫಲಕಗಳು, ಅಪಘಾತ ವಲಯಗಳ ಬಗ್ಗೆ ಅಗತ್ಯ ಮುನ್ನೆಚ್ಚರಿಕೆ ನೀಡುವ ಜಾಗೃತಿ ಫಲಕಗಳು ಸಹ ಇಲ್ಲ.

ರಾಷ್ಟ್ರೀಯ ಹೆದ್ದಾರಿ 44, ಶಿರಾ, ಮುಳಬಾಗಿಲು ನಡುವೆ ಸಂಪರ್ಕ ಕಲ್ಪಿಸುವ ರಾಷ್ಟ್ರೀಯ ಹೆದ್ದಾರಿ  264ರಲ್ಲಿ ಅಪಘಾತಗಳ ಸಂಖ್ಯೆ ಹೆಚ್ಚುತ್ತಲೇ ಇದೆ. ಇವುಗಳ ಜೊತೆಗೆ ನಾಲ್ಕೈದು ರಾಜ್ಯ ಹೆದ್ದಾರಿಗಳನ್ನು ಹೊಂದಿದೆ.

ಕನಸಾಗಿಯೆ ಉಳಿದ ಟ್ರಕ್ ಟರ್ಮಿನಲ್: ಜಿಲ್ಲೆಯ ರಾಷ್ಟ್ರೀಯ ಹೆದ್ದಾರಿಗಳಲ್ಲಿ ದಿನ ಬೆಳೆಗಾದರೆ ನಿತ್ಯ ಸಾವಿರಾರು ವಾಹನಗಳು ಸಂಚರಿಸುತ್ತವೆ. ವಾಹನ ಸವಾರರಿಂದ ಕೂಡ ಸರ್ಕಾರಗಳ ಬೊಕ್ಕಸಕ್ಕೆ ವಾರ್ಷಿಕ ಕೊಟ್ಯಾಂತರ ಟೋಲ್ ವಸೂಲಿ ಆಗುತ್ತದೆ. ಆದರೆ ಜಿಲ್ಲೆಯಲ್ಲಿ ಮಾತ್ರ ಇನ್ನೂ ಟ್ರಕ್ ಟರ್ಮಿನಲ್ ನಿರ್ಮಾಣದ ಕನಸು ಈಡೇರಿಲ್ಲ.

ಬೆಂಗಳೂರು-ಹೈದ್ರಾಬಾದ್ ನಡುವೆ ಗೂಡ್ಸ್‌ ವಾಹನಗಳು, ಸಿಮೆಂಟ್ ಬಲ್ಕರ್‌ಗಳು ಅತ್ಯಧಿಕವಾಗಿ ಸಂಚರಿಸುತ್ತವೆ. ಆದರೆ ಚಾಲಕರಿಗೆ ರಾತ್ರಿ ವೇಳೆ ವಿಶ್ರಾಂತಿ ಪಡೆಯಲು ಟ್ರಕ್ ಟರ್ಮಿನಲ್ ನಿರ್ಮಾಣವಿಲ್ಲ. ವಾಹನ ಚಾಲಕರು ಹೆದ್ದಾರಿ ಬದಿಗಳಲ್ಲಿ ಸಿಕ್ಕ ಸಿಕ್ಕ ಕಡೆ ವಾಹನಗಳನ್ನು ನಿಲ್ಲಿಸುತ್ತಿದ್ದಾರೆ. ಇದರಿಂದ ಹೆದ್ದಾರಿಗಳಲ್ಲಿ ಅಕಸ್ಮಿಕವಾಗಿ ರಸ್ತೆ ಅಪಘಾತಗಳು ಸಂಭವಿಸಿ ಅಮಾಯಕರು ಅಸುನೀಗಬೇಕಿದೆ.  

ಜಿಲ್ಲೆಯಾಗಿ ಚಿಕ್ಕಬಳ್ಳಾಪುರ 16 ವರ್ಷ ತುಂಬಿದೆ. ಚಿಕ್ಕಬಳ್ಳಾಪುರ ಮಾತ್ರವಲ್ಲದೇ ಕನಿಷ್ಠ ತಾಲೂಕು ಕೇಂದ್ರಗಳಲ್ಲಿ ಕೂಡ ಲಾರಿ ಮತ್ತಿತರ ಟ್ರಕ್‌ಗಳ ನಿರ್ಮಾಣಕ್ಕೆ ಟರ್ಮಿನಲ್ ತಲೆ ಎತ್ತಿಲ್ಲ. ದಶಕಗಳ ಹಿಂದೆಯೆ ಚಿಂತಾಮಣಿ ನಗರದ ರಾಮಕುಂಟೆ ಬಳಿ ಟ್ರಕ್ ಟರ್ಮಿನಲ್ ನಿರ್ಮಾಣ ಜಾಗ ಗುರುತಿಸಿದ್ದರೂ ಫಲ ಸಿಗಲಿಲ್ಲ. ಟ್ರರ್ಮಿನಲ್ ನಿರ್ಮಾಣಕ್ಕೆ ಗುರುತಿಸಿದ್ದ ಜಾಗ ಖಾಲಿ ಬಿದ್ದಿದೆ.  

ಚಿಕ್ಕಬಳ್ಳಾಪುರ ಕೃಷಿ ಪ್ರಧಾನ ಜಿಲ್ಲೆ. ಬೆಂಗಳೂರಿಗೆ ಸಮೀಪದಲ್ಲಿ ಇದೆ. ಪ್ರಸಿದ್ಧ ಪ್ರವಾಸಿ ತಾಣ ನಂದಿಬೆಟ್ಟ, ಈಶಾ ಯೋಗ ಕೇಂದ್ರಕ್ಕೆ ವಾಹನಗಳಲ್ಲಿ ಬರುವವರ ಸಂಖ್ಯೆಯೇ ಅಧಿಕ. ವಾರಾಂತ್ಯದ ದಿನಗಳಲ್ಲಿ ರಸ್ತೆಗಳಲ್ಲಿ ಸಂಚಾರ ದಟ್ಟಣೆಯೂ ಹೆಚ್ಚಿರುತ್ತವೆ. ಈ ಪರಿಣಾಮ ಕೂಡ ಜಿಲ್ಲೆಯಲ್ಲಿ ದಿನದಿಂದ ದಿನಕ್ಕೆ ರಸ್ತೆ ಅಪಘಾತಗಳ ಸಂಖ್ಯೆ ಹೆಚ್ಚಾಗಲು ಮುಖ್ಯ ಕಾರಣ ಎನ್ನಬಹುದು.

ರಸ್ತೆ ಅಪಘಾತಗಳಲ್ಲಿ ಜಿಲ್ಲೆಯಲ್ಲಿ ಚಿಂತಾಮಣಿ ಮೊದಲು ಸ್ಥಾನದಲ್ಲಿ ಇದೆ. ಚಿಂತಾಮಣಿ ನಗರಕ್ಕಿಂತ ಗ್ರಾಮೀಣ ಭಾಗದಲ್ಲಿ ಹೆಚ್ಚು ವಾಹನಗಳ ಅಪಘಾತ ಸಂಭವಿಸುತ್ತದೆ ‌ಎಂದು ಜಿಲ್ಲೆಯ ಪೊಲೀಸ್ ಇಲಾಖೆ ನಡೆಸಿರುವ ಸಮೀಕ್ಷೆಯಲ್ಲಿ ತಿಳಿದು ಬಂದಿದೆ. ನಂತರದಲ್ಲಿ ಚಿಕ್ಕಬಳ್ಳಾಪುರ, ಬಾಗೇಪಲ್ಲಿ, ಶಿಡ್ಲಘಟ್ಟ ತಾಲೂಕು ಇದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT