7
ಕಂದಾಯ ಇಲಾಖೆಯ ನೌಕರರ ಸಂಘದ ವತಿಯಿಂದ ನೌಕರರ ಕ್ರೀಡಾಕೂಟ

ಒತ್ತಡ ಮರೆಯಲು ಕ್ರೀಡೆಗಳು ಸಹಕಾರಿ

Published:
Updated:
ಕಬಡ್ಡಿ ಆಟದಲ್ಲಿ ನಿರತ ಕಂದಾಯ ಇಲಾಖೆ ನೌಕರರು

ಚಿಕ್ಕಬಳ್ಳಾಪುರ: ‘ನಿತ್ಯ ಮಾನಸಿಕ ಒತ್ತಡದಲ್ಲಿ ಕೆಲಸ ನಿರ್ವಹಿಸುವ ಸರ್ಕಾರಿ ಅಧಿಕಾರಿಗಳು, ನೌಕರರು ಮಾನಸಿಕ, ದೈಹಿಕವಾಗಿ ಉತ್ತಮ ಆರೋಗ್ಯ ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ಕ್ರೀಡಾಸಕ್ತಿ ಬೆಳೆಸಿಕೊಳ್ಳಬೇಕು’ ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಗುರುದತ್‌ ಹೆಗಡೆ ತಿಳಿಸಿದರು.

ನಗರದ ಸರ್‌.ಎಂ.ವಿಶ್ವೇಶ್ವರಯ್ಯ ಜಿಲ್ಲಾ ಕ್ರೀಡಾಂಗಣದಲ್ಲಿ ಕಂದಾಯ ಇಲಾಖೆಯ ನೌಕರರ ಸಂಘದ ಮಂಗಳವಾರ ಆಯೋಜಿಸಿದ್ದ ಕ್ರೀಡಾಕೂಟಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ‘ಮನುಷ್ಯನಿಗೆ ಕೆಲಸಕ್ಕಿಂತ ಉತ್ತಮ ಆರೋಗ್ಯ ಮುಖ್ಯ. ಆದ್ದರಿಂದ ಪ್ರತಿಯೊಬ್ಬ ನೌಕರರು ಕ್ರೀಡಾ ಚಟುವಟಿಕೆಗಳಲ್ಲಿ ಹೆಚ್ಚೆಚ್ಚು ಭಾಗವಹಿಸಬೇಕು. ಇದರಿಂದ ನಾನಾ ರೀತಿಯ ಕಾಯಿಲೆಗಳು ದೂರವಾಗುತ್ತವೆ. ಜತೆಗೆ ದೇಹಕ್ಕೆ ಒತ್ತಡ ಕಡಿಮೆಯಾಗಿ ಮಾಡುವ ಕೆಲಸದಲ್ಲಿ ಚುರುಕು ಮೂಡುತ್ತದೆ’ ಎಂದು ಹೇಳಿದರು.

ತಹಶೀಲ್ದಾರ್‌ ಕೆ.ನರಸಿಂಹಮೂರ್ತಿ ಮಾತನಾಡಿ, ‘ಕಂದಾಯ ಇಲಾಖೆ ನೌಕರರು ತಮ್ಮ ಕಾರ್ಯ ಚಟುವಟಿಕೆಗಳನ್ನು ಮತ್ತಷ್ಟು ಚುರುಕುಗೊಳಿಸಲು ಇಂತಹ ಕ್ರೀಡಾಕೂಟಗಳು ಸಹಕಾರಿಯಾಗಲಿದೆ. ಕ್ರೀಡಾಪಟುಗಳು ಕ್ರೀಡಾ ಮನೋಭಾವದಿಂದ ಆಟೋಟಗಳಲ್ಲಿ ಪಾಲ್ಗೊಳ್ಳುವ ಮೂಲಕ ದೈಹಿಕ, ಮಾನಸಿಕವಾಗಿ ಆರೋಗ್ಯವಂತರಾಗಬೇಕು’ ಎಂದರು.

ಕಂದಾಯ ಇಲಾಖೆ ನೌಕರರ ಜಿಲ್ಲಾ ಘಟಕದ ಅಧ್ಯಕ್ಷ ವೈ.ಎಲ್‌.ಹನುಮಂತರಾವ್‌ ಮಾತನಾಡಿ, ‘ಕಂದಾಯ ಇಲಾಖೆ ಸರ್ಕಾರದ ಮಹತ್ವದ ಅಂಗ. ಸಹಸ್ರಾರು ರೈತರು, ಸಾರ್ವಜನಿಕರಿಗೆ ಸರ್ಕಾರದ ಯೋಜನೆ, ಸೌಲಭ್ಯಗಳನ್ನು ಅರ್ಹರಿಗೆ ತಲುಪುವಂತೆ ನೋಡಿಕೊಳ್ಳುವುದು ಜವಾಬ್ದಾರಿ ನೌಕರರ ಮೇಲಿದೆ. ಸಂಘದ ವತಿಯಿಂದ ಕ್ರೀಡಾಕೂಟ ಹೆಚ್ಚು ಅತ್ಯವಶ್ಯಕವಾಗಿದೆ’ ಎಂದು ಹೇಳಿದರು.

ಪತಂಜಲಿ ಯೋಗ ಸಮಿತಿ ಕಾರ್ಯದರ್ಶಿ ಡಾ.ಮಹೇಶ್‌ ಮಾತನಾಡಿ, ‘ನೌಕರರಿಗೆ ಕೆಲಸ ಮಾಡಲು ಏಕಾಗ್ರತೆ ಮುಖ್ಯ. ಇದಕ್ಕೆ ದೇಹ ಸಧೃಡವಾಗಿದ್ದರೆ ಸಾಲದು. ಮನಸ್ಸನ್ನು ಪರಿಶುದ್ಧವಾಗಿಟ್ಟುಕೊಳ್ಳಬೇಕು. ಆಗ ಮಾತ್ರ ಎಲ್ಲರೊಂದಿಗೆ ಬೆರೆಯಲು ಸಾಧ್ಯ. ಪ್ರತಿಯೊಬ್ಬರೂ ನಿತ್ಯ ಜೀವನದ ಭಾಗವಾಗಿ ಯೋಗ, ಕ್ರೀಡಾ ಚಟುವಟಿಕೆಗಳನ್ನು ಹವ್ಯಾಸವಾಗಿ ರೂಢಿಸಿಕೊಳ್ಳಬೇಕು. ಇದರಿಂದ ಮನಸ್ಸು ಹಗುರವಾಗುವ ಜತೆಗೆ ಮಾಡುವ ಕೆಲಸದಲ್ಲಿ ಏಕಾಗ್ರತೆ ಹೆಚ್ಚುತ್ತದೆ’ ಎಂದು ತಿಳಿಸಿದರು.

‘ಇತ್ತೀಚಿನ ದಿನಗಳಲ್ಲಿ ಅನೇಕರು ದೈಹಿಕ ಕಾಯಿಲೆಗಳಿಗಿಂತಲೂ ಹೆಚ್ಚಾಗಿ ಮಾನಸಿಕವಾಗಿ ಬಳಲಿ ಕಾಯಿಲೆಗಳನ್ನು ಬರ ಮಾಡಿಕೊಳ್ಳುತ್ತಿದ್ದಾರೆ. ಅತಿಯಾದ ಆಲೋಚನೆ, ಚಿಂತೆ ಒಳ್ಳೆಯದಲ್ಲ. ದೇಹವನ್ನು ಸಮಮತೋಲನವಾಗಿಟ್ಟುಕೊಳ್ಳಲು ನಿತ್ಯ ಯೋಗಾಭ್ಯಾಸ ಅಗತ್ಯವಿದೆ. ಇದರಿಂದ ಕೆಲಸದಲ್ಲಿ ಆತ್ಮ ಶಕ್ತಿ ಹೆಚ್ಚುತ್ತದೆ. ಜತೆಗೆ ಉತ್ತಮ ಸಮಾಜ ನಿರ್ಮಾಣವಾಗುತ್ತದೆ’ ಎಂದರು.

ಕಂದಾಯ ಇಲಾಖೆಯ ನೌಕರರ ಸಂಘದ ವತಿಯಿಂದ ನೌಕರರಿಗೆ ಕ್ರಿಕೆಟ್‌, ವಾಲಿಬಾಲ್‌, ಕಬ್ಬಡಿ ಸೇರಿದಂತೆ ವಿವಿಧ ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು. ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಜಿಲ್ಲಾ ದೈಹಿಕ ಶಿಕ್ಷಣ ಅಧಿಕಾರಿ ಶಿವಪುತ್ರಪ್ಪ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ರುದ್ರಪ್ಪ, ದೈಹಿಕ ಶಿಕ್ಷಣ ಶಿಕ್ಷಕ ಮಾರುತಿ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !