ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಾಗೇಪಲ್ಲಿ | ಕೊಠಡಿ ಕೊರತೆ, ಮಕ್ಕಳ ಕಲಿಕೆಗೆ ಹಿನ್ನಡೆ

ಪಿ.ಎಸ್.ರಾಜೇಶ್
Published 13 ಏಪ್ರಿಲ್ 2024, 7:21 IST
Last Updated 13 ಏಪ್ರಿಲ್ 2024, 7:21 IST
ಅಕ್ಷರ ಗಾತ್ರ

ಬಾಗೇಪಲ್ಲಿ: ಶಿಥಿಲಾವಸ್ಥೆಯಲ್ಲಿರುವ ಶಾಲಾ ಕಟ್ಟಡ, ಶಿಕ್ಷಕ– ವಿದ್ಯಾರ್ಥಿಗಳ ಮೈಮೇಲೆ ಉದುರುವ ಸಿಮೆಂಟ್, ಭಯದಲ್ಲೇ ಪಾಠ ಮಾಡುವ ಮತ್ತು ಕೇಳುವ ಸ್ಥಿತಿ...

ಇದು ನೂರು ವರ್ಷದ ಇತಿಹಾಸ ಇರುವ ತಾಲ್ಲೂಕಿನ ಸರ್ಕಾರಿ ಉರ್ದು ಹಿರಿಯ ಪ್ರಾಥಮಿಕ ಶಾಲೆಯ ಸ್ಥಿತಿ. ಈ ಶಾಲೆಯಲ್ಲಿ ಶಿಥಿಲಾವಸ್ಥೆಗೆ ತಲುಪಿರುವ ಕೊಠಡಿಗಳ ಕಾರಣದಿಂದ ಮಕ್ಕಳಿಗೆ ಪಾಠ ಕೇಳಲು ಕೊಠಡಿಗಳಿಲ್ಲದೇ ಶಿಕ್ಷಣಕ್ಕೆ ತೊಂದರೆಯಾಗಿದೆ.

ಪಟ್ಟಣದ ಮುಖ್ಯರಸ್ತೆಯಲ್ಲಿರುವ ಈ ಶಾಲೆಯಲ್ಲಿ ಮುಸ್ಲಿಂ ಸಮುದಾಯದ 180ಕ್ಕೂ ಹೆಚ್ಚಿನ ವಿದ್ಯಾರ್ಥಿಗಳು ಓದುತ್ತಿದ್ದಾರೆ. ಇವರಲ್ಲಿ ಬೀದಿಬದಿಯ ವ್ಯಾಪಾರಿಗಳ ಮಕ್ಕಳೇ ಹೆಚ್ಚಿದ್ದಾರೆ. ಈ ಮಕ್ಕಳು ಮೊದಲ ಭಾಷೆ ಉರ್ದು, ಎರಡನೇ ಭಾಷೆಯಾಗಿ ಕನ್ನಡ ಕಲಿಯುತ್ತಿದ್ದಾರೆ.

100 ವರ್ಷ ಇತಿಹಾಸವಿರುವ ಈ ಶಾಲೆಯಲ್ಲಿ ಕಲಿತ ಅನೇಕರು ಶಿಕ್ಷಕರಾಗಿ, ಮುಖ್ಯಶಿಕ್ಷಕರಾಗಿ, ಪ್ರಾಂಶುಪಾಲರು ಸೇರಿದಂತೆ ಅನೇಕ ಹಿರಿಯ ಹುದ್ದೆಗಳನ್ನು ಅಲಂಕರಿಸಿದ್ದಾರೆ. ಈ ಶಾಲೆಯಲ್ಲಿ ಓದಿದವರು ಇದೇ ಶಾಲೆಗೆ ಶಿಕ್ಷಕರಾಗಿ, ಮುಖ್ಯಶಿಕ್ಷಕರಾಗಿ ಸೇವೆ ಸಲ್ಲಿಸಿದ್ದಾರೆ. ಈ ಶಾಲೆಗೆ ಅಂದಿನ ಮುಖ್ಯಮಂತ್ರಿ ದೇವರಾಜ ಅರಸು ಅವರೂ ಒಮ್ಮೆ ಭೇಟಿ ನೀಡಿದ್ದರು.

ಇಷ್ಟೆಲ್ಲಾ ಇತಿಹಾಸವಿರುವ ಈ ಶಾಲೆ ಮಾತ್ರ ಇಂದು ಶಿಥಿಲಾವಸ್ಥೆ ತಲುಪಿದೆ.ಶಾಲೆಯ ಕಟ್ಟಡದ ಸಿಮೆಂಟ್, ಕಲ್ಲು, ಜಲ್ಲಿಗಳು ಉದುರಿವೆ. ಕಟ್ಟಡದ ಮೇಲ್ಛಾವಣೆ ಕುಸಿದಿದೆ. ನೆಲದ ಮೇಲೆ ಸಿಮೆಂಟ್‌ನ ಪದರಗಳು ಬಿದ್ದಿರುವುದರಿಂದ, ಕಟ್ಟಡದ ಮೂರು ಕೊಠಡಿಗಳು ವಿದ್ಯಾರ್ಥಿಗಳ ಬಳಕೆಗೆ ಬಾರದಾಗಿದೆ. ಇದರಿಂದ ಶಾಲಾ ಕೊಠಡಿಗಳ ಕೊರತೆಯಾಗಿದ್ದು, ಎರಡು ಹಾಗೂ ಮೂರು ತರಗತಿಗಳನ್ನು ಸೇರಿಸಿ, ಒಂದೇ ಕೊಠಡಿಯಲ್ಲಿ ಇಬ್ಬರು ಶಿಕ್ಷಕರು ಪಾಠ ಮಾಡುತ್ತಿದ್ದಾರೆ. ಇದರಿಂದ ಮಕ್ಕಳ ಕಲಿಕೆಗೆ ತೀವ್ರ ತೊಂದರೆ ಆಗಿದೆ.

ಕಳೆದ ಐದು ವರ್ಷಗಳಿಂದ ವಿದ್ಯಾರ್ಥಿಗಳ ಕಲಿಕೆಗೆ ಶಾಲಾ ಕೊಠಡಿ ಕೊರತೆ ಇದೆ. ಶಾಲಾ ಕಟ್ಟಡವನ್ನು ಕೆಡವಿ, ನೂತನ ಕಟ್ಟಡ ನಿರ್ಮಿಸಿಕೊಡುವಂತೆ ಶಾಲಾ ಮುಖ್ಯಶಿಕ್ಷಕರು, ಸಾರ್ವಜನಿಕ ಶಿಕ್ಷಣ ಹಾಗೂ ಸಾಕ್ಷರತಾ ಇಲಾಖೆಯ ತಾಲ್ಲೂಕು ಕ್ಷೇತ್ರಶಿಕ್ಷಣಾಧಿಕಾರಿಗಳಿಗೆ ಪತ್ರ ಬರೆದಿದ್ದಾರೆ. ಆದರೆ ಇದುವರೆಗೂ ಶಾಲಾ ಕಟ್ಟಡ ದುರಸ್ತಿಯಾಗಿಲ್ಲ. ನೂತನ ಕಟ್ಟಡ ನಿರ್ಮಾಣ ಆಗಿಲ್ಲ ಎಂದೂ ದೂರುತ್ತಾರೆ ಮಕ್ಕಳ ಪೋಷಕರು.

ಮೇಲ್ಛಾವಣಿ ಕುಸಿದಿರುವುದು
ಮೇಲ್ಛಾವಣಿ ಕುಸಿದಿರುವುದು

ಉರ್ದು ಶಾಲೆಯಲ್ಲಿ ಬಡ ಮುಸ್ಲಿಂ ಸಮುದಾಯದ ಮಕ್ಕಳು ಓದುತ್ತಿದ್ದಾರೆ. ಬಡವರ ಮಕ್ಕಳು ಓದುವ ಈ ಶಾಲೆಗೆ ಸರ್ಕಾರ ಮೂಲಸೌಕರ್ಯ ಕಲ್ಪಿಸುವಲ್ಲಿ ವಿಫಲವಾಗಿದೆ

-ಅಬ್ದುಲ್ ರಹೀಮ್ ಮುಸ್ಲಿಂ ಸಮುದಾಯದ ಮುಖಂಡ

ಸರ್ಕಾರಿ ಶಾಲೆಗಳಲ್ಲಿ ಗುಣಮಟ್ಟದ ಶಿಕ್ಷಣದ ಕೊರತೆ ಹಾಗೂ ಮೂಲಸೌಲಭ್ಯಗಳನ್ನು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಕಲ್ಪಿಸಿಲ್ಲ. ಇದರಿಂದ ಗಡಿ ಭಾಗದ ಕನ್ನಡ ಶಾಲೆಗಳು ಹಾಗೂ ಸರ್ಕಾರಿ ಶಾಲೆಗಳಲ್ಲಿ ದಾಖಲಾತಿ ಪ್ರಮಾಣ ಕಡಿಮೆ ಆಗಿದೆ

-ನಿಸಾರ್ ಅಹಮದ್ ಸ್ಥಳೀಯ ನಾಗರಿಕ

ಶಾಲೆಯ ಹಳೆಯ ಕಟ್ಟಡ ಕೆಡವಿ ನೂತನ ಶಾಲಾ ಕೊಠಡಿ ಶೌಚಾಲಯಗಳ ನಿರ್ಮಾಣಕ್ಕೆ ಸಾರ್ವಜನಿಕ ಶಿಕ್ಷಣ ಹಾಗೂ ಸಾಕ್ಷರತಾ ಇಲಾಖೆಗೆ ಪತ್ರ ಬರೆಯಲಾಗಿದೆ. ಅನುದಾನ ಬಂದ ಕೂಡಲೇ ಕಟ್ಟಡ ನಿರ್ಮಿಸಿ ವಿದ್ಯಾರ್ಥಿಗಳ ಬಳಕೆಗೆ ಅವಕಾಶ ಕಲ್ಪಿಸಲಾಗುವುದು 

-ತನುಜಾ ಕ್ಷೇತ್ರ ಶಿಕ್ಷಣಾಧಿಕಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT