ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಚಿಕ್ಕಮಗಳೂರು: ಒಣಗುತ್ತಿರುವ ಅಡಿಕೆ ತೋಟ- ಟ್ಯಾಂಕರ್ ನೀರಿಗೆ ಮೊರೆ

ಬರಗಾಲಕ್ಕೆ ತತ್ತರಿಸಿದ ಅಡಿಕೆ ಬೆಳೆಗಾರರು: ತೋಟ ಉಳಿಸುವುದು ದೊಡ್ಡ ಸವಾಲು
Published 21 ಫೆಬ್ರುವರಿ 2024, 20:51 IST
Last Updated 21 ಫೆಬ್ರುವರಿ 2024, 20:51 IST
ಅಕ್ಷರ ಗಾತ್ರ

ಚಿಕ್ಕಮಗಳೂರು: ಬರಗಾಲದ ಬಿಸಿಲಿಗೆ ಕಾಫಿನಾಡು ತತ್ತರಿಸಿದ್ದು, ಅಡಿಕೆ ಬೆಳೆ ಉಳಿಸಿಕೊಳ್ಳುವುದೇ ರೈತರಿಗೆ ದೊಡ್ಡ ಸವಾಲಾಗಿದೆ. ಅಂತರ್ಜಲ ಪಾತಾಳ ಸೇರಿದ್ದು, 600–700 ಅಡಿ ಕೊರೆದರೂ ಕೊಳವೆ ಬಾವಿಗಳಲ್ಲಿ ನೀರು ಇಲ್ಲವಾಗಿದೆ. ದೂರದ ಊರುಗಳಿಂದ ನೀರು ಖರೀದಿಸಿ ಟ್ಯಾಂಕರ್‌ ಮೂಲಕ ತಂದು ಅಡಿಕೆ ತೋಟಕ್ಕೆ ನೀರುಣಿಸುತ್ತಿದ್ದಾರೆ.

ಜಿಲ್ಲೆಯ ಬಯಲು ಸೀಮೆಯ ತರೀಕೆರೆ, ಅಜ್ಜಂಪುರ ತಾಲ್ಲೂಕಿನಲ್ಲಿ ಅಡಿಕೆ ಬೆಳೆ ಈಗ ರೈತರ ಪ್ರಮುಖ ವಾಣಿಜ್ಯ ಬೆಳೆಯಾಗಿದೆ. ಹೊಲ–ಗದ್ದೆಗಳೆಲ್ಲವೂ ಅಡಿಕೆ ತೋಟವಾಗಿ ಮಾರ್ಪಟ್ಟಿವೆ. ವಾಡಿಕೆಯಷ್ಟು ಮಳೆಯಾಗುತ್ತಿದ್ದಾಗ ಯಾವುದೇ ತೊಂದರೆ ಇಲ್ಲದೆ ತೋಟಗಳಿಗೆ ಬೇಸಿಗೆಯಲ್ಲೂ ನೀರು ಪೂರೈಕೆಯಾಗುತ್ತಿತ್ತು. ಆದರೆ, ಈ ವರ್ಷ ಮಳೆ ಕೊರತೆಯಾಗಿದ್ದು, ಅಂತರ್ಜಲ ಕುಸಿದಿದೆ.

ಅಜ್ಜಂಪುರ ತಾಲ್ಲೂಕಿನ ಶಿವನಿ, ಚೀರನಹಳ್ಳಿ, ಕಾರೇಹಳ್ಳಿ ಸುತ್ತಮುತ್ತಲ ಪ್ರದೇಶಕ್ಕೆ ಹೋದರೆ ಬರಗಾಲದಲ್ಲಿ ಜನ ಅನುಭವಿಸುತ್ತಿರುವ ಸಂಕಷ್ಟಗಳ ಸರಮಾಲೆ ತೆರೆದುಕೊಳ್ಳುತ್ತದೆ. ಬಿಸಿಲ ಬೇಗೆಗೆ ಅಡಿಕೆ ತೋಟಗಳು ಒಣಗುತ್ತಿದ್ದು, ನೀರಿಗಾಗಿ ರೈತರು ಊರೂರು ಸುತ್ತುತ್ತಿದ್ದಾರೆ.

ಟ್ರ್ಯಾಕ್ಟರ್‌ನಲ್ಲಿ ಟ್ಯಾಂಕರ್ ಮೂಲಕ ನೀರು ತರಿಸಿ ತೋಟಗಳಿಗೆ ಹರಿಸುತ್ತಿದ್ದಾರೆ.  ಡೀಸೆಲ್ ಮತ್ತು ಪೆಟ್ರೋಲ್ ಸಾಗಿಸುವ ಹಳೆಯ ಟ್ಯಾಂಕರ್‌ ಲಾರಿಗಳೂ ಈಗ ರೈತರ ತೋಟಕ್ಕೆ ನೀರು ಪೂರೈಸುತ್ತಿವೆ. 20 ಸಾವಿರ ಲೀಟರ್ ನೀರಿಗೆ  ₹8 ಸಾವಿರದಿಂದ ₹10 ಸಾವಿರ ತನಕ ಪಾವತಿಸುವ ಅನಿವಾರ್ಯತೆ ರೈತರಿಗೆ ಇದೆ.

ಒಂದು ಎಕರೆ ತೋಟ ಉಳಿಸಿಕೊಳ್ಳಲು ಟ್ಯಾಂಕರ್ ನೀರು ಖರೀದಿಸಲು ಕನಿಷ್ಠ ₹2.50 ಲಕ್ಷ ವೆಚ್ಚಾಗುತ್ತಿದೆ. ಎಷ್ಟೇ ಖರ್ಚಾದರೂ ತೋಟ ಉಳಿಸಿಕೊಳ್ಳಲೇಬೇಕಾದ ಅನಿವಾರ್ಯತೆ ಇದೆ. ಇಲ್ಲದಿದ್ದರೆ ಇಷ್ಟು ವರ್ಷಗಳಿಂದ ಕಾಪಾಡಿಕೊಂಡು ಬಂದಿರುವ ತೋಟ ನಾಶವಾಗುವ ಆತಂಕ ಕಾಡುತ್ತಿದೆ. ಸಾಲ ಮಾಡಿಯಾದರೂ ನೀರು ಖರೀದಿಸಿ ತೋಟ ಉಳಿಸಿಕೊಳ್ಳಲು ರೈತರು ಪರದಾಡುತ್ತಿದ್ದಾರೆ.

ಅಡಿಕೆ ತೋಟಕ್ಕೆ ಪೂರೈಸಲು ಟ್ಯಾಂಕರ್‌ನಲ್ಲಿ ನೀರು ತುಂಬಿಸುತ್ತಿರುವ ರೈತರು
ಅಡಿಕೆ ತೋಟಕ್ಕೆ ಪೂರೈಸಲು ಟ್ಯಾಂಕರ್‌ನಲ್ಲಿ ನೀರು ತುಂಬಿಸುತ್ತಿರುವ ರೈತರು

ಮುಂದೇನು ಎಂಬುದೇ ಚಿಂತೆ

ಸುತ್ತಮುತ್ತಲ ಕೆರೆಗಳೆಲ್ಲವೂ ಖಾಲಿಯಾಗಿದ್ದು ಬುಕ್ಕಾಂಬುದಿ ಕೆರೆಯಲ್ಲಿ ಅಲ್ಪ–ಸ್ವಲ್ಪ ನೀರಿದೆ. ಅದು ಖಾಲಿಯಾದರೆ ಮುಂದೇನು ಮಾಡಬೇಕು ಎಂಬುದೇ ಗೊತ್ತಿಲ್ಲ ಎಂದು ಚೀರನಹಳ್ಳಿ ರೈತ ಕಿರಣ್ ಹೇಳುತ್ತಾರೆ. ಕೊಳವೆ ಬಾವಿ ಕೊರೆಸಿ ಕೈಸುಟ್ಟುಕೊಳ್ಳುವ ಬದಲು ನೀರು ಖರೀದಿಸುವುದು ಸೂಕ್ತ ಎಂಬ ನಿರ್ಧಾರಕ್ಕೆ ರೈತರು ಬಂದಿದ್ದಾರೆ. ಎಷ್ಟೆ ದೂರವಾದರೂ ನೀರು ತಂದು ತೋಟ ಉಳಿಸಿಕೊಳ್ಳುವುದು ಅನಿವಾರ್ಯವಾಗಿದೆ. ವರ್ಷದ ಫಸಲಿನಿಂದ ಬರುವ ಹಣ ಈ ವರ್ಷ ತೋಟ ಉಳಿಸಿಕೊಳ್ಳಲು ಖರ್ಚಾಗುತ್ತದೆ. ಏಪ್ರಿಲ್ ಕೊನೆ ವಾರದಲ್ಲಿ ಮಳೆ ಬರುವ ನಿರೀಕ್ಷೆ ಇದೆ. ಅಲ್ಲಿಯ ತನಕ ತೋಟ ಉಳಿಸಿಕೊಳ್ಳುವುದು ದೊಡ್ಡ ಸವಾಲಾಗಿದೆ ಎನ್ನುತ್ತಾರೆ ಅವರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT