ಗುರುವಾರ, 22 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿದ್ದರಾಮಯ್ಯ ವಿರುದ್ಧ ಅನಂತಕುಮಾರ ಹೆಗಡೆ ಏಕವಚನ ಪ್ರಯೋಗ ಒಪ್ಪಲ್ಲ: ಸಿ.ಟಿ. ರವಿ

‌ಚಿಕ್ಕಮಗಳೂರಲ್ಲಿ ಬಿಜೆಪಿ ಮುಖಂಡ ಸಿ.ಟಿ. ರವಿ ಹೇಳಿಕೆ
Published 16 ಜನವರಿ 2024, 10:48 IST
Last Updated 16 ಜನವರಿ 2024, 10:48 IST
ಅಕ್ಷರ ಗಾತ್ರ

ಚಿಕ್ಕಮಗಳೂರು: ‘ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಸಂಸದ ಅನಂತಕುಮಾರ ಹೆಗಡೆ ಏಕವಚನದಲ್ಲಿ ಟೀಕೆ ಮಾಡಿರುವುದನ್ನು ನಾವು ಒಪ್ಪಿಕೊಳ್ಳುವುದಿಲ್ಲ’ ಎಂದು ಬಿಜೆಪಿ ಮುಖಂಡ ಸಿ.ಟಿ. ರವಿ ಪ್ರತಿಕ್ರಿಯಿಸಿದರು.

ಹಿರೇಮಗಳೂರು ಕೋದಂಡ ರಾಮಚಂದ್ರಸ್ವಾಮಿ ದೇಗುಲದಲ್ಲಿ ಸ್ವಚ್ಛತೆ ಕೈಗೊಂಡ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಹಿರಿಯರಿಗೆ ಮತ್ತು ಅವರ ಸ್ಥಾನಕ್ಕೆ ಗೌರವ ಕೊಡಬೇಕು. ರಾಮ ಎಂದರೆ ಎಲ್ಲರನ್ನೂ ಜೋಡಿಸಿಕೊಂಡು ಹೋಗುವವನು. ಅನಂತಕುಮಾರ್ ಹೆಗಡೆ ಅವರ ಕಾರ್ಯಶೈಲಿ ಭಿನ್ನ ಇದೆ. ಹಾಗೆಂದ ಮಾತ್ರಕ್ಕೆ ಮತ್ತೊಬ್ಬರಿಗೆ ನೋವುಂಟು ಮಾಡುವ ಹೇಳಿಕೆಯನ್ನು ನಾವು ಸಮರ್ಥಿಸುವುದಿಲ್ಲ’ ಎಂದು ಸ್ಪಷ್ಟಪಡಿಸಿದರು.

‘ಮುಸ್ಲಿಂ ದಾಳಿಕೋರರು 42 ಸಾವಿರಕ್ಕೂ ಹೆಚ್ಚು ದೇಗುಲಗಳನ್ನು ನಾಶ ಮಾಡಿದ್ದಾರೆ ಎಂಬುದು ಅವರ ಭಾವನೆ ಇರಬಹುದು. ಮೊಗಲರು, ನಿಜಾಮರು, ಘಜ್ನಿ ಮೊಹಮದ್, ಘೋರಿ ಮಹಮದ್, ಔರಂಗಜೇಬ್, ಮಲ್ಲಿಕಾಫರ್, ಟಿಪ್ಪು ಸುಲ್ತಾನ್ ಆಳ್ವಿಕೆಯಲ್ಲಿ ಹಿಂದೂ ದೇಗುಲಗಳನ್ನು ನಾಶ ಮಾಡಿ ಮಸೀದಿ ಕಟ್ಟಿರುವುದು ನಿಜ. ಆದರೆ, ಈ ದೇಶದ ಮುಸ್ಲಿಮರು ದಾಳಿಕೋರರ ಜತೆ ತಮ್ಮ ಅಸ್ಮಿತೆಯನ್ನು ಗುರುತಿಸಿಕೊಳ್ಳುವುದಿಲ್ಲ. ಭಾರತೀಯತೆ ಮತ್ತು ಸನಾತನ ಪರಂಪರೆ ಬಗ್ಗೆ ವಿಶ್ವಾಸ ಇಟ್ಟಿದ್ದಾರೆ’ ಎಂದು ವಿಶ್ಲೇಷಿಸಿದರು.

‘ಅವರಿಗೂ ಮನಪರಿವರ್ತನೆ ದಿನಗಳು ಬರಬಹುದು. ದೇಗುಲ ನಾಶ ಮಾಡಿ ಕಟ್ಟಿರುವ ಮಸೀದಿಗಳಲ್ಲಿ ಪ್ರಾರ್ಥನೆ ಮಾಡಿದರೆ ಹರಾಮ್ ಆಗುತ್ತದೆ ಎಂದು ಅವರಿಗೂ ಎನ್ನಿಸಬಹುದು. ಆಗ ಅವರು ಉದಾರತೆ ಪ್ರದರ್ಶಿಸಬಹುದು. ದಾಳಿಕೋರರ ಜತೆ ಗುರುತಿಸಿಕೊಳ್ಳುವ ಇಲ್ಲಿರುವ ಮಸ್ಲಿಮರ ಮನಸ್ಥಿತಿಯನ್ನು ನಾವು ಸಹಿಸುವುದಿಲ್ಲ. ಅದರ ವಿರುದ್ಧ ನಮ್ಮ ಭಾವನೆಗಳು ಇದ್ದೇ ಇದೆ’ ಎಂದು ಹೇಳಿದರು.

‘ಎಲ್ಲಾ ಮುಸ್ಲೀಮರನ್ನು ಒಂದೇ ತಕ್ಕಡಿಯಲ್ಲಿ ಇಟ್ಟು ತೂಗುವುದಿಲ್ಲ. ಭಾರತದಲ್ಲಿರುವ ಮುಸ್ಲಿಮರು ಘಜ್ನಿ, ಘೋರಿ, ಬಾಬರ್ ಮಾನಸಿಕತೆಯಿಂದ ಹೊರಬರಬೇಕು. ಶಿಶುನಾಳ ಶರೀಫರು ಮತ್ತು ಎಪಿಜೆ ಅಬ್ದುಲ್ ಕಲಾಮ್ ಅಂತವರು  ಮುಸ್ಲಿಮರಿಗೆ ಆದರ್ಶ ಆಗಬೇಕು. ಅನಂತಕುಮಾರ್ ಹೆಗಡೆ ಅವರನ್ನು ಟೀಕೆ ಮಾಡುವ ಭರದಲ್ಲಿ ಅವರನ್ನು ನಾಯಿಗೆ ಹೋಲಿಸಿರುವುದು ತಪ್ಪು. ಪ್ರಧಾನ ಮಂತ್ರಿ ಬಗ್ಗೆ ಸಿದ್ದರಾಮಯ್ಯ ಏಕ ವಚನ ಪ್ರಯೋಗ ಮಾಡುವುದೂ ತಪ್ಪು. ಹಿರಿಯರು ದೊಡ್ಡತನದಿಂದ ನಡೆದುಕೊಳ್ಳಬೇಕು’ ಎಂದರು.

‘ರಾಮಮಂದಿರ ಮತ್ತು ರಾಷ್ಟ್ರಮಂದಿರ ಎರಡೂ ಬೇರೆ ಬೇರೆ ಅಲ್ಲ. ರಾಮಾಯಣ ಇಲ್ಲದಿದ್ದರೆ ಭಾರತದ ಭವ್ಯ ಸಾಂಸ್ಕೃತಿಕ ಇತಿಹಾಸ ಪರಿಪೂರ್ಣ ಆಗುವುದಿಲ್ಲ. ರಾಮಮಂದಿರ ಉದ್ಘಾಟನೆ ಸಂದರ್ಭದಲ್ಲಿ ದೇಗುಲಗಳ ಸ್ವಚ್ಛತೆಗೆ ಪ್ರಧಾನಿ ಕರೆ ಕೊಟ್ಟಿದ್ದಾರೆ. ಸ್ವಚ್ಛತೆ ಇದ್ದ ಕಡೆ ದೇವರ ಇರುತ್ತಾನೆ ಎಂಬುದನ್ನು ನಾವು ಅರ್ಥ ಮಾಡಿಕೊಳ್ಳಬೇಕು.  ಹೃದಯ ಸ್ವಚ್ಛವಾಗಿದರೆ ಅಲ್ಲಿ ದೇವರು ಇರುತ್ತಾನೆ ಎಂಬು ನಂಬಿಕೆಯನ್ನು ಹಿರಿಯರು ಪಾಲಿಸಿಕೊಂಡು ಬಂದಿದ್ದಾರೆ. ಅದಕ್ಕೆ ತಕ್ಕಂತೆ ನಡೆದುಕೊಳ್ಳೋಣ’ ಎಂದರು.

‘ದೇಗುಲಗಳು ಜಾತಿ ಮತ್ತು ಅಸ್ಪೃಶ್ಯತೆಯಿಂದ ಮುಕ್ತವಾಗಬೇಕು. ದೇವರು ಎಲ್ಲರಿಗೂ ಸಮಾನ ಅವಕಾಶ ಕೊಟ್ಟಿದ್ದಾನೆ. ಎಲ್ಲರಲ್ಲೂ ದೇವರಿದ್ದಾನೆ ಎಂದು ಹೇಳಿದ ವೇದಗಳು ಮತ್ತು ಸನಾತನ ಧರ್ಮವನ್ನು ಪಾಲಿಸಬೇಕು. ಜಾತೀಯತೆ ಮತ್ತು ಅಸ್ಪೃಶ್ಯತೆ ದೇಶವನ್ನು ದುರ್ಬಲಗೊಳಿಸಿದೆ. ಅದರಿಂದ ಎಲ್ಲರೂ ಹೊರಬಂದರೆ ದೇಶ ವಿಶ್ವಗುರು ಆಗಲಿದೆ’ ಎಂದು ಹೇಳಿದರು.

‘ಉಡುಪಿ–ಚಿಕ್ಕಮಗಳೂರು ಕ್ಷೇತ್ರದ ಅಭ್ಯರ್ಥಿ ಆಯ್ಕೆ ವಿಷಯದಲ್ಲಿ ಪಕ್ಷ ಯಾರನ್ನೇ ಅಭ್ಯರ್ಥಿ ಮಾಡಿದರೂ ಅವರ ಪರವಾಗಿ ಕೆಲಸ ಮಾಡುತ್ತೇವೆ. ಅಭಿವೃದ್ಧಿ ಮತ್ತು ದೇಶದ ಸುರಕ್ಷತೆ ಎರಡು ದೃಷ್ಟಿಯಿಂದಲೂ ಯಾರು ಮುಖ್ಯ ಎಂಬುದನ್ನು ಜನರ ಮುಂದಿಟ್ಟು ಮತ ಕೇಳುತ್ತೇವೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT