ಗುರುವಾರ , ನವೆಂಬರ್ 14, 2019
19 °C

ಬ್ಯಾಂಕುಗಳ ವಿಲೀನೀಕರಣ ವಿರೋಧಿಸಿ ನೌಕರರ ಪ್ರತಿಭಟನೆ

Published:
Updated:
Prajavani

ಚಿಕ್ಕಮಗಳೂರು: ಬ್ಯಾಂಕುಗಳ ವಿಲೀನೀಕರಣ ವಿರೋಧಿಸಿ ಬ್ಯಾಂಕ್ ಸಂಘಟನೆಗಳ ಸಂಯುಕ್ತ ವೇದಿಕೆ ನೇತೃತ್ವದಲ್ಲಿ ಬ್ಯಾಂಕ್ ನೌಕರರು ಮಂಗಳವಾರ ಪ್ರತಿಭಟನೆ ನಡೆಸಿದರು.

ನಗರದ ಕೆನರಾಬ್ಯಾಂಕ್ ಮುಖ್ಯ ಶಾಖೆ ಎದುರು ಜಮಾಯಿಸಿದ ಪ್ರತಿಭಟನಾಕಾರರು, ಬೇಡಿಕೆ ಈಡೇರಿಸುವಂತೆ ಘೋಷಣೆ ಕೂಗಿದರು.

ಕೇಂದ್ರಸರ್ಕಾರವು ಕೆನರಾ ಬ್ಯಾಂಕ್, ಕಾರ್ಪೋರೇಶನ್ ಬ್ಯಾಂಕ್, ಸಿಂಡಿಕೇಟ್, ಬ್ಯಾಂಕ್ ಆಫ್ ಇಂಡಿಯಾ, ಯೂನಿಯನ್ ಬ್ಯಾಂಕ್, ಅಲಹಾಬಾದ್ ಬ್ಯಾಂಕ್ ಸಹಿತ ಹತ್ತು ಬ್ಯಾಂಕುಗಳನ್ನು ವಿಲೀನಗೊಳಿಸುವ ನಿರ್ಧಾರವನ್ನು ಕೈ ಬಿಡಬೇಕು. ಸುಸ್ತಿ ಸಾಲ(ಎನ್‌ಪಿಎ)ಗಳ ಮರುಪವಾತಿಗೆ ಸಹಕರಿಸಬೇಕು. ಗ್ರಾಹಕರಿಗೆ ವಿಧಿಸುತ್ತಿರುವ ದಂಡ ಮತ್ತು ಸೇವಾಶುಲ್ಕ ಕಡಿಮೆ ಮಾಡಬೇಕು. ಠೇವಣಿಗಳ ಮೇಲಿನ ಬಡ್ಡಿ ದರವನ್ನು ಹೆಚ್ಚಿಸಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.

ಸಂಘಟನೆಯ ಜಿಲ್ಲಾಪ್ರಧಾನ ಕಾರ್ಯದರ್ಶಿ ಕೆ.ಆರ್.ಬಸವರಾಜ್ ಮಾತನಾಡಿ, ಕೇಂದ್ರ ಸರ್ಕಾರ ಈಗಾಗಲೇ ದೇನಾ ಬ್ಯಾಂಕ್, ವಿಜಯ ಬ್ಯಾಂಕುಗಳನ್ನು ವಿಲೀನಗೊಳಿಸಿದೆ. ಅದರಿಂದ ಬ್ಯಾಂಕುಗಳ ವಹಿವಾಟು ಕುಂಠಿತಗೊಂಡಿದೆ. ಸುಸ್ತಿ ಸಾಲಗಳು ಹೆಚ್ಚಾಗುತ್ತಿವೆ.

ಬ್ಯಾಂಕುಗಳ ವಿಲೀನೀಕರಣದಿಂದ ದೇಶದ ಆರ್ಥಿಕತೆಗೆ ಮತ್ತು ಗ್ರಾಹಕರಿಗೆ ಯಾವುದೇ ಅನುಕೂಲವಾಗುವುದಿಲ್ಲ. ಬ್ಯಾಂಕ್ ನೌಕರರ ಹಿತಾಸಕ್ತಿ, ಕೆಲಸದ ಭದ್ರತೆಗೆ ತೊಂದರೆಯಾಗುತ್ತದೆ ಎಂದರು.

ಕೇಂದ್ರ ಸರ್ಕಾರ ಬ್ಯಾಂಕುಗಳ ವಿಲೀನೀಕರಣ ಕೈ ಬಿಡಬೇಕು. ಬ್ಯಾಂಕಿಂಗ್ ಕ್ಷೇತ್ರದ ಆರೋಗ್ಯ ಕಾಪಾಡಲು ಮುಂದಾಗಬೇಕು. ಸರ್ಕಾರದ ವ್ಯಾಪ್ತಿಯಲ್ಲಿನ ಬ್ಯಾಂಕುಗಳನ್ನು ಖಾಸಗೀರಣಗೊಳಿಸಬಾರದು ಎಂದು ಆಗ್ರಹಿಸಿದರು.

ಪ್ರತಿಕ್ರಿಯಿಸಿ (+)