ಮಂಗಳವಾರ, 21 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿಕ್ಕಮಗಳೂರು: ಮಳೆಗಾಲದಲ್ಲಿ ಕಾಲು ಸಂಕದ ನಡಿಗೆಯೇ ಆತಂಕ

ಈವರೆಗೆ 213 ಕಾಲುಸಂಕಗಳ ನಿರ್ಮಾಣ; ಕೆಲವೆಡೆ ಜಾಗದ ಸಮಸ್ಯೆಯಿಂದ ಕಾಮಗಾರಿ ಸ್ಥಗಿತ
Published 13 ಮೇ 2024, 5:16 IST
Last Updated 13 ಮೇ 2024, 5:16 IST
ಅಕ್ಷರ ಗಾತ್ರ

ಚಿಕ್ಕಮಗಳೂರು: ಮಳೆ ಕೊರತೆ ಎದುರಿಸಿದ ಮಲೆನಾಡಿನ ಜನ ಈ ಬಾರಿಯಾದರೂ ಸಮೃದ್ಧ ಮಳೆಯಾಗುವ ನಿರೀಕ್ಷೆಯಲ್ಲಿದ್ದಾರೆ. ಇನ್ನೊಂದೆಡೆ ಹಲವು ಜನವಸತಿಗಳು ಸಂಪರ್ಕ ಕಡಿತಗೊಳ್ಳುವ ಆತಂಕದಲ್ಲಿವೆ.  

ಮಳೆ ಕೊರತೆಯಿಂದ ಈ ಬಾರಿ ಹಳ್ಳ–ಕೊಳ್ಳಗಳು ಸಂಪೂರ್ಣ ಬತ್ತಿ ಹೋಗಿವೆ. ಮುಂಗಾರು ಪೂರ್ವ ಮಳೆ ಅಲ್ಲಲ್ಲಿ ಸುರಿಯುತ್ತಿದ್ದು, ಮುಂಗಾರು ಕೂಡ ಉತ್ತಮವಾಗಲಿದೆ ಎಂಬ ನಿರೀಕ್ಷೆ ಮಲೆನಾಡಿನ ಜನರಲ್ಲಿದೆ.

ಕಳಸ, ಶೃಂಗೇರಿ, ಎನ್.ಆರ್.ಪುರ, ಕೊಪ್ಪ ತಾಲ್ಲೂಕಿನ ಹಲವು ಹಳ್ಳಿಗಳಲ್ಲಿ ಮರದ ಬೊಂಬಿನ ಮೇಲೆ ಸಾಗಿ ಮನೆ ತಲುಪಬೇಕಾದ ಜನ ವಸತಿಗಳು ಇಂದಿಗೂ ಸಾಕಷ್ಟಿವೆ. ಮರದ ದಿಮ್ಮಿ, ಕಟ್ಟಿಗೆ, ಹಲಗೆ, ಬಿದಿರು ಬಳಸಿ ಜನರೇ ಕಾಲುಸಂಕಗಳನ್ನು ನಿರ್ಮಿಸಿಕೊಂಡಿದ್ದಾರೆ. ಮಳೆಗಾಲದಲ್ಲಿ ಹಳ್ಳ, ತೊರೆ, ಹೊಳೆಗಳು ಉಕ್ಕಿ ಹರಿಯುತ್ತವೆ. ಈ ಮರದ ಸಂಕಗಳು ನೀರಿನಲ್ಲಿ ಕೊಚ್ಚಿ ಹೋಗುವ ಸಾಧ್ಯತೆಗಳು ಹೆಚ್ಚು.

ಜೆಡಿಎಸ್–ಕಾಂಗ್ರೆಸ್ ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ತೀರ್ಥಹಳ್ಳಿ ತಾಲ್ಲೂಕಿನ ಶಾಲಾ ಬಾಲಕಿ ಮತ್ತು ವ್ಯಕ್ತಿಯೊಬ್ಬರು ಕಾಲಸಂಕ ದಾಟುವಾಹ ಹಳ್ಳಕ್ಕೆ ಬಿದ್ದಿದ್ದರು. ಇದರಿಂದ ಎಚ್ಚೆತ್ತುಕೊಂಡಿದ್ದ ಅಂದಿನ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಶಾಲಾ ಸಂಪರ್ಕ ಸೇತು ಎಂಬ ಯೋಜನೆ ರೂಪಿಸಿ ಹಣವನ್ನೂ ಬಿಡುಗಡ ಮಾಡಿದ್ದರು.

2019–20ನೇ ಸಾಲಿನ ಬಜೆಟ್‌ನಲ್ಲಿ ರಾಜ್ಯದಲ್ಲಿ 1,317 ಕಿರು ಸೇತುವೆಗಳನ್ನು ನಿರ್ಮಿಸುವುದಾಗಿ ಘೋಷಿಸಲಾಗಿತ್ತು. ಜಿಲ್ಲೆಯಲ್ಲಿ ಈವರೆಗೆ 213 ಕಾಲುಸಂಕಗಳ ನಿರ್ಮಾಣವಾಗಿದೆ. ಚಿಕ್ಕಮಗಳೂರು ತಾಲೂಕಿನಲ್ಲಿ 28, ಮೂಡಿಗೆರೆ-48, ಕೊಪ್ಪ-55, ಕಡೂರು -2, ನರಸಿಂಹರಾಜಪುರ-37, ಶೃಂಗೇರಿ ತಾಲೂಕಿನಲ್ಲಿ 43 ಕಾಲು ಸಂಕಗಳ ನಿಮಾರ್ಣ ಮಾಡಲಾಗಿದೆ.

ಇನ್ನೂ ಕೆಲವೆಡೆ ಜಾಗದ ಸಮಸ್ಯೆಗಳಿದ ಕಾಮಗಾರಿ ಸ್ಥಗಿತಗೊಂಡಿದೆ. ಕೆಲವೆಡೆ ಇನ್ನೂ ಕಾಮಗಾರಿಯೇ ಆರಂಭವಾಗಿಲ್ಲ. ಆದ್ದರಿಂದ ಕಾಲುಸಂಕಗಳನ್ನು ದಾಟಿ ಜೀವನ ನಡೆಸಬೇಕಾದ ಸ್ಥಿತಿ ಮಲೆನಾಡಿನಲ್ಲಿ ಇನ್ನೂ ಇದೆ.

ನರಸಿಂಹರಾಜಪುರ ತಾಲ್ಲೂಕು ಕಾನೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಲ್ಲೂರು ಗ್ರಾಮಸ್ಥರು ಹಳ್ಳ ದಾಟಲು ಹಾಕಿರುವ ಮರದ ದಿಮ್ಮಿ
ನರಸಿಂಹರಾಜಪುರ ತಾಲ್ಲೂಕು ಕಾನೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಲ್ಲೂರು ಗ್ರಾಮಸ್ಥರು ಹಳ್ಳ ದಾಟಲು ಹಾಕಿರುವ ಮರದ ದಿಮ್ಮಿ

ಅಪಾಯದ ಅಂಚಿನಲ್ಲಿರುವ ಕಾಲುಸಂಕ

ಶೃಂಗೇರಿ ತಾಲ್ಲೂಕಿನ ಹಲವು ಗ್ರಾಮಸ್ಥರಿಗೆ ಪಟ್ಟಣಕ್ಕೆ ಬರಲು ಸಂಪರ್ಕವಿರುವುದು ಕಾಲುಸಂಕ ಮಾತ್ರ. ಕಾಲುಸಂಕದಲ್ಲಿ ಜನರು ದಾಟಲು ಹರಸಹಾಸ ಪಡುತ್ತಿದ್ದಾರೆ. ಕೂಗೋಡು ಮೀನಗರಡಿ ವಾಮನಸರಳು ವಂದಗದ್ದೆ ಮಲಂದೂರು ಅವುಂಟು ಶೀರ್ಲು ದೋಣುರೂ ತಾರೋಳ್ಳಿಕೊಡಿಗೆ ಬೆಳಗೋಡು ಕೊಡಿಗೆ ಅಸನುಬಾಳು ಕೋಟೆ ಹಾರುಗೋಪ್ಪ ಕಲಿಗೆ ತಲವಂತಿ ಕೊಡಿಗೆ ದೇವಾಲೆಕೊಪ್ಪದ ಗ್ರಾಮಗಳಲ್ಲಿ ವಾಸಿಸುವ ಜನ ಇಂದಿಗೂ ಕಾಲುಸಂಕಗಳಲ್ಲೇ ಓಡಾಡುತ್ತೀದ್ದಾರೆ. ಈ ಊರಿನಲ್ಲಿರುವ ಎಲ್ಲಾ ಕಾಲುಸಂಕಗಳು ಅಪಾಯಕಾರಿಯಾಗಿದೆ. ಪಟ್ಟಣದಿಂದ ಸುಮಾರು 30 ಕಿ.ಮೀ ದೂರದಲ್ಲಿರುವ ನಕ್ಸಲ್ ಪೀಡಿತ ಪ್ರದೇಶಳಾದ ಮೀನಗರಡಿ ವಂದಗದ್ದೆ ಹಾರುಗೋಪ್ಪಯ ಕಾಲು ಸಂಕಗಳು ಇಂದಿಗೂ ಅಪಾಯಕಾರಿ. ಮಳೆಗಾಲದಲ್ಲಿ ಸಂಪರ್ಕ ಕಡಿತಗೊಳ್ಳುತ್ತವೆ. ಇಲ್ಲಿರುವ ಬಹುತೇಕರು ಅಲ್ಪ ಆಸ್ತಿ ಜತೆಗೆ ಕೂಲಿ ಮಾಡಿಕೊಂಡೇ ಜೀವನ ಸಾಗಿಸುತ್ತಿದ್ದಾರೆ. ಮಕ್ಕಳು ಶಾಲೆಗೆ ಬರಲು ವೈದ್ಯಕೀಯ ಸೌಲಭ್ಯ ಹಾಗೂ ದಿನಬಳಕೆ ವಸ್ತು ಪಡೆಯಲು ಪಟ್ಟಣಕ್ಕೆ ಬರಲು ಕಾಲು ಸಂಕವನ್ನು ದಾಟಬೇಕು. ಕೆಲವೆಡೆ ಗ್ರಾಮಸ್ಥರೇ ಕಾಲು ಸಂಕ ನಿರ್ಮಿಸಿಕೊಂಡಿದ್ದಾರೆ. ಸರ್ಕಾರಿಂದ ಕಿರು ಸೇತುವೆ ನಿರ್ಮಿಸುವ ಭರವಸೆ ಮರೀಚಿಕೆಯಾಗಿಯೇ ಉಳಿದಿದೆ. ಹಳ್ಳಗಳ ಅಸುಪಾಸಿನಲ್ಲಿ ಮರಗಳಿಗೆ ಪ್ಲಾಸ್ಟಿಕ್ ಹಗ್ಗ ಕಟ್ಟಿ ಕಾಲು ಸಂಕ ನಿರ್ಮಿಸಿಕೊಳ್ಳುತ್ತಾರೆ. ತುಂಬಿದ ಹಳ್ಳವನ್ನು ಮಕ್ಕಳು ದಾಟಲು ಪೋಷಕರ ಸಹಾಯಬ ಬೇಕು. ಹಲವರು ತಮ್ಮ ಮಕ್ಕಳನ್ನು ವಸತಿ ಶಾಲೆಗಳಿಗೆ ಸೇರಿದ್ದಾರೆ. ಮಳೆಗಾಲಕ್ಕೆ ಬೇಕಾದ ವಸ್ತುಗಳು ಹಾಗೂ ತೋಟಗಳಿಗೆ ಬೇಕಾಗುವ ಗೊಬ್ಬರ ದಾಸ್ತಾನು ಮಾಡಿಕೊಂಡಿರುತ್ತಾರೆ. ‘ಆದರೆ ಆರೋಗ್ಯದಲ್ಲಿ ಏರುಪೇರಾದರೆ ಆಸ್ಪತ್ರೆಗೆ ಹೋಗಲು ಪರದಾಡುವ ಸ್ಥಿತಿಯಿದೆ. 6 ದಶಕಗಳಿಂದ ಬದುಕು ಕಟ್ಟಿಕೊಂಡು ಕೃಷಿ ಮಾಡುತ್ತಿದ್ದೇವೆ. ನಮ್ಮ ಗೋಳು ಕೇಳುವವರು ಯಾರು’ ಎಂದು ಗ್ರಾಮಸ್ಥರಾದ ಚಂದ್ರೇಗೌಡ ಸುಮಿತ್ರಾ ಲಲಿತಾ ಪ್ರಶ್ನಿಸುತ್ತಾರೆ. ಮಳೆಗಾಲದಲ್ಲಿ ಆರೋಗ್ಯ ಹದಗೆಟ್ಟಾಗ ರೋಗಿಗಳಿಗೆ ಜೌಷಧಿ ನೀಡಲು ಅಪಾಯಕಾರಿ ಕಾಲು ಸಂಕ ದಾಟಬೇಕು. ಗ್ರಾಮೀಣ ಜನರ ಆರೋಗ್ಯ ರಕ್ಷಣೆಗಾಗಿ ತಾಲ್ಲೂಕಿನಲ್ಲಿ ಕಾಲುಸಂಕಗಳು ಸೇತುವೆಯಾಗಿ ನಿರ್ಮಾಣ ಮಾಡುವುದಕ್ಕೆ ಸಂಬಂಧಪಟ್ಟ ಇಲಾಖೆಗಳು ಅನುದಾನ ಬಿಡುಗಡೆಯಾಗಬೇಕು ಎಂದು ನೆಮ್ಮಾರ್ ದಿನೇಶ್ ಹೆಗ್ಡೆ ಒತ್ತಾಯಿಸಿದರು. ತಾಲ್ಲೂಕಿನ ಕೆರೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಶೀರ್ಲುನಲ್ಲಿರುವ ಕಾಲುಸಂಕ. ತಾಲ್ಲೂಕಿನ ನೆಮ್ಮಾರ್ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅವುಂಟುನಲ್ಲಿರುವ ಕಾಲುಸಂಕ. 

ಶಿಥಿಲಾವಸ್ಥೆಗೆ ಕಾಲು ಸಂಕ

ನರಸಿಂಹರಾಜ‌ಪುರ ತಾಲ್ಲೂಕಿನ ಬಹುತೇಕ ಗ್ರಾಮಗಳ ವ್ಯಾಪ್ತಿಯಲ್ಲಿ ಹಿಂದೆ ಶಿಥಿಲಾವಸ್ಥೆ ತಲುಪಿವೆ. ಕಾಲು ಸಂಕಗಳ ಸ್ಥಳದಲ್ಲಿ ಕಿರುದಾದ ಸೇತುವೆಗಳನ್ನು ನಿರ್ಮಿಸಲಾಗಿದ್ದರೂ ಹಲವು ಗ್ರಾಮಗಳಿಗೆ ಈಗಲೂಕಾಲು ಸಂಕಗಳೇ ಆಧಾರ. ಪ್ರಮುಖವಾಗಿ ತಾಲ್ಲೂಕಿನ ಕಾನೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಟ್ಟಿನಮನೆಯ ಕಲ್ಲೂರು ಗ್ರಾಮದ ಮಧ್ಯೆ ಹರಿಯುವ ಹಳ್ಳಕ್ಕೆ ಕಾಲು ಸಂಕ ಇಲ್ಲವಾಗಿದ್ದು ರೈತರು ಜಮೀನಿಗೆ ಹೋಗಲು ಹಳ್ಳಕ್ಕೆ ಮರದ ದಿಮ್ಮಿಯನ್ನು ಅಡ್ಡಹಾಕಿ ದಾಟುವ ಸ್ಥಿತಿಯಿದೆ. ಮಳೆಗಾಲದಲ್ಲಿ ಹಳ್ಳು ಉಕ್ಕಿ ಹರಿದರೆ ಸಂಪರ್ಕ ಕಡಿದುಕೊಳ್ಳುತ್ತದೆ. ಕಾನೂರು ಗ್ರಾಮದ ಮೂಲೆ ಮನೆಯಿಂದ ಹಂತುವಾನಿ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ಹಳ್ಳಕ್ಕೆ ನಿರ್ಮಿಸಿರುವ ಕಾಲು ಸಂಕ ಮತ್ತು ಸೇತುವೆ ಬೇರೆ ಬೇರೆ ಭಾಗದಲ್ಲಿದ್ದು ಮಳೆಗಾಲದಲ್ಲಿ ಹಳ್ಳ ಉಕ್ಕಿ ಹರಿದರೆ ಸಂಪರ್ಕ ಕಡೆದುಕೊಳ್ಳಲಿದೆ. ಇದೇ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಾನೂರು ದಾವಣ ಗ್ರಾಮಕ್ಕೆ ಸಂಪರ್ಕಕಲ್ಪಿಸುವ ಕಾಲು ಸಂಕ ಶಿಥಿಲಾವಸ್ಥೆಗೆ ತಲುಪಿದ್ದು ದುರಸ್ತಿಪಡಿಸಿಲ್ಲ. ಹಳ್ಳ ದಾಟಿಕೊಂಡು ಶಾಲೆಗೆ ಮಕ್ಕಳು ಹೋಗುವುದು ಸಮಸ್ಯೆಯಾಗುತ್ತದೆ ಎಂದು ಬಹುತೇಕ ಮಕ್ಕಳನ್ನು ವಿದ್ಯಾರ್ಥಿನಿಲಯಕ್ಕೆ ಸೇರಿಸಲಾಗಿದೆ. ಕಾನೂರು ಗ್ರಾಮದಿಂದ ದಾವಣಕ್ಕೆ ಸಂಪರ್ಕಕಲ್ಪಿಸುವ ಕಾಲು ಸಂಕ ಶಿಥಿಲಾವಸ್ಥೆಗೆ ತಲುಪಿದ್ದು ಇಲ್ಲಿ ಕಿರು ಸೇತುವೆ ನಿರ್ಮಿಸಲು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಶ್ರೀನಿವಾಸ್ ತಿಳಿಸಿದರು. ತಾಲ್ಲೂಕಿನ ಮುತ್ತಿನಕೊಪ್ಪ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಿರೇಗದ್ದೆ ಮತ್ತು ಸಾತ್ಕೋಳಿ ಗ್ರಾಮದ ಮಧ್ಯ ಹರಿಯುವ ಹಳ್ಳಕ್ಕೆ ಕಾಲು ಸಂಕ ನಿರ್ಮಿಸಿಲ್ಲ. ಮಳೆಗಾಲದಲ್ಲಿ ಗ್ರಾಮಸ್ಥರು ಹಳ್ಳವನ್ನು ದಾಟಿಹೋಗುವ ಸ್ಥಿತಿ ಇದೆ.

ಕಾಲು ಸೇತುವೆಗೆ ವಿಪರೀತ ಬೇಡಿಕೆ

ಕಳಸ ತಾಲ್ಲೂಕಿನಾದ್ಯಂತ ಮಳೆಗಾಲ ಆರಂಭವಾದೊಡನೆ ನೀರಿನ ಹಳ್ಳಗಳ ಸಂಖ್ಯೆ ದಿಢೀರನೆ ಏರುತ್ತದೆ. ಈ ಹಳ್ಳಗಳನ್ನು ದಾಟಿ ಶಾಲೆಗೆ ತಲುಪುವ ಮಕ್ಕಳು ಕೆಲಸಕ್ಕೆ ತೆರಳುವ ಕಾರ್ಮಿಕರ ಸಂಖ್ಯೆ ದೊಡ್ಡದೇ ಇರುತ್ತದೆ. ಪ್ರತಿ ಮಳೆಗಾಲದಲ್ಲೂ ಇಂತಹ ಹಳ್ಳಗಳಿಗೆ ಅಡ್ಡಲಾಗಿ ಕಾಲು ಸೇತುವೆಗಳ ನಿರ್ಮಾಣಕ್ಕೆ ಬೇಡಿಕೆ ಹೆಚ್ಚುತ್ತದೆ. ಕಳಸ ಸಮೀಪದ ಬೇಡಕ್ಕಿ ಹಳ್ಳಕ್ಕೆ ಕೊಣೆಬೈಲ್ ಪ್ರದೇಶದಲ್ಲಿ ಅನೇಕ ವರ್ಷಗಳಿಂದ ಸೇತುವೆಗೆ ಬೇಡಿಕೆ ಇದೆ. ಸಂಸೆ ಗ್ರಾಮದ ಎಸ್.ಕೆ. ಮೇಗಲ್ ಕೊಣೆಗೋಡು ಪ್ರದೇಶ ಕಾರ್ಲೆ ಪ್ರದೇಶ ಮರ್ಕೋಡು ಪ್ರದೇಶದಲ್ಲೂ ಕಾಲುಸೇತುವೆಗೆ ಬೇಡಿಕೆ ಇದೆ. ತಾಲ್ಲೂಕಿನ ಎಲ್ಲ ಗ್ರಾಮ ಪಂಚಾಯಿತಿಗಳ ಹಳ್ಳಗಳಿಗೂ ಅಡ್ಡಲಾಗಿ ಕಾಲುಸೇತುವೆ ಬೇಕು ಎಂಬ ಬೇಡಿಕೆ ವಿಪರೀತವಾಗಿದೆ. ಈ ಬಾರಿ ಬೇಡಕ್ಕಿ ಕೊಣೆಗೋಡು ಮರ್ಕೋಡು ಕಾಲುಸೇತುವೆಗೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಅನುದಾನ ದೊರಕುವ ನಿರೀಕ್ಷೆ ಇದೆ ಎಂದು ಶಾಸಕರ ಕಳಸ ತಾಲ್ಲೂಕು ಪ್ರತಿನಿಧಿ ಸಂಶುದ್ದೀನ್ ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT