ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಗ್ಯಾರಂಟಿ ಯೋಜನೆಗಳಿಂದ ಜನರಿಗೆ ನೆಮ್ಮದಿ: ಶಾಸಕ ಕೆ.ಎಸ್.ಆನಂದ್

ಯಗಟಿಯಲ್ಲಿ ಹೋಬಳಿ‌ಮಟ್ಟದ ಜನಸ್ಪಂದನ ಕಾರ್ಯಕ್ರಮ
Published 6 ಮಾರ್ಚ್ 2024, 13:55 IST
Last Updated 6 ಮಾರ್ಚ್ 2024, 13:55 IST
ಅಕ್ಷರ ಗಾತ್ರ

ಕಡೂರು: ಹಲವಾರು ಅಡ್ಡಿಗಳ ನಡುವೆಯೂ ರಾಜ್ಯ ಸರ್ಕಾರ ಅನುಷ್ಠಾನಗೊಳಿಸಿರುವ ಐದು ಗ್ಯಾರಂಟಿ ಯೋಜನೆಗಳು ಬರಗಾಲದ ಸಮಯದಲ್ಲಿ ಜನರಿಗೆ ನೆಮ್ಮದಿ ನೀಡಿವೆ ಎಂದು ಶಾಸಕ ಕೆ.ಎಸ್.ಆನಂದ್ ಹೇಳಿದರು.

ತಾಲ್ಲೂಕಿನ ಯಗಟಿಯಲ್ಲಿ ಬುಧವಾರ ನಡೆದ ಹೋಬಳಿ‌ಮಟ್ಟದ ಜನಸ್ಪಂದನ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಗ್ಯಾರಂಟಿಗಳ ಅನುಷ್ಠಾನದಿಂದ ಪ್ರತಿ ಕುಟುಂಬಕ್ಕೂ ಪ್ರತಿ ತಿಂಗಳು ₹5 ಸಾವಿರ ಉಳಿತಾಯವಾಗುತ್ತಿದೆ. ಮನೆ ಯಜಮಾನಿಗೆ ₹2 ಸಾವಿರ, ಉಚಿತ ವಿದ್ಯುತ್, ಉಚಿತ ಬಸ್ ಪ್ರಯಾಣ ನೀಡುತ್ತಿರುವುದರಿಂದ ಮಹಿಳೆಯರಲ್ಲಿ ಆತ್ಮಸ್ಥೈರ್ಯ ಹಾಗೂ ಸ್ವಾವಲಂಬನೆಯ ಭಾವನೆ ಮೂಡಿಸಿದೆ. ಹಣ ಕೊಡಲು ತಯಾರಿದ್ದರೂ ಕೇಂದ್ರ ಸರ್ಕಾರ ರಾಜ್ಯಕ್ಕೆ ಅಕ್ಕಿಯನ್ನು ನೀಡಲು ತಡೆಯೊಡ್ಡಿತು. ಆದರೆ, ರಾಜ್ಯ ಸರ್ಕಾರ ಎದೆಗುಂದದೆ ಜನರಿಗೆ ನೀಡಿದ ಮಾತನ್ನು ಉಳಿಸಿಕೊಂಡಿತು. ವಿರೋಧಿಗಳು ಈ ಯೋಜನೆಗಳಿಂದ ರಾಜ್ಯ ದಿವಾಳಿಯಾಗಿದೆ ಎಂದು ಪ್ರಚಾರ ಮಾಡುತ್ತಾರೆ. ಆದರೆ, ಈ ಯೋಜನೆಗಳ ಜೊತೆಗೆ ರಾಜ್ಯದ ಅಭಿವೃದ್ಧಿಯನ್ನೂ ಮಾಡಬಹುದು ಎಂಬುದನ್ನು ಮುಖ್ಯಮಂತ್ರಿಗಳು ಮಂಡಿಸಿದ ಬಜೆಟ್ ನಿರೂಪಿಸಿದೆ ಎಂದರು.

ರಾಜ್ಯ ಸರ್ಕಾರದ ಜನಪ್ರಿಯ ಯೋಜನೆಗಳಿಗೆ ಸಿಗುತ್ತಿರುವ ಜನಸ್ಪಂದನೆ ಕಂಡು ಬೆದರಿದ ವಿರೋಧ ಪಕ್ಷಗಳು ಲೋಕಸಭೆ ಚುನಾವಣೆ ನಂತರ ಈ ಯೋಜನೆಗಳು ಕೊನೆಯಾಗುತ್ತವೆ ಎಂಬ ಮತ್ತೊಂದು ಅಪಪ್ರಚಾರ ನಡೆಸುತ್ತಿವೆ. ಯಾವುದೇ ಯೋಜನೆಯೂ ಸ್ಥಗಿತಗೊಳ್ಳುವುದಿಲ್ಲ. ಅದು ನಿರಂತರವಾಗಿ ಮುಂದುವರೆಯುತ್ತದೆ ಎಂದು ಅವರು ಹೇಳಿದರು.

ತಹಶೀಲ್ದಾರ್ ಎಂ.ಪಿ.ಕವಿರಾಜ್ ಪ್ರಾಸ್ತಾವಿಕವಾಗಿ ಮಾತನಾಡಿ, ಗ್ಯಾರಂಟಿ ಯೋಜನೆಗಳು ತಾಲ್ಲೂಕಿನಲ್ಲಿ ಶೇ 98ರಷ್ಟು ಅನುಷ್ಠಾನವಾಗಿದ್ದು, ಕೆಲ ತಾಂತ್ರಿಕ ಮತ್ತು ಆಡಳಿತಾತ್ಮಕ ಕಾರಣಗಳಿಂದಾಗಿ ಅತ್ಯಲ್ಪ ಪ್ರಮಾಣದ ಜನರಿಗೆ ಹಣ ತಲುಪಿಲ್ಲ. ಅದನ್ನೂ ಸಹ ಶೀಘ್ರ ತಲುಪಿಸುವ ನಿಟ್ಟಿನಲ್ಲಿ ಕಾರ್ಯ ಮಾಡಲಾಗುತ್ತಿದೆ. ಸರ್ಕಾರದ ಯೋಜನೆಯ ಫಲಾನುಭವಿಗಳ ಸಮಸ್ಯೆಗಳನ್ನು ಆಲಿಸಿ ಪರಿಹಾರ ಕಂಡುಕೊಳ್ಳಲು ಜನಸ್ಪಂದನ ಸಭೆಗಳನ್ನು ಹೋಬಳಿ ಮಟ್ಟದಲ್ಲಿ ಆಯೋಜಿಸಲಾಗುತ್ತಿದೆ ಎಂದು ತಿಳಿಸಿದರು.

ಜನಸ್ಪಂದನ ಸಭೆಯಲ್ಲಿ ಅರ್ಧ ಗಂಟೆಗೂ ಹೆಚ್ಚು ಕಾಲ ವಿದ್ಯುತ್ ಸ್ಥಗಿತಗೊಂಡಿತ್ತು. ಸಭೆಯಲ್ಲಿ ಯಗಟಿ ಹೋಬಳಿಗೆ ಸಂಬಂಧಿಸಿದಂತೆ ಬಹಳಷ್ಟು ಅರ್ಜಿಗಳು ಸಲ್ಲಿಕೆಯಾದವು. ಗ್ಯಾರಂಟಿ ಯೋಜನೆಗಳ ಜತೆಗೆ 94ಸಿ, ಪೆನ್ಷನ್, ನಿವೇಶನ, ಕೆರೆ ಒತ್ತುವರಿ, ಸಾಗುವಳಿ ಚೀಟಿ, ಕೊಳವೆ ಬಾವಿಗಳಿಗೆ ಅಸಮರ್ಪಕ ವಿದ್ಯುತ್ ಸರಬರಾಜು ಸಮಸ್ಯೆಗಳಿಗೆ ಸಂಬಂಧಿಸಿದ ಅರ್ಜಿಗಳೇ ಹೆಚ್ಚಿದ್ದವು.

ತಾಲೂಕು ಪಂಚಾಯಿತಿ ಇಒ ಸಿ.ಆರ್.ಪ್ರವೀಣ್, ಸಿಡಿಪಿಒ ಶಿವಪ್ರಕಾಶ್, ತಾಲ್ಲೂಕು ವೈದ್ಯಾಧಿಕಾರಿ ಡಾ.ರವಿಕುಮಾರ್, ಪಶು ಇಲಾಖೆ ಸಹಾಯಕ ನಿರ್ದೇಶಕ ಡಾ.ಉಮೇಶ್ ಮತ್ತು ವಿವಿಧ ಇಲಾಖೆಗಳ ತಾಲ್ಲೂಕು ಮಟ್ಟದ ಅಧಿಕಾರಿಗಳು, ಯಗಟಿ ಹೋಬಳಿ ವ್ಯಾಪ್ತಿಯ ಹನ್ನೊಂದು ಗ್ರಾಮ ಪಂಚಾಯಿತಿಗಳ ಅಧ್ಯಕ್ಷರು ಇದ್ದರು.

‘ಅಭಿವೃದ್ಧಿ ಸಾಕಾರಕ್ಕೆ ನಿರಂತರ ಶ್ರಮ’

ತಾಲ್ಲೂಕಿನ ಅಭಿವೃದ್ಧಿಗಾಗಿ ಹೆಚ್ಚಿನ ಅನುದಾನ ತರಲು ಯಶಸ್ವಿಯಾಗಿದ್ದೇನೆ. ದೇವಸ್ಥಾನದ ಅಭಿವೃದ್ಧಿಗೆ ₹6 ಕೋಟಿ ನೀಡಲಾಗಿದ್ದು ₹80 ಕೋಟಿ ವೆಚ್ಚದ ಜಲಜೀವನ್ ಮಿಷನ್ ಯೋಜನೆ ಕಾಮಗಾರಿ ಪ್ರಗತಿಯಲ್ಲಿದೆ. ತಾಲ್ಲೂಕಿನಲ್ಲಿ ಜವಳಿ ಪಾರ್ಕಿಗಾಗಿ 25 ಎಕರೆ ಜಾಗ ಮಂಜೂರಾಗಿದ್ದು ಕೋಟ್ಯಾಂತರ ರೂಪಾಯಿ ವೆಚ್ಚದಲ್ಲಿ ಗ್ರಾಮೀಣ ರಸ್ತೆಗಳ ಅಭಿವೃದ್ಧಿ ಕಾಮಗಾರಿ ಆರಂಭವಾಗಿದೆ. ಒಟ್ಟಾರೆಯಾಗಿ ತಾಲ್ಲೂಕಿನ ಅಭಿವೃದ್ಧಿಯ ಬಗ್ಗೆ ತನ್ನದೇ ಆದ ಸ್ಪಷ್ಟ ಕಲ್ಪನೆಯಿದ್ದು ಅವುಗಳ ಸಾಕಾರಕ್ಕಾಗಿ ನಿರಂತರವಾಗಿ ಶ್ರಮಿಸುತ್ತೇನೆ ಎಂದು ಶಾಸಕ ಕೆ.ಎಸ್.ಆನಂದ್ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT