ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ನರಸಿಂಹರಾಜಪುರ | ನಿವೇಶನ ಹಂಚಿಕೆ ವಿಳಂಬ: ಟೆಂಟ್‌ನಲ್ಲೇ ವಾಸ

ಅಲೆಮಾರಿಗಳಿಗೆ ತಪ್ಪದ ಗೋಳು: ಜಾತಿ ಪ್ರಮಾಣ ಪತ್ರಕ್ಕೂ ಸಮಸ್ಯೆ
Published 21 ಮೇ 2024, 5:58 IST
Last Updated 21 ಮೇ 2024, 5:58 IST
ಅಕ್ಷರ ಗಾತ್ರ

ನರಸಿಂಹರಾಜಪುರ: ತಾಲ್ಲೂಕಿನ ಕಡಹಿನಬೈಲು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಾಳೆಕೊಪ್ಪ ಗ್ರಾಮದ ಸರ್ಕಾರಿ ಶಾಲೆಯ (ಬಾಗಿಲು ಮುಚ್ಚಿರುವ) ಆವರಣದಲ್ಲಿ ಟೆಂಟ್‌ ಹಾಕಿಕೊಂಡು ವಾಸವಿರುವ ಅಲೆಮಾರಿ ಸಮುದಾಯದವರಿಗೆ ಸ್ವಂತ ಸೂರಿನ ಕನಸು ಇನ್ನೂ ನನಸಾಗಿಲ್ಲ. ಗುಬ್ಬಿಗಾ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅರಳಿಕೊಪ್ಪ ಗ್ರಾಮದಲ್ಲಿ ಇವರಿಗೆ ನಿವೇಶನ ಮಂಜೂರಾಗಿ ವರ್ಷಗಳೇ ಕಳೆದರೂ, ತಾಲ್ಲೂಕು ಆಡಳಿತದಿಂದ ಇನ್ನೂ ನಿವೇಶನ ಹಂಚಿಕೆ ಆಗಿಲ್ಲ.

ತಾಲ್ಲೂಕಿನ ಬಾಳೆಗ್ರಾಮ ಪಂಚಾಯಿತಿ ವ್ಯಾಪ್ತಿಯ ಸೀಗುವಾನಿ ಸರ್ಕಲ್‌ನಲ್ಲಿ ಒಂದೂವರೆ ದಶಕದಿಂದ ವಾಸವಾಗಿದ್ದ ಅಲೆಮಾರಿ ಸಮುದಾಯದವರು ಮೂಢನಂಬಿಕೆಯಿಂದಾಗಿ 2018ರಲ್ಲಿ ಗ್ರಾಮ ತೊರೆದಿದ್ದರು. ಈ ಕುರಿತು ‘ಪ್ರಜಾವಾಣಿ’ ವರದಿ ಪ್ರಕಟಿಸಿತ್ತು. ಬೇರೆ, ಊರುಗಳಿಗೆ ವಲಸೆ ಹೋಗಿದ್ದ ಸಮುದಾಯದವರನ್ನು ತಾಲ್ಲೂಕು ಆಡಳಿತ ಮನವೋಲಿಸಿ ಮತ್ತೆ ತಾಲ್ಲೂಕಿಗೆ ವಾಪಸ್ ಕರೆದುಕೊಂಡು ಬಂತು. ಕಾಯಂ ನಿವೇಶನ ಕಲ್ಪಿಸುವ ಭರವಸೆ ನೀಡಿ, ತಾಲ್ಲೂಕಿನ ಕಡಹಿನ ಬೈಲು ಗ್ರಾಮದ ವ್ಯಾಪ್ತಿಯ ಸರ್ಕಾರಿ ಶಾಲೆಯ ಆವರಣದಲ್ಲಿ ತಾತ್ಕಾಲಿಕ ನೆಲೆ ಕಂಡುಕೊಳ್ಳುವಂತೆ ಸೂಚಿಸಿತು.

ತಾಲ್ಲೂಕು ಆಡಳಿತ ಗುಬ್ಬಿಗಾ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅರಳಿಕೊಪ್ಪ ಗ್ರಾಮದ ಸರ್ವೆ ನಂ 108ರಲ್ಲಿ 1ಎಕರೆಯನ್ನು ನಿವೇಶನಕ್ಕೆ ಕಂದಾಯ ಇಲಾಖೆಗೆ ಹಸ್ತಾಂತರಿಸಿದೆ. ಆದರೆ, ತಾಲ್ಲೂಕು ಆಡಳಿತ ಹಾವುಗೊಲ್ಲರ ಸಮುದಾಯದವರಿಗೆ ಜಾತಿ ಪ್ರಮಾಣ ಪತ್ರ ಕೊಡಲು ಸಮಸ್ಯೆಯಿದೆ ಎಂಬ ಕಾರಣ ನೀಡಿ, ನಿವೇಶನ ಹಂಚಿಕೆಯನ್ನು ಮುಂದೂಡಿದೆ.

ಹಾವುಗೊಲ್ಲರ ವಸತಿ ನಿವೇಶನಕ್ಕಾಗಿ ಭೂಮಿ ಕಾಯ್ದಿರಿಸುವುದನ್ನು ಹಾವಾಡಿಗರ ನಿವೇಶನಕ್ಕಾಗಿ ಭೂಮಿ ಕಾಯ್ದಿರಿಸುವಿಕೆ ಎಂದು ತಿದ್ದುಪಡಿ ಮಾಡಿ 2023ರ ಮೇ5ರಂದು ಜಿಲ್ಲಾಧಿಕಾರಿ ಕಚೇರಿ ಆದೇಶ ಹೊರಡಿಸಿದ್ದರೂ ನಿವೇಶನ ನೀಡಿಲ್ಲ. ಪ್ರವರ್ಗ–1ರಲ್ಲಿ ಜಾತಿ ಪ್ರಮಾಣಪತ್ರ ಕೊಡಬಹುದು ಎಂದು ಆದೇಶವೂ ಸಹ ಆಗಿತ್ತು. ಈ ನಡುವೆ ಅಲೆಮಾರಿ ಜನಾಂಗದವರಿಗೆ ಮಂಜೂರಾಗಿರುವ ಜಾಗದಲ್ಲಿ ಗ್ರಾಮ ಪಂಚಾಯಿತಿಯಿಂದ ಅಲೆಮಾರಿ ಕುಟುಂಬದವರಿಗೆ ನಿವೇಶನ ಹಂಚಲು ಗುರುತು ಮಾಡುವ ಕಾರ್ಯ ಮಾಡಲಾಗಿದೆ. ಹಾವಾಡಿಗರ ಆಶ್ರಯ ನಿವೇಶನದಲ್ಲಿ ಎಸ್.ಬಿ.ಎಂ.ಜಿ ಅಡಿ ಸಮುದಾಯ ಶೌಚಾಲಯ ನಿರ್ಮಾಣಕ್ಕೆ ತಾಲ್ಲೂಕು ಪಂಚಾಯಿತಿಯಿಂದ 14 ಮೇ 2024ರಂದು ಜಿಲ್ಲಾ ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿಗೆ ಪ್ರಸ್ತಾವನೆಯನ್ನೂ ಸಲ್ಲಿಸಲಾಗಿದೆ.

ಜಾತಿ ಪ್ರಮಾಣ ಪತ್ರದ ಸಮಸ್ಯೆಯಿಂದಾಗಿ ಅಲೆಮಾರಿ ಜನಾಂಗದವರಿಗೆ ನಿವೇಶನ ಹಂಚಿಕೆ ಮಾಡಲು ಸಾಧ್ಯವಾಗಿಲ್ಲ ಎಂದು ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಎಚ್.ಡಿ. ನವೀನ್ ಕುಮಾರ್ ಹೇಳಿದರು.

ಅಲೆಮಾರಿ ಜನಾಂಗದವರು ಪರಿಶಿಷ್ಟ ಜಾತಿಯ ಪ್ರಮಾಣಪತ್ರ ಬೇಕೆಂದು ಒತ್ತಾಯಿಸುತ್ತಿದ್ದಾರೆ. ಇವರಿಗೆ ಬೇರೆ ವರ್ಗದಲ್ಲಿ ಜಾತಿ ಪ್ರಮಾಣ ಪತ್ರ ಕೊಡಲು ಅವಕಾಶವಿದೆ. ಚುನಾವಣಾ ನೀತಿ ಸಂಹಿತೆ ಮುಗಿದ ಮೇಲೆ ಅವರ ಮನವೋಲಿಸಿ ನಿವೇಶನ ಹಂಚಿಕೆ ಮಾಡಿ ಮನೆ ನಿರ್ಮಿಸಿಕೊಡಲು ಪ್ರಯತ್ನಿಸಲಾಗುವುದು ಎಂದು ಭದ್ರಾ ಅಚ್ಚುಕಟ್ಟು ಪ್ರದೇಶಾಭಿವೃದ್ಧಿ ನಿಗಮದ ಅಧ್ಯಕ್ಷ ಹಾಗೂ ಜಿಲ್ಲಾ ಕಾಂಗ್ರೆಸ್ ಘಟಕದ ಅಧ್ಯಕ್ಷ ಡಾ.ಕೆ.ಪಿ. ಅಂಶುಮಂತ್ ಹೇಳಿದರು.

ನರಸಿಂಹರಾಜಪುರ ತಾಲ್ಲೂಕು ಗುಬ್ಬಿಗಾ ಗ್ರಾಮ ಪಂಚಾಯಿತಿಯ ಅರಳಿಕೊಪ್ಪ ಗ್ರಾಮದಲ್ಲಿ ಅಲೆಮಾರಿ ಜನಾಂಗದವರಿಗೆ ಮಂಜೂರಾಗಿರುವ ಜಾಗದಲ್ಲಿ ನಿವೇಶನ ಹಂಚಿಕೆಗೆ ಗುರುತು ಹಾಕಲಾಯಿತು
ನರಸಿಂಹರಾಜಪುರ ತಾಲ್ಲೂಕು ಗುಬ್ಬಿಗಾ ಗ್ರಾಮ ಪಂಚಾಯಿತಿಯ ಅರಳಿಕೊಪ್ಪ ಗ್ರಾಮದಲ್ಲಿ ಅಲೆಮಾರಿ ಜನಾಂಗದವರಿಗೆ ಮಂಜೂರಾಗಿರುವ ಜಾಗದಲ್ಲಿ ನಿವೇಶನ ಹಂಚಿಕೆಗೆ ಗುರುತು ಹಾಕಲಾಯಿತು
ನರಸಿಂಹರಾಜಪುರ ತಾಲ್ಲೂಕು ಬಾಳೆಕೊಪ್ಪ ಗ್ರಾಮದಲ್ಲಿ ಟೆಂಟ್ ಗಳಲ್ಲಿ ವಾಸವಾಗಿರುವ ಅಲೆಮಾರಿ ಜನಾಂಗ
ನರಸಿಂಹರಾಜಪುರ ತಾಲ್ಲೂಕು ಬಾಳೆಕೊಪ್ಪ ಗ್ರಾಮದಲ್ಲಿ ಟೆಂಟ್ ಗಳಲ್ಲಿ ವಾಸವಾಗಿರುವ ಅಲೆಮಾರಿ ಜನಾಂಗ

‘ಜಾತಿ ಪ್ರಮಾಣ ಪತ್ರದ ಸಮಸ್ಯೆ’ ಅಲೆಮಾರಿ ಜನಾಂಗದ 15 ಕುಟುಂಬಗಳು ಟೆಂಟ್‌ನಲ್ಲಿ ವಾಸವಿದ್ದೇವೆ. ಇಲ್ಲಿ ಸಾಕಷ್ಟು ಸಮಸ್ಯೆಗಳಿವೆ. ಸರ್ಕಾರ ಸಮುದಾಯ ಶೌಚಾಲಯ ನಿರ್ಮಿಸಿಕೊಟ್ಟರೆ ಮಂಜೂರಾಗಿರುವ ನಿವೇಶನಕ್ಕೆ ಹೋಗುತ್ತೇವೆ. ಜಾತಿ ಪ್ರಮಾಣ ಪತ್ರದ ಸಮಸ್ಯೆ ಇದೆ ಎಂದು ಅಲೆಮಾರಿ ಸಮುದಾಯದ ವೆಂಕಟೇಶ್ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT