ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಮೂಡಿಗೆರೆ: ಬರಪೀಡಿತ ಪ್ರದೇಶ ಘೋಷಣೆಗೆ ಒತ್ತಾಯ

ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯಿಂದ ಸರ್ಕಾರಕ್ಕೆ ಮನವಿ
Published 6 ಸೆಪ್ಟೆಂಬರ್ 2023, 13:03 IST
Last Updated 6 ಸೆಪ್ಟೆಂಬರ್ 2023, 13:03 IST
ಅಕ್ಷರ ಗಾತ್ರ

ಮೂಡಿಗೆರೆ: ‘ಮಳೆಯಿಲ್ಲದೆ ಕಂಗಾಲಾಗಿರುವ ಮೂಡಿಗೆರೆ ತಾಲ್ಲೂಕನ್ನು ಕೂಡಲೇ ಬರಪೀಡಿತ ಪ್ರದೇಶವೆಂದು ಘೋಷಿಸಬೇಕು’ ಎಂದು ರಾಜ್ಯ ರೈತ ಸಂಘದ ರಾಜ್ಯ ಉಪಾಧ್ಯಕ್ಷ ಮಂಜುನಾಥಗೌಡ ಒತ್ತಾಯಿಸಿದರು.

ಪಟ್ಟಣದ ತಾಲ್ಲೂಕು ಕಚೇರಿಯಲ್ಲಿ ಬುಧವಾರ ಬರಪೀಡಿತ ತಾಲ್ಲೂಕನ್ನಾಗಿ ಘೋಷಿಸಲು ಒತ್ತಾಯಿಸಿ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ವತಿಯಿಂದ ಸರ್ಕಾರಕ್ಕೆ ಮನವಿ ನೀಡಿದ ಬಳಿಕ ಅವರು ಮಾತನಾಡಿದರು.

‘ಈ ಬಾರಿ ತಾಲ್ಲೂಕಿನಲ್ಲಿ ವಾಡಿಕೆಗಿಂತ ಶೇ 80ರಷ್ಟು ಮಳೆ ಕುಂಠಿತವಾಗಿದೆ. ಮಳೆಯಿಲ್ಲದೆ ರೈತರು ಕಂಗಲಾಗಿದ್ದಾರೆ. ನಾಟಿ ಮಾಡಿದ್ದ ಭತ್ತದ ಗದ್ದೆಗಳನ್ನು ಪಾಳು ಬಿಡಲಾಗಿದೆ. ನೀರಿಲ್ಲದೇ ಕಾಫಿ, ಕಾಳುಮೆಣಸು ಬೆಳೆಯೆಲ್ಲವೂ ಒಣಗಿ ಹೋಗುತ್ತಿದೆ. ಸರ್ಕಾರವು ಕೂಡಲೇ ರೈತರ ನೆರವಿಗೆ ಧಾವಿಸಿ ತಾಲ್ಲೂಕನ್ನು ಬರ ಪೀಡಿತ ಪ್ರದೇಶವೆಂದು ಘೋಷಿಸಬೇಕು’ ಎಂದು ಒತ್ತಾಯಿಸಿದರು.

ರಾಜ್ಯ ರೈತ ಸಂಘದ ತಾಲ್ಲೂಕು ಅಧ್ಯಕ್ಷ ಡಿ.ಆರ್.ಪುಟ್ಟಸ್ವಾಮಿಗೌಡ ಮಾತನಾಡಿ, ‘ಸರಾಸರಿ 35 ರಿಂದ 40 ಇಂಚು ಮಳೆಯಾಗುತ್ತಿದ್ದ ಆಗಸ್ಟ್ ತಿಂಗಳಿನಲ್ಲಿ ಈ ಬಾರಿ ಕೇವಲ 5 ಇಂಚು ಮಳೆಯಾಗಿದೆ. ಬೆಳೆಗಳನ್ನು ಉಳಿಸಿಕೊಳ್ಳಲಾಗದ ಸ್ಥಿತಿ ನಿರ್ಮಾಣವಾಗಿದೆ. ಸರ್ಕಾರವು ಬೆಳೆಗಾರರ ನೆರವಿಗೆ ಬಂದು ಕಾಫಿ ಬೆಳೆಯುವ ರೈತರಿಗೆ 10 ಎಚ್.ಪಿ ವರೆಗಿನ ಪಂಪ್‌ಸೆಟ್‌ಗಳಿಗೆ ಉಚಿತವಾಗಿ ವಿದ್ಯುತ್ ನೀಡಬೇಕು. ಬಡ್ಡಿ ರಹಿತವಾಗಿ ₹10 ಲಕ್ಷದವರೆಗೆ ಸಾಲ ವಿತರಿಸಬೇಕು. ಸೋಲಾರ್ ಹಾಗೂ ಶಾಖೋತ್ಪನ್ನ ವಿದ್ಯುತ್ ಉತ್ಪಾದನೆ ಹೆಚ್ಚಿಸಿ, ತಡೆರಹಿತ ವಿದ್ಯುತ್ ನೀಡಬೇಕು’ ಎಂದು ಒತ್ತಾಯಿಸಿದರು.

ಸಂಘದ ಮಹಿಳಾ ಘಟಕದ ಪದಾಧಿಕಾರಿ ವನಶ್ರೀ ಲಕ್ಷ್ಮಣಗೌಡ ಮಾತನಾಡಿ, ‘ಕಳೆದ ಮೂರು ವರ್ಷಗಳಿಂದ ಅತಿವೃಷ್ಟಿಯಲ್ಲಿ ಸಿಲುಕಿದ್ದ ತಾಲ್ಲೂಕಿನ ರೈತರು ಈ ಬಾರಿ ಬರಕ್ಕೆ ಸಿಲುಕಿ ನಲುಗುವಂತಾಗಿದೆ. ಮೂರು ವರ್ಷಗಳಿಂದ ಸರಿಯಾಗಿ ಬೆಳೆಯನ್ನೇ ಕಾಣದ ರೈತರು ಆರ್ಥಿಕವಾಗಿ ಸಂಕಷ್ಟವನ್ನು ಎದುರಿಸುವಂತಾಗಿದ್ದು, ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ರೈತರಿಗೆ ನೆರವು ನೀಡಬೇಕು’ ಎಂದು ಒತ್ತಾಯಿಸಿದರು.

ರಾಜ್ಯ ರೈತ ಸಂಘದ ತಾಲ್ಲೂಕು ಕಾರ್ಯದರ್ಶಿ ಎಚ್.ಜಿ.ನಾಗೇಶ್ ಗೌಡ, ಪದಾಧಿಕಾರಿಗಳಾದ ಬಿ.ಎಸ್. ಲಕ್ಷ್ಮಣಗೌಡ ಬಡವನದಿಣ್ಣೆ, ಕೆ.ಜಿ ಚಂದ್ರೇಗೌಡ, ಕರವೇ ಅಧ್ಯಕ್ಷ ಪ್ರಸನ್ನಗೌಡ, ಮಂಜುನಾಥಗೌಡ, ಬಿ.ಎಂ.ಭಾರತಿ ಇದ್ದರು.

Highlights - ಮಳೆಯಿಲ್ಲದೇ ಬೆಳೆಯೆಲ್ಲವೂ ನಾಶ ಆರ್ಥಿಕ ಸಂಕಷ್ಟದಲ್ಲಿ ರೈತರು ಉಚಿತ ವಿದ್ಯುತ್ ವಿತರಣೆಯ ಬೇಡಿಕೆ

Quote -

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT